ಶುಕ್ರವಾರ, ಸೆಪ್ಟೆಂಬರ್ 26, 2008

ಮಳೆ ಮಾತುನಿಧಾನವಾಗಿ ಎಚ್ಚರಿಸುವಂತೆ
ಶುರುವಾದ ಚುರುಚುರು ಹನಿ
ಚುಚ್ಚಿದರೂ ಬೆಚ್ಚದ ನನ್ನ ಕಂಡು
ಸೆಟಗೊಂಡು ರಪ ರಪ ಬಿರುಸಾಯಿತು
ನೀಲಿ ಹೂಗಳ ಛತ್ರಿ ಪಾಪ,ಸಹಿಸೀತೆ?
ಒಡ್ಡಿತು ತನ್ನೊಂದಿಗೆ ನನ್ನನ್ನೂ...
ಚಳಿಯಿನ್ನೂ ಮುದುಡಿತ್ತು ಒಳಗೆ ಬೆಚ್ಚಗೆ

ಮಳೆಯೇ ನಾಚಿರಬೇಕು
ನನ್ನ ಪಾಡಿಗೆ ನಾನಿರುವ ಬಗೆಗೆ
ಪಟ್ಟಿರಬೇಕು ಪಶ್ಚಾತ್ತಾಪ ತನ್ನ ಪರಿಗೆ
ಕಿವಿಗೊಟ್ಟ ಕಣ್ಬಿಟ್ಟ ಗೆಳತಿಯ ಕಂಡು
ಭ್ರಮಿಸಿರಬೇಕು ಇನ್ನೊಂದು ಸುತ್ತು ಹೆಚ್ಚಿಗೆ

ತೋಯಿಸಿತು ಬರಿಮೈಯ ಇರವು ಅರಿವಾಗುವಂತೆ
ಮನದಣಿಯೆ ಹರಟಿತು ದುಃಖ ದುಮ್ಮಾನ
ಕೊಚ್ಚಿಹೋಗಿತ್ತು ಬಿರುಸು ಬಿಗುಮಾನ
ಬಿಚ್ಚಿ ಹರಡಿತು ಏರಿಳಿತದ ಗಾನ
ಗುಟ್ಟು ಪಿಸುಗುಟ್ಟಿ ನಕ್ಕಿತೇಳು ಬಣ್ಣಗಳ
ದಿಟ್ಟಿ ನೆಡುವಂತೆ...
ಬೆಚ್ಚನೆ ಮೈದುಂಬಿತು ಮುದ್ದಿಸಿ ಹಸಿಬಿಸಿಲ

...ಮತ್ತೆ ಗುಟ್ಟಾಡಲು,...
ಹಚ್ಚನೆ ಹರಟಿ ಹರಡಲು
ನಾನೂ ಕಾಯುತ್ತಿರುವೆ...
ಮಳೆ ಮಾತು ಪೋಣಿಸಲು
ಹನಿಹನಿಯಾಗಿ ತೊಡಲು

ಬುಧವಾರ, ಸೆಪ್ಟೆಂಬರ್ 24, 2008

ಹೀಗೊಂದು ಹಳೆಯ ನಂಟಿನ ಕನವರಿಕೆಪಶ್ಚಿಮ ಬಂಗಾಳದ ’ಶಾಂತಿನಿಕೇತನ’ ನನ್ನ ಮಟ್ಟಿಗೆ ಮೈನವಿರೇಳಿಸುವ ಹೆಸರು.
ಮೈಸೂರಿನಲ್ಲಿ ಕಲಾವಿದ್ಯಾರ್ಥಿಯಾಗಿದ್ದಾಗ ಅಲ್ಲಿಗೆ ಭೇಟಿ ಕೊಡುವ ಅವಕಾಶ ದೊರಕಿತ್ತು. ಅಲ್ಲಿನ ಹಳ್ಳಿಗಳು,ಕಾಲುದಾರಿ,ಮನೆಗಳು,ವಿಶಾಲ ಬಯಲು,ಕಲಾಭವನದ ಕ್ಯಾಂಪಸ್,ಸೈಕಲ್ ತುಳಿಯುವ ಜನ - ಎಲ್ಲವೂ ಒಟ್ಟಾರೆ ಬೆಚ್ಚಗಿನ ಗೂಡು ಕಟ್ಟಿದ್ದವು ನನ್ನೊಳಗೆ. ಮುಂದೊಮ್ ಎಂ.ಎಫ಼್.ಎ ಪದವಿಗಾಗಿ ಅಲ್ಲಿ ಪ್ರವೇಶ ಪಡೆದಾಗ ಜನ್ಮಾಂತರದ ಯಾವುದೋ ನಂಟು ಮತ್ತೊಮ್ಮೆ ನನ್ನನ್ನು ಆಪ್ತವಾಗಿ ಕರೆಸಿಕೊಂಡಂತೆ ಅನಿಸಿತ್ತು !

ರೈಲಿನಲ್ಲಿ ಬಂಗಾಳ ಪ್ರವೇಶಿಸುತ್ತಿದ್ದಂತೆ ಸೆಳೆಯುವುದು- ಅಲ್ಲಿನ ಭೂದ್ರುಶ್ಯ.
ಅಚ್ಚರಿಗೊಳಿಸುವಂತೆ ಒಂದೂ ಓರೆಕೋರೆಯಿಲ್ಲದ,ಕ್ರುತಕವೇನೋ ಅನಿಸುವಷ್ಟು ನೀಟಾಗಿ,ಸಪಾಟಾದ ವಿಶಾಲ ಬಯಲು..ಬಯಲಿನಿಂದ ಉಂಟಾದ ಅಡ್ಡಗೆರೆಗಳನ್ನು ಅಷ್ಟೇ ನಾಜೂಕಾಗಿ ಕತ್ತರಿಸಿ ಲಂಬಗೊಳಿಸುವ ತಾಳೆಮರಗಳು..ಯಾರೋ ಕಲಾವಿದ ಚೌಕಾಸಿ ಮಾಡಿ ಜೋಡಿಸಿಟ್ಟಂತೆ.
(ತಾಳೆಮರಗಳ ’ವ್ಯಕ್ತಿತ್ವ’ ನನ್ನನ್ನು ಆಕರ್ಷಿಸಿದ್ದು ಆಗಲೆ. ನೀಟಾಗಿ ಹೇರ್ಕಟ್ ಮಾಡಿಸಿ ಟಾಕುಟೀಕಾಗಿ ಎದೆಯುಬ್ಬಿಸಿ ನಿಂತ ಹೈದನಂತೆ,...ಮತ್ತೊಮ್ಮೆ ತಲೆತುಂಬ ಹೂಮುಡಿದು ಕ್ಯಾಮೆರಾಗೆ ಪೋಸ್ ಕೊಡುವ ಸುಂದರಿಯಂತೆ ಕಾಣುತ್ತವೆ ಅವು.)
ಮತ್ತೊಂದೆಡೆ ಸದಾ ತುಂಬಿರುವ ಪುಟ್ಟ ಪುಟ್ಟ ಕೊಳಗಳು,ಅವುಗಳಲ್ಲಿ ಲಿಲ್ಲಿ,ತಾವರೆ,ಜೊಂಡು,ಗುಂಪುಗುಂಪಾಗಿ ಕ್ರೀಡಿಸುವ ಬಾತುಗಳು,ಪಕ್ಕಕ್ಕೆ ಸುಂದರ ಮನೆಗಳು...ಒಟ್ಟಾರೆ, ವಿಶಾಲ ಕ್ಯಾನ್ವಾಸಿನಲ್ಲಿ ಒಂದು ಭಾಗವಾಗಿ ನಾನೂ ಸೇರ್ಪಡೆಗೊಂಡ ಸಂತಸ.

ಶಾಂತಿನಿಕೇತನದ ಸಖ್ಯ ರವೀಂದ್ರನಾಥರ ’ಶಾಯಿಯ ಕಂಪು’ ಅನುಭವಿಸಿದಂತೆ ! ಅಲ್ಲಿನ ನೋಟ, ಪರಿಮಳ, ಜನ, ಸಂಗೀತ - ಎಲ್ಲವೂ ಹಳೆ ಪರಿಚಯವೋ ಎಂಬಂತೆ ನನ್ನದೇ ಆಗಿಬಿಟ್ಟವು. ಭಾವತೀವ್ರತೆಯ ಯಾವುದೋ ಅಮಲು ಆ ಪರಿಸರದಲ್ಲಿ ಅದ್ದಿ,ಹಾಗೆಯೇ ಸ್ಥಿರವಾಗಿ ಉಳಿದುಬಿಟ್ಟಹಾಗಿದೆ.
ಅದು ಸದಾ ಸಾಂಸ್ಕ್ರುತಿಕ ಚಟುವಟಿಕೆಗಳಿಂದ ಗಿಜಿಗುಡುವ ತಾಣ. ಮಧ್ಯಾಹ್ನದ ಪ್ರಖರತೆಯಲ್ಲಿ, ರಾತ್ರಿಯ ನೀರವತೆಯಲ್ಲಿ ತಾತ್ಕಾಲಿಕವಾಗಿ ಶಾಂತವಾಗುತ್ತದೆ. ಗುರುಕುಲಾಶ್ರಮದ ಪರಿಕಲ್ಪನೆಯಲ್ಲಿ ರೂಪುಗೊಂಡ ’ತಪೋವನ’ದ ಗಾಢ ಮೌನ ಮಾತ್ರ ಸುತ್ತೆಲ್ಲ ಮಡುಗಟ್ಟಿ ನಮ್ಮನ್ನೂ ಒಳಗುಮಾಡಿಕೊಳ್ಳುತ್ತದೆ.

ಹೊಸ ಸಹವಾಸಕ್ಕೆ ಸಾಸಿವೆ ಎಣ್ಣೆಯ ಘಾಟು, ಆಲೂಶೆದ್ದೊ, ಮಾಛ್(ಮೀನು), ಗುಗ್ನಿ(ಬಟಾಣಿ ಗೊಜ್ಜು)- ಇವುಗಳ ಅತಿಹಾವಳಿಯಿಂದ ತಪ್ಪಿಸಿಕೊಳ್ಳುವುದು ಕಷ್ಟಸಾಧ್ಯವೇ.ಹೊಂದಿಕೊಂಡರೆ ಮಾತ್ರ ’ಮಿಶ್ಟಿ’(ಸಿಹಿ)ಯ ರುಚಿ ನಿಮ್ಮೊಂದಿಗೇ ಉಳಿದುಬಿಡುತ್ತದೆ. ಭಾಷೆ,ಆಚಾರ,ಆಹಾರದ ವ್ಯತ್ಯಾಸದ ಹೊರತು ’ಜನಮಾನಸ’ ಸ್ವಾಭಾವಿಕವಾಗಿ ಎಲ್ಲೆಡೆಯೂ ಒಂದೇ ತಾನೆ..?!

ತಿಳಿಹಸಿರಿನ ’ಲೇಡಿಬರ್ಡ್’ ನನ್ನ ಆಪ್ತ ಸಂಗಾತಿ. ನನಗೇ ರೆಕ್ಕೆಮೂಡಿಸಿದಂತೆ ಹಗುರವಾಗಿ, ನಾನು ಹಳಿದಲ್ಲಿ ಕರೆದೊಯ್ಯುವ ನಿಷ್ಠಾವಂತ ಸಾಂಗತ್ಯ ಅದರದು. ಮಧ್ಯಾಹ್ನ ಊಟದ ನಂತರ ಹೊಸ ಜಾಗಗಳ ಅನ್ವೇಷಣೆ ನಮ್ಮಿಬ್ಬರ ಇಷ್ಟದ ಹವ್ಯಾಸ. ನನ್ನದೇ ಖಾಸಗಿ ಸ್ಥಳಗಳೂ ಹಲವಾರಿದ್ದವು ನನಗಾಗಿ ಹೇಳಿ ಮಾಡಿಸಿದಂತೆ. ನಿಶ್ಶಬ್ದವಾಗಿ ಕುಳಿತು ನಿಸರ್ಗದ ಬಣ್ಣ,ವಿನ್ಯಾಸ,ಶಬ್ದವೈವಿಧ್ಯಕ್ಕೆ ಮೈಯೆಲ್ಲ ಕಣ್ಣು-ಕಿವಿಯಾಗಿಸಿಕೊಂಡು ನನ್ನನ್ನೇ ಮರೆತುಬಿಡುವುದು ಎಷ್ಟು ಹಿತವಾಗಿತ್ತು..!
ಇಡೀ ಸಂಸಾರದೊಂದಿಗೆ ಧ್ಯಾನಸ್ಥರಂತೆ ನಿಂತ ಸಾಲು ಸಾಲು ತಾಳೆಗಳು, ಎಳೆಮಕ್ಕಳ ಸಣ್ಣಚೀರಾಟದಂತೆ ಸದ್ದುಹೊರಡಿಸುತ್ತ ತಲೆಯಾಡಿಸುವ ಹೊಲದ ಪೈರು, ಎಲ್ಲಿದ್ದೆ ಇಷ್ಟು ಹೊತ್ತು ಎಂದು ಸಲುಗೆಯಿಂ ಬರಮಾಡಿಕೊಳ್ಳುವ ಕಾಲುದಾರಿ, ಪ್ರತಿಕ್ಷಣವೂ ಹೊಸ ಸೀರೆ ಹೊದ್ದು ಬಿನ್ನಾಣದಿಂದ ಬಣ್ಣ ಬದಲಿಸುವ ಆಕಾಶ, ಬದುಕಿನ ಚಲನಶೀಲತೆಯನ್ನು ನೆನಪಿಸುವ ನೀರಧಾರೆ, ಕೊಳಗಳಲ್ಲಿ ಮುಳುಗಿ-ತೇಲಿ ಆಡುವ ಬಾತುಕೋಳಿಗಳ ಹಿಂಡು, ನೀರಿನಲ್ಲುಂಟಾಗುವ ಶುದ್ಧ ವ್ರುತ್ತಾಕಾರದ ಅಲೆಗಳು, ನನ್ನೊಡನೆ ಮಾತಾಡುತ್ತಲೇ ಕಣ್ಣು ಮಿಟುಕಿಸಿ ನಾಳೆ ಸಿಗುವೆನೆಂದು ಮರೆಯಾಗುವ ಸೂರ್ಯ - ಇವುಗಳನ್ನೆಲ್ಲ ನಿಧಾನ ಕರಗಿಸಿಕೊಳ್ಳುತ್ತಾ,... ನಾನೆ ಅವುಗಳಲ್ಲಿ ಕರಗುತ್ತಾ...ಕತ್ತಲಾದಮೇಲೆ ಅನಿವಾರ್ಯವೆಂಬಂತೆ ಹಾಸ್ಟೆಲ್ ಗೆ ಮರಳುವುದು ನನ್ನ ನಿತ್ಯದ ದಿನಚರಿಯಾಗಿತ್ತು.

ಕತ್ತಲೆ, ನೆರಳು, ಗಾಢಬಣ್ಣಗಳೊಡನೆ ನಿಕಟತೆ ಬೆಳೆದದ್ದೂ ಆಗಲೇ ಇರಬೇಕು. ಹಾಸ್ಟೆಲ್ ಕೋಣೆಯ ಕಿಟಕಿಯಿಂದ ಕಾಣುತ್ತಿದ್ದುದು- ’ಕಾಲಾ ಘರ್’ (ಕಪ್ಪು ಮನೆ). ನಂದಲಾಲ್ೋಸ್,ರಾಂ ಕಿಂಕರ್ ಬೈಜ್ ಮುಂತಾದ ಪ್ರಸಿದ್ಧರು ಇರುತ್ತಿದ್ದ ಸ್ಥಳ ಎಂಬುದಕ್ಕಿಂತಲೂ ಅದರ ದೈತ್ಯಾಕಾರ,ಪಕ್ಕದಲ್ಲಿದ್ದ ಸುಂದರ-ಸುಗಂಧಿತ ಮರ, ಎಲ್ಲಕ್ಕೂ ಮಿಗಿಲಾಗಿ ರಾತ್ರಿಯ ಕ್ರುತಕ ಬೆಳಕಿನಲ್ಲಿ ಸ್ವತಃ ಕಲಾಕ್ರುತಿಯಾಗಿ ಮೈದೋರುವ ಅದರ ಸೊಬಗು ಆಕರ್ಷಕವಾದುದು. ಕಪ್ಪುಛಾಯೆಯ ವೈವಿಧ್ಯತೆ ಕಾವ್ಯದ ಸೊಗಸಿನಂತೆ ಹೊಮ್ಮುತ್ತಿತ್ತು.

ಹಳ್ಳಿಗಳಲ್ಲಿ ಸಾಂಥಾಲಿ ಬುಡಕಟ್ಟು ಜನರ ಮನೆಗಳ ಸೊಗಸು-ಕಲಾತ್ಮಕತೆ,ಹಂದಿಮರಿಗಳ ಹಿಂಡು,ಮಕ್ಕಳ ಕೇಕೆ...ಹೀಗೆ ಗ್ರಹಿಕೆಗೆ ನಿಲುಕುವಷ್ಟೂ ನನ್ನವೇ...!
....ಎಷ್ಟೆಲ್ಲ... ಏನೆಲ್ಲ ಹೇಳುವುದು.....?!
ಎಷ್ಟು ನೆನೆದು ಹರಟಿದರೂ ನನ್ನಲ್ಲಿ ನಾನೇ ಆಗಿಹೋದ ವಿವರಗಳೆಲ್ಲ ಹಾಗೇ ಉಳಿದುಬಿಡುತ್ತವೆ...!
" ಶಾಂತಿನಿಕೆತೋನ್.......
ಶೇಜೆ ಶೋಬ್ ಹೋತೆ ಆಪೋನ್
ಆಮಾದೇರ್ ಶೋಬ್ ಹೋತೆ ಆಪೋನ್
ಆಮಾದೇರ್ ಶಾಂತಿನೀಕೆತೋನ್......"

( ಶಾಂತಿನಿಕೇತನ.......
ಎಲ್ಲರೂ ನಮ್ಮವರೇ ಇಲ್ಲಿ..
ಇದು ನಮ್ಮೆಲ್ಲರ ಶಾಂತಿನಿಕೇತನ....)

ಶನಿವಾರ, ಸೆಪ್ಟೆಂಬರ್ 20, 2008

ಮೇಲುಕೋಟೆಗೆ ಮೊದಲ ಭೇಟಿ


ಚಿಕ್ಕಂದಿನಲ್ಲಿ ಕಂಡಿದ್ದ ಮೇಲುಕೋಟೆಯ ನೆನಪು ಒಂದು ಕನಸಿನಂತೆ,ಕಪ್ಪು-ಬಿಳುಪು ಚಿತ್ರದ ನಿಗೂಢತೆಯಂತೆ ಕಾಡುತ್ತಿತ್ತು.ಹಳೆಯ ದೇಗುಲದ ಮೆಟ್ಟಿಲುಗಳು,ಮನಬಂದಂತೆ ಹರಿದಾಡಿ ದಿಕ್ಕು ತಪ್ಪಿಸುವ ರಸ್ತೆಗಳು,ಬಿಳಿಯ ಗಿರಿಗಿಟ್ಲೆ ಹೂವು,ಎಲ್ಲೊ ನೋಡಿದ ಕುದುರೆ,ನವಿಲು...ತಾಳೆಗರಿ ಹಸ್ತಪ್ರತಿ್ರತಿ.....ಇವೆಲ್ಲ ನನ್ನ ನೆನಪಲ್ಲಿ ಮಸಕು ಮಸಕಾಗಿ ಮೇಲುಕೋಟೆಯ ಚಿತ್ರ ಕಟ್ಟುತ್ತಿದ್ದವು.

ಮೊನ್ನೆ ಮತ್ತೊಮ್ಮೆ ಭೇಟಿ ಕೊಟ್ಟಾಗ, ಯಾವುದೋ ಹಳೆಯ ಆತ್ಮ ಪ್ರವೇಶ ಮಾಡಿದ ಹಾಗೆ ಅನಿಸಿತ್ತು !
ಪುರಾತನ ಪ್ರವರ ಮೈಚಾಚಿ ರಸ್ತೆ,ಮನೆ,ಬಾವಿ,ಎಲ್ಲೆಂದರಲ್ಲಿ ಹರಡಿಕೊಂಡು ಏದುಸಿರು ಬಿಡುವ ಹಾಗಿತ್ತು !
ಶಂಖ ಚಕ್ರದ ನಡುವೆ ವೆಂಕಟರಮಣನ ಹಣೆಯ ನಾಮ ಎಲ್ಲೆಲ್ಲು ಕಂಡುಬರುತ್ತಿತ್ತು.ತಮಿಳು ಅಯ್ಯಂಗಾರರ ಬೀಡು ಅದು.ಹನ್ನೆರಡನೆ ಶತಮಾನದಲ್ಲಿ ತಮಿಳಿನ ರಾಮಾನುಜಾಚಾರ್ಯರು ನಾಲ್ಕೈದು ಪ್ರಮುಖ ಮನೆತನಗಳೊಂದಿಗೆ ಇಲ್ಲಿಗೆ ಬಂದು ನೆಲೆ ನಿಂತರಂತೆ.
ಹದಿನಾಲ್ಕು ವರ್ಷ ಇಲ್ಲಿ ತಂಗಿದ ಯತಿಗಳು ಇದನ್ನು ಶ್ರೀ ವೈಶ್ಣವ ಜನಾಂಗದ ಪ್ರಮುಖ ನೆಲೆಬೀಡಾಗಿ ಮಾರ್ಪಡಿಸಿದರು ಎಂಬುದು ಪ್ರತೀತಿ.

ಹಳೆಯ ಮನೆಗಳು ಅರ್ಧಂಬರ್ಧ ಜೀವ ಉಳಿಸಿಕೊಂಡಂತೆ, ತಲೆಕೆದರಿ,ಕುಂಕುಮ ಅಳಿಸಿ, ಹಳೆಯ ಮಾಸಲು ಸೀರೆ ಉಟ್ಟ ಮಾಜಿ ಸುಂದರಿಯರಂತೆ ಕಾಣುತ್ತಿದ್ದವು. ಅವುಗಳೆಲ್ಲ ಯಾವುದೊ ಗತಕಾಲದ ಸುಂದರ ನೆನಪುಗಳ ಗುಂಗಿನಲ್ಲಿ ಹಾಗೇ ಲೋಕ ಮರೆತು ಕನಸು ಕಾಣುತ್ತ ನಿಂತುಬಿಟ್ಟ ಹಾಗಿವೆ. ಕಿಟಕಿ,ಬಾಗಿಲುಗಳು -ಮಳೆ,ಬಿಸಿಲು ಗಾಳಿ,ಧೂಳು ಎಲ್ಲವನ್ನೂ ಕಂಡು, ಈಗ ನೆಪಮಾತ್ರಕ್ಕೆಂಬಂತೆ ನಿಟ್ಟುಸಿರುಬಿಡುತ್ತಾ ,.ಹಳೆಯ ಸದ್ದು ಗದ್ದಲ,ಗುಸುಗುಸು ಎಲ್ಲವನ್ನೂ ಒಳಗೆ ಭದ್ರವಾಗಿ ಚಿಲಕ ಹಾಕಿ ಇಟ್ಟುಕೊಂಡಂತೆ ಮೌನವಾಗಿ ಪ್ರಲಾಪಿಸುತ್ತಿದ್ದವು.

ಬಾಗಿಲುಗಳ ಅಂಚಿನಲ್ಲಿ ಕೊರೆದು ಮಾಡಿದ ಅಲಂಕ್ರುತ ಪಟ್ಟಿಕೆಗಳು ಯಾಕೊ ಪ್ರೀತಿ ಹುಟ್ಟಿಸಿದವು. ಗೋಡೆಗಳಿಗೆ ಬಳಿದ ಗಾರೆ,ಮಣ್ಣು-ಇವುಗಳ ಮಧ್ಯೆ ಅಲ್ಲಲ್ಲಿ ಕಪ್ಪು ಕಿಟಕಿಗಳು ಅದ್ಭುತ ಚಿತ್ರ ಮಾಡಿಟ್ಟಿದ್ದವು !
ಹಳೆಯ ಮರದ ಬಾಗಿಲುಗಲ ಮೇಲೆ ಉದ್ದುದ್ದ ಗೆರೆಗಳು ಮೂಡಿ, ಅದಕ್ಕೆ ಹೊಂದುವ ಬಣ್ಣದ್ದೆ ಪಟ್ಟಿಗಳನ್ನು ಸಿಕ್ಕಿಸಿಕೊಂಡು ಚಿಲಕ-ಸರಳುಗಳನ್ನೆ ಕಣ್ಣು ಮೂಗಿನಂತೆ ಜೋಡಿಸಿಕೊಂಡು ನೋಡು ಬಾ ಎಂಬಂತೆ ನನಗಾಗಿ ಕಾಯುತ್ತಿದ್ದುದು ಕಂಡು ನಗು ಬಂತು !

ಅವುಗಳನ್ನೆಲ್ಲ ಬಿಟ್ಟೇನೆಲ್ಲಿ ? ಎಲ್ಲವನ್ನೂ ನನ್ನ ಹೊಸ ಕ್ಯಾಮೆರಾದಲ್ಲಿ ತುಂಬಿಸಿಕೊಂಡು ತಂದುಬಿಟ್ಟೆ. ಅದೆಷ್ಟು ಕಾಲದಿಂದ ನಿಂತಿದ್ದವೋ ಏನೋ !
ಉದ್ದುದ್ದ ರಸ್ತೆಗಳೆಲ್ಲ ಉಸ್ಸಪ್ಪಾ...ಅಂತ ಮೈಚಾಚಿ ಏನೂ ಗೊತ್ತಿಲ್ಲದ ಮಳ್ಳರಂತೆ ಬಿದ್ದುಕೊಂಡಿವೆ ಅಲ್ಲಿ.ಗೆಳೆಯನೊಂದಿಗೆ ತಿರುತಿರುಗಿ ಮತ್ತೆಮತ್ತೆ ಅದದೇ ರಸ್ತೆಗಳಿಗೆ ಎಡತಾಕುವ ನನ್ನ ಕಂಡು ಅವುಗಳು ಚೇಷ್ಟೆ ಮಾಡಿದ್ದು ಗೊತ್ತಾಯಿತು!

ಇನ್ನು ಆ ಚಿತ್ರಗಳಂಥ ಮನೆಗಳಲ್ಲಿ ವಾಸಿಸುವ ಜನರ ಬಗ್ಗೆ ಕುತೂಹಲ ಇದ್ದೆ ಇತ್ತು.ಹಳೆಯ ಮಾಸಲು ಚಿತ್ರಕ್ಕೆ ಫಳಫಳ ಫ಼್ರೇಂ ಹಾಕಿದಂತೆ ಪುರಾತನ ಮರಗಂಬಗಳ ಮೇಲೆ ಹೊಸ ಗೋಡೆಯ ಉಪ್ಪರಿಗೆ. ಅವರೆಲ್ಲರ ಇರವು ಆ ಪುಟ್ಟ ಊರಿನ ಹಳೆಯ ಅಧ್ಯಾಯಗಳ ನಡುವೆ ಸಿಲುಕಿದ, ಬಣ್ಣ ಮಾತ್ರ ಹೊಸದಾದ ಹಾಳೆಯಂತೆ ಕಾಣುತ್ತಿತ್ತು.

ಅಲ್ಲಿನ ಕೊಳಗಳ ಕಥೆಯೇ ಬೇರೆ.ನಾನು ಮೊನ್ನೆ ನೋಡಿದ್ದು ನಾಲ್ಕು ಮಾತ್ರ. ಒಟ್ಟು ೮೦ ಕೊಳಗಳಿವೆಯಂತೆ ಅಲ್ಲಿ.
ಹೆಚ್ಚಿನ ಮನೆಗಳೆಲ್ಲವೂ ಪ್ರತ್ಯೇಕ ಬಾವಿಗಳನ್ನು ಹೊಂದಿವೆ.

ಯಾವುದೋ ಪೌರಾಣಿಕ ನಾಟಕದ ’ಸೆಟ್’ನಂತೆ ಇದ್ದ ಮನೆಯ ಅಂಗಳದ ಬಾಗಿಲು ಮುಚ್ಚಿರಲಿಲ್ಲ.ಒಮ್ಮೆ ಇಣುಕಿದೆ,ಯಾರೂ ಕಾಣದಾದಾಗ ಒಳಗೆ ಒಂದು ಕಾಲಿಟ್ಟೆ. ಯಾವುದಾದರು ಧ್ವನಿಯೊಂದಿಗೆ ವೇಷಧಾರಿ ಜನ ಪ್ರತ್ಯಕ್ಷವಾಗಬಹುದು ಎಂದು ನಾನು ನಿರೀಕ್ಷಿಸಿದ್ದು ಸುಳ್ಳಾಯ್ತು. ಅದು ನಿಜಕ್ಕೂ ಬಂದು ನೋಡಲಿ ಎಂಬಂತೆ ಸುಮ್ಮನೆ ತೆರೆದೇ ಇತ್ತು.
ಆ ಚೆಂದದ ಚಿತ್ರಕೊರೆದ ಬಾಗಿಲು ದಾಟಿದಾಗ ನಾಟಕದ ’ರಂಗಸಜ್ಜಿಕೆ’ಯೊಳಗೆ ಪೂರ್ತಿ ಪ್ರವೇಶಿಸಿದಂತಾಯ್ತು.
ಸುಂದರ ಬಾವಿ,ಇಣುಕಿದರೆ ಆಳದಲ್ಲಿ ತಿಳಿನೀರು, ಬಾವಿಯ ಪಕ್ಕ ದೊಡ್ಡ ಕಡಾಯಿಯಲ್ಲಿ ಹಸಿರು ಬಣ್ಣದ ನೀರು. ಅದರ ಪಕ್ಕದ ಮೂಲೆಯಲ್ಲಿ ಸಂಯೋಜನೆ ಹೆಚ್ಚು ಕಡಿಮೆ ಆಗದಂತೆ ಜೋಡಿಸಿಟ್ಟಿದ್ದ ಪಾತ್ರೆಗಳು - ಎಲ್ಲ ಬೇರೆ ಬೇರೆ ಅಳತೆಯವು.
ನಡುನಡುವೆ ಹೂಕುಂಡ - ಅರೆ, ಎಲ್ಲಾ ಪೂರ್ವಯೊಜನೆಯಲ್ಲೇ ಜೋಡಿಸಿಟ್ಟಂತಿವೆ !
ಹಾಗೇ ಬಾಗಿಲ ಪಕ್ಕಕ್ಕೆ ಹರಿದು ಹೋದ ವೈರ್ ಚೇರ್ -ನನಗಾಗಿ ಇಟ್ಟಿದ್ದು ಅಂತೇನೂ ಅನ್ನಿಸಲಿಲ್ಲ.ಬದಲಿಗೆ ತೀರಾ ಸಾಮಾನ್ಯ 'ಸಂಯೋಜನೆ'ಯಲ್ಲಿ ಸರಿಯಾದ ಜಾಗ ನೋಡಿ ಇರಿಸಿದ್ದು ಅಷ್ಟೆ.
ಯಾಕೋ ಮುಜುಗರ ಆಗಿ, ಆ ಫ಼್ರೇಂ ನಿಂದ ಹೊರಬಂದುಬಿಟ್ಟೆ.

ಮತ್ತೆ, ಮೇಲುಕೋಟೆಗೆ ಹೋಗುವುದಿದೆ.
ನನಗಾಗಿ ಕಾಯುತ್ತಿರುವ ಆ ’ಎಲ್ಲರನ್ನೂ’ ಮತ್ತೊಮ್ಮೆ ಮಾತಾಡಿಸಿ ಬರಬೇಕು .

ಶುಕ್ರವಾರ, ಸೆಪ್ಟೆಂಬರ್ 19, 2008

ನೆಲೆ ಇರದ ನಲ್ಮೆಯರಸಿ ......

"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ"
ಕವಿಯ ಈ ಮಾತು ಎಷ್ಟು ನಿಜ..!!

ಇರದ ಯಾವುದರ ಬಗ್ಗೆಯೋ ತುದಿ ಮೊದಲಿಲ್ಲದ ತುಡಿತ ನಮ್ಮನ್ನು ಎಷ್ಟು ಜೀವಂತವಾಗಿ ಇಟ್ಟಿರುತ್ತೆ..!!
ನಮ್ಮೆಲ್ಲರ ತಳಮಳ, ಹತಾಶೆ, ಭಯ -ಎಲ್ಲ ಎಷ್ಟು ವಿಚಿತ್ರ..!!
ಹಾಗೆಯೇ ಪ್ರೀತಿ ಎಂಬ ವಿಸ್ಮಯ ..!!
ನನ್ನ ಬಗೆಗೇ ನಾನು ಬೆರಗುಗೊಳ್ಳುತ್ತಾ,..ಸುತ್ತಲಿನ ಅಗಾಧ ಜಗತ್ತನ್ನು ಅದರ ಎಲ್ಲ ರೂಪಗಳಿಂದ ಗ್ರಹಿಸುತ್ತ...
ಎಲ್ಲವನ್ನೂ..ಬಾಚಿಕೊಳ್ಳಲು ಹವಣಿಸುತ್ತ
ನಗುತ್ತ,ಅಳುತ್ತ,......ಹಾಡುತ್ತ,ಹರಟುತ್ತ.....
ತುಂಟಿಯಂತೆ,....ಮತ್ತೊಮ್ಮೆ ವಿರಾಗಿಯಂತೆ ...

...ನಡೆದಿದ್ದೇನೆ......ದಾರಿ ಸಾಗುವೆಡೆಗೆ...........

(ಎಲ್ಲಾ ಸಹ್ರುದಯ ಮಿತ್ರರಿಗೆ ನನ್ನ ಈ ಪುಟ್ಟ ಪ್ರಪಂಚಕ್ಕೆ ಸ್ವಾಗತ.

ನಿಮ್ಮ ಪ್ರೀತಿ, ವಿಮರ್ಶೆ, ಸಹಚರ್ಯದ ಆಕಾಂಕ್ಷೆಯಲ್ಲಿ....)