Follow by Email

ಬುಧವಾರ, ಸೆಪ್ಟೆಂಬರ್ 24, 2008

ಹೀಗೊಂದು ಹಳೆಯ ನಂಟಿನ ಕನವರಿಕೆಪಶ್ಚಿಮ ಬಂಗಾಳದ ’ಶಾಂತಿನಿಕೇತನ’ ನನ್ನ ಮಟ್ಟಿಗೆ ಮೈನವಿರೇಳಿಸುವ ಹೆಸರು.
ಮೈಸೂರಿನಲ್ಲಿ ಕಲಾವಿದ್ಯಾರ್ಥಿಯಾಗಿದ್ದಾಗ ಅಲ್ಲಿಗೆ ಭೇಟಿ ಕೊಡುವ ಅವಕಾಶ ದೊರಕಿತ್ತು. ಅಲ್ಲಿನ ಹಳ್ಳಿಗಳು,ಕಾಲುದಾರಿ,ಮನೆಗಳು,ವಿಶಾಲ ಬಯಲು,ಕಲಾಭವನದ ಕ್ಯಾಂಪಸ್,ಸೈಕಲ್ ತುಳಿಯುವ ಜನ - ಎಲ್ಲವೂ ಒಟ್ಟಾರೆ ಬೆಚ್ಚಗಿನ ಗೂಡು ಕಟ್ಟಿದ್ದವು ನನ್ನೊಳಗೆ. ಮುಂದೊಮ್ ಎಂ.ಎಫ಼್.ಎ ಪದವಿಗಾಗಿ ಅಲ್ಲಿ ಪ್ರವೇಶ ಪಡೆದಾಗ ಜನ್ಮಾಂತರದ ಯಾವುದೋ ನಂಟು ಮತ್ತೊಮ್ಮೆ ನನ್ನನ್ನು ಆಪ್ತವಾಗಿ ಕರೆಸಿಕೊಂಡಂತೆ ಅನಿಸಿತ್ತು !

ರೈಲಿನಲ್ಲಿ ಬಂಗಾಳ ಪ್ರವೇಶಿಸುತ್ತಿದ್ದಂತೆ ಸೆಳೆಯುವುದು- ಅಲ್ಲಿನ ಭೂದ್ರುಶ್ಯ.
ಅಚ್ಚರಿಗೊಳಿಸುವಂತೆ ಒಂದೂ ಓರೆಕೋರೆಯಿಲ್ಲದ,ಕ್ರುತಕವೇನೋ ಅನಿಸುವಷ್ಟು ನೀಟಾಗಿ,ಸಪಾಟಾದ ವಿಶಾಲ ಬಯಲು..ಬಯಲಿನಿಂದ ಉಂಟಾದ ಅಡ್ಡಗೆರೆಗಳನ್ನು ಅಷ್ಟೇ ನಾಜೂಕಾಗಿ ಕತ್ತರಿಸಿ ಲಂಬಗೊಳಿಸುವ ತಾಳೆಮರಗಳು..ಯಾರೋ ಕಲಾವಿದ ಚೌಕಾಸಿ ಮಾಡಿ ಜೋಡಿಸಿಟ್ಟಂತೆ.
(ತಾಳೆಮರಗಳ ’ವ್ಯಕ್ತಿತ್ವ’ ನನ್ನನ್ನು ಆಕರ್ಷಿಸಿದ್ದು ಆಗಲೆ. ನೀಟಾಗಿ ಹೇರ್ಕಟ್ ಮಾಡಿಸಿ ಟಾಕುಟೀಕಾಗಿ ಎದೆಯುಬ್ಬಿಸಿ ನಿಂತ ಹೈದನಂತೆ,...ಮತ್ತೊಮ್ಮೆ ತಲೆತುಂಬ ಹೂಮುಡಿದು ಕ್ಯಾಮೆರಾಗೆ ಪೋಸ್ ಕೊಡುವ ಸುಂದರಿಯಂತೆ ಕಾಣುತ್ತವೆ ಅವು.)
ಮತ್ತೊಂದೆಡೆ ಸದಾ ತುಂಬಿರುವ ಪುಟ್ಟ ಪುಟ್ಟ ಕೊಳಗಳು,ಅವುಗಳಲ್ಲಿ ಲಿಲ್ಲಿ,ತಾವರೆ,ಜೊಂಡು,ಗುಂಪುಗುಂಪಾಗಿ ಕ್ರೀಡಿಸುವ ಬಾತುಗಳು,ಪಕ್ಕಕ್ಕೆ ಸುಂದರ ಮನೆಗಳು...ಒಟ್ಟಾರೆ, ವಿಶಾಲ ಕ್ಯಾನ್ವಾಸಿನಲ್ಲಿ ಒಂದು ಭಾಗವಾಗಿ ನಾನೂ ಸೇರ್ಪಡೆಗೊಂಡ ಸಂತಸ.

ಶಾಂತಿನಿಕೇತನದ ಸಖ್ಯ ರವೀಂದ್ರನಾಥರ ’ಶಾಯಿಯ ಕಂಪು’ ಅನುಭವಿಸಿದಂತೆ ! ಅಲ್ಲಿನ ನೋಟ, ಪರಿಮಳ, ಜನ, ಸಂಗೀತ - ಎಲ್ಲವೂ ಹಳೆ ಪರಿಚಯವೋ ಎಂಬಂತೆ ನನ್ನದೇ ಆಗಿಬಿಟ್ಟವು. ಭಾವತೀವ್ರತೆಯ ಯಾವುದೋ ಅಮಲು ಆ ಪರಿಸರದಲ್ಲಿ ಅದ್ದಿ,ಹಾಗೆಯೇ ಸ್ಥಿರವಾಗಿ ಉಳಿದುಬಿಟ್ಟಹಾಗಿದೆ.
ಅದು ಸದಾ ಸಾಂಸ್ಕ್ರುತಿಕ ಚಟುವಟಿಕೆಗಳಿಂದ ಗಿಜಿಗುಡುವ ತಾಣ. ಮಧ್ಯಾಹ್ನದ ಪ್ರಖರತೆಯಲ್ಲಿ, ರಾತ್ರಿಯ ನೀರವತೆಯಲ್ಲಿ ತಾತ್ಕಾಲಿಕವಾಗಿ ಶಾಂತವಾಗುತ್ತದೆ. ಗುರುಕುಲಾಶ್ರಮದ ಪರಿಕಲ್ಪನೆಯಲ್ಲಿ ರೂಪುಗೊಂಡ ’ತಪೋವನ’ದ ಗಾಢ ಮೌನ ಮಾತ್ರ ಸುತ್ತೆಲ್ಲ ಮಡುಗಟ್ಟಿ ನಮ್ಮನ್ನೂ ಒಳಗುಮಾಡಿಕೊಳ್ಳುತ್ತದೆ.

ಹೊಸ ಸಹವಾಸಕ್ಕೆ ಸಾಸಿವೆ ಎಣ್ಣೆಯ ಘಾಟು, ಆಲೂಶೆದ್ದೊ, ಮಾಛ್(ಮೀನು), ಗುಗ್ನಿ(ಬಟಾಣಿ ಗೊಜ್ಜು)- ಇವುಗಳ ಅತಿಹಾವಳಿಯಿಂದ ತಪ್ಪಿಸಿಕೊಳ್ಳುವುದು ಕಷ್ಟಸಾಧ್ಯವೇ.ಹೊಂದಿಕೊಂಡರೆ ಮಾತ್ರ ’ಮಿಶ್ಟಿ’(ಸಿಹಿ)ಯ ರುಚಿ ನಿಮ್ಮೊಂದಿಗೇ ಉಳಿದುಬಿಡುತ್ತದೆ. ಭಾಷೆ,ಆಚಾರ,ಆಹಾರದ ವ್ಯತ್ಯಾಸದ ಹೊರತು ’ಜನಮಾನಸ’ ಸ್ವಾಭಾವಿಕವಾಗಿ ಎಲ್ಲೆಡೆಯೂ ಒಂದೇ ತಾನೆ..?!

ತಿಳಿಹಸಿರಿನ ’ಲೇಡಿಬರ್ಡ್’ ನನ್ನ ಆಪ್ತ ಸಂಗಾತಿ. ನನಗೇ ರೆಕ್ಕೆಮೂಡಿಸಿದಂತೆ ಹಗುರವಾಗಿ, ನಾನು ಹಳಿದಲ್ಲಿ ಕರೆದೊಯ್ಯುವ ನಿಷ್ಠಾವಂತ ಸಾಂಗತ್ಯ ಅದರದು. ಮಧ್ಯಾಹ್ನ ಊಟದ ನಂತರ ಹೊಸ ಜಾಗಗಳ ಅನ್ವೇಷಣೆ ನಮ್ಮಿಬ್ಬರ ಇಷ್ಟದ ಹವ್ಯಾಸ. ನನ್ನದೇ ಖಾಸಗಿ ಸ್ಥಳಗಳೂ ಹಲವಾರಿದ್ದವು ನನಗಾಗಿ ಹೇಳಿ ಮಾಡಿಸಿದಂತೆ. ನಿಶ್ಶಬ್ದವಾಗಿ ಕುಳಿತು ನಿಸರ್ಗದ ಬಣ್ಣ,ವಿನ್ಯಾಸ,ಶಬ್ದವೈವಿಧ್ಯಕ್ಕೆ ಮೈಯೆಲ್ಲ ಕಣ್ಣು-ಕಿವಿಯಾಗಿಸಿಕೊಂಡು ನನ್ನನ್ನೇ ಮರೆತುಬಿಡುವುದು ಎಷ್ಟು ಹಿತವಾಗಿತ್ತು..!
ಇಡೀ ಸಂಸಾರದೊಂದಿಗೆ ಧ್ಯಾನಸ್ಥರಂತೆ ನಿಂತ ಸಾಲು ಸಾಲು ತಾಳೆಗಳು, ಎಳೆಮಕ್ಕಳ ಸಣ್ಣಚೀರಾಟದಂತೆ ಸದ್ದುಹೊರಡಿಸುತ್ತ ತಲೆಯಾಡಿಸುವ ಹೊಲದ ಪೈರು, ಎಲ್ಲಿದ್ದೆ ಇಷ್ಟು ಹೊತ್ತು ಎಂದು ಸಲುಗೆಯಿಂ ಬರಮಾಡಿಕೊಳ್ಳುವ ಕಾಲುದಾರಿ, ಪ್ರತಿಕ್ಷಣವೂ ಹೊಸ ಸೀರೆ ಹೊದ್ದು ಬಿನ್ನಾಣದಿಂದ ಬಣ್ಣ ಬದಲಿಸುವ ಆಕಾಶ, ಬದುಕಿನ ಚಲನಶೀಲತೆಯನ್ನು ನೆನಪಿಸುವ ನೀರಧಾರೆ, ಕೊಳಗಳಲ್ಲಿ ಮುಳುಗಿ-ತೇಲಿ ಆಡುವ ಬಾತುಕೋಳಿಗಳ ಹಿಂಡು, ನೀರಿನಲ್ಲುಂಟಾಗುವ ಶುದ್ಧ ವ್ರುತ್ತಾಕಾರದ ಅಲೆಗಳು, ನನ್ನೊಡನೆ ಮಾತಾಡುತ್ತಲೇ ಕಣ್ಣು ಮಿಟುಕಿಸಿ ನಾಳೆ ಸಿಗುವೆನೆಂದು ಮರೆಯಾಗುವ ಸೂರ್ಯ - ಇವುಗಳನ್ನೆಲ್ಲ ನಿಧಾನ ಕರಗಿಸಿಕೊಳ್ಳುತ್ತಾ,... ನಾನೆ ಅವುಗಳಲ್ಲಿ ಕರಗುತ್ತಾ...ಕತ್ತಲಾದಮೇಲೆ ಅನಿವಾರ್ಯವೆಂಬಂತೆ ಹಾಸ್ಟೆಲ್ ಗೆ ಮರಳುವುದು ನನ್ನ ನಿತ್ಯದ ದಿನಚರಿಯಾಗಿತ್ತು.

ಕತ್ತಲೆ, ನೆರಳು, ಗಾಢಬಣ್ಣಗಳೊಡನೆ ನಿಕಟತೆ ಬೆಳೆದದ್ದೂ ಆಗಲೇ ಇರಬೇಕು. ಹಾಸ್ಟೆಲ್ ಕೋಣೆಯ ಕಿಟಕಿಯಿಂದ ಕಾಣುತ್ತಿದ್ದುದು- ’ಕಾಲಾ ಘರ್’ (ಕಪ್ಪು ಮನೆ). ನಂದಲಾಲ್ೋಸ್,ರಾಂ ಕಿಂಕರ್ ಬೈಜ್ ಮುಂತಾದ ಪ್ರಸಿದ್ಧರು ಇರುತ್ತಿದ್ದ ಸ್ಥಳ ಎಂಬುದಕ್ಕಿಂತಲೂ ಅದರ ದೈತ್ಯಾಕಾರ,ಪಕ್ಕದಲ್ಲಿದ್ದ ಸುಂದರ-ಸುಗಂಧಿತ ಮರ, ಎಲ್ಲಕ್ಕೂ ಮಿಗಿಲಾಗಿ ರಾತ್ರಿಯ ಕ್ರುತಕ ಬೆಳಕಿನಲ್ಲಿ ಸ್ವತಃ ಕಲಾಕ್ರುತಿಯಾಗಿ ಮೈದೋರುವ ಅದರ ಸೊಬಗು ಆಕರ್ಷಕವಾದುದು. ಕಪ್ಪುಛಾಯೆಯ ವೈವಿಧ್ಯತೆ ಕಾವ್ಯದ ಸೊಗಸಿನಂತೆ ಹೊಮ್ಮುತ್ತಿತ್ತು.

ಹಳ್ಳಿಗಳಲ್ಲಿ ಸಾಂಥಾಲಿ ಬುಡಕಟ್ಟು ಜನರ ಮನೆಗಳ ಸೊಗಸು-ಕಲಾತ್ಮಕತೆ,ಹಂದಿಮರಿಗಳ ಹಿಂಡು,ಮಕ್ಕಳ ಕೇಕೆ...ಹೀಗೆ ಗ್ರಹಿಕೆಗೆ ನಿಲುಕುವಷ್ಟೂ ನನ್ನವೇ...!
....ಎಷ್ಟೆಲ್ಲ... ಏನೆಲ್ಲ ಹೇಳುವುದು.....?!
ಎಷ್ಟು ನೆನೆದು ಹರಟಿದರೂ ನನ್ನಲ್ಲಿ ನಾನೇ ಆಗಿಹೋದ ವಿವರಗಳೆಲ್ಲ ಹಾಗೇ ಉಳಿದುಬಿಡುತ್ತವೆ...!
" ಶಾಂತಿನಿಕೆತೋನ್.......
ಶೇಜೆ ಶೋಬ್ ಹೋತೆ ಆಪೋನ್
ಆಮಾದೇರ್ ಶೋಬ್ ಹೋತೆ ಆಪೋನ್
ಆಮಾದೇರ್ ಶಾಂತಿನೀಕೆತೋನ್......"

( ಶಾಂತಿನಿಕೇತನ.......
ಎಲ್ಲರೂ ನಮ್ಮವರೇ ಇಲ್ಲಿ..
ಇದು ನಮ್ಮೆಲ್ಲರ ಶಾಂತಿನಿಕೇತನ....)

12 ಕಾಮೆಂಟ್‌ಗಳು:

Santhosh ಹೇಳಿದರು...

ಚೆನ್ನಾಗಿದೆ ವರ್ಣಿಸಿದ್ದೀರ... ಹಳೆ ನೆನಪುಗಳೇ ಹಾಗೆ ಕಂಡ್ರಿ ಯಾವುದೋ ಸಂಜೆಗಳಲ್ಲಿ ಗಕ್ಕನೆ ಎದುರಾಗಿ ಮೌನಕ್ಕು ಮಾತು ಕಲಿಸಿಬಿಡುತ್ತೆ..

ಬಂಗಾಳ ಮತ್ತು ಶಾಂತಿನಿಕೇತನ free trip ಕರ್ ಕೊಂಡು ಹೋಗಿದ್ದಿಕ್ಕೆ ಧನ್ಯವಾದಗಳು !

ಅಂದ ಹಾಗೆ Ladybird ಅಂದ್ರೆ ಸೈಕಲ್ ಅಂತ ಅಂದುಕೊಳ್ತೀನಿ ...!

shreedevi kalasad ಹೇಳಿದರು...

ಚರಿತ. ನಿಮ್ಮ ಚಿತ್ರಗಳಷ್ಟೇ ಚೆಂದ ಬರಹ ನೆನಪು ಎಲ್ಲ.

ಜೋಮನ್ ಹೇಳಿದರು...

ನೆನಪುಗಳ ಮಾತು ಮಧುರ... ನಿಮ್ಮ ಬರಹ ಕೂಡ. ಜೊತೆಗೆ ಚಿತ್ರಗಳೂ ಚೆಂದ ಚೆಂದ. ಬರೆಯುತ್ತಲಿರಿ...

charita ಹೇಳಿದರು...

@santosh,

ಸೈಕಲ್,ಬ್ಯಾಗ್,ಚಪ್ಪಲಿ,ಲೇಖನಿ...ಹೀಗೆ ನಾವು ಬಳಸುವ ಎಲ್ಲ ವಸ್ತುಗಳೂ ಆಪ್ತ ವ್ಯಕ್ತಿತ್ವ ಪಡೆದುಬಿಡುತ್ತವೆ..!
ನಿಮ್ಮ ಸೈಕಲ್ ಸಹವಾಸ ಓದಿದೆ.
ಹೀಗೇ ಬರಿತಾ ಇರಿ.

@sridevi,

ಸ್ವಾಗತ.
ಅನಿಸಿಕೆಗೆ ಧನ್ಯವಾದಗಳು.
ನಿಮ್ಮ ಭಾಷೆ ಕೂಡ ಸರಳವಾಗಿ,ಚೆನ್ನಾಗಿದೆ.
ಪ್ರತಿಕ್ರಿಯಿಸುತ್ತಿರಿ.


@joman,

ನಿಮಗೂ ಸ್ವಾಗತ.
ನಿಮ್ಮ ಲೇಖನಗಳನ್ನು ಓದಿದೆ.
ಆಪ್ತ ಶೈಲಿ.

ಕೆಲವೊಮ್ಮೆ ಕೇವಲ ಚೆಂದವಾಗಿ ಉಳಿದುಬಿಡುವುದೂ ಸರಿಯಲ್ಲ ಅಂತ ಕಾಣುತ್ತೆ..:)..!
...ಇರ್ಲಿ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಹೀಗೇ ಪ್ರತಿಕ್ರಿಯಿಸುತ್ತಿರಿ.

besarave:? ಹೇಳಿದರು...

chennagi barididdiri madum shabda sangrah achennagide

lively lawry ಹೇಳಿದರು...

you should visualise your memories of shanthiniketan. please do some more illustrations on the place and your nostalgia
regards
LL

ಚರಿತಾ ಹೇಳಿದರು...

@ Lawry,

ಶಾಂತಿನಿಕೇತನದಲ್ಲಿದ್ದಾಗ ಹಲವಾರು ಚಿತ್ರಗಳನ್ನು ಮಾಡಿದ್ದೇನೆ.
ಹಾಗೆಯೇ ಅಲ್ಲಿನ ಇನ್ನೂ ಎಷ್ಟೋ ವಿವರಗಳು ಬರಹಕ್ಕಿಳಿಯದೆ ಹಾಗೇ ಉಳಿದಿವೆ.
ಅವೆಲ್ಲ ಬರೆಸಿಕೊಂಡಾಗ ಆ ಚಿತ್ರಗಳನ್ನೂ ಪ್ರಕಟಿಸುತ್ತೇನೆ.

ಥ್ಯಾಂಕ್ಸ್ Lawry .

Mohan ಹೇಳಿದರು...

(ತಾಳೆಮರಗಳ ’ವ್ಯಕ್ತಿತ್ವ’ ನನ್ನನ್ನು ಆಕರ್ಷಿಸಿದ್ದು ಆಗಲೆ. ನೀಟಾಗಿ ಹೇರ್ಕಟ್ ಮಾಡಿಸಿ ಟಾಕುಟೀಕಾಗಿ ಎದೆಯುಬ್ಬಿಸಿ ನಿಂತ ಹೈದನಂತೆ,...ಮತ್ತೊಮ್ಮೆ ತಲೆತುಂಬ ಹೂಮುಡಿದು ಕ್ಯಾಮೆರಾಗೆ ಪೋಸ್ ಕೊಡುವ ಸುಂದರಿಯಂತೆ ಕಾಣುತ್ತವೆ ಅವು.)

Last month when i visited Vizag, i felt the same feelings of the above lines while travelling by train...

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. ಹೇಳಿದರು...

ಕಂಗಾಲಾದೆ ವ್ಹಾ ವ್ಹಾ ಮಸ್ತಾಗಿ ಬರಹ
ಶಾಂತಿನಿಕೇತನದ ಸಂಚಾರ ಮಡ್ಸಿದ್ದಕ್ಕೆ ಧನ್ಯವಾದ.....
ಬರೀತಾ ಇರಿ....
ಕನ್ನಡ ಬರವಣಿಗೆ ನೋಡಿ ಪುಲ್ ಕುಶ್....

ಚರಿತಾ ಹೇಳಿದರು...

ನಿಮ್ಮ ಸಹೃದಯ ಓದು,ಪ್ರತಿಕ್ರಿಯೆಗೆ ಧನ್ಯವಾದಗಳು ರಾಘವೇಂದ್ರ.
ಪ್ರೀತಿ ಹೀಗೇ ಇರಲಿ.

muddu ಹೇಳಿದರು...

tumba chennagi barediddeera.....

ಮೃತ್ಯುಂಜಯ. ಮ. ಯಲಿವಾಳ ಹೇಳಿದರು...

hegondu hley nantin knvrike tumba channagide re