ಶುಕ್ರವಾರ, ಡಿಸೆಂಬರ್ 19, 2008

’ಎಡ್ವರ್ಡ್ ಮಾನೆ’ಯೊಂದಿಗೆ -’ಲಂಚನ್ ಆನ್ ದ ಗ್ರಾಸ್’



(ನನ್ನ ಮೆಚ್ಚಿನ ಫ಼್ರೆಂಚ್ ಕಲಾವಿದರ ಪೈಕಿ ಎಡ್ವರ್ಡ್ ಮಾನೆ ಕೂಡ ಒಬ್ಬ.ಆತನ ದಿಟ್ಟ ನಿಲುವು,ಅಸಾಧಾರಣ ಅಭಿವ್ಯಕ್ತಿ ನನ್ನನ್ನು ಸದಾ ಆಕರ್ಷಿಸಿವೆ.ಪ್ರಬಂಧದ ಆಯ್ದ ಸಾಲುಗಳು, ನಿಮಗಾಗಿ...)

ಎಡ್ವರ್ಡ್ ಮಾನೆ ಪಾಶ್ಚಾತ್ಯ ಕಲಾಚರಿತ್ರೆಯ ದಿಕ್ಕನ್ನು ಬದಲಿಸಿದ ಅತ್ಯಂತ ಪ್ರಮುಖ ಕಲಾವಿದರಲ್ಲಿ ಒಬ್ಬ.ಸಂಪ್ರದಾಯ ಮತ್ತು ಆಧುನಿಕತೆಯ ನಡುವಿನ ಸೇತುವಿನಂತೆ ನಿಂತು,ಹೊಸಪೀಳಿಗೆಯ ಕಲಾವಿದರನ್ನು ಹುಟ್ಟುಹಾಕುವುದರಲ್ಲಿನ ಇವನ ಪಾತ್ರ ಉಲ್ಲೇಖಾರ್ಹವಾದುದು.

ಈತನ ’ಲಂಚನ್ ಆನ್ ದಿ ಗ್ರಾಸ್’ ಮತ್ತು ’ಒಲಂಪಿಯ’ ಕಲಾವಲಯದಲ್ಲಿ ಹುಟ್ಟುಹಾಕಿದ ಕಂಪನ ಆಗಿನ ಮನಸ್ಥಿತಿಗೆ ಬಹುದೊಡ್ಡದಾಗಿತ್ತು.ಕಲಾವಿಮರ್ಶಕರು,ಪ್ರೇಕ್ಷಕರು ಮತ್ತು ಸಾಮಾಜಿಕರಿಂದ ಕಟುವಿಮರ್ಶೆ,ಅಸಹನೀಯ ಅವಮಾನ,ತಿರಸ್ಕಾರಗಳನ್ನು ಉಂಡರೂ ತನ್ನ ಧ್ಯೇಯ ಮತ್ತು ಹೊಳಹನ್ನು ಗುರುತಿಸಿ,ಅನುಸರಿಸುವ ಹಲವು ಸಂಪನ್ನರನ್ನೂ ಪಡೆಯುವಲ್ಲಿ ವಿಫಲನಾಗಲಿಲ್ಲ.ಈತನಲ್ಲಿ ನೈತಿಕ ಸ್ಥೈರ್ಯ ತುಂಬಿ,ಸ್ಫೂರ್ತಿಪ್ರಚೋದಕನಾದವನು ಅಂದಿನ ಪ್ರಮುಖ ಆಧುನಿಕ ಕವಿ,ವಿಮರ್ಶಕ ಮತ್ತು ಮಾನೆಯ ಗೆಳೆಯ ಚಾರ್ಲ್ಸ್ ಬೋದ್ಲೇರ್.ಈತ ಹೇಳುವಂತೆ - "ಕಲೆ ಎಂಬುದು ನೈಜತೆಯನ್ನು ಬಿಂಬಿಸುವ ಕನ್ನಡಿಯಂತೆ ಕೆಲಸ ಮಾಡಬೇಕು.ಕುಡುಕ,ಭಿಕ್ಷುಕ,ವೇಶ್ಯೆ ಮುಂತಾದ ಸಾಮಾನ್ಯರನ್ನು ಅವರ ನಿಜನೆಲೆಯಲ್ಲಿ ಬಿಚ್ಚಿಡುವ ಮಾಧ್ಯಮವಾಗಬೇಕು".

೧೯ ನೆ ಶತಮಾನ ಯುರೋಪ್ ರಾಷ್ಟ್ರಗಳಲ್ಲಿ ಹಲವು ರೀತಿಯ ಮನೋಮಾರ್ಗಗಳನ್ನು ಸೃಷ್ಟಿಸಿದ ಕಾಲ.ವೈಜ್ನಾನಿಕ ಅನ್ವೇಷಣೆಗಳು,ಸಾಮಾಜಿಕ ಕ್ರಾಂತಿ,ಕೈಗಾರಿಕೋದ್ಯಮದ ಕ್ಷಿಪ್ರಗತಿ -ಈ ಎಲ್ಲಾ ಅಂಶಗಳೂ ಸೃಜನಶೀಲ ಮಾಧ್ಯಮಗಳ ಮೇಲೆ ಮಹತ್ತರ ಪರಿಣಾಮ ಬೀರಿದವು.ರೊಮ್ಯಾಂಟಿಕ್ ಮತ್ತು ಕ್ಲಾಸಿಕಲ್ ಶೈಲಿಯ ಚಿತ್ರಗಳ ಅಪ್ರಸ್ತುತತೆ,ಕೃತಕತೆ ಮತ್ತು ಅಸಂಗತತೆಗಳಿಂದ ಹೊರಬಂದು,ಸುತ್ತಲಿನ ಜನಜೀವನವನ್ನು,ಪ್ರಮುಖವಾಗಿ ತಳವರ್ಗದ ಜೀವನವನ್ನು ಯಾವುದೇ ಮೇಕಪ್ ಇಲ್ಲದೆ ತೆರೆದು ತೋರಿಸುವ ಮೂಲಕ ಚಿತ್ರಮಾಧ್ಯಮ ಹೊದ್ದಿದ್ದ ಮಡಿವಂತಿಕೆಯ ಕೃತ್ರಿಮ ಮುಖವಾಡವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆದವು.ರಿಯಲಿಸ್ಂ ಶೈಲಿ ಮತ್ತು ಆ ಶೈಲಿಯ ಪ್ರಮುಖ ಕಲಾವಿದ ’ಗುಸ್ತಾವ್ ಕೂರ್ಬೆ’ಯ ಆಶೋತ್ತರವೂ ಇದೇ ಆಗಿತ್ತು.ಆ ದಿಶೆಯಲ್ಲಿ ಎಡ್ವರ್ಡ್ ಮಾನೆ ಕೂಡ ಪ್ರಾಮಾಣಿಕವಾಗಿ ತೊಡಗಿಕೊಂಡಾತ.

"i paint what i see,and not what others choose to see " -ಅಕಾಡೆಮಿಕ್ ಪಠ್ಯಕ್ರಮದ ಪೂರ್ವಾಗ್ರಹಪೀಡಿತ ಶಿಕ್ಷಣಕ್ಕೆ ವಿರುದ್ಧವಾಗಿ ಮಾನೆ ಹೇಳಿದ ಮಾತಿದು.ಆಲೋಚನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದಾತನಿಂದ ಇಂಥ ಮಾತುಗಳು ಸಹಜವೇ.

ಮಾನೆಯ ಬಹುಪಾಲು ಕಲಾಕೃತಿಗಳಲ್ಲಿ ರೂಪದರ್ಶಿ ’ವಿಕ್ಟೊರೈನ್ ಮ್ಯೂರಂಟ್’ಳನ್ನು ಗುರ್ತಿಸಬಹುದು.ಈಕೆ ಪ್ಯಾರಿಸ್ ನ ಬಡಕುಟುಂಬದವಳು.ಮಾನೆಯ ಗುರು ಥಾಮಸ್ ಕೌಚರ್ ಸೇರಿದಂತೆ ಹಲವು ಕಲಾಬ್ಯಾಸಿಗಳಿಗೆ,ಕಲಾವಿದರಿಗೆ ರೂಪದರ್ಶಿಯಾಗಿದ್ದವಳು,ವೇಶ್ಯಾವೃತ್ತಿಯನ್ನವಲಂಬಿಸಿದ್ದವಳು,ಕೆಲವರ್ಷಗಳಮಟ್ಟಿಗೆ ಮಾನೆಯ ಪ್ರೇಯಸಿಯೂ ಆಗಿದ್ದವಳು.ಈಕೆಯಲ್ಲಿ ಮಾನೆಗೆ ಕಂಡ ವಿಶೇಷತೆಯೆಂದರೆ- ಅಕೃತ್ರಿಮ ಮುಖಚರ್ಯೆ,ಸಹಜತೆ. ಬದುಕಿನ ನೈಜಚಿತ್ರಣವೇ ಮಾನೆಯ ಗುರಿಯೂ ಆಗಿದ್ದರಿಂದ,ಮ್ಯೂರಂಟ್ ಆತನ ನೆಚ್ಚಿನ ರೂಪದರ್ಶಿಯಾಗಿ ಪ್ರಮುಖ ಕಲಾಕೃತಿಗಳ ಮೂಲಕ ಆತನ ಬಂಡಾಯಕ್ಕೆ ಬೆಂಬಲವಾದಳು.’ಒಲಂಪಿಯ’ ಮತ್ತು ’ಲಂಚನ್ ಆನ್ ದ ಗ್ರಾಸ್’ ಕಲಾಕೃತಿಗಳ ಕೇಂದ್ರಬಿಂದುವಾದ ಮಹಿಳೆಯ ಭಾವಕ್ಕೆ ಪೂರಕವಾಗಿ,ರೂಪದರ್ಶಿಯಾಗಿ ನಂತರ ಬಂದ ಕಟುಟೀಕೆ,ನೋವು,ಅವಮಾನಗಳನ್ನು ದಿಟ್ಟೆದೆಯಿಂದ ಸೈರಿಸಿಕೊಂಡವಳು ಈಕೆ.ಆದರ್ಶ ಚೆಲುವೆಯಲ್ಲದ,ಬೀದಿಬೀದಿಗಳಲ್ಲಿ ಕಾಣಸಿಗುವ ಸಾಮಾನ್ಯ ವೇಶ್ಯೆ ಅಥವಾ ಮಹಿಳೆಯನ್ನು ಪ್ರತಿನಿಧಿಸುವ ಸ್ವಾಭಾವಿಕ ಮುಖಭಾವ ಕ್ಯಾನ್ವಾಸ್ ನೊಳಗಿಂದ ಪ್ರೇಕ್ಷಕರನ್ನು ದಿಟ್ಟಿಸತೊಡಗಿದಾಗ ಆಗಿನ ಮಡಿವಂತ ಸಮಾಜ ಆಘಾತವನ್ನನುಭವಿಸಿತ್ತು.

ಆಧುನಿಕ ಸಮಾಜದ ನೈಜಚಿತ್ರಣಕ್ಕೆ ಮಾಧ್ಯಮವಾಗಿ ಆತ ಆರಿಸಿಕೊಂಡದ್ದು ವೇಶ್ಯೆಯನ್ನು !
ಬಹುಷಃ ಪುರುಷರ/ಪುರುಷಪ್ರಧಾನ ಸಮಾಜದ ಸೋಗಲಾಡಿತನವನ್ನು ಬಿಂಬಿಸುವ ಪರಮ ಪ್ರತಿಮಾರೂಪಕ ಇದು.ಲೈಂಗಿಕತೆಯಿಂದಾಚೆಗೂ ಸಾಂಕೇತಿಕ ವಿಸ್ತರಣೆ ಈ ರೂಪಕಕ್ಕೆ ಇರಬಹುದು.

ರೊಮ್ಯಾಂಟಿಕ್,ಕ್ಲಾಸಿಕಲ್ ಚಿತ್ರಗಳೇ ಪರಮಶ್ರೇಷ್ಠ ಎಂಬಂತೆ ಪರಿಗಣಿತವಾಗಿದ್ದ ಆ ದಿನಗಳಲ್ಲಿ ಚಿತ್ರಮಾಧ್ಯಮ ಕೇವಲ ಪುರಾಣ,ಮಹಾಕಾವ್ಯಗಳ ಉನ್ನತ ಮೌಲ್ಯಗಳನ್ನು ಮಾತ್ರ ಬಿಂಬಿಸುವ ಹೊಣೆಹೊತ್ತಂತೆ ಭಾವಿಸಲ್ಪಟ್ಟಿತ್ತು.ನಗ್ನಚಿತ್ರಗಳು ದೈವಿಕ ಔನ್ನತ್ಯದ ಸೋಗಿನಲ್ಲಿ ಪ್ರದರ್ಶಿತವಾಗುತಿದ್ದ ಸಂದರ್ಭ.ಇಂಥ ಮನಸ್ಥಿತಿಗೆ ಸಂಪೂರ್ಣ ವಿರುದ್ಧವಾಗಿ,ಮಾನೆ ನಿಜಜೀವನದ ವೇಶ್ಯೆಯನ್ನು ಕಲಾಮಾಧ್ಯಮದ ಮೂಲಕ ದೇವತೆಯಂತೆ ಚಿತ್ರಿಸಿದ್ದು ಸಹಜವಾಗಿಯೇ ಸಂಪ್ರದಾಯಶರಣರಿಗೆ ಕೊಟ್ಟ ಬಹುದೊಡ್ಡ ಪೆಟ್ಟಾಗಿತ್ತು.

’ಲಂಚನ್ ಆನ್ ದ ಗ್ರಾಸ್’ -ವಿಚಿತ್ರ ದಿಟ್ಟತನ,ಸ್ಫೂರ್ತಿ ಮತ್ತು ಮಹಿಳೆಯ ಸಾಮಾಜಿಕ ಪ್ರಾತಿನಿಧ್ಯವನ್ನು ಬಿಂಬಿಸುತ್ತದೆ.ಈ ಕಾರಣಗಳಿಂದಾಗಿಯೇ ಮಡಿವಂತ,ಸಭ್ಯಸೋಗಿನ ಸಮಾಜ ಬೆತ್ತಲೆಗೊಂಡು ಅವಮಾನಿತವಾದಂತೆ ತತ್ತರಿಸಿತು,ಚೀರಾಡಿತು.ಸ್ತ್ರೀ ನಗ್ನತೆಯನ್ನು ಪೌರಾಣಿಕ ಪುಣ್ಯಕಥೆಗಳ ವೇಷದಲ್ಲಿ ಪ್ರದರ್ಶಿಸುವ ಶಾಸ್ತ್ರೀಯ ಶೈಲಿಯ ಸೋಗಲಾಡಿತನವನ್ನು ಬಯಲಿಗೆಳೆಯುವಂತೆ,ಸತ್ಯದ ಎದೆಬಗೆದು ಕನ್ನಡಿ ಹಿಡಿಯವಂತೆ ದೃಶ್ಯಮಾಧ್ಯಮದ ಅಲೌಕಿಕ ಶಕ್ತಿಯನ್ನು ಲೌಕಿಕ ಸತ್ಯದ ಆವರಣದಲ್ಲೇ ಸೆರೆಹಿಡಿಯುವ ’ಆಧುನಿಕ’ ದೃಷ್ಟಿಗೆ ಮಾನೆ ಚಾಲನೆ ನೀಡಿದ.

ಇಬ್ಬರು ಆಧುನಿಕ ಉಡುಗೆಯ ಪುರುಷರ ನಡುವೆ ನಗ್ನವಾಗಿ ಕುಳಿತ ಮಹಿಳೆ ನೇರವಾಗಿ ಪ್ರೇಕ್ಷಕನಣ್ಣನ್ನೇ ದಿಟ್ಟಿಸುತ್ತಾ,ಚಿತ್ರದ ಆವರಣದೊಳಗೆ ಆಹ್ವಾನಿಸುತ್ತಾ ಕಲಾಮಾಧ್ಯಮದ ಚತುರ ಮಡಿವಂತಿಕೆಗೆ ಚ್ಯುತಿಯುಂಟುಮಾಡಿದ್ದು ಅಕ್ಷಮ್ಯವಾಗಿತ್ತು.ಸಂಪ್ರದಾಯದ ಸುರಕ್ಷಿತ ಆವರಣದೊಳಗೆ ನಗ್ನತೆಯನ್ನು ಒಪ್ಪಿಕೊಳ್ಳುವ ಸಮಾಜ,ಅದೇ ನಗ್ನತೆಯನ್ನು ನಿಜಜೀವನದ ಪ್ರತಿಬಿಂಬದಂತೆ ತೋರಿದಾಗ ಹೌಹಾರುತ್ತದೆ.ಕಲಾಮಾಧ್ಯಮ ಕೇವಲ ’ಉನ್ನತ’ಭಾವನೆಗಳನ್ನು ಉದ್ದೀಪಿಸುವ,ಕಾಲ್ಪನಿಕ ಆದರ್ಶಗಳನ್ನು ಬಿಂಬಿಸುವ ಮಾಧ್ಯಮ ಎಂಬ ಸ್ಥಿರನಂಬಿಕೆಯೇ ಇದಕ್ಕೆ ಕಾರಣ.

ಕಲಾಚರಿತ್ರೆಯನ್ನು ಅವಲೋಕಿಸಿದಾಗ,ಮಹಿಳೆ ಕೇವಲ ರೂಪದರ್ಶಿಯಾಗಿ, ಸೌಂದರ್ಯದ ಪ್ರತೀಕವಾಗಿ,ಆದರ್ಶ ಭೋಗಜೀವನದ ಸಂಕೇತವಾಗಿ ಮಾತ್ರ ಕಾಣುತ್ತಾಳೆ.ಇದು ಪುರುಷ ದೃಷ್ಟಿಯನ್ನು ತಣಿಸುವುದಕ್ಕಾಗಿಯೇ,ಪುರುಷರಿಂದಲೇ ಸೃಷ್ಟಿಗೊಂಡಿದ್ದನ್ನು ಕಾಣಬಹುದು.ಕಲಾಚರಿತ್ರೆಯುದ್ದಕ್ಕೂ ಕೇವಲ ಬೆರಳೆಣಿಕೆಯ ಸ್ತ್ರೀಕಲಾವಿದರನ್ನು ಹೊಂದಿರುವ ಚಿತ್ರಮಾಧ್ಯಮ ಒಟ್ಟಾರೆಯಾಗಿ ಪುರುಷಸಂವೇದನೆಯ ಕಪಿಮುಷ್ಟಿಯಲ್ಲಿದ್ದುದರಲ್ಲಿ ಆಶ್ಚರ್ಯವೇನಿಲ್ಲ.ಮಾನೆಯ ಚಿತ್ರಗಳು ಮೇಲ್ನೋಟಕ್ಕೆ ಸ್ತ್ರೀನಗ್ನತೆಯನ್ನು ಹಸಿಗೊಳಿಸುವಂತೆ ಕಂಡರೂ,ವಾಸ್ತವಿಕವಾಗಿ ಸಾಮಾಜಿಕ ಮತ್ತು ಶಾಸ್ತ್ರೀಯ ನಿಬಂಧನೆಗಳ ಮೂಲಕ ನಗ್ನತೆಯನ್ನು ಸಭ್ಯಸೋಗಿನಲ್ಲಿ ಆಸ್ವಾದಿಸುವ,ಕಾಲ್ಪನಿಕ ಆದರ್ಶಗಳನ್ನೇ ನಿಜಗೊಳಿಸುವ ಹುನ್ನಾರದ ನಂಬಿಕೆಗಳನ್ನು ತೀವ್ರವಾಗಿ ವಿರೋಧಿಸುವ ಉದ್ದೇಶದ್ದಾಗಿತ್ತು ಎನ್ನಬಹುದು.

’ಲಂಚನ್ ಆನ್ ದ ಗ್ರಾಸ್’- ಕ್ರಿ.ಶ ೧೮೬೩ ರಲ್ಲಿ ಪ್ಯಾರಿಸ್ ನ ಸಲಾನ್ ನಿಂದ ತಿರಸ್ಕರಿಸಲ್ಪಟ್ಟು,ಪರ್ಯಾಯ ಪ್ರದರ್ಶನದಲ್ಲಿ ಪ್ರದರ್ಶಿಸಲ್ಪಟ್ಟಾಗ ದೊಡ್ಡ ಕಂಪನ ಸೃಷ್ಟಿಸಿತ್ತು.ಇಬ್ಬರು ಆಧುನಿಕ ಪುರುಷರೊಂದಿಗೆ ಕುಳಿತ ನಗ್ನ ಮಹಿಳೆ ಪ್ರೇಕ್ಷಕನೆಡೆಗೆ ದೃಷ್ಟಿ ಹಾಯಿಸುತ್ತಿರುವಂತೆ ತೋರಿಸಲಾಗಿದೆ.ಇಬ್ಬರೂ ಪುರುಷರು ಮಾತಿನಲ್ಲಿ ಮಗ್ನರಾಗಿದ್ದಾರೆ.ಎದುರು ಕುಳಿತ ಮಹಿಳೆ ತನ್ನ ಸಹಚರರೊಂದಿಗೆ ಯಾವುದೇ ಸಂಬಂಧವಿಲ್ಲವೆಂಬಂತೆ ಪ್ರೇಕ್ಷಕನನ್ನು frame ನೊಳಗೆ ಆಹ್ವಾನಿಸುವ ಪ್ರಯತ್ನದಲ್ಲಿದ್ದಾಳೆ.ನಾಲ್ವರ ದೃಷ್ಟಿಯೂ ಪರಸ್ಪರ ಸಂಧಿಸುತ್ತಿಲ್ಲ.ಆದರೆ ಅವರು ಪ್ರೇಕ್ಷಕನ ಇರವನ್ನು ಗಾಢವಾಗಿ ಅನುಭವಿಸುತ್ತಾ,ಆತನ ಬರುವಿಗಾಗಿ ಅವಕಾಶ(space) ಕೊಡಲು ಸಿದ್ಧರಿದ್ದಂತಿದೆ.

ಚಿತ್ರದ ಎಡಮುಂಭಾಗದಲ್ಲಿ ಬುಟ್ಟಿ ಮಗುಚಿರುವಂತೆಯೂ,ಹಣ್ಣುಗಳು ಹರಡಿ ಬಿದ್ದಂತೆಯೂ ಚಿತ್ರಿಸಲಾಗಿದೆ.ಮಗುಚಿದ ಬುಟ್ಟಿ ಕಳೆದುಹೋದ ಮುಗ್ಧತೆಯ ಸಂಕೇತವಾಗಿಯೂ,ಖಾಲಿ ಕಪ್ಪೆಚಿಪ್ಪು ಕಾಮೋದ್ದೀಪನದ ಸಂಕೇತವಾಗಿಯೂ ಚಿತ್ರಿತವಾಗಿದೆ.ಬುಟ್ಟಿಯ ಎದುರುಗಡೆ ಚಿತ್ರಿಸಲಾಗಿರುವ ಕಪ್ಪೆ ಫ಼್ರೆಂಚ್ ಭಾಷೆಯಲ್ಲಿ ವೇಶ್ಯೆಗಿರುವ ಅಡ್ಡಹೆಸರನ್ನು ಸೂಚಿಸುತ್ತದೆ.ಮಹಿಳೆಯ ಮುಂದೆ ಕುಳಿತ ಪುರುಷನು ಆಕೆಯೆಡೆಗೆ ಬೆಟ್ಟುಮಾಡಿ ಮಾತನಾಡುತ್ತಿರುವುದು ಮತ್ತು ಆಕೆ ಪ್ರೇಕ್ಷಕನೆಡೆಗೆ ನೇರವಾಗಿ ದಿಟ್ಟಿಸುತ್ತಿರುವುದು- ಇಡೀ ಚಿತ್ರದ ಕೇಂದ್ರಬಿಂದು ಆಕೆಯೇ ಎಂಬುದನ್ನು ದೃಢಗೊಳಿಸುತ್ತದೆ.

’ಲಂಚನ್ ಆನ್ ದ ಗ್ರಾಸ್’ ಮೂಲತಃ ಪುನರುಜ್ಜೀವನ ಯುಗದ ಮರ್ಸಾಂಬಿನೋ ರೈಮಂಡಿ ಎಂಬ ಕಲಾವಿದನಿಂದ ರಚಿತವಾದ ’judgement of paris’ ನಲ್ಲಿ ಕಂಡುಬರುವ ನಗ್ನದೇವತೆಗಳ ಆಧುನಿಕ ಅವತರಣಿಕೆ.ಕುಳಿತಿರುವ ಭಂಗಿಯನ್ನು ಬದಲಿಸದೆ,ಅದೇ ದೃಶ್ಯವನ್ನು ಆಧುನೀಕರಣಗೊಳಿಸಿದ್ದಾನೆ ಮಾನೆ.ಮತ್ತೊಂದು ಬಹುಮುಖ್ಯ ಹೊಸತನವೆಂದರೆ- ಚಿತ್ರಣಶೈಲಿಯ ಕಚ್ಚಾತನ.ಶಾಸ್ತ್ರೀಯ ಚಿತ್ರಗಳಲ್ಲಿರುವಂತೆ ಶುಧ್ಧರೂಪಣದ (neat finishing) ಪ್ರಯತ್ನ ಇಲ್ಲಿಲ್ಲ.ಬದಲಾಗಿ ಅವು ದಿಟ್ಟ ಮತ್ತು ವಿಶ್ವಾಸದ ಬೀಸುಗಳು.ಒಟ್ಟಾರೆ,ವಿಷಯ ಮತ್ತು ಶೈಲಿ ಎರಡರಲ್ಲೂ ಹೊಸತನದ ವಲಯ ಸೃಷ್ಟಿಗೊಂಡಿದ್ದನ್ನು ಕಾಣಬಹುದು.


ಮಾನೆಯ ಒಟ್ಟಾರೆ ಚಿತ್ರಗಳನ್ನು ಅವಲೋಕಿಸಿದಾಗ ಆತನ ಅದ್ಭುತ ಕೌಶಲ್ಯ ಕಣ್ಣಿಗೆ ಕಟ್ಟುತ್ತದೆ.ಯಾವುದೇ ಚಿತ್ರವೂ ಆತನ ಹೊಸತನದ ಹುಡುಕಾಟದ ಮಾಧ್ಯಮಗಳಾಗಿ,ಕ್ಯಾನ್ವಾಸ್ ಮೇಲೆ ಕಡೆದ ಶಿಲ್ಪದಂತೆ ಗಾಢ ಅನುಭವಕೊಡುವ ರೂಪಗಳಾಗಿ ಅರಳಿವೆ.ಬಣ್ಣ ಮತ್ತು ಕುಂಚದ ನಿರ್ವಹಣೆ ಬಹಳ ದಿಟ್ಟವಾಗಿ,ಹೊಸರೂಪದೊದಿಗೆ ದಟ್ಟೈಸುತ್ತವೆ.ನಿತ್ಯಜೀವನದ ನೈಜತೆಯನ್ನು ಬಿಂಬಿಸುವುದರ ಮೂಲಕ ಚಿತ್ರಮಾಧ್ಯಮವನ್ನು 'ಆಕಾಶ'ದಿಂದ 'ಭೂಮಿ'ಗೆ ಇಳಿಸುವ ಪ್ರಯತ್ನ ಇದು.ಜನಸಾಮಾನ್ಯರೆಡೆಗೆ ಕಲಾಪ್ರಪಂಚ ಹೊರಳಿನೋಡುವಂತೆ ಮಾಡಿದ ಮಾನೆ ೧೯ ನೆ ಶತಮಾನದ ಅತಿವಿಶಿಷ್ಟ ಮತ್ತು ಪ್ರಮುಖ ಕಲಾಶೈಲಿ -’ಇಂಪ್ರೆಶನಿಸಂ’(ಕ್ಷಣಬಿಂಬವಾದ) ಹುಟ್ಟಿಗೆ ಪ್ರೇರಕಶಕ್ತಿಯಾದರೂ ತನ್ನನ್ನು ತಾನು ಎಂದಿಗೂ ’ಇಂಪ್ರೆಶನಿಸಂ’ನ ಸೀಮಿತ ಲಕ್ಷಣಗಳೊಂದಿಗೆ ಗುರ್ತಿಸಿಕೊಳ್ಳಲು ಬಯಸಲಿಲ್ಲ.