ಇವನು ಹೇಗೆ ಇಷ್ಟೊಂದು ಪ್ರಶ್ನೆಗಳಿಗೆ ಉತ್ತರವಾಗಿಬಿಟ್ಟ..?! ಉತ್ತರವೋ,..ಪ್ರಶ್ನೆಯೋ - ತಡಕಾಡುವುದಕ್ಕೂ ಬಿಡದೆ ರಂಪಮಾಡಿ ಎದೆಗೆ ಆತುಕೊಂಡು ಸುಂದರ ನಗೆ ನಕ್ಕು ಸುಮ್ಮನಿರಿಸಿಬಿಟ್ಟ.
ಯಾವುದನ್ನೂ ಪ್ರಶ್ನಿಸದೆ,ತಡವರಿಸದೆ ಒಪ್ಪದ ನನ್ನ ಉಮೇದಿಗೆ ಸವಾಲೆಸೆದಂತೆ ತನ್ನ ಹಕ್ಕು ಸ್ಥಾಪಿಸಿಬಿಟ್ಟನಲ್ಲ..!
ಹಳ್ಳಿಗರ ಅಗಾಧ ನಂಬುಗೆಯ ವೈಚಿತ್ರ್ಯವನ್ನು ತನಗರಿವಿಲ್ಲದೆ ತನ್ನೊಳಗೆ ದೀಪದಂತೆ ಉರಿಸಿಟ್ಟುಕೊಂಡಿರುವವನು.’ಮುಟ್ಟಿದರೆ ಮುನಿ’ಯಂತೆ ಪ್ರತಿಯೊಂದು ಟೀಕೆ,ವಿಮರ್ಶೆ,ಹೊಗಳಿಕೆಯನ್ನು ಮನಸಾರ ಅನುಭವಿಸಲೆಂದೆ ಕಣ್ಣು ಕಿವಿ ತೆರೆದಿಟ್ಟಂತೆ ಕಂಡು ಪ್ರೀತಿ ಹುಟ್ಟಿಸುತ್ತಾನೆ..!
ಇದು ನಗುವೋ, ಮರುಕವೋ, ಕೊರಗೋ, ಬೆರಗೋ ಅಂತೂ ಯಾವುದನ್ನೂ ಮರುಪರಿಶೀಲಿಸದಂತೆ ಮರುಳು ಮಾಡಿರುವ ಮರುಳ...ಮರುಳರ ಮರುಳ..ಮರುಳು ಮಾದೇವ..
ಅಸ್ತಿತ್ವಕ್ಕೆ ಗರಬಡಿಸುವಂತೆ ಮೈಗೆಲ್ಲ ಬೂದಿ ಬಳಿದು,ಬಿಳುಚಿ, ಗಂಟು ಜಡೆ ಉದ್ದನೆ ಇಳಿ ಬಿಟ್ಟು..ಎಚ್ಚರಿಸಲೋ,ಹುಚ್ಚು ಹರಡಲೋ,ಬೆಚ್ಚಿಸಲೋ,ಅಥವ ಸುಮ್ಮನೆ ಕೊಚ್ಚಿಹೋಗಲೋ ಮಹಾದೇವನನ್ನೇ ಆವಾಹಿಸಿಕೊಂಡು ಶಿವ ಶಿವಾ ಎನಿಸಿಬಿಟ್ಟಾತ..!
ಎಲ್ಲವನ್ನೂ ನುಂಗಿ,ಒಗರು ಮೈ ಮಾಡಿಕೊಂಡು,ಅಷ್ಟಗಲ ಗಾರುಡಿಗನ ಕಣ್ಣು ಬಿಟ್ಟು,..ಸಿಟ್ಟೋ,ಸಂಕಟವೋ,ಸೆಡವೋ - ಒಂದೂ ತಿಳಿಸದೆ ತನ್ನಷ್ಟಕ್ಕೆ ತಾನು ನೆಡೆದುಬಿಡುವ ಇವನ ನಿರ್ಭಿಡೆ ಹೆಪ್ಪುಗಟ್ಟಿ ಹುಳಿಬರದೆ ಹಾಗೇ ಉಳಿದಿದೆ.
ನನ್ನ ಅಂಗಯ್ಯಂಗಳದಲ್ಲಿ ಸದ್ದಿರದೆ ಜಾಗ ಪಡೆದು ಬೆಚ್ಚಗೆ ಕರಗುತ್ತಾ ನಾನೇ ಇನ್ನೂ ಓದದೆ ಬಿಟ್ಟಿದ್ದ ಗೆರೆಗಳ ಜಾಡಿನಲ್ಲಿ ಗಮನಿಸುವ ಮೊದಲೆ ಪ್ರಯಾಣ ಬೆಳೆಸಿದ್ದಾನೆ..ಅಲೆಮಾರಿಗೆ ಗಡಿಹಾಕಿಕೊಟ್ಟ ಗರ್ವ ಪೂರ್ತಿ ನಿನಗೇ ಇರಲಿ ಎಂಬ ದೊಡ್ಡಸ್ತಿಕೆಯ ಅಭಿದಾನ ಕರುಣಿಸಿ ಸೊಗಸು ಮೂಡಿಸುವ ಅತಿ ಜಾಣತನ ಬೇರೆ..!
ಐದು ವರ್ಷಗಳ ಹಿಂದಿನ ಸಲುಗೆಗೆ ಈಗ ಹೀಗೊಂದು ಅರ್ಥ ಗಂಟು ಬೀಳುವುದು ಅವರವರ ಭಾವಕ್ಕೆ ಬೇಕಿದ್ದರೆ ಮಾತ್ರ !
ಹಳೆಯ ರದ್ದಿಯನ್ನೆಲ್ಲಾ ಹೊಸಕಿ ಹೊಸ ಹಾಳೆ ಮಾಡುವಂತೆ, ಮತ್ತೊಮ್ಮೆ ಹೊಚ್ಚಹೊಸ ಘಮಲಿನ ಅಚ್ಚಬಿಳಿಹಾಳೆ...ಅದರಲ್ಲಿ ಕಣ್ಣು ಕಿರಿದು ಮಾಡಿ ನೋಡಿದರೆ ಮಾತ್ರ ಕಾಣುವ ಮತ್ತದೇ ಬಿಳಿಯ ಅಕ್ಷರಗಳು..ಕಂಡೂ ಕಾಣದ ಸೋಗು..!!