ಭಾನುವಾರ, ಅಕ್ಟೋಬರ್ 19, 2008

ಮೋಹದ ಮಾಯೆಗೆ ಯಾವ ರಾಗದ ಹಂಗು..?!
ಬರೆಯಲು ಹೊರಟಿದ್ದು ನೆಚ್ಚಿನ ಕಲಾವಿದನ ಬಗ್ಗೆ. ಬರೆಸಿಕೊಳ್ಳುತ್ತಿರುವುದು ಮಾತ್ರ ನನ್ನೊಂದಿಗೇ ಉಳಿದುಬಿಟ್ಟ ಹಳೆಯ ಗೆಳೆಯನ ನೆನಕೆ. ಎಷ್ಟು ತಾತ್ಸಾರ,ಜಿಗುಪ್ಸೆ,ಕೋಪ ಹುಟ್ಟಿಸಿಕೊಳ್ಳಲು ಪ್ರಯತ್ನಿಸಿದರೂ ಕೊನೆಗೆ ಆವರಿಸಿಬಿಡುವುದು ಆತನ ಒದ್ದೆಕಂಗಳ ಮುದುಡಿದ ಮುಖ,ನಿಸ್ಸಹಾಯಕ ನೋಟ,..ಎಷ್ಟು ಬಗೆದರೂ ತೀರದ ಪ್ರೀತಿಯೊರತೆಯ ಎದೆ...

ಪುಸ್ತಕ ತಿರುವುತ್ತಾ ಸಿಕ್ಕಿದ್ದು - ನಾನು ತೆಗೆದ ಆತನ ಫೋಟೊ. ನಕ್ಕಾಗ ಕಣ್ಪಕ್ಕ ಬೀಳುವ ಗೆರೆ,ಮೀಸೆಯಂಚು,ನಗುಮೆತ್ತಿಕೊಂಡ ಕೆನ್ನೆ ಕಿವಿ ಕುತ್ತಿಗೆ ಇಷ್ಟು ಮಾತ್ರ ಇರುವ ಆತನ ಅದ್ಭುತ ಭಾವ ಚಿತ್ರ ಅದು..! ಹಲವು ವರ್ಷಗಳ ನಂತರ ಯಾಕೋ ಮತ್ತೆ ಆರ್ದ್ರಗೊಳಿಸುತ್ತಿದೆ. ’ಎಮೋಶನಲ್ ಆಗ್ಬ್ಯಾಡ್ಲೆ ಚೆರಿ’ ಎನ್ನುವ ಗೆಳೆಯರ ಕಳಕಳಿಯನ್ನು ಪ್ರೀತಿಯಿಂದ ಪಕ್ಕಕ್ಕಿಟ್ಟು , ತುಸು ಹೊತ್ತು ಮೌನವಾಗಿ ಪ್ರಾಮಾಣಿಕ ಕ್ಷಣಗಳನ್ನು ಪುರಸ್ಕರಿಸಿಬಿಡುವ ಮೋಹ..!

ಈ ಕ್ಷಣದ ’ನಿಜ’ವೆಂಬುದು ಮರುಕ್ಷಣದಲ್ಲಿ ಮತ್ತೆಂದೂ ಬದಲಿಸಲಾಗದ ವೇಷ ತೊಟ್ಟುಬಿಡುವುದು,ಗಂಟಲಲ್ಲಿ ನುಂಗಲಾರದ ತಳಮಳವಾಗಿ ಉಳಿದುಬಿಡುವುದು, ಯಾವ ಬಣ್ಣ ಬಳಿದರೂ ಮರುಕಳಿಸದೆ ಮರೆಯಾಗಿಬಿಡುವುದು, ಸಣ್ಣ ಹತಾಶೆಯ ನಗುವಾಗಿ ಸದಾಕಾಲ ತುಟಿಯಂಚಿನಲ್ಲಿ ಜಾಗ ಪಡೆದುಬಿಡುವುದು... ಗಹಗಹಿಸಿ ನಕ್ಕು ಈ ಎಲ್ಲವನ್ನೂ ಅಲೆಅಲೆಯಾಗಿ ಬಹುದೂರ ತೇಲಿಬಿಟ್ಟುಬಿಡುವ ತುಡಿತ..!

ಭಾವನೆಗಳನ್ನು ತಕ್ಕಡಿಯಲ್ಲಿ ತೂಗಿ,ಅಳೆದು,ಲೆಕ್ಕ ಸಮಗೊಳಿಸಿ..ಪೊಟ್ಟಣ ಕಟ್ಟಿ,..ಬಿಟ್ಟಿ ಹಂಚಿಬಿಡುವುದು ಯಾವ ಘನೋದ್ದೇಶಕ್ಕೋ ಏನೋ !

ಈ ’ಪ್ರೀತಿ-ಪ್ರೇಮ'ಎಂಬ ತುಮುಲವನ್ನು ವೇದಿಕೆ ಹತ್ತಿಸಿ,ಹಾರ ಹಾಕಿ,ಚಪ್ಪಾಳೆ ತಟ್ಟಿ, ಫೋಟೊ ತೆಗೆದು ಶಾಶ್ವತವಾಗಿ ಆಲ್ಬಮ್ ಮಾಡಿ ಸಮಾಧಾನಗೊಳಿಸುವುದು ಸ್ವಲ್ಪ ಜಾಣತನ ಇರಬಹುದು.ಆದರೆ ವ್ಯಂಗ್ಯ,ವಿಮರ್ಶೆ ಎಲ್ಲವು ಅಂತಿಮವಾಗಿ ನಮ್ಮ ನಮ್ಮ ಭಾವಚಿತ್ರಗಳೇ ಆಗಿರುತ್ತವೆ..

ಕಾಡುವ ನೆನಪುಗಳನ್ನು ಯಾವುದಾದರೂ ನೆಪದಲ್ಲಿ ಹಾಳೆಗಳ ನಡುವೆ..ಪೆನ್ಸಿಲ್ ಬಾಕ್ಸ್ ಒಳಗೆ..ಅಥವ ಬಾಚಣಿಗೆಯ ಹಲ್ಲುಗಳ ಮಧ್ಯೆ..ಕಡೆ ಪಕ್ಷ ಕುರ್ತಾ ಜೇಬಿನಲ್ಲೆಲ್ಲಾದರೂ ಅಡಗಿಸಿಟ್ಟು ಮರೆತುಬಿಡುವ ಹುನ್ನಾರ ಯಾಕೋ ಕೈಗೂಡುವಂತೆ ಕಾಣುತ್ತಿಲ್ಲ....

ನಾನು ಗಂಭೀರ ವಿದ್ಯಾರ್ಥಿಯಾಗಲು ಹವಣಿಸಿದಾಗೆಲ್ಲ ಹೀಗೆ ಏನಾದರೊಂದು ನೆಪ ಹಣಕಿ ಹಾಕುತ್ತ ಗೋಳಾಡಿಸುವುದು ಗಮನಿಸಿದರೆ, ಇದು ಟಾಲ್ಸ್ಟಾಯ್ ಕಥೆಗಳಲ್ಲಿ ಬರುವ ಸೈತಾನನ ಮಸಲತ್ತು ಇರಬಹುದೆಂಬ ಸಂದೇಹ ಗಟ್ಟಿಯಾಗುತ್ತಿದೆ.ಆ ಮಹಾಶಯ ಕಾಣಲು ಸಿಕ್ಕರೆ,ಬಳಿ ಕೂರಿಸಿಕೊಂಡು ಪುಸಲಾಯಿಸಿ ಬೀಳ್ಕೊಡುವ ಮಾರ್ಗ ಹುಡುಕುತ್ತಿದ್ದೇನೆ.

12 ಕಾಮೆಂಟ್‌ಗಳು:

Santhosh Rao ಹೇಳಿದರು...

Masterpiece...
ಉದ್ದದ Highway road ನಲ್ಲಿ ಹೋಗುತಿದ್ದ ಮನಸ್ಸು ತಕ್ಷಣ ಒಂದು U-Turn ತಗೊಂಡ್ ಬಿಡ್ತು

ಯಾಕೋ ಗೊತ್ತಿಲ್ಲ ಮೂರು ಸಲ ಓದಿದೆ..

ಅಂದ ಹಾಗೆ ಪ್ರೀತಿ, ದ್ವೇಷ, ಅಸೂಯೆ ಎಲ್ಲವನ್ನು Fevicol ಹಾಕಿ ಅಂಟಿಸಿಕೊಂಡೇ ಈ ಭೂಮಿ ಮೇಲೆ ಬಂದಿರ್ತಿವಿ so ಮರೆತಿಬಿಡುವ ಹುನ್ನಾರ ಖಂಡಿತ ಕೈಗೂಡುವುದಿಲ್ಲ ..ಅದರಲ್ಲೂ ಬಾಚಣಿಗೆಯ ಹಲ್ಲುಗಳ ಮಧ್ಯೆ ಅಡಗಿಡಿಸೋದು ಅಬ್ಬಬ್ಬ ದೂರದ ಮಾತು ... ಕೊನೆಗೆ ಏನೇ ಆಗಲಿ ಹೇಳೋದ್ ಇಷ್ಟೇ ’ಎಮೋಶನಲ್ ಆಗ್ ಬ್ಯಾಡ್ಲೆ ಚೆರಿ'

-Santhosh

ಚರಿತಾ ಹೇಳಿದರು...

॒@ ಸಂತೋಷ್

ಪ್ರತಿಕ್ರಿಯೆ ಕಂಡು ಖುಶಿಯಾಯ್ತು.

’ಎಮೋಶನಲ್ ಆಗ್ಬ್ಯಾಡ’ ಅಂದ್ರೆ,..ಪ್ರೀತಿಯಿಂದ ಪಕ್ಕಕ್ಕಿಟ್ಟುಬಿಡ್ಲೇನು..?.. :)

jomon varghese ಹೇಳಿದರು...

ಎಷ್ಟೊಂದು ಪ್ರೀತಿಯಿಂದ ಬರೆದಿದ್ದೀರಾ, ನವಿರು ಬರಹ ಓದಿಸಿಕೊಂಡು ಹೋಯಿತು.

ಕಾಡುವ ನೆನಪುಗಳನ್ನು ಯಾವುದಾದರೂ ನೆಪದಲ್ಲಿ ಹಾಳೆಗಳ ನಡುವೆ..ಪೆನ್ಸಿಲ್ ಬಾಕ್ಸ್ ಒಳಗೆ..ಅಥವ ಬಾಚಣಿಗೆಯ ಹಲ್ಲುಗಳ ಮಧ್ಯೆ..ಕಡೆ ಪಕ್ಷ ಕುರ್ತಾ ಜೇಬಿನಲ್ಲೆಲ್ಲಾದರೂ ಅಡಗಿಸಿಟ್ಟು ಮರೆತುಬಿಡುವ ಹುನ್ನಾರ ಯಾಕೋ ಕೈಗೂಡುವಂತೆ ಕಾಣುತ್ತಿಲ್ಲ....

ಹೌದಾ?

ಚರಿತಾ ಹೇಳಿದರು...

@ ಜೋಮನ್

ನಿಮ್ಮ ಸಹ್ರುದಯ ಓದಿಗೆ ಧನ್ಯವಾದಗಳು.

ಎಲ್ಲಿ ಅವಿಸಿಟ್ರೂ ಹುಡುಕ್ಕೊಂಡ್ ಬಂದು ಕಾಟ ಕೊಡ್ತಾ ಇವೆ.
ರಂಪ ಮಾಡುವ ತುಂಟ ಮಕ್ಕಳ ಥರ ಸೆರಗು ಹಿಡಿದು ಎಲ್ಲೆಂದರಲ್ಲಿ ಹಿಂಬಾಲಿಸುತ್ತವೆ.
ತಪ್ಪಿಸಿಕೊಳ್ಳೊ ಉಪಾಯ ಏನಾದ್ರು ಇದ್ರೆ ತಿಳಿಸಿ.

dinesh ಹೇಳಿದರು...

Super Paintings..........

samanvitha ಹೇಳಿದರು...

kaLdu hoda geLeya natadrushta..

ಅನಾಮಧೇಯ ಹೇಳಿದರು...

ಈ ಕ್ಷಣದ ’ನಿಜ’ವೆಂಬುದು ಮರುಕ್ಷಣದಲ್ಲಿ ಮತ್ತೆಂದೂ ಬದಲಿಸಲಾಗದ ವೇಷ ತೊಟ್ಟುಬಿಡುವುದು,ಗಂಟಲಲ್ಲಿ ನುಂಗಲಾರದ ತಳಮಳವಾಗಿ ಉಳಿದುಬಿಡುವುದು, ಯಾವ ಬಣ್ಣ ಬಳಿದರೂ ಮರುಕಳಿಸದೆ ಮರೆಯಾಗಿಬಿಡುವುದು, ಸಣ್ಣ ಹತಾಶೆಯ ನಗುವಾಗಿ ಸದಾಕಾಲ ತುಟಿಯಂಚಿನಲ್ಲಿ ಜಾಗ ಪಡೆದುಬಿಡುವುದ..............

ಎಷ್ಟು ಚಂದದ ಬರಹ! ಮನಸ್ಸು ತಟ್ಟಿತು. ಇಷ್ಟು ದಿನ ಯಾಕೆ ನಿಮ್ಮ ಬ್ಲಾಗ್ ಗೆ ಬರದೇ ಉಳಿದುಬಿಟ್ಟೆ ಅಂತಾ ಯೋಚಿಸ್ತಿದ್ದೀನಿ.
ಥ್ಯಾಂಕ್ಸ್ ಚರಿತ. ಒಳ್ಳೊಳ್ಳೆ ಸಾಲುಗಳಿಗೆ, ಮನಸ್ಸನ್ನೊಮ್ಮೆ ಕಳೆದು ಹೋಗಿಸಿದ್ದಕ್ಕೆ....

ಚರಿತಾ ಹೇಳಿದರು...

@ dinesh,

thank u...:)

@ manasvini,

ಯಾರು,ಯಾವ ರೀತಿ ಅದೃಷ್ಟವಂತರೋ ಗೊತ್ತಿಲ್ಲ ಮನಸ್ವಿನಿ,
ಆದ್ರೆ,..ಬ್ಲಾಗ್ ಮೂಲಕ ನಿಮ್ಮೆಲ್ಲರನ್ನು ಪಡೆದದ್ದು ನನ್ನ ಅದೃಷ್ಟ ಅನ್ನೋದು ಮಾತ್ರ ನಿಜ...:)
ಒಲವು ಹೀಗೇ ಇರಲಿ.

@ vaishaali,

ನಾನೂ ಕೂಡ ನಿಮ್ಮ ಹಾಗೆಯೇ ತಡವರಿಸುತ್ತಾ ಬ್ಲಾಗ್ ಮನೆಗೆ ಕಾಲಿಟ್ಟವಳು.
ಈಗ ನಿಮ್ಮೆಲ್ಲರ ಪ್ರೀತಿ,ಸಹೃದಯತೆಯಿಂದಾಗಿ ನಿಧಾನ ಸುಧಾರಿಸ್ತಾ ಇದೀನಿ...:)

ಧನ್ಯವಾದಗಳು,...ಬರ್ತಾ ಇರಿ...

shivu.k ಹೇಳಿದರು...

Exellent!!
ಓದುತ್ತಾ ಓದುತ್ತಾ ಒಳಗೆಲ್ಲೋ ಟಚ್ ಆಯ್ತು. ಮತ್ತೇನೋ ಬರೆಯಲು ಹೋಗಿ ಟಚ್ ಆದಾಗಿನ ಅನುಭವವನ್ನು ಕಳೆದುಕೊಳ್ಳಬಾರದೆಂದು !

sureshkumar ಹೇಳಿದರು...

hi charitha (ಚೆರಿ)is this your pen name ??? sound s good if so i am feeling bad that i cant write in Kannada , as i lost the habit of thinking in kannada, so excuse me , but read the padya and the writing , i never new that you are such a good writer in kannada.but feeling bad that i cant respond to you in the same Lang u have written , so was wondering about the illustrations if they were meant to be for other writers works but after managing to get into your blog its so nice to see that they were your own writings , poems.
so my first venture to some one blog will be so memorable .
so when did you write all this poems and more.
so was so exited to read some things creative in kannada , as in recent times i hardly read any things except for news papers and more news papers .so sorry again for this non poetic reaction to your works , as i read the comments from your friends , even they are so good in kannada.

minchulli ಹೇಳಿದರು...

"ಈ ಕ್ಷಣದ ’ನಿಜ’ವೆಂಬುದು ಮರುಕ್ಷಣದಲ್ಲಿ ಮತ್ತೆಂದೂ ಬದಲಿಸಲಾಗದ ವೇಷ ತೊಟ್ಟುಬಿಡುವುದು,ಗಂಟಲಲ್ಲಿ ನುಂಗಲಾರದ ತಳಮಳವಾಗಿ ಉಳಿದುಬಿಡುವುದು, ಯಾವ ಬಣ್ಣ ಬಳಿದರೂ ಮರುಕಳಿಸದೆ ಮರೆಯಾಗಿಬಿಡುವುದು, ಸಣ್ಣ ಹತಾಶೆಯ ನಗುವಾಗಿ ಸದಾಕಾಲ ತುಟಿಯಂಚಿನಲ್ಲಿ ಜಾಗ ......"

ಅದ್ಭುತವಾದ ಸಾಲುಗಳು ಚರಿತಾ..

ಇವತ್ತು ನಿನ್ನ (ನಿಮ್ಮ ಅನ್ನಬೇಕೆನಿಸುತ್ತಿಲ್ಲ) ಬ್ಲಾಗ್ ನೋಡಿದ್ದು ಆಕಸ್ಮಿಕ.. ಇಷ್ಟು ದಿನ ಯಾಕೆ ನೋಡಲಿಲ್ಲ ಅಂತ ಯೋಚಿಸ್ತಿದ್ದೀನಿ. ಥ್ಯಾಂಕ್ಸ್ ಚೆರ್ರಿ.. ಇಷ್ಟು ಚೆಂದದ ಬರಹಕ್ಕೆ.. ಭಾವ ಗುಚ್ಛಕ್ಕೆ... ಮನಸು ಕಳೆದು ಹೋಗಲು ಅನುವು ಮಾಡಿದ್ದಕ್ಕೆ..

ಚರಿತಾ ಹೇಳಿದರು...

ನಂದಿ ಬೆಟ್ಟದ ಮಿಂಚುಳ್ಳಿಗೆ ಸ್ವಾಗತ.
ನಿಮ್ಮ ಬೆಚ್ಚನೆಯ ಅನಿಸಿಕೆಗಾಗಿ ಥ್ಯಾಂಕ್ಸ್.
ಹೀಗೇ ಬರೀತಾ ಇರಿ....