ಗುರುವಾರ, ಜನವರಿ 8, 2009

ಕರೆವ ದಾರಿಯ ಕಲರವ...


ಹೀಗೇ,.. ಮತ್ತೆ ಕುಕ್ಕರಗಾಲಲ್ಲಿ ಮುದ್ದೆಯಾಗಿ ಕೂತು ನನ್ನ ಪುಟ್ಟ ಡೈರಿಯ ಬೆಚ್ಚನೆ ಪುಟ ತೆರೆದು, ಅದರ ಕೆನೆಹಳದಿ ಹಾಳೆಗಳ ಆಪ್ತತೆಯಿಂದ ಮುದಗೊಳ್ಳುತ್ತಾ,ನನ್ನ ಅತ್ಯಂತ ಪ್ರಿಯ ಮಿತ್ರನ ಗಾಢ ಬೆಸುಗೆಯೋ ಎಂಬಂತೆ ಎಡಗೈಯ ಬಿಸಿಯಲ್ಲಿ ಪುಟಕರಗುವಂತೆ ಹಿಡಿದು,ಈ ಕಂಡೂಕಾಣದ ಗೆರೆಗಳನ್ನು ತೊಳೆದುಹಾಕುವಂತೆ ಅಕ್ಷರಬಿಡಿಸುವುದು ಎಂಥ ಪುಳಕ..!

ನನಗಾಗಿ ತನ್ನೆದೆಯನ್ನು ಇಷ್ಟಗಲ ತೆರೆದು,ಪ್ರತಿ ಹಲುಬಿಕೆಯ ಸ್ಪರ್ಷ ಮನಸಾರ ಪಡೆದು ಧನ್ಯತೆಯ ನಗುತೋರುವ ಈ ಪುಟಗಳಿಗಿಂತ ಮತ್ತ್ಯಾವ ಗೆಳೆಯ..?!
ಮಗುವಿನಂಥ ಮುದ್ದು ಬಣ್ಣದ ಈ ಹಾಳೆಗಳು ಹಲವು ವರ್ಷಗಳಿಂದ ನನಗಾಗಿ ಮಾತ್ರ ಇವೆ..!
ನೀಲಿ ಡಾಟ್ ಪೆನ್ ನಿಂದ ಬಿಡಿಸಿದ ಚಿತ್ರಗಳಂಥ ಅಕ್ಷರಗಳು ಸೂಸುವ ಸುವಾಸನೆ ನನ್ನನ್ನು ಅಪ್ಪಿ, ಮತ್ತೆ ಮತ್ತೆ ಕರೆ ಕಳಿಸುತ್ತದೆ.

ಬೆಳ್ಳಂಬಿಳೀ ಕ್ಯಾನ್ವಾಸ್ ನ ಇಡೀ ಆವರಣದ ಎಡಮಧ್ಯದಲ್ಲಿ ಇಟ್ಟ ಸೇಬು ಫಳಫಳ ಹೊಳೆದು ಜಗತ್ತಿನ ಅಷ್ಟೂ ಸೌಭಾಗ್ಯ ತಾನೇ ಪಡೆದಂತೆ ಹುಳಿ-ಸಿಹಿ-ಒಗರು ರುಚಿಯ ಕೆಂಪು ನಗುಬೀರುತ್ತಿದೆ.ಈ ಪುಟಗಳ ಪರಿಮಳದಂತೆಯೇ ಮೃದುವಾಗಿ ಅಪ್ಪಿ ಮುದಗೊಳಿಸುವುದು ಆ ಸೇಬಿನ ಸುವಾಸನೆ.

ಆ ಕೆಂಪು ಸೇಬನ್ನು ಬಿಳೀ ಕ್ಯಾನ್ವಾಸ್ ನಲ್ಲಿ ಇರಿಸಿ ದೂರದಿಂದ ನೋಡುತ್ತಿದ್ದಂತೆ ತುಂಟನಗು ಸುಳಿದುಹೋಗುತ್ತಿದೆ.ಪಾಪ,ಅದಕ್ಕೆ ನೆರಳುತೋರಿಸಿ ಕೂರಿಸದೆ,ಹಾಗೇ ಗಾಳಿಯಲ್ಲಿ ತೇಲಿಸುತ್ತ ಇಡೀ ಕ್ಯಾನ್ವಾಸ ನಲ್ಲಿ ಒಂಟಿಯಾಗಿ ಬಿಟ್ಟು ಸ್ವಲ್ಪ ಹೆದರಿಕೆ ಹುಟ್ಟಿಸಿದ್ದೇನೆ.ಅಚ್ಚಬಿಳೀ ಬಣ್ಣ ಕೆಂಪನ್ನು ಇಡಿಯಾಗಿ ನುಂಗಿಬಿಡಲು ತಿಣುಕುತ್ತಿದ್ದರೂ,ದಿಟ್ಟ ಸುಂದರಿಯಂತೆ ಸೆಣಸುತ್ತಲೇ ಆತಂಕಗೊಂಡಂತಿದೆ ಸೇಬು.ಆದರೆ ನಿಜಕ್ಕೂ ಬಿಳಿ ಹಿನ್ನೆಲೆಯಲ್ಲಿ ಕಿತ್ತಳೆಗೆಂಪು ಸ್ವಲ್ಪ ನೇರಳೆಗುಲಾಬಿ ರಂಗಿನಲ್ಲಿ ಅಪ್ರತಿಮ ಸುಂದರಿಯಂತೆ ಕಾಣುತ್ತಿರುವುದು ಸುಳ್ಳಲ್ಲ.ನಾಳೆ ಅದನ್ನು ಮಾತಾಡಿಸುವವರೆಗೂ ಹಾಗೇ ಇರಲಿ ಬಿಡಿ.

ಕ್ಯಾನ್ವಾಸ್ ನಲ್ಲಿ ಸೇಬು ಇರಿಸುವುದು,..ಈ ನೀಲಿ ಅಕ್ಷರ ಬಿಡಿಸುವುದು,..ಕಾಣುವ ಬಣ್ಣಗಳಷ್ಟನ್ನೂ ಎಣಿಸುವುದು,..ಸುಂದರ ನಗುವನ್ನು ಪದಗಳಿಗೆ ಇಳಿಸುವುದು,... ಇವೆಲ್ಲ ಎಂಥ ಅನೂಹ್ಯ ಸಂಕಟ ಹುಟ್ಟಿಸುತ್ತವೆ..!

ಇಂಥ ಅತಿಭಾವುಕತೆ ನನ್ನ ಎಚ್ಚರ ತಪ್ಪಿಸಿ ಎಲ್ಲೆಲ್ಲೋ ಅಲೆದಾಡಿಸುತ್ತಿರುತ್ತೆ.
ಮಾಮನ ಮನೆಯ ಗಾಢ ಮಾಧುರ್ಯ,ಕಾಡಿನ ಕತ್ತಲೆಯ ಏಕಾಂತ,ಪ್ರತಿ ವಸ್ತುವಿನಲ್ಲಿ ಅವಿತ ಗಾಂಭೀರ್ಯವನ್ನು ಪದೇ ಪದೇ ನೆನಪಿಸುವ ಮೌನ...
ಮೊನ್ನೆಯ ಭೇಟಿಯಲ್ಲಿ ಪ್ರತಿಯೊಂದು ಹೊಸ ಉಸಿರು ಹೊಸತಾಗಿಯೇ ಮನವರಿಕೆಯಾದಂತಿತ್ತು.
ಆ ಕಾಲುದಾರಿ ಕರೆದೊಯ್ದಿದ್ದು ಅಲ್ಲಿ ಜೋಡಿಸಿಟ್ಟ ಜೋಡಿ ಕುರ್ಚಿಗಳ ಬಳಿಗೆ.ಒಂದೇ ಅಳತೆಯ ಸ್ವಯಂಪೂರ್ಣ ಸುಖಿಗಳಂತೆ ಕಂಡವು ಆ ಕುರ್ಚಿಗಳು.ಯಾರ ಪರಿವೆಯೂ ಇಲ್ಲದೆ,ಅನಂತ ಸಂತೃಪ್ತಿ ಹೆಪ್ಪುಗಟ್ಟಿದ ಮೌನದಲ್ಲಿ ಪಿಸುಮಾತನ್ನೂ ಮರೆತು ಸಮಾಧಿಸ್ಥಿತಿಯಲ್ಲಿ ಐಕ್ಯವಾದಂತೆ ಕಂಡವು ಅವು.ಅಗಲ ಎಲೆಗಳ ಪುಟ್ಟ ಮರದ ರೆಂಬೆಗಳು ಕುರ್ಚಿಗಳ ತಲೆಯ ಮೇಲೆ ಹರಡಿ ಅಭಯ ನೀಡುತ್ತಿದ್ದವು.ಗುಡ್ಡದ ಮೇಲಿನ ’ಅನುರಾಗಿ’ಗಳ ಮುಂದೆ ಧಿಗ್ಗನೆ ಥಿಯೇಟರ್ ಪರದೆಯಲ್ಲಿ ಕಂಡಂತೆ ಅಷ್ಟಗಲ ಚಾಚಿಕೊಂಡ ವಿಸ್ತಾರದ ಇಳಿಜಾರಿನ ಹರವು.ವೆಂಕಟಪ್ಪನವರ ವಾಟರ್ ಕಲರ್ ಚಿತ್ರಗಳನ್ನು ನೆನಪಿಸುವ ಭೂದೃಶ್ಯ.ದೂರದ ತಿಳಿನೀಲಿ ಬೆಟ್ಟ ಅಡ್ಡಡ್ಡ ಮೈಚಾಚಿ ಮಲಗಿ,ಪಕ್ಕದ ಹಸಿರು ಮೈಗೂ ಜಾಗಬಿಟ್ಟುಕೊಟ್ಟಿದೆ..
ಅಲ್ಲೆಲ್ಲೋ ದೂರದಲ್ಲಿ ಇಷ್ಟೇ ಇಷ್ಟು ಕಾಣುವ ಬಿಳಿಗೋಡೆಯ ಕೆಂಪುಹೆಂಚಿನ ಪುಟ್ಟಮನೆ ನೋಡುಗರಲ್ಲಿ ಮುದ್ದುಹುಟ್ಟಿಸುವ ಹಟತೊಟ್ಟಂತೆ ಕಂಡಿದ್ದರಿಂದ ನಾನು ಬೇಕೆಂತಲೆ ಉದಾಸೀನ ನಟಿಸಿದೆ.ಆದರೂ ಅದು ಮುದ್ದಾಗೇ ಇತ್ತು..! ಆಹೊತ್ತು ಆಕಾಶದ ನೀಲಿ ಕೂಡ ಮೊದಲಬಾರಿಗೆ ಅತಿಶುಭ್ರವಾಗಿ ಕಂಡಿತ್ತು!

ಕುರ್ಚಿಗಳ ಬಲಪಕ್ಕದಲ್ಲಿ ಮೇಲಿನಿಂದ ಇಳಿಜಾರಿಗೆ ಜಾರುತ್ತಿದ್ದ ಕಾಲುದಾರಿ ಮಾತ್ರ ಪಕ್ಕಾ ರೊಮ್ಯಾಂಟಿಕ್ ಕಲಾವಿದನ ಪೂರ್ವಯೋಜನೆಯಂತೆಯೇ ಕಂಡು ಸಂಶಯ ಹುಟ್ಟಿಸಿತು.ಕುರ್ಚಿಗಳ ಪ್ರೇಮಸಮಾಧಿಯ ಸ್ಥಿರತೆಗೆ ಅಡಚಣೆಯ ಅಲೆಗಳ ಕಾಟ ತಪ್ಪಿಸಲೆಂಬಂತೆ 'ಇದೋ ನಿಮ್ಮ ದಾರಿ ಹೀಗೆ..' ಎಂದು ತಲೆಮೊಟಕಿ ಕರೆಯುವಂತಿತ್ತು ಕಾಲುದಾರಿಯ ನಿಲುವು.ಆದರೂ ಅದು ಹೀಗೇ ಒಂದಿಲ್ಲೊಂದು ನೆಪಮಾಡಿ ಮತ್ತೇನನ್ನೋ ನನಗಾಗಿ ತೋರಿಸಲು ತವಕಿಸುತ್ತಿದ್ದುದು ತಿಳಿದಿತ್ತಾದ್ದರಿಂದ ಮರುಮಾತಾಡದೆ ಅನುರಾಗದ ಘಮಲು ಹೀರುತ್ತಾ ಕರೆ ದಾರಿಗೆ ಕಾಲೊಪ್ಪಿಸಿದೆ...