ಶುಕ್ರವಾರ, ಮಾರ್ಚ್ 6, 2015

"ಅತ್ತಿಹಣ್ಣಲ್ಲಿ ಹುಳು ಅಂತೆಲ್ಲ ನೋಡ್ಬಾರ್ದು; ಸುಮ್ನೆ ತಿನ್ಬೇಕಷ್ಟೆ"     ಕಲಾವಿದ ಎಂ. ಎಸ್. ಪ್ರಕಾಶ್ ಬಾಬು ಅವರ ಸಿನಿಮಾ 'ಅತ್ತಿಹಣ್ಣು ಮತ್ತು ಕಣಜ' ಇತ್ತೀಚೆಗೆ ಮೈಸೂರಿನಲ್ಲಿ ಪ್ರದರ್ಶನಗೊಂಡಿತು. ಸಿನಿಮಾದ ನಂತರವೂ ತುಂಬಾ ಹೊತ್ತು ಅದರ ಗುಂಗಲ್ಲೇ ಇರುವ ನನಗೆ, ಆ ಕೂಡಲೆ ಪ್ರತಿಕ್ರಿಯಿಸುವುದು ಸ್ವಲ್ಪ ಕಷ್ಟದ ಸಂಗತಿ. ಯಾವುದೇ ಸಿನಿಮಾ ನಮ್ಮೊಳಗೆ ಪ್ರವಹಿಸುವುದಕ್ಕೂ ನಾವು ಅವಕಾಶ ಕೊಡಬೇಕಾಗುತ್ತದೆ. ಆ ಗುಂಗಿಂದ ಹೊರಬರುವವರೆಗೂ ಮೌನವೇ ಲೇಸು ಅಂತನಿಸುತ್ತೆ ನನಗೆ. ಆವತ್ತು ಹೇಳಲಾಗದೇ ಉಳಿದಿದ್ದನ್ನು ಈಗ ಹೀಗೆ ಬರೆಯಬೇಕೆನಿಸಿತು ...

  
    ದೃಶ್ಯ ಮತ್ತು ಶಬ್ದದ ಮೂಲಕ ಕತ್ತಲು ಮತ್ತು ಮೌನದ ಗಾಢತೆಯನ್ನು ಕಟ್ಟಿಕೊಡುವ ಸಿನಿಮಾ - 'ಅತ್ತಿಹಣ್ಣು ಮತ್ತು ಕಣಜ'. ಚಿತ್ರಕಲಾವಿದ ಎಂ.ಎಸ್. ಪ್ರಕಾಶ್ ಬಾಬು ಅವರ ಮೊದಲ ಫೀಚರ್ ಫಿಲ್ಮ್ ಇದು. ದೊಡ್ಡ ಕ್ಯಾನ್ವಾಸ್ ಮೇಲೆ ಅನಂತವಾಗಿ ಹಾಸಿನಿಂತಿರುವ ದಾರಿಗುಂಟ ನಿಲ್ಲದ ಪಯಣ... ನಿರಂತರ ಪಯಣಿಗರು...
'ವಾಹ್!' ಅನಿಸುವ ಅದ್ಭುತ ಶಾಟ್ ಮೂಲಕ ತೆರೆದುಕೊಳ್ಳುವ ಈ ಚಿತ್ರ ನಿಧಾನವಾಗಿ ಚಿತ್ರದ(ಪೇಂಟಿಂಗ್) ಪರಿಭಾಷೆಯಂತೆ ಫ್ರೇಮ್ ಗೊಳ್ಳುತ್ತ, ಸಾಂಕೇತಿಕಗೊಳ್ಳುತ್ತ, ಸ್ತಬ್ಧಗೊಳ್ಳುತ್ತ, ತನ್ನನ್ನು ತಾನು ಚಿತ್ರಿಸಿಕೊಳ್ಳುತ್ತ ನಿಧಾನವಾಗಿ ಸಾಗುತ್ತದೆ... ಹಲವು 'ಸ್ಟಿಲ್ ಲೈಫ್' ಗಳನ್ನು ಒಂದೊಂದಾಗಿ ಜೋಡಿಸಿಟ್ಟು ಚಲನೆಮೂಡಿಸುವಂತೆ ಇದು . ಚಲಿಸಬಲ್ಲ ಪಾತ್ರಗಳೂ ಕೂಡ ಇಲ್ಲಿ 'ಚಿತ್ರ'ಗಳಾಗಿ, ತಮ್ಮನ್ನು ತಾವು ಫ್ರೇಮ್ ಒಳಗೆ ಹೊಂದಿಸಿಕೊಳ್ಳುತ್ತ ನಿಂತುಬಿಡುತ್ತವೆ.  ಕ್ಯಾನ್ವಾಸಿನ ಚಿತ್ರಗಳಿಗೆ ಚಲನೆ ಬಂದಹಾಗೊಮ್ಮೆ ಕಂಡರೆ, ಮತ್ತೊಮ್ಮೆ ಸಿನಿಮಾದ ಪಾತ್ರಗಳೇ ಕ್ಯಾನ್ವಾಸಿಗಿಳಿದು ನಿಂತಹಾಗೂ ಕಾಣುತ್ತೆ! 
ಅನುಪಮ್ ಸೂದ್ ಅವರ ಕಲಾಕೃತಿ

    ಚಿತ್ರದಲ್ಲಿ ನಾಲ್ಕೈದು ಪ್ರಮುಖ ಪಾತ್ರಗಳಿದ್ದರೂ ಸಾಂಕೇತಿಕ ಗ್ರಹಿಕೆಯಾಗಿ ನಿಲ್ಲುವುದು ಮಾತ್ರ ಆಡಮ್ ಮತ್ತು ಈವ್ ರನ್ನು ನೆನಪಿಸುವಂಥ ಗಂಡು ಮತ್ತು ಹೆಣ್ಣು ಪಾತ್ರಗಳೆರಡೇ.

ದೊಡ್ಡ ಅತ್ತಿಹಣ್ಣಿನ ಮರದ ಕೆಳಗೆ ಅತ್ತಿಹಣ್ಣನ್ನು ಹೆಕ್ಕಿ ಉತ್ಸಾಹದಿಂದ ತಿನ್ನಲನುವಾಗುವ  ಆಕೆ,
ಅದನ್ನು ತಡೆಯಬಯಸುವ ಆತ,
"ಅತ್ತಿಹಣ್ಣಲ್ಲಿ ಹುಳು ಅಂತೆಲ್ಲ ನೋಡ್ಬಾರ್ದು; ಸುಮ್ನೆ ತಿನ್ಬೇಕಷ್ಟೆ" ಎನ್ನುವ ಅಶರೀರವಾಣಿಯಂಥ ಧ್ವನಿ ...

ಹೀಗೆ, ಸಂಕೇತಗಳ ಬೆನ್ನುಹತ್ತುವ ಚಿತ್ರ ಗಂಡು-ಹೆಣ್ಣು, ಬದುಕು, ಸಂಬಂಧ, ಪಯಣ, ಪ್ರಣಯ... ಈ ಎಲ್ಲವನ್ನೂ ಗಾಢ ಸ್ತಬ್ಧತೆಯಲ್ಲಿ ಮೂರ್ತಗೊಳಿಸುತ್ತ ಚಲಿಸುತ್ತದೆ. ನಿರ್ದೇಶಕರು ಈ ಇಡೀ ಸಿನಿಮಾವನ್ನು ಪೇಂಟಿಂಗಿನ ಸ್ವರೂಪದಲ್ಲೇ 'ಚಿತ್ರಿಸಲು' ಮಾಡಿರುವ ಎಚ್ಚರದ ಪ್ರಯತ್ನ ಪ್ರತಿಯೊಂದು ಫ್ರೇಮ್ನಲ್ಲೂ ಇದೆ. ಇಲ್ಲಿನ ಪಾತ್ರಗಳು ಪದೇಪದೇ ಅನುಪಮ್ ಸೂದ್ ಮತ್ತು
ಲಕ್ಷ್ಮಗೌಡ್ ಅವರ ಚಿತ್ರಗಳನ್ನು ನೆನಪಿಸುವುದೂ ಇದೇ ಕಾರಣಕ್ಕೆ ! ಪ್ರಮುಖ ಗಂಡುಪಾತ್ರವೊಂದು ಬೋಳುತಲೆ ಹೊಂದಿರುವುದು ಹಾಗೂ ಬೆತ್ತಲಾಗುವುದೂ ಕೂಡ ಇಂತಹ ಎಚ್ಚರದ ಚಿತ್ರಣದಂತೆಯೇ ಕಂಡುಬರುತ್ತದೆ. (ಗುಲ್ಬರ್ಗಾ ಸ್ಕೂಲ್ ಆಫ್ ಆರ್ಟಲ್ಲಿ ಕಲಿತ ಕಲಾವಿದರು ಸಾಮಾನ್ಯವಾಗಿ ಚಿತ್ರಿಸುವ ಬೋಳುತಲೆಯ ಗಂಡಸಿನ ಚಿತ್ರಗಳು ಕೂಡ ನೆನಪಾದವು!)

ಅನುಪಮ್ ಸೂದ್ ಅವರ ಕಲಾಕೃತಿ    ಕಾರ್ ಡ್ರೈವ್ ಮಾಡುತ್ತ ಪ್ರಯಾಣದ ಉಸ್ತುವಾರಿವಹಿಸುವ  ಆಕೆಯೇ ಈ ಸಿನಿಮಾದ ಮುಖ್ಯ  'ಡ್ರೈವರ್' ಕೂಡ !
ಇಲ್ಲಿನ ಹೆಣ್ಣುಪಾತ್ರಗಳು ಭೂಮಿಯ ಹಾಗೆ, ತಾಯಿಬೇರಿನ ಹಾಗೆ ಗಂಭೀರ ಮೌನಿಗಳು. ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಲೇ ತನ್ನ ಗುರಿಮುಟ್ಟುವುದನ್ನು ಮಾತ್ರ ಧ್ಯೇಯವಾಗಿಸಿಕೊಂಡಿರುವ ರಿಸರ್ಚರ್, ಡಾಕ್ಯುಮೆಂಟರಿ ಫಿಲ್ಮ್ ಮೇಕರ್ ಒಬ್ಬಾಕೆಯಾದರೆ, ಮತ್ತೊಬ್ಬಳು ಕುಡುಕ ಗಂಡನ ಮಡದಿ, ತನ್ನ ಹೊಲಿಗೆಯಂತ್ರದ ಸದ್ದಲ್ಲೇ ಬದುಕಿಗೂ ತೇಪೆ ಹಾಕಿಕೊಳ್ಳುವವಳು.
ಹೊಲಿಗೆ ಮಶೀನೂ ತಾನೂ ಒಂದೇ ಎಂಬಂತೆ ಕಟಕಟಾ ಸದ್ದುಮಾಡುತ್ತ, ತಾನೇ ಒಂದು ಯಂತ್ರವಾಗಿರುವಾಕೆ.
ತನ್ನ ಬೆಕ್ಕುಮರಿಯನ್ನು ಮುದ್ದುಗರೆಯುತ್ತಲೇ ಅದರ ಕೊರಳಿಗೆ ಗಂಟೆ ಬಿಗಿಯುವ ಆಕೆಯ ಮಗಳು...
ಕಣ್ಣುಮುಚ್ಚಿ ಕುಂಟೋಬಿಲ್ಲೆ ಆಡುತ್ತ  'Am I right ?' ಎಂದು ಕೇಳುವ ಕನಸಿನಂಥ ಹುಡುಗಿ..


ಲಕ್ಶ್ಮ ಗೌಡ್ ಅವರ ಕಲಾಕೃತಿ

    ಹೀಗೆ ಸಾಂಕೇತಿಕವಾಗಿ ಅಭಿವ್ಯಕ್ತಗೊಳ್ಳುವ ಈ ಹೆಣ್ಣುಪಾತ್ರಗಳು ಹೆಚ್ಚು ಮಾತಿಗೆ ತೊಡಗದೆ, ಅವರ ಕೆಲಸ ಮತ್ತು ಚಲನೆಯ ಮೂಲಕವೇ ಸದ್ದುಮಾಡುವವರು. ಗಂಡಸಿನ ಪಾತ್ರ ಕೇವಲ ನೆಪಮಾತ್ರಕ್ಕೇನೊ ಎಂಬಂತೆ ತಮ್ಮದೇ ನೆಲದಲ್ಲಿ ತಮ್ಮದೇ ಬೇರುಗಳನ್ನು ಚಿಗುರಿಸಿಕೊಂಡ ಗಟ್ಟಿಜೀವಗಳಂತೆ ಈ ಹೆಂಗಸರು ಕಾಣುತ್ತಾರೆ. ಅಂತೆಯೇ ಇಡೀ ಸಿನಿಮಾ ಕೂಡ ಸ್ತ್ರೀಕೇಂದ್ರಿತ ದೃಷ್ಟಿಯಲ್ಲಿಯೇ ಚಿತ್ರಣಗೊಂಡಿದೆ ಅಂತಲೇ ನನಗನಿಸಿತು. ಅಂದರೆ, ಈ ಸಿನಿಮಾದ ಪ್ರತಿಯೊಂದು ಪಾತ್ರ ಮತ್ತು ಘಟನೆಗಳನ್ನು ಒಬ್ಬ ಹೆಣ್ಣು ಗ್ರಹಿಸಬಹುದಾದ ರೀತಿಯಲ್ಲಿಯೇ ಕಟ್ಟಿಕೊಡಲಾಗಿದೆ. ಇದನ್ನು ಇನ್ನೂ ಸ್ಪಷ್ಟಗೊಳಿಸಿ ಹೇಳುವುದಾದರೆ, ದೂರದ ಯಾವುದೋ ಅಪರಿಚಿತ ಹಳ್ಳಿಗೆ ಕೆಲಸದ ನಿಮಿತ್ತ ಹೋಗುವ ನಗರದ ಮಹಿಳೆಯೊಬ್ಬಳು ಅನಿರೀಕ್ಷಿತವಾಗಿ ಹಲವು ದಿನಗಳ ಕಾಲ ಅಲ್ಲೇ ಉಳಿಯಬೇಕಾಗಿಬಂದಾಗ, ಆಕೆ ಅನುಭವಿಸಬಹುದಾದ ಕಿರಿಕಿರಿ, ಬೋರ್ಡಮ್, ಅಪರಿಚಿತತೆ, ನಿರುತ್ಸಾಹ, ನಿರೀಕ್ಷೆ ಮತ್ತು ಗಾಢಮೌನ ಇಡೀ ಚಿತ್ರದುದ್ದಕ್ಕು ಪ್ರೇಕ್ಷಕರನ್ನೂ ಆವಾಹಿಸಿಕೊಳ್ಳುತ್ತದೆ. ಆಕೆಯ ಪೇಲವ ಮತ್ತು ಬೇಸರದ(ಆದರೆ ದೃಢವಾದ) ಮುಖಭಾವವೇ ಇಡೀ ಚಿತ್ರದ ಸ್ಥಾಯಿಭಾವವೂ ಆಗಿನಿಲ್ಲುತ್ತದೆ. ಇಲ್ಲಿನ ಗಂಡುಪಾತ್ರ ಆ ಹಳ್ಳಿಯ ಕೆಲವರನ್ನು ಪರಿಚಯಿಸಿಕೊಳ್ಳುವ ಪ್ರಯತ್ನ ಮಾಡಿದರೂ ಕೂಡ, ಪ್ರೇಕ್ಷಕರಿಗೆ ಆ ಹಳ್ಳಿ ಅಪರಿಚಿತವಾಗಿಯೇ ಉಳಿದುಬಿಡುತ್ತದೆ. ಹೊರಹೋಗದೆ, ಹೆಚ್ಚು ತಿಳಿಯುವ ಉತ್ಸಾಹ ತೋರದೆ, ತನ್ನಪಾಡಿಗೆ ಉಳಿಯುವ ಆ ಮಹಿಳೆಯ ಮನಸ್ಥಿತಿಯೇ ಪ್ರೇಕ್ಷಕರದ್ದೂ ಆಗಿಬಿಡುವುದು ಇಲ್ಲಿಯೇ! ಕೊಲೆಯನ್ನೂ ಒಳಗೊಂಡಂತೆ ಅಲ್ಲಿ ನಡೆಯುವ ಇತರೆಲ್ಲಾ ಘಟನಾವಳಿಗಳ ಬಗ್ಗೆ ಆಕೆಗಿರುವಷ್ಟೇ ಮಾಹಿತಿ ಪ್ರೇಕ್ಷಕರಿಗೂ ದಕ್ಕುವುದು! ಆಕೆಯ ಒಳತೋಟಿಯೇ ಈ ಇಡೀ ಸಿನಿಮಾದ ಆತ್ಮವೆಂಬಂತೆ ಭಾಸವಾಗುವುದು ನನಗಿಷ್ಟವಾದ ಅಂಶಗಳಲ್ಲೊಂದು.
 


    ಸಿನಿಮಾ ತುಂಬೆಲ್ಲ ಮೋಡಕವಿದುಕೊಂಡಿದ್ದು, ಒಳಪ್ರವಾಹವೊಂದು ಸದ್ದಿಲ್ಲದೆ ನಮ್ಮನ್ನು ಸೆಳೆದೊಯ್ಯುವುದು ಕತ್ತಲೆ ಮತ್ತು ಜಡಿಮಳೆಯ ಕೊನೆಯ ಶಾಟ್ ಗೆ. ಅಷ್ಟುಹೊತ್ತು ಕಂಡಿದ್ದ ಬಿಡಿಬಿಡಿ ಚಿತ್ರಗಳಷ್ಟೂ ಆ ಕತ್ತಲಲ್ಲಿ ಭಾರವಾಗಿ ಸೇರಿಹೋಗುತ್ತವೆ... ಅಷ್ಟಿಷ್ಟು ಸದ್ದುಮಾಡುತ್ತಿದ್ದ ಆ ಲೋಕ ಎಡೆಬಿಡದೆ ಧೋ ಎಂದು ಹರಿಯಲಾರಂಭಿಸುತ್ತದೆ... ಇಡೀ ಸಿನಿಮಾದ ತುಂಬ ಬಿಕ್ಕಳಿಸುತ್ತ ಒತ್ತರಿಸಿಕೊಳ್ಳುತ್ತಿದ್ದ ಕರಿಮೋಡಗಳು ಒಂದೇ ಸಲಕ್ಕೆ ಅಳುವಿನ ಕಟ್ಟೆಯೊಡೆದಂತೆ ಭಾಸವಾಗುತ್ತದೆ! ಇದೇ ಮೊದಲು ಅಥವಾ ಇದೇ ಕೊನೆ ಎಂಬಂತೆಯೂ ಆ ಮಳೆ ಸುರಿಯಲಾರಂಭಿಸುತ್ತದೆ... ಬದುಕಿನ ನಿರಂತರತೆಯನ್ನೂ, ಜೀವಂತಿಕೆಯನ್ನೂ ಇದು ಹಾಡತೊಡಗುತ್ತದೆ..  
ಸಿನಿಮಾದ ಮೊಟ್ಟಮೊದಲ ದೃಶ್ಯದಂತೆಯೇ ಅತ್ಯಂತ ಪರಿಣಾಮಕಾರಿ ನಿರೂಪಣೆ ಇದು. ಮೊದಲ ಮತ್ತು ಕಡೆಯ ಶಾಟ್ಗಳು ಒಟ್ಟು ಸಿನಿಮಾಗೊಂದು ಗಟ್ಟಿಚೌಕಟ್ಟು ಹಾಕಿಕೊಟ್ಟಿವೆ. ಸ್ಕ್ರೀನ್ ಮೇಲೆ ನಿಂತುಹೋದರೂ, ನನ್ನೊಳಗೆ ಮಾತ್ರ ಮೋಡಕವಿದ ಚಿತ್ರಗಳು ಮತ್ತು ಜಡಿಮಳೆಯಲ್ಲಿ ಕೊಚ್ಚಿಹೋದ ಆ ಸದ್ದುಗಳು ಸಿನಿಮಾ ಮುಂದುವರಿಸಿಯೇ ಇತ್ತು...

ಕಲಾವಿದನೊಳಗೆ ಇರಬಹುದಾದ ಗಾಢ ಏಕಾಂತದ ಮೌನ, ಆತನ/ಆಕೆಯ ನಿಗೂಢ ಜಗತ್ತು, ಅಮೂರ್ತ ಮನಸ್ಸಿನಂತೆಯೇ ಎಣಿಕೆಗೆ ಸಿಗದ ಅನೂಹ್ಯ ಭಾವನೆಗಳ ತಾಕಲಾಟ - ಈ ಎಲ್ಲವೂ ಪೇಲವಬಣ್ಣ ಮತ್ತು ಸದ್ದಿನ ಮೂಲಕ ಸಾಕಾರಗೊಳ್ಳುತ್ತವೆ. ಇಲ್ಲಿ ಬಣ್ಣ ಮತ್ತು ಸದ್ದು ಕೂಡ ಪ್ರಮುಖ ಪಾತ್ರಧಾರಿಗಳು! ಇದು ಚಿತ್ರಕಲಾವಿದರೊಬ್ಬರ ಸಿನಿಮಾ ಎಂಬ ಕಾರಣಕ್ಕೆ ಹೆಚ್ಚು ಆಸಕ್ತಿ ಹುಟ್ಟಿಸುವಂಥದ್ದು. ಇದಕ್ಕಾಗಿ ಕಲಾವಿದ ಪ್ರಕಾಶ್ ಬಾಬುರವರಿಗೆ ಅಭಿನಂದನೆಗಳು ಸಲ್ಲಬೇಕು.

ಲಕ್ಶ್ಮ ಗೌಡ್ ಅವರ ಕಲಾಕೃತಿ

    ಆದರೆ, ಇಂಥ ಗಾಢಾನುಭವದ ಹೊರತಾಗಿಯೂ ಕೇಳಬೇಕೆನಿಸಿದ ಕೆಲವು ಪ್ರಶ್ನೆಗಳು ಇವು :

- ಕ್ಯಾಮರಾದ ಮೂಲಕ ಚಿತ್ರಿತಗೊಳ್ಳುವ ಸಿನಿಮಾವೊಂದು ತನ್ನೆಲ್ಲಾ ಸಾಧ್ಯತೆಗಳ ಹೊರಗೆ ಪೇಂಟಿಂಗ್ ಸ್ವರೂಪದ ಚೌಕಟ್ಟಿನಲ್ಲಿಯೇ ಯಾಕೆ ಉಳಿಯಬೇಕು? ಸಿನಿಮಾ ಮಾಧ್ಯಮದ ಮೂಲಕ ಮತ್ತೆ ಯಾಕೆ ಪೇಂಟಿಂಗನ್ನೇ ಪ್ರತಿಪಾದಿಸಬೇಕು?

- ರಿತ್ವಿಕ್ ಘಟಕ್ ಅವರ ಸಿನಿಮಾಗಳು ಅಥವಾ ಇತ್ತೀಚಿನ 'ದೇವ್-ಡಿ'ಯಲ್ಲಿ ಕ್ಯಾಮರಾಗೆ ದಕ್ಕಿರುವ ಅನೂಹ್ಯ ಸ್ವಾತಂತ್ರ್ಯದಹಾಗೆ ಒಂದು ಕನ್ವೆನ್ಷನಲ್ ಚೌಕಟ್ಟಿನ ಹೊರಗೂ ಚಿತ್ರಗಳು ಚಲಿಸಲು ಸಾಧ್ಯವಿರುವಾಗ, ಚಿತ್ರಗಳಿಗೆ ಆ ಸ್ವಾತಂತ್ರ್ಯ ಯಾಕೆ ಕಲ್ಪಿಸಬಾರದು ?

- ಅತಿಯಾದ ಸಿಂಬಾಲಿಸಂ/ಸಾಂಕೇತಿಕತೆ ಕೂಡ ಚಿತ್ರಗಳಿಗೆ ನಾವು ಹಾಕುವ ಚೌಕಟ್ಟಲ್ಲವೆ? ಈ ಮೂಲಕ ಯಾವುದೇ ದೃಶ್ಯಕ್ಕೆ ತಂತಾನೇ ದಕ್ಕಬಹುದಾದ 'ಸ್ವಂತದ' ಆಗುವಿಕೆಯನ್ನು ಮೊಟಕುಗೊಳಿಸಿದಂತೆ ಆಗಲಿಲ್ಲವೆ? 

  


  

    ಒನ್ಲೈನ್ ಸ್ಟೋರಿ ಇಲ್ಲದ, ವಿಶೇಷ ನಿರೂಪಣೆಯ ಚಿತ್ರ 'ಅತ್ತಿಹಣ್ಣು ಮತ್ತು ಕಣಜ'. ಇತ್ತೀಚೆಗೆ ಮೈಸೂರಿನಲ್ಲಿ ಪ್ರದರ್ಶನಗೊಂಡಾಗ, ಬಹುಷಃ ಬೇರೆ ಯಾವ ಸಿನಿಮಾಗಿಂತಲೂ ಹೆಚ್ಚು ಪ್ರಶ್ನೆಗಳನ್ನು ಹುಟ್ಟುಹಾಕಿದ ಸಿನಿಮಾ ಇದು! ಕೆಲವರು ಆಕ್ರೋಶದಿಂದಲೂ, ಮತ್ತೆ ಕೆಲವರು ಕುತೂಹಲದಿಂದಲೂ, ಪ್ರೀತಿಯಿಂದಲೂ ಮಾತಾಡಿದರು, ಪ್ರಶ್ನಿಸಿದರು. ಇದು ಅರ್ಥವಾಗಲಿಲ್ಲ ಎಂಬ ಆಕ್ರೋಶದ ಪ್ರಶ್ನೆಗಳ ಜೊತೆಜೊತೆಗೇ ಇದನ್ನು ಅರ್ಥಮಾಡಿಕೊಳ್ಳುವುದು ಹೇಗೆಂಬ ಕುತೂಹಲ ಮತ್ತು ತುಡಿತವನ್ನು ಹುಟ್ಟುಹಾಕಿದ್ದು ಈ ಸಿನಿಮಾದ ಹೆಗ್ಗಳಿಕೆ ಅಂತಲೇ ನನ್ನ ಅನಿಸಿಕೆ. ಸಿನಿಮಾ ನೋಡುವ ಮತ್ತು ಗ್ರಹಿಸುವ ಅವರವರದ್ದೇ ಆದ ರೀತಿ ಎಲ್ಲರಿಗೂ ಇರುತ್ತೆ. ಅದನ್ನು ತಿದ್ದುವ ಅಥವಾ ಪಾಠ ಹೇಳುವ ಅವಶ್ಯಕತೆಯೇನೂ ಇರುವುದಿಲ್ಲವೇನೊ ! ಆದರೆ, ಹೊಸತನ್ನು ಗ್ರಹಿಸಲು ಬೇಕಾದ ಸಹನೆ ಮತ್ತು ಸಹಾನುಭೂತಿಯ ಸಹೃದಯತೆ ಮಾತ್ರ ಪ್ರೇಕ್ಷಕರಲ್ಲಿ ಮತ್ತಷ್ಟು ಬೇಕಿದೆ.
ಲಕ್ಶ್ಮ ಗೌಡ್ ಅವರ ಕಲಾಕೃತಿ


ಮಂಗಳವಾರ, ಡಿಸೆಂಬರ್ 30, 2014

ದೊಡ್ಡೋಳಾಗೋದಂದ್ರೆ ...

ಚಿತ್ರ - ಚರಿತಾ
   ಟೋಲ್ಗೇಟಲ್ಲಿ ಟಿಕೆಟ್ ಇಶ್ಯು ಮಾಡೋಕಂತ ನಿಂತಿದ್ದ ಬಸ್ಸಿನ ನೀರವತೆಯಲ್ಲಿ ಅನಿರೀಕ್ಷಿತವಾಗಿ 'ಫಟ್ಟ್...' ಅನ್ನೊ ರಭಸದ ಸದ್ದಾಗಿತ್ತು. ಅದರ ಹಿಂದೆಯೇ 'ಲೋಫ಼ರ್..!' ಅಂದಿದ್ದೂ ಕೇಳಿತ್ತು. ಅಲ್ಲಿಗೆ ಅದು ಯಾರು? ಯಾರಿಗೆ? ಯಾಕೆ? ಏನು? ... ಇತ್ಯಾದಿತ್ಯಾದಿ ಪ್ರಶ್ನೆಗಳಿಗೆಲ್ಲ ಥಟ್ಟಂತ ಉತ್ತರ ಹೊಳೆದುಬಿಟ್ಟಿತ್ತು ! ವಿಚಿತ್ರ ಸಿಟ್ಟು, ಖುಶಿ, ವೇದನೆ ಒಟ್ಟೊಟ್ಟಿಗೇ ಆಗಿತ್ತು ...

   ಕಾಲಿಗೆ ಚಕ್ರ ಕಟ್ಟಿಕೊಂಡಹಾಗೆ ಊರೂರು ಸುತ್ತುತ್ತಿದ್ದವಳು ಈಗ ನೈಟ್ ಜರ್ನಿಗೆ ಸುತಾರಾಂ ರಾಜಿಯಿಲ್ಲ. ಒಬ್ಬಳೇ ಹಗಲುಹೊತ್ತು ಓಡಾಡೋದಾದ್ರು ಪಕ್ಕದ ಸೀಟಿಗೆ ಬ್ಯಾಗ್ ಇಟ್ಟು, ಕೇಳಿದವರಿಗೆಲ್ಲ "ಬರ್ತಾರೆ" ಅಂತಂದು, ಯಾವುದಾದ್ರು ಹೆಣ್ಣುಜೀವ ಬಂದು ಕೂರಬಾರದಿತ್ತಾ ಅಂತ ಹಲುಬುವ ಮನಸ್ಸು. (ಬಹುಷಃ 'ದೊಡ್ಡೋಳಾಗೋದಂದ್ರೆ' ಇದೇ ಇರ್ಬೇಕು - ಅಪಾಯಗಳನ್ನು ಎದುರಿಸಲು ಸಜ್ಜುಗೊಳ್ಳೋದು ಅಂತ!)   ಪಕ್ಕ ಕೂರಲು ಹವಣಿಸುವವರ ಕಣ್ತಪ್ಪಿಸುತ್ತ, ಜಾಣಕಿವುಡಳಾಗಿ ಕೂತಾಗಲೂ ಭಂಡತನದಲ್ಲಿ ಒತ್ತರಿಸಿಕೊಳ್ಳುವ ಗಡವರೇ ಬಹುಪಾಲು. ಕಳ್ಳನಿದ್ದೆ ಮಾಡುತ್ತ ಮೈಮೇಲೆ ಬೀಳುವ, ಕುಂಟುನೆಪದಲ್ಲಿ ಮಾತಿಗೆಳಸುವ, ಮೈತಾಕಿಸುವ ಕೀಚಕರಿಗೆ ಬೈಗುಳದ ಟ್ರೀಟ್ಮೆಂಟ್ ರೆಡಿಯಾಗೇ ಇಟ್ಟಿರಬೇಕು. ಕನಿಷ್ಟಪಕ್ಷ ಹರಿತಗಣ್ಣಾದರೂ ಇರಲೇಬೇಕು. ಇನ್ನು, ಸೀಟ್ ಸಂದಿಯಲ್ಲಿ ನುಸುಳಿಬರುವ ಕೈಗಳಿಗೆ 'ಸೇಫ಼್ಟಿಪಿನ್' ಪ್ರಯೋಗ ಇದ್ದೇಇದೆ ! ಅಂತೂ ಆವತ್ತಿನ ಪ್ರಯಾಣದತುಂಬ ಮೈಯೆಲ್ಲ ಕಣ್ಣಾಗಿ-ಕಿವಿಯಾಗಿ(ಕೆಲವೊಮ್ಮೆ ಬಾಯಿಯೂ ಆಗಿ), ರೋಮರೋಮಕ್ಕು ಎಚ್ಚರವಾಗಿ, ಹಾದಿ ವಿಪರೀತ ದೂರವಾದಂತನಿಸುವುದು ಮಾಮೂಲು! 

ಬಹುಶಃ ಯಾವ ಮೆಡಿಟೇಶನ್ ಕೋರ್ಸಲ್ಲೂ ಇಷ್ಟು ಎಚ್ಚರದ ಧ್ಯಾನ ಮಾಡಿರಲಿಕ್ಕಿಲ್ಲ ನಾನು! ಹಾಗಾಗಿ ಇಂಥ ಪ್ರಯಾಸಕರ ಪ್ರಯಾಣಗಳೇ ನನ್ನ ಪಾಲಿನ ನಿಜವಾದ 'ಧ್ಯಾನ ಕೇಂದ್ರಗಳು'!

   ಈ ಜನ, ಈ ಪ್ರಯಾಣ ನನಗೆ ಕಲಿಸಿರುವ ಎಚ್ಚರ ಇಲ್ಲೀವರೆಗು ನನ್ನ ಕಾಯುತ್ತ ಬಂದಿದೆ. ಹಾಗೇ ಬದುಕನ್ನು ಮತ್ತಷ್ಟು ಸ್ಪಷ್ಟವಾಗಿ ನೋಡುವುದನ್ನು ಕಲಿಸಿದೆ. ನನ್ನ ಪಾಲಿಗಿರುವ ಸ್ವಾತಂತ್ರ್ಯದ ವ್ಯಾಖ್ಯಾನವೂ ಒಂದು ಮಿತಿಯಲ್ಲಿ ಮಾತ್ರ ಇರಬಹುದಾದ್ದು ಎಂಬುದನ್ನೂ ಮನವರಿಕೆ ಮಾಡಿಸಿದೆ. ಮುಂಜಾನೆ ಒಬ್ಬಳೇ ವಾಕಿಂಗ್ ಹೋಗೋಹಾಗಿಲ್ಲ... ನನಗಾಗಿಯೇ ಈ ಬೆಳಕಾಗಿದೆ ಎನಿಸುವ ಭಾವಕ್ಕೂ, ಪ್ರತೀಸಲದ ವಾಕ್ನಲ್ಲಿ ನಾನು ಕಂಡುಕೊಳ್ಳುತ್ತಿದ್ದ ಆ ಮುದಕ್ಕೂ ಕತ್ತರಿಬಿದ್ದಿದ್ದು ಕೆಲವು ವರ್ಷಗಳ ಹಿಂದೆ, ಒಂದು ಕೆಟ್ಟ ಆತಂಕಹುಟ್ಟಿಸುವ ಘಟನೆಯಿಂದಾಗಿ.  ಕತ್ತಲಾದಮೇಲೆ ಬಸ್ಟಾಪಲ್ಲಿ ನಿಲ್ಲೋಹಾಗಿಲ್ಲ-ಒಂಟಿಯಾಗಿ ತಿರುಗೋಹಾಗಿಲ್ಲ . ಇನ್ನು, ಕಣ್ಣುಕುಕ್ಕುವ ಬೆಳ್ಳಂಬೆಳಕಲ್ಲು ಎಚ್ಚರತಪ್ಪೋಹಾಗಿಲ್ಲ,... ಈ 'ಇಲ್ಲ'ಗಳ ಲಿಸ್ಟು ಮಾತ್ರ ಎಲ್ಲೂ ಬದಲಾಗದೇ ಬೆಳೆಯುತ್ತಲೇ ಇದೆಯಲ್ಲ!

 ಚಿತ್ರ - ಚರಿತಾ     ನೈಟ್ ಲ್ಯಾಂಡ್ಸ್ಕೇಪ್ ಮಾಡ್ಬೇಕು, ರಾತ್ರಿಕತ್ತಲಲ್ಲಿ ಒಬ್ಬಳೇ ಊರೆಲ್ಲ ತಿರುಗಬೇಕು ಅನ್ನುವ ನನ್ನ ಹುಚ್ಚು ಆಸೆ ಇನ್ನೂ ಆಸೆಯಾಗೇ ಉಳಿದುಬಿಟ್ಟಿದೆ. ಹಾಗನಿಸಿದಾಗೆಲ್ಲ, ನನ್ನ ನಾನು 'ಮಾಯ' ಮಾಡಿಕೊಳ್ಳುವ ಯಾವುದಾದ್ರು ಮ್ಯಾಜಿಕ್ ನನಗೆ ಗೊತ್ತಿರಬೇಕಿತ್ತು ಅನಿಸ್ತಿತ್ತು! ಅಥವಾ ನಾನೊಬ್ಬ ಲೇಡಿ ಫ್ಯಾಂಟಮ್ ಥರ ಯಾರಿಗೂ ಅಂಜದೆ ಬೇಕಾದಲ್ಲಿ ತಿರುಗಾಡಿಕೊಂಡಿರೋಹಾಗಿದ್ರೆ ಎಷ್ಟ್ ಚೆಂದ ಅನಿಸ್ತಿತ್ತು. ಕೆಲವೊಮ್ಮೆ ಇದೇ ಕಾರಣಕ್ಕೆ ನಾನು ಹುಡುಗ ಆಗಿರ್ಬೇಕಿತ್ತು ಅಂತಲೂ ಅನಿಸಿತ್ತು! ಈಗ 'ದೊಡ್ಡೋಳಾಗಿದೀನಿ'.. ಫ್ಯಾಂಟಸಿಗಿಂತ ರಿಯಾಲಿಟಿಯಲ್ಲೆ ಬದುಕಲು ಕಲಿಯುತ್ತಿದ್ದೀನಿ! ಈಗ ನೈಟ್ ಲ್ಯಾಂಡ್ಸ್ಕೇಪ್ ಹಾಗಿರಲಿ, ಹಾಡಹಗಲಲ್ಲೂ ಫೀಲ್ಡ್ ವರ್ಕ್ ಮಾಡೋಕೆ ಲೇಡಿ ಫ್ಯಾಂಟಮ್ಮೇ ಆಗಬೇಕಾಗಿದೆ! ಆದ್ರೆ, ಫ್ಯಾಂಟಮ್ಗೇ ಜಾಸ್ತಿ ಕಷ್ಟ ಅಂತ ತಿಳಿಯೋಕೆ ಇಷ್ಟು ವರ್ಷ ಬೇಕಾಯ್ತು ನಂಗೆ!

   ಆವತ್ತು ನಾನು ಹೊರಟಿದ್ದು ದೂರದ ಊರಿನ ಒಬ್ಬಜ್ಜೀನ ಮಾತಾಡಿಸೋದಕ್ಕೆ. ಅವರು ಜಾನಪದ ಹಾಡುಗಾತರ್ಿ. ಆಗಷ್ಟೆ ಒಂದು ವಿಶೇಷ ಪ್ರಶಸ್ತಿ ಸಂದಿದ್ದರಿಂದ ಅವರನ್ನು ಮಾತಾಡಿಸಿ, ಒಂದಷ್ಟು ಹೊತ್ತು ಕಣ್ತುಂಬಿ, ಮನದುಂಬಿಕೊಳ್ಳುವ ನೆಪ ಸಿಕ್ಕಿತ್ತು. ಮೈಸೂರಿಂದ ಬೆಳಗಿನ ಬಸ್ಸು ಹತ್ತಿದ್ದ ನನಗೆ ಸ್ವಲ್ಪಹೊತ್ತಿಗೆ ಬಸ್ಸಲ್ಲಿದ್ದದ್ದು ಬಹುಷಃ ನಾನೊಬ್ಬಳೇ ಮಹಿಳೆ ಅನಿಸಿ, ಒಂಥರದ ದುಗುಡ, ಆತಂಕ ಆವರಿಸಿಕೊಂಡಿತ್ತು.  ಪಕ್ಕದ ಸೀಟಿಗೆ ನನ್ನ ದೊಡ್ಡ ಬ್ಯಾಗ್ ಇರಿಸಿ, ಹಿಂದಿನ ಸೀಟಲ್ಲಿ ಯಾರಿದಾರೆ ಅಂತ ಗಮನಿಸಿಕೊಂಡಿದ್ದೆ. ಆತ ಒಬ್ಬ ಮಧ್ಯವಯಸ್ಕ. ಒಮ್ಮೆ ನನ್ನ ಸೀಟಿನ ಕಡೆ ಬಾಗಿ ಕೂರೋದು, ಮತ್ತೊಮ್ಮೆ ಕಿಟಕಿ ಗಾಜನ್ನು ಆಚೀಚೆ ಎಳೆದಾಡೋದು ನಡೆದಿತ್ತು. ನನಗೋ ಆತನನ್ನೂ ಒಳಗೊಂಡು ಬಸ್ಸಲ್ಲಿದ್ದ ಆ ಎಲ್ಲಾ ಗಂಡಸರೂ ಎಡೆಬಿಡದೆ ನನ್ನನ್ನೇ ದಿಟ್ಟಿಸುತ್ತಿರೋಹಾಗೆ, ಅವರೆಲ್ಲರ ಕಣ್ಣ ಈಟಿಗಳು ಕಂಡಕಂಡಲ್ಲಿ ತಿವಿಯುತ್ತಿರೋಹಾಗೆ ಅನಿಸಿ, ದುಪಟ್ಟಾವನ್ನು ಮತ್ತಷ್ಟು ಅಗಲ ಮಾಡಿ, ನನ್ನ ಕತ್ತು, ಕೈಯನ್ನೂ ಮುಚ್ಚಿಕೊಂಡು ಕೂತೆ. ಎದೆಬಡಿತ ಮಾತ್ರ ನನಗೆ ಸ್ಪಷ್ಟವಾಗಿ ಕೇಳೋಹಾಗಿತ್ತು! ಆದರೂ ಆತಂಕ ತೋರಿಸುವಂತಿರಲಿಲ್ಲ. ಆರಾಮಾಗೇ ಇದೀನಿ ಅನ್ನೋಹಾಗೆ ಇಯರ್ ಫೋನ್ ಕಿವಿಗಿಟ್ಟುಕೊಂಡ್ರೆ, " ಕಾಂತಾನಿಲ್ಲದಮ್ಯಾಲೆ ಏಕಾಂತವ್ಯಾತಕೆ..." ಅಂತ ರತ್ನಮಾಲಾ ಪ್ರಕಾಶ್ ಹಾಡೋದಕ್ಕೆ ಶುರುಮಾಡಿದ್ರು. ಅವರನ್ನು ಮಧ್ಯದಲ್ಲೆ ತಡೆದು, ನನ್ನ ಕಷ್ಟ ಹೇಳಿಕೊಳ್ಳಬೇಕೆನಿಸಿತು. ಅವರೋ ಈ ಲೋಕದ ಗೊಡವೆಯೇ ತನಗಿಲ್ಲವೆಂಬಂತೆ ಹಾಡುತ್ತಲೇ ಇದ್ರು. ಆ ಹಾಡು ಬರೆದ ಕಂಬಾರರು ಅಲ್ಲೇನಾದ್ರು ಕಾಣಬಹುದಾಂತ ನೋಡಿದರೆ ಕಂಡಿದ್ದು ಆ ಕಂಡಕ್ಟರು. ಯಾಕೋ ಅವನೂ ಕೂಡ ನನ್ನ ಕಡೆಗೆ ಒಂಥರದ ಹುಳ್ಳನಗೆ ನಕ್ಕಂತಾಗಿ, ನನ್ನ ಆತಂಕ ಅವನಿಗೆ ಗೊತ್ತಾಗಿಹೋಯ್ತೇನೊ ಅನಿಸಿ ಮತ್ತಷ್ಟು ದಿಗಿಲಾಯ್ತು.

   'ಎಲ್ಲಿಗೆ ?' ಅನ್ನೋಹಾಗೆ ಎದುರುಬಂದು ನಿಂತ.
ಇಂತಲ್ಲಿಗೆ ಅಂತ ಜೋರಾಗಿ ಹೇಳೋದು ಅಪಾಯ ಅನಿಸಿದ್ದರಿಂದ, ಅವನಿಗೆ ಮಾತ್ರ ಕೇಳೋಹಾಗೆ ಸಣ್ಣದನಿಯಲ್ಲಿ ಹೇಳಿದ್ದೆ...
" ದಾವಣ್ಗೆರೇಗಾ ?" ಅಂತ ಅಷ್ಟು ದೊಡ್ಡದಾಗಿ, ಇಡೀ ಬಸ್ಸಿಗೆ ನನ್ನ 'ಕೊನೆ ನಿಲ್ದಾಣ' ಅನೌನ್ಸ್ ಮಾಡಿದ್ದ ಆತ. ಆ ಕ್ಷಣ, ಯಮ ಅಂದ್ರೆ ಇವನೇ ಇರ್ಬೇಕು ಅನಿಸಿಬಿಟ್ಟಿತ್ತು! ಹೃದಯ ನೇರ ಬಾಯಿಗೇ ಬಂದಂಗಾಗಿತ್ತು! ಹಿಂದಿನ ಸೀಟಿನ ಆಸಾಮಿಗೂ ಈ ಕಂಡಕ್ಟರ್ಗೂ ಏನೊ ಡೀಲಿಂಗ್ ಇರ್ಬೇಕು ಅಂತೆಲ್ಲ ಅನಿಸತೊಡಗಿ ಬಾಯಿ ಮತ್ತಷ್ಟು ಒಣಗತೊಡಗಿತು..
"ಅರಸೀಕೆರೇಲಿ ಇಳ್ಕೊಂಡು ಅಲ್ಲಿಂದ ಟ್ರೇಯ್ನಲ್ಲಿ ಹೋಗಿ, ಒಬ್ರೆ ಬೇರೆ ಇದೀರಿ. ಈ ಬಸ್ಸು ತಲುಪೋದು ತುಂಬ ಲೇಟು" ಅಂತಂದು ಒಂಥರಾ ನಕ್ಕ. ಈಗ ನಿಜಕ್ಕು ದಿಗಿಲು, ಗೊಂದಲ ಒಟ್ಟೊಟ್ಟಿಗೆ ಆಗಿತ್ತು.

   ಬಸ್ ಇಳಿದ ಕೂಡ್ಲೆ, ಹಿಂದೆಯೇ ಇಳಿದು ನನ್ನ ಹಿಂಬಾಲಿಸಿ ಬರಬಹುದಾದ ಮೂರ್ನಾಲ್ಕು ಗಂಡಸರು ನನ್ನ ಹಿಡಿದು ನಿಲ್ಲಿಸ್ಬೌದು,.. ಹೆದರಿಸಿ ಬ್ಯಾಗಲ್ಲಿರೋದೆಲ್ಲ ಕಿತ್ಕೋಬೌದು,.. ಮೈಮೇಲೆ ಕೈಹಾಕ್ಲುಬೌದು ...ಆಗ ನಾನೇನು ಮಾಡ್ಬೇಕು?? ...
ಆದಷ್ಟೂ ಗಾಬರಿಯಾಗದೆ, "ಯಾಕ್ರಪ್ಪ? ಏನು ನಿಮ್ ಪ್ರಾಬ್ಲಮ್ಮು ?" ಅಂತ ಗಂಭೀರವಾಗಿ ಕೇಳ್ಬೇಕು...
ಕ್ಯಾಮರ, ಆಡಿಯೋ ರೆಕಾರ್ಡರ್, ತಮ್ಮ ಕೊಡಿಸಿದ್ದ ರಿಸ್ಟ್ವಾಚು, ತುಂಬ ಇಷ್ಟಪಟ್ಟು ತಕೊಂಡಿದ್ದ ಲೆದರ್ ಪಸರ್ು, ಅದರಲ್ಲಿದ್ದ ಒಂದಷ್ಟು ದುಡ್ಡು-ಫೋಟೋಗಳು, ಬಾಯ್ಫ್ರೆಂಡ್ ಥರ ನನ್ನ ಜೊತೆಗಿರುವ ಮೊಬೈಲು, ಆಂಟಿಯೊಬ್ಬರು ಗಿಫ್ಟ್ ಮಾಡಿದ್ದ ಬಿಳಿಹರಳಿನ ಓಲೆ, ಇತ್ಯಾದಿತ್ಯಾದಿ ದೊಡ್ಡ-ಸಣ್ಣ ನೆನಪುಗಳೆಲ್ಲವನ್ನೂ ನಿರ್ಲಿಪ್ತವಾಗಿ, 'ಕಾಲಜ್ಞಾನಿ'ಯಹಾಗೆ ತೆಗೆದುಕೊಟ್ಟುಬಿಡಲು ತಯಾರಾಗ್ಬೇಕು,.. ಹಾಗೆ ಕೊಡುತ್ತ, "ಎಷ್ಟ್ ದಿನಾಂತ ಇಂಥ ಜೀವ್ನ ನಿಮ್ದು? ಯಾಕೆ ಹೀಗೆಲ್ಲ ತೊಂದ್ರೆ ಕೊಡ್ತೀರಿ?" ಅಂತ ನಿರಾಳವಾಗಿ ಕೇಳ್ಬೇಕು!! ...ಅಷ್ಟು ತಣ್ಣಗಿನ ನನ್ನ ಮಾತು ಕೇಳಿ ಅವರಿಗೆ ತಮ್ಮ ಪ್ಲ್ಯಾನ್ ಎಲ್ಲಾ ಮರೆತುಹೋಗ್ಬೇಕು,...!!
... ಅದ್ಸರಿ, ಅಷ್ಟು ತಣ್ಣಗೆ ನಟಿಸೋಕೆ ನನಗೆ ಸಾಧ್ಯ ಆಗ್ಬಹುದಾ?... ಅಂತೆಲ್ಲ ಯೋಚಿಸುವಷ್ಟರಲ್ಲಿ ಅರಸೀಕೆರೇಲಿ ಬಸ್ ನಿಂತಿತ್ತು.

   ಬಸ್ ಇಳಿದು ಅಷ್ಟು ದೂರದವರೆಗೂ ಯಾರೂ ಹಿಂಬಾಲಿಸ್ತಾಯಿಲ್ಲ ಅನಿಸಿದಮೇಲಷ್ಟೆ ಆ ಕಂಡಕ್ಟರ್ ಬಗ್ಗೆ ಸ್ವಲ್ಪ ನಂಬಿಕೆ ಬಂದಿದ್ದು! ಆದ್ರೆ, ಹಿಂದಿನ ದಿನ ಟೀವೀಲಿ ಕಂಡಿದ್ದ ಆ ಕೇಡಿ ರೇಪಿಸ್ಟ್ ಈ ರೈಲ್ವೆ ಸ್ಟೇಷನ್ನಲ್ಲೆಲ್ಲಾದ್ರು ಹೊಂಚುಹಾಕೊಂಡಿರಬಹುದಾ? ಅನ್ನೋ ಆತಂಕ ಮತ್ತೆ ಬಿಗಿಯಾಗಿ ಉಸಿರುಗಟ್ಟಿಸುವಂತೆ ಆವರಿಸಿಕೊಳ್ಳತೊಡಗಿತ್ತು! ಅಂತೂ ಆ ಟ್ರೇಯ್ನು ನನ್ನನ್ನೂ, ನನ್ನ ಪ್ರೀತಿಯ ಬ್ಯಾಗನ್ನೂ, ನನ್ನ ದುಗುಡ, ಆತಂಕಗಳನ್ನೂ ಇಡಿಯಾಗಿ ದಾವಣಗೆರೆವರೆಗೂ ತಲುಪಿಸಿತು...

   ಪ್ರಯಾಣ ಅನ್ನೋದು ಎಷ್ಟು ಚೇತೋಹಾರಿ! ಹೊಸಜನ, ಹೊಸಜಾಗ ಕಾಣೋದು-ತಿಳಿಯೋದು ಎಷ್ಟ್ ಚೆಂದ! ಅಂತೆಲ್ಲ ಹಾರಾಡುತ್ತಿದ್ದೋಳ ರೆಕ್ಕೆಗಳು ಎಲ್ಲಿ ಕಳೆದುಹೋದವು?! ಆ ಉತ್ಸಾಹದ ಬದಲು ಈ ಆತಂಕ ಜಾಗಪಡೆದಿದ್ದು ಹೇಗೆ? ದಾರಿಹೋಕರೆಲ್ಲ ಕಳ್ಳರಹಾಗೆ, ರೇಪಿಸ್ಟ್ ಗಳ ಹಾಗೆ ಕಾಣೋಕೆ ಶುರುವಾಗಿದ್ಯಾಕೆ? ಆಟೋ ಹತ್ತೋಕೆ ಮುಂಚೆ, ಎಟಿಎಮ್ ಹೊಕ್ಕೋಕೆ ಮುಂಚೆ ಇಪ್ಪತ್ತು ಸರ್ತಿ ಯೋಚಿಸೋಹಾಗೆ ಆಗಿರೋದ್ಯಾಕೆ? ರೆಕ್ಕೆಗಳನ್ನು ಕಳಚಿಟ್ಟು, ಮರೆತುಬಿಟ್ಟಂತೆ ಹೀಗೆಲ್ಲಾ ನಾನು ಬದಲಾದದ್ದಾದರೂ ಯಾಕೆ?...   ಸ್ವಾತಂತ್ರ್ಯ, ಐಡೆಂಟಿಟಿ, ಸೇಫ಼್ಟಿ - ಇವಕ್ಕೆಲ್ಲ ಇರಬಹುದಾದ ವ್ಯಾಖ್ಯಾನಗಳನ್ನು ಬಹುಷಃ ಇಂಥಾ ಆತಂಕ, ತಲ್ಲಣ, ದಿಗಿಲುಗಳ ಒಳಹರಿವಿನಲ್ಲೇ ಕಟ್ಟಿಕೊಳ್ಳಬೇಕಾಗಿದೆ! 'ನಾನು' ಅಂದರೆ ಕೇವಲ ಸುಂದರ ಕನಸುಗಳ ಮೂಟೆಯಷ್ಟೇ ಅಲ್ಲ ; ಆ ಕನಸುಗಳ ಸುತ್ತ ಕಾವಲುಪಡೆಯಂತೆ ನಿಲ್ಲಬೇಕಾದ ಎಚ್ಚರದ ವೇದನೆಯೂ ಆಗಬೇಕಿದೆ!

   ....ಆ ಭೇಟಿಯ ನಂತರ ಮತ್ತೆ ಮೈಸೂರಿಗೆ ಮರಳುವ ಹಾದಿಯಲ್ಲಿ ನನ್ನ ಕಣ್ಣು-ಕಿವಿ-ಮನಸನ್ನೆಲ್ಲ ಇಡಿಯಾಗಿ ಆವರಿಸಿಕೊಂಡಿದ್ದುದು ಆ ಸುಂದರಿ ಅಜ್ಜಿಯ ಗುಂಗು... ನಗು, ಬೆರಗು, ಶುದ್ಧ ಸಂಭ್ರಮದ ಬೆಡಗು. ದೇವದಾಸಿಯಾಗಿದ್ದವಳು ಆಕೆ ... ನೋವು, ಸಂಕಟ, ರೋಷ, ಕಿಚ್ಚು , ಪ್ರೀತಿ - ಎಲ್ಲವನ್ನೂ ಬಸಿದು ಎದೆಯ ಹಾಡಾಗಿಸಿಕೊಂಡವಳು,... ಕಂಬನಿಯನೆಣ್ಣೆಯಾಗಿಸಿ ಕಣ್ಣದೊಂದಿ ಹೊತ್ತಿಸಿಕೊಂಡವಳು... ಅವಳೇ ನನ್ನೊಳಗಿಳಿದು ಕೂತಿದ್ದರಿಂದಲೋ ಏನೋ ನನಗೆ ಅಕ್ಕಪಕ್ಕದ ಸೀಟಿನ ಗಂಡಸರ್ಯಾರೂ ಕಾಣಲೇ ಇಲ್ಲ...!!

 ಚಿತ್ರ - ಇಂಟರ್ನೆಟ್ ಮೂಲ


   ('ಹೊಸ ಮನುಷ್ಯ' ಮಾಸ ಪತ್ರಿಕೆಯ 'ಸಮಾಜವಾದಿ ಯುವ ಚಿಂತನ ವೇದಿಕೆ'ಯಲ್ಲಿ ಪ್ರಕಟಿತ - ಡಿಸೆಂಬರ್, ೨೦೧೪ )
ಮಂಗಳವಾರ, ಮಾರ್ಚ್ 11, 2014

ಸ್ವಾತಂತ್ರ್ಯದ ಬಾವುಟಕ್ಕೆ ಇವಳ ಹೆಸರಿಡಬೇಕು

ಚಿತ್ರಗಳು : ಚರಿತಾ

'ಹ್ಯಾಪಿ ವಿಮೆನ್ಸ್ ಡೆ ಅಕ್ಕಾ'
ಊರಿಗೆ ಮುಂಚೆ ಫೋನ್ ಮಾಡಿ ಹೇಳಿದ್ಲು ರೇಣುಕ.
'ವಿಷ್ ಯು ದ ಸೇಮ್. ಹೇಗಿದೀಯ?' ಅಂತ ತಣ್ಣಗೆ ಕೇಳಿದೆ. 'ಅಕ್ಕ ತುಂಬ ಮಾತಾಡ್ಬೇಕು, ಮಂಡೆ ಸಿಕ್ತೀನಿ' ಅಂದ್ಲು.
ಇದೇ ರೇಣು ಮೊನ್ನೆ ಮೆಸೇಜ್ ಮಾಡಿ, 'ಬ್ರೇಕಪ್ ಆಯ್ತು, ಅಪ್ಸೆಟ್ ಆಗಿದೀನಿ' ಅಂದಾಗ, 'ವಾವ್! ಕಂಗ್ರ್ಯಾಜುಲೇಷನ್ಸ್ ರೇಣು, ಇವತ್ತು ಒಂದೆರಡು ಚಾಕ್ಲೇಟ್ಸ್ ಜಾಸ್ತಿನೆ ತಿನ್ನು ಪರ್ವಾಯಿಲ್ಲ. ನಿಜಕ್ಕು ಸೆಲೆಬ್ರೇಟ್ ಮಾಡ್ಬೇಕು ಈ ದಿನ' ಅಂತ ಹೇಳ್ಬೇಕು ಅನಿಸಿದ್ರೂ, 'ಹೌದೇನೆ? ಸಿಕ್ಕು, ಮಾತಾಡೋಣ, ಟೇಕ್ ಕೇರ್' ಅಂತಷ್ಟೆ ರಿಪ್ಲೈ ಮಾಡಿ ಸುಮ್ಮನಾದೆ.

   ಈ ರೇಣು ನಮ್ಮ ಡಿಪಾರ್ಟ್ಮೆಂಟಿನ 'ಮೋಸ್ಟ್ ಸ್ಟೈಲಿಷ್' ಹುಡುಗಿ. ಒಳ್ಳೆ ಹುಡುಗಿ ಕೂಡ. ಕ್ಯಾಡ್ಬರೀಸ್ ಎಕ್ಲೇರ್ ಬಣ್ಣದ ಇವಳಿಗೆ ನೆಸ್ಲೆ ಮಿಲ್ಕಿಬಾರ್ ಥರದ ಫೇರ್ ಬಾಯ್ ಫ್ರೆಂಡ್ ಇದ್ದಾನೆ ಅನ್ನುವ ಒಂಥರದ ಜಂಭ. ('ಇದ್ದಾನೆ' ಅನ್ನೋದು ಈಗ 'ಇದ್ದ' ಆಗಿರಬಹುದು. ವರ್ತಮಾನ-ಭೂತಕಾಲಗಳು ಈ ವಿಷಯದಲ್ಲಿ ಆಗಾಗ ಎಕ್ಸ್ಛೇಂಜ್ ಆಗ್ತಿರ್ತವೆ!)

   ಮೂರ್ಹೊತ್ತು ಚಾಕ್ಲೇಟ್ ತಿನ್ನುವ ಖಯಾಲಿಯ ಇವಳಿಗಾಗಿಯೇ ಈಗೀಗ ನನ್ನ ಬ್ಯಾಗಲ್ಲಿ 'ಚಾಕ್ಲೇಟ್ ಪಾಕೆಟ್' ಕಡ್ಡಾಯ ಆಗ್ಬಿಟ್ಟಿದೆ. ಉಕ್ಕುವ ಉತ್ಸಾಹ ಅದುಮಿಟ್ಟು, ತಲೆತುಂಬ ಸುಳ್ಳು ಗಾಂಭೀರ್ಯ ಹೊತ್ತು ತಿರುಗುವ ಪೋರಿ. ಅರ್ಧ ನಗೆ ನಕ್ಕು, ಹೌದು-ಇಲ್ಲ-ಓಕೆ-ಬೈ ಅಂತಷ್ಟೆ ಚುಟುಕಾಗಿ ಮಾತು ಮುಗಿಸಿ, ತನ್ನ ಛೇಂಬರಲ್ಲೆ ಮುಕ್ಕಾಲು ದಿನ ಕಳೆದುಬಿಡುವಾಕೆ. ಅವಳು ಧರಿಸುವ ಸಲ್ವಾರ್ ಕಮೀಝ್ ಕೂಡ ಹಾಗೇ- ಹೇಳದೆ ಉಳಿದುಹೋದ ಮಾತುಗಳ ಭಾರದಿಂದಲೇ ಗಾಢಬಣ್ಣ ಪಡೆದಿದೆಯೇನೊ ಎಂಬಂತೆ.. ಅವಳ ನಗುವನ್ನೆಲ್ಲ ಅನಾಮತ್ತಾಗಿ ಕಸಿದುಕೊಂಡಂತಿರುವ ಕಡುಗಪ್ಪು ಛಾಯೆಯ ದುಪಟ್ಟ.. ವಾರಕ್ಕೊಮ್ಮೆ ಬದಲಾಗುವ ಅವಳ ನೇಲ್ ಕಲರ್ ಕೂಡ ನೇರಳೆ, ನೀಲಿ, ಹಸಿರು, ಕಪ್ಪು,.. 'ಲೈಟ್ ಕಲರ್ ಹಾಕೊಂಡ್ರೆ ನನ್ನ ಕೈ ಇನ್ನೂ ಕಪ್ಪಾಗಿ ಕಾಣುತ್ತೆ' ಅಂತಾಳೆ. 

   ಇಂಥ ಈ ಕರಿಸುಂದರಿ ನನಗೆ ಪರಿಚಯವಾದ ಹೊಸತರಲ್ಲಿ ಒಮ್ಮೆ, ದೊಡ್ಡ ಸಂಭ್ರಮ ತೆರೆದಿಟ್ಟಹಾಗೆ ಲ್ಯಾಪ್ ಟಾಪಲ್ಲಿ ಅವಳ ಗೆಳೆಯನ ಫೋಟೋಗಳನ್ನು ತೋರಿಸಿದ್ಲು. 'ಹ್ಮ್....ಹ್ಯಾಂಡ್ಸಮ್' ಅಂತ್ಹೇಳಿ, ಅವಳನ್ನು ದಿಟ್ಟಿಸಿದ್ದೆ. 'ಅಯ್ಯೊ ಬಿಡಕ್ಕ, ಅವ್ನ ಮುಂದೇನಾದ್ರು ಹೀಗಂದ್ರೆ ಮತ್ತೆರಡು ಕೋಡು ಬಂದ್ಬಿಡತ್ತೆ ಅಷ್ಟೆ' ಅಂತ ಮುದ್ಮುದ್ದಾಗಿ, ಖುಶಿಯಿಂದ ನಾಚಿಕೊಳ್ತ ಹೇಳಿದ್ಲು. ಬಹುಷಃ ಅವಳ ಪಾಲಿನ ದೊಡ್ಡ ಸಂಭ್ರಮ ಅಂದ್ರೆ - ಈ ಫೇರ್ ಹುಡುಗನ ಜೊತೆಗಿನ ಅಫೇರ್!

   ಇವನ 'ಅನ್ ಫೇರ್‍' ನಡತೆಯ ಬಗ್ಗೆ ನನಗೆ ಆಮೇಲೆ ತಿಳಿದಿತ್ತು. ಇವಳು ಮೂರ್ಹೊತ್ತು ಗೂಬೆಮುಖ ಹಾಕೊಳ್ಳೋದು ಯಾಕೆ ಅಂತ್ಲು ಗೊತ್ತಾಗಿತ್ತು. ಯಾವುದೇ ಕ್ಯಾಂಪ್, ವರ್ಕ್ ಶಾಪ್, ಸೆಮಿನಾರ್, ಟೂರ್ ಮುಗಿಸಿ ಬಂದವಳಿಗೆ ಇವನ ಜೊತೆಗಿನ ಎನ್ಕೌಂಟರ್ ಕಡ್ಡಾಯ!
ಎಲ್ಲೆಲ್ಲಿ ಸುತ್ತಾಡ್ದೆ? ಜೊತೆಗೆ ಯಾರ್ಯಾರಿದ್ರು? ನೀನು ಅಕ್ಕನ ಜೊತೆಗೇ ಇದ್ದೆ ಅಂತ ಏನ್ ಗ್ಯಾರಂಟಿ? ಯಾರ್‍ಯಾರ್ಜೊತೆ ಎಷ್ಟ್ ಹರಟೆ ಕೊಚ್ದೆ? ಎಷ್ಟಗಲ ಹಲ್ಕಿರಿದೆ? ಎಷ್ಟ್ ದೂರ ಕೂತಿದ್ದೆ... ???

'ಇವತ್ತು ತುಂಬ ಅತ್ಬಿಟ್ಟೆಕ್ಕ..' ಮತ್ತೆ ಇವಳ ಅದೇ ಹಳೆ ಗೋಳು.
'ಬಿಟ್ಹಾಕೆ ಅತ್ಲಾಗೆ' ಅಂತ ರೋಸಿಹೋಗಿದ್ದೆ ನಾನು. 'ಇಲ್ಲಕ್ಕ, ಈ ಸಲ ನಾನು ಕಾಂಪ್ರಮೈಸ್ ಆಗಲ್ಲ, ಹೇಳೇಬಿಡ್ತೀನಿ' ಅಂತ ಮೂಗೆಳೆದುಕೊಂಡು ಹೋದವಳು, ಎರಡು ದಿನ ಕಳೆದು 'ಅಕ್ಕಾ, ಪಾ..ಪ ಕಣಕ್ಕ ಅವ್ನು, ಒಳ್ಳೇವ್ನು.' ರಾಗ ಎಳೆಯುತ್ತ ರಿಪೋರ್ಟ್ ಕೊಟ್ಟಿದ್ಲು! ಇದ್ಯಾವ್ದೊ 'ಗಿಫ್ಟ್ ಎಫೆಕ್ಟ್' ಇರ್ಬೇಕು ಅನಿಸಿ, ನಿಟ್ಟುಸಿರು ಬಿಟ್ಟು ಸುಮ್ಮನಾಗಿದ್ದೆ.
ಈಗ ಈ ಲೇಟೆಸ್ಟ್ 'ಬ್ರೇಕಿಂಗ್' ನ್ಯೂಸ್ ಕೂಡ ಒಂದೆರಡು ದಿನದಲ್ಲಿ ಸುಳ್ಳಾಗುವ ಸಾಧ್ಯತೆ ಇದ್ದೇ ಇದೆ!

   ಪ್ರತಿಯೊಂದಕ್ಕು ಅವನ ಅಪ್ಪಣೆಯ ಕೃಪೆಗೆ ಕಾದುನಿಲ್ಲುವ ಇವಳ ದೈನೇಸಿ ಸ್ಥಿತಿಗೆ ಎಷ್ಟಂತ ಮರುಗಲಿ? ಅವನು ಕೊಡಿಸಿರಬಹುದಾದ ಚಾಕ್ಲೇಟುಗಳ ಋಣಭಾರ ಅದೆಷ್ಟಿದೆಯೋ ಏನೊ !!


ಇನ್ನು ಈ ಜಯಂತಿಯ ಕಥೆ ಮತ್ತೊಂದು ಥರದ್ದು. ಹೊರರಾಜ್ಯದ ಒಂದು ಸಣ್ಣ ಹಳ್ಳಿಯಿಂದ ಮೈಸೂರಿಗೆ ಬಂದು, ಹಲವು ವರ್ಷಗಳಿಂದ ಇಲ್ಲೇ ಕೆಲಸ ಮಾಡುತ್ತಿರುವಾಕೆ. ಕೆಳಮಧ್ಯಮ ಕುಟುಂಬದ, ಹಲವು ಅಕ್ಕ ತಮ್ಮಂದಿರ ಜೊತೆಯವಳು. ವಯಸ್ಸಾದ ಅಪ್ಪ ಅಮ್ಮನ ಹೆಮ್ಮೆಯ ಮಗಳು. ಸರಳ, ಪ್ರಾಮಾಣಿಕ, ನೇರ ನಡತೆಯ ಹುಡುಗಿ. ತನ್ನ ಪ್ರಾಜೆಕ್ಟ್ ವರ್ಕ್ ಕಾರಣಕ್ಕೆ ಹಲವು ಊರು-ಜನ ಕಂಡಾಕೆ. ಅವಳು ಮೈಸೂರನ್ನು ಮೆಚ್ಚಿ ಮಾತಾಡಿದಾಗೆಲ್ಲ, 'ಇಲ್ಲೆ ಹುಡುಗ ಹುಡುಕ್ಕೊಂಡು ಸೆಟ್ಲ್ ಆಗ್ಬಿಡು ಜಯ' ಅಂತ ಎಷ್ಟೊ ಸಲ ತಮಾಷೆಗೊ, ಸೀರಿಯಸ್ಸಾಗೊ ನಾನು ಹೇಳಿದ್ದಿದೆ. ಆದ್ರೆ ಅವಳ ಲೆಕ್ಕಾಚಾರ ದಿಲ್ಲಿತನಕ ತಲುಪಿದೆ! ದೊಡ್ಡ ಕನಸಿನ ಹುಡುಗಿ!

   ಇವಳಿಗೆ ಒಂದು 'ಮಿಸ್ಡ್ ಕಾಲ್' ಮೂಲಕ ಪರಿಚಯವಾಗಿದ್ದು ದಿಲ್ಲಿ ಮೂಲದ ಬೆಂಗಳೂರಿನ ಯುವಕ. ಆರಡಿ ಎತ್ತರ, ಜಿಮ್ ಬಾಡಿ, ಹೈ-ಫೈ ಲುಕ್, ಸಾಫ್ಟ್ವೇರ್ ಕಂಪನಿಯಲ್ಲಿ ಪಾರ್ಟೈಂ ಕೆಲಸ. ಈಕೆಗಿಂತ ಏಳೆಂಟು ವರ್ಷ ಚಿಕ್ಕವ. ಇವಳ ಹೊಸ ಗೆಳೆತನದ ಹಿನ್ನೆಲೆ ಕೇಳಿಯೇ ದಿಗಿಲಾಗಿತ್ತು ನನಗೆ. ಈ ಸೀದಾಸಾದಾ ಜಾಜಿ ಹೂವಿನಂಥ ಹುಡುಗಿಗೂ, ಆ ಯಂತ್ರಮಾನವನಂಥ ಅವನಿಗೂ ಎಲ್ಲಿಂದೆಲ್ಲಿಯ ಸಂಬಂಧವಯ್ಯಾ? ಅನಿಸಿತ್ತು. ನನಗೇನನಿಸಿ ಏನಾಗಬೇಕಿತ್ತು?!
ಒಂದಿನ ಸಿಕ್ಕವಳು, '..ಹಿ ಪ್ರೊಪೋಸ್ಡ್ ಮಿ..' ಅಂತ ಪಿಂಕ್ಪಿಂಕಾಗಿ ತೊದಲಿದ್ದಳು. ಆಶ್ಚರ್ಯ ಏನಾಗಲಿಲ್ಲ.

   ಏನೇನೂ ಸಾಲದ ಇವಳ 'ಸೆನ್ಸ್ ಆಫ್ ಬ್ಯೂಟಿ', 'ಫ್ಯಾಷನ್ ಕಾನ್ಷಸ್ನೆಸ್' ಬಗ್ಗೆ ಆತ ಬೇರೆ ಹುಡುಗಿಯರ ಉದಾಹರಣೆ ಕೊಡುತ್ತ ಹಂಗಿಸುವ ಧಾಟಿಯಲ್ಲಿ ಲೆಕ್ಚರ್ ಬಿಗಿದಾಗೆಲ್ಲ ಮುದುಡಿಹೋಗುತ್ತಿದ್ದವಳು ಈಗ ಬದಲಾಗಿದ್ದಾಳೆ. ತಿಂಗಳಿಗೊಮ್ಮೆ ಐಬ್ರೊ, ಫೇಶಿಯಲ್, ಹೇರ್ ಸ್ಪಾ,.. ಅರ್ಧ ಡಝನ್ ಡಿಸೈನರ್ ಫುಟ್ ವೇರ್, ಮ್ಯಾಚಿಂಗ್ ಜೀನ್ಸ್, ವಾರಕ್ಕೊಂದು ಬ್ಯೂಟಿ ಸೋಪು, ಬಾಡಿ ಲೋಶನ್ನು.. ಎಟ್ಸೆಟ್ರಾ ಎಟ್ಸೆಟ್ರ..
   ಮುಖದ ಮೇಲೆ ಬೀಳುವ ಕೂದಲನ್ನು ಎರಡೇ ಬೆರಳಲ್ಲಿ ಪಕ್ಕಕ್ಕೆ ಸರಿಸುತ್ತ, ನಾಲ್ಕೇ ಹಲ್ಲು ಕಾಣುವಂತೆ ನಗುವುದು ಕಲಿತಿದ್ದಾಳೆ. ಇವಳ ಕಣ್ಣಿಗೆ ಸ್ಟೈಲಾಗಿ ಕಾಣುವ ಹುಡುಗಿಯರ ಹಾವಭಾವ ಗಮನಿಸುವುದು ಈಗ ಅವಳ ಹೊಸ 'ಹಾಬಿ'.
'ಅವನು' ಈಗ 'ಅವರು' ಆಗಿ ಬಡ್ತಿ ಪಡೆದಿದೆ. ಅವಳ ಭಾಷೆಯೂ 'ಸುಧಾರಿಸಿದೆ'!
'ಅವರ ಅಪ್ಪ ಅಮ್ಮನ ಮುಂದೆ ಹೋಗು-ಬಾ ಅಂದ್ರೆ ಅವರಿಗೆ ಇಷ್ಟ ಆಗಲ್ವಂತೆ'. ಅಂತಾಳೆ.
'ಏನೇ ಇದು ನಿನ್ ಕತೇ..?' ಅಂದ್ರೆ, ಅವಳ ಕನಸುಕಂಗಳ ನೆರಳಲ್ಲಿ ನಗು ಉಯ್ಯಾಲೆಯಾಡುತ್ತೆ!   ಪ್ರತಿದಿನದ ಅವನ ಏರುದನಿಯ ಹೊಸ ಕಂಪ್ಲೇಂಟುಗಳಿಗೆ ಸಮಜಾಯಿಷಿ ಕೊಡುತ್ತ, ಕನಸುಗಳಿಂದ ಕಡಪಡೆದ ಬಣ್ಣದ ಮಾತು ಪೋಣಿಸುತ್ತ, ತನ್ನ ದಣಿವು ಕೂಡ ತನಗೆ ತಿಳಿದೇ ಇಲ್ಲವೇನೊ ಎಂಬಂತೆ ಕಷ್ಟಪಟ್ಟು ನಗುತ್ತ ದಿನಕಳೆದು, ಮತ್ತೆ ಕನಸಿನ ಗುಂಗಿಗೆ ಜಾರುತ್ತಾಳೆ ಹುಡುಗಿ.. ಅವಳ ಮೆಹೆಂದಿ ಕೈಯಲ್ಲೀಗ ಅವನ ಹೆಸರಿನ ಡಿಸೈನು.. ಶಾಪಿಂಗ್ ಹೋದ್ರೆ ಅವಳಿಗೆ ಕಾಣೋದು ಎಳೆ ಮಕ್ಕಳ ಬಣ್ಣದ ಫ್ರಾಕು, ಪುಟ್ಟ ಕಾಲಿನ ಶೂಗಳು, 'ಛೋಟಾ ಭೀಮ್' ಆಟಿಕೆಗಳು..

   'ಅಲ್ಲ ಜಯಾ, ಮದುವೆ ಆದ್ಮೇಲೆ ನಿಜಕ್ಕು ನಿನ್ನ ಫ್ರೀಡಂ ಉಳಿಯುತ್ತ? ನಮ್ಮ ಯೋಚನೆ, ಅಭಿವ್ಯಕ್ತಿ, ಆಯ್ಕೆ ಯಾವುದರ ಸ್ವಾತಂತ್ರ್ಯವೂ ಇಲ್ಲದೆ ಬದುಕುವುದೂ ಒಂದು ಬದುಕು ಅನಿಸಿಕೊಳ್ಳುತ್ತ? ಈ ಬಗ್ಗೆ ಮತ್ತೆ ನೂರು ಸಲ ಯೋಚಿಸು' ಎಂದಷ್ಟೆ ಹೇಳಲು ಸಾಧ್ಯವಾಗಿದ್ದು ನನಗೆ.

   'ಮದುವೆ ಅಂತ ಆದ್ಮೇಲೆ ಯಾವ ಥರದ ಬದುಕಾದರೂ ಒಪ್ಪಿಕೊಳ್ಳಲೇಬೇಕಲ್ಲ?! ನನಗು ವಯಸ್ಸು ಮೀರುತ್ತಿದೆ. ಅಪ್ಪ ಹುಡುಕುವ ವರ ಎಂಥವನೋ ಏನೊ, ಇವನನ್ನು ಹಲವು ವರ್ಷಗಳಿಂದ ಕಂಡಿದ್ದೀನಿ, ಸೈರಿಸಿದ್ದೀನಿ. ನಾನು ಡಿಸೈಡ್ ಮಾಡ್ಬಿಟ್ಟಿದೀನಿ ಕಣೆ.. ಮದುವೆ ಆದ್ಮೇಲೆ ಆರಾಮಾಗಿ ಮನೇಲಿದ್ದುಬಿಡ್ತೀನಿ. ಈ ಕೆಲಸಗಳ ಜಂಜಾಟ ನನಗೂ ಸಾಕಾಗಿಹೋಗಿದೆ..' ನಿರಾಳವಾಗಿ, ಒಂದೇ ಉಸಿರಲ್ಲಿ ಹೇಳಿದ್ಲು.

   ತನ್ನ ಮನೆ, ಊರು, ಅಪ್ಪ-ಅಮ್ಮ ಎಲ್ಲರಿಂದ ದೂರ ಒಂಟಿಯಾಗಿದ್ದುಕೊಂಡು, ತನ್ನ ಪಾಲಿನ ಕೆಲಸ ಶ್ರದ್ಧೆಯಿಂದ ಮಾಡುತ್ತ, ಅಷ್ಟಿಷ್ಟು ಮಹತ್ವಾಕಾಂಕ್ಷೆ ಇಟ್ಟುಕೊಂಡಂತೆ ಕಂಡಿದ್ದವಳು. ತನ್ನಿಷ್ಟದ ಹಸಿರು ಬಣ್ಣದ್ದೇ ಸೈಡ್ ಬ್ಯಾಗು, ಆವತ್ತು ಕಂಡಿದ್ದ ಅದೇ ಡಿಸೈನಿನ ಚಪ್ಪಲಿ, ಇಂಥದ್ದೇ ಬ್ರ್ಯಾಂಡಿನ ಹೇರ್ ಆಯಿಲ್, ಸ್ಕಿನ್ಗೆ ಸೂಟ್ ಆಗುವಂಥದ್ದೇ ಮಾಯಿಸ್ಚರೈಸರ್... ಹೀಗೆ ಎಲ್ಲವನ್ನೂ ಮೈಸೂರಿನ ಉದ್ದಗಲ ಅಲೆದು, ಹಟಮಾರಿಯಂತೆ ಹುಡುಕಿಯೇ ಪಡೆಯುತ್ತಿದ್ದ ದಿಲ್ದಾರ್ ಹುಡುಗಿ. ಸ್ವಾತಂತ್ರ್ಯದ ಬಾವುಟಕ್ಕೆ ಇವಳ ಹೆಸರನ್ನೇ ಇಡಬೇಕು ಅಂತ ನನಗೆ ಎಷ್ಟೋ ಸಲ ಅನಿಸಿತ್ತು! ನಿಜಕ್ಕು ಸ್ವಾಂತಂತ್ರ್ಯದ ರುಚಿ ಕಂಡಂತಿದ್ದ ಇವಳು ಇನ್ನು ಕೆಲವು ವರ್ಷಗಳ ನಂತರ ಹೇಗಿರಬಹುದೆಂದು ಊಹಿಸಲು ಯಾಕೊ ಹಿಂಜರಿಕೆ ನನಗೆ..

   ನಾನೇನು ಇವರಿಗಿಂತ ಕಮ್ಮಿಯಿಲ್ಲ! ಈ ವಿಷಯದಲ್ಲಿ ಇವರ ಸೀನಿಯರ್! ತಲೆಕೆಳಗಾಗಿ ಡುಮ್ಕಿ ಹೊಡೆದರೂ, ಪ್ರಪಾತಕ್ಕೆ ಬೀಳದೆ, ಮತ್ತೆ ರೆಕ್ಕೆಗಳನ್ನು ಚಿಗುರಿಸಿಕೊಂಡು ನಿಟ್ಟುಸಿರು ಬಿಟ್ಟಿದ್ದೀನಿ! ಮೂರ್ಖತನದ ಆಯ್ಕೆಯಿಂದ ಪಟ್ಟ ಸಂಕಟ, ಕಲಿತ ಪಾಠ, ಪಡೆದ ಎಚ್ಚರ - ನನ್ನ ಸ್ವಾತಂತ್ರ್ಯವೇ ನನ್ನ ಐಡೆಂಟಿಟಿ ಎಂಬುದನ್ನು ನನಗೆ ಮತ್ತೆ ಮತ್ತೆ ನೆನಪಿಸುತ್ತೆ. ಜೀವನ ಕಸಿಯುವ ಸಾಂಗತ್ಯ ನನ್ನ ಆಯ್ಕೆಯಲ್ಲ ಎಂಬ ಸ್ಪಷ್ಟತೆ ಈಗ ನನ್ನಲ್ಲಿದೆ.

   ಸಂಗಾತಿಯ ಆಯ್ಕೆ ಹೀಗೆ ಹಾದಿತಪ್ಪವುದು ಯಾಕೆ?
ಇಂಥ ಅತಿರೇಕದ ಮೂರ್ಖತನಕ್ಕೆ ಬಲಿಯಾಗುವುದರ ಹಿಂದಿನ ಮನಸ್ಥಿತಿ ಎಂಥದ್ದು?
ತಮ್ಮ ಜೀನ್ಸ್, ಹೇರ್ ಬ್ಯಾಂಡ್, ಸ್ಲಿಪ್ಪರ್, ವಾಚ್ - ಎಲ್ಲವನ್ನು ಮ್ಯಾಚ್ ಮಾಡಿಯೇ ಹೊಂದಿಸಿಕೊಳ್ಳುವ ಹುಡುಗಿಯರು ಸಂಗಾತಿಯ ಆಯ್ಕೆಯಲ್ಲಿ ಯಾಕೆ 'ಮಿಸ್ ಮ್ಯಾಚ್' ಮಾಡಿಕೊಳ್ತಾರೆ?
ಈ ಮಾಡರ್ನಾಗಿ ಕಾಣುವ ಹುಡ್ಗೀರ ತಲೆ ಮಾತ್ರ ಯಾಕೆ ಹಳೆ ಮ್ಯೂಸಿಯಂನ ನಿಂತುಹೋದ ಗಡಿಯಾರದಂತಿರುತ್ತೆ?! ..

   ಈ 'ಯಾಕೆ'ಗಳಿಗೆ ಅವರವರೇ ಉತ್ತರ ಕಂಡುಕೊಳ್ಳಬೇಕು! ಹೀಗೆ ಗಾಳಿಪಟದಂತೆ ವಾಲಾಡುತ್ತಿರುವ ಹುಡುಗಿಯರೆಲ್ಲರಿಗೂ ರೆಕ್ಕೆ ಹುಟ್ಟಲಿ ! ನಮ್ಮೆಲ್ಲರ ಒಳಗೆಲ್ಲೊ ಅಡಗಿರುವ ಅಕ್ಕನ ಕಿಚ್ಚು ನಮ್ಮಗಳ ದಾರಿದೀವಿಗೆಯಾಗುವಷ್ಟಾದರೂ ಉರಿಯಲಿ!

ಪ್ರತಿದಿನವೂ 'ಹ್ಯಾಪಿ ವಿಮೆನ್ಸ್ ಡೆ' ಆಗಲಿ !!ಬುಧವಾರ, ಜುಲೈ 17, 2013

ಮನೆಯಂಗಳದ ರಾಜಕುಮಾರಿ

ಛಾಯಾಚಿತ್ರ : ಚರಿತಾ


        ಕ್ವಾಟರ್ಸ್ ಮನೆಯಲ್ಲಿ, ಬೆಡ್ ರೂಂ ಕಿಟಕಿಯ ತುಂಬ ಕಾಣುತ್ತಿದ್ದದ್ದು ಈ ಮರ. ಇದರ ರೆಂಬೆಕೊಂಬೆಗಳು ಹರಡಿದ್ದಷ್ಟಗಲವೂ ಇದರದ್ದೇ ಜಾಗ. ಉಯ್ಯಾಲೆ ತೂಗಲೆಂದೇ ಇದ್ದ ಗಟ್ಟಿರಟ್ಟೆಯಂಥ ರೆಂಬೆಯ ಅಷ್ಟಗಲ ಮಾತ್ರ ಸವೆದು, ನುಣ್ಣಗೆ ಹೊಳಪಾಗಿತ್ತು. ಉಳಿದ ಮೈಯೆಲ್ಲ ಒರಟು. ನಾವು ಸುಲಭವಾಗಿ ಹತ್ತಿಳಿಯಲು ತಕ್ಕನಾಗಿದ್ದ ಮರ. ಮನೆತುಂಬ ಇರುತ್ತಿದ್ದ ನೆಂಟರು, ಪರಿಚಿತರ ಕಣ್ತಪ್ಪಿಸಿ ನಾನಿರುತ್ತಿದ್ದದ್ದು ಈ ಮರದ ನೆರಳಲ್ಲೇ. ಉಯ್ಯಾಲೆ ಜೀಕುತ್ತ ಅದು ಹೊರಡಿಸುತ್ತಿದ್ದ ಸಣ್ಣ ಸದ್ದು, ಕಥೆ ಹೇಳುತ್ತಿದ್ದ ನನ್ನಮ್ಮನ ದನಿಯಂತೆಯೇ ಕೇಳುತ್ತಿತ್ತು. ರಾತ್ರಿ ಆಕಳಿಸಿದಾಗೆಲ್ಲ ಇಷ್ಟಿಷ್ಟು ಉದುರಿದ್ದ ಪರಿಮಳದ ಮರಿಗಳು ಬೆಳಗಿನ ಜಾವದ ಇಬ್ಬನಿಯಲ್ಲಿ ಮಿಸುಕಾಡುತ್ತ ತಿಳೀ ಬೆಳಕಿಗೆ ಕಣ್ಬಿಡುವ ಹೊತ್ತಿಗೆ ಸರಿಯಾಗಿ ನಾನೂ ಅಲ್ಲಿದ್ದೆ. ಆವತ್ತು ಸ್ವಲ್ಪ ಆತುರದಲ್ಲೇ ಕೈಗೆ ಸಿಕ್ಕಷ್ಟು ಹೆಕ್ಕಿ, ಕವರಿಗೆ ತುಂಬಿಕೊಂಡು ಶಾಲೆ ಕಡೆಗೆ ಓಡಿದ್ದೆ. ಆಗಸ್ಟ್ ಹದಿನೈದರ ಬಾವುಟ ಮೇಲೆ ಹಾರಿ ಮೈಕೊಡವಿದಾಗ ಇದರದ್ದೇ ಪರಿಮಳ! ಎಷ್ಟು ಖುಶಿಯಾಗಿತ್ತು ನಂಗೆ!

       ಈಗ ಹೊಸ ಮನೆಗೆ ಹೆಸರಿಡುವ ಸರದಿ ಬಂದಾಗ ನಾನು ಸೂಚಿಸಿದ್ದು ಇದರದ್ದೇ ಹೆಸರು - 'ಪಾರಿಜಾತ'. ನಮ್ಮ ಮನೆಯಂಗಳದಲ್ಲಿ ಪ್ರೀತಿ ಚೆಲ್ಲುತ್ತ ನಿಂತಿರುವ ಪರಿಮಳದ ಪಾರಿಜಾತ. ಈ ಒಂದೊಂದೇ ಹೂವನ್ನು ಆಯುವುದು ನೀವಂದುಕೊಂಡಿರುವಷ್ಟು ಸುಲಭವಲ್ಲವೇ ಅಲ್ಲ. ಇದರ ಬಿಳಿಪಕಳೆಗಳಿಗೆ ಒಂಚೂರೂ ನೋವು ತಿಳಿಯದಹಾಗೆ ಆಯಬೇಕೆಂದರೆ, ನಿಮ್ಮ ಅಂಗೈಯ್ಯನ್ನು ಈ ಹೂವಿಗಿಂತಲೂ ಹಗುರ ಮಾಡಿಕೊಳ್ಳಬೇಕು! ಎಳೇಕೂಸಿನ ತುಟಿಯಂಥ ತೊಟ್ಟುಗಳಿಗೆ ಅಳುತಾಕದ ಹಾಗೆ ಎರಡೇ ಬೆರಳಲ್ಲಿ ಹಿಡಿದು, ಹಿಡಿದದ್ದು ನನಗೂ ತಿಳಿಯಲೇಯಿಲ್ಲವೇನೊ ಅನ್ನುವಹಾಗೆ ಒಂದೊಂದನ್ನೆ ಬಟ್ಟಲು ತುಂಬುವಷ್ಟರಲ್ಲಿ ಉಸಿರೇ ಅಂಗೈಗೆ ಬಂದು ಕುಳಿತಿರುತ್ತೆ! "ಉಹ್ಹ್ ಸಾಕಪ್ಪ" ಅಂತ ಸ್ವಲ್ಪ ಜೋರಾಗಿ ಉಸಿರೆಳೆದುಬಿಡುವಹಾಗಿಲ್ಲ... ಮತ್ತೆ ಅವುಗಳು ಪ್ಯಾರಾಶೂಟ್ ಥರ ಹಾರುತ್ತ, ಗರಿಕೆಗೆ ತಗುಲಿಕೊಳ್ಳಲು ಇಷ್ಟೇ ನೆಪ ಸಾಕು!ಛಾಯಾಚಿತ್ರ : ಚರಿತಾ

    
        ಇಂಥಾ ಸುಕುಮಾರಿಯನ್ನು ಮನೆತುಂಬಿಸಿಕೊಳ್ಳುವ ಆಟ ನನಗೂ ಇಷ್ಟ. ಅಮ್ಮ ಚಿಕ್ಕಹುಡುಗಿಯಾಗಿದ್ದಾಗ ಅದೇ ಬಿಳಿಪಿಂಗಾಣಿ ಬಟ್ಟಲಿನಲ್ಲಿ ಊಟ ಮಾಡುತ್ತಿದ್ದಿದ್ದಂತೆ. ಬಿಳಿ ಕಣಗಿಲೆ ಆಕಾರದ, ಸ್ವಲ್ಪ ಒಳತಗ್ಗಿರುವ ಅಂದದ ಬಟ್ಟಲು ಅದು. ಈಗ ನಮ್ಮಂಗಳದ ಸುಕುಮಾರಿಗೂ, ಅಮ್ಮನ ಈ ಕಣಗಿಲೆ ಬಟ್ಟಲಿಗೂ ಸ್ನೇಹ. ಮನೆತುಂಬ ಘಮ್ಮನೆ ಸಂಭ್ರಮಿಸುವ ಖುಶಿ! ಬಿಳಿಬಟ್ಟಲ ನೀರಿನಲ್ಲಿ ಬೆಳ್ಳಗೆ ನಗುತ್ತ, ಹರಟೆಕೊಚ್ಚಲು ಕುಳಿತುಬಿಡುವ ಪಾರಿಜಾತಕ್ಕೆ, "ಸಾಕು ಮಾರಾಯ್ತಿ. ಅದೆಷ್ಟು ನಗ್ತೀಯೆ ನೀನು" ಅಂತ ಮುದ್ದಿಂದ ಗದರುವ ತನಕ ಎಚ್ಚರ ಇರೋದಿಲ್ಲ. ಅಷ್ಟು ನಗುಪುರ್ಕಿ.  ಅಷ್ಟೇ ತರಲೆ ಕೂಡ. ನಾನು ಮನೆಯಿಂದ ಹೊರಹೋಗೋದಕ್ಕೆ ಅಂತ ಗೇಟ್ ತೆಗೆದರೆ ಈಷ್ಟಗಲ ಹರಡಿಕುಳಿತು, ಕಾಲಿಡಲೂ ಜಾಗ ಕೊಡದೆ ಸತಾಯಿಸುವ ಹುಡುಗಿ. ಎಲ್ಲಿ ತುಳಿದುಬಿಡ್ತೀನೊ ಅಂತ ಇಷ್ಟಿಷ್ಟೆ ತುದಿಗಾಲಲ್ಲಿ ಜಾಗಮಾಡಿಕೊಂಡು ಅಂಗಳದಾಟುವ ನನ್ನ ಪಾಡು ನೋಡಿ ಇವಳಿಗೆ ನಗುವೋ ನಗು!  

 ಹೀಗಿರುವ ಈ ಹರಟೆಮಲ್ಲಿಯ ಜನ್ಮಾಂತರದ ಒಂದು ಕಥೆ ಇದೆ. ನಾನು ಎಲ್ಲೋ ಓದಿದ್ದ ಒಂದು ವಿದೇಶೀ ಜಾನಪದ ಕಥೆ :
ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿಗೆ ಒಬ್ಬಳೇ ಮುದ್ದಾದ, ಸುಂದರಿ ರಾಜಕುಮಾರಿ. ಅವಳಿಗೆ ಒಮ್ಮೆ ಆ ಸೂರ್ಯನ ಮೇಲೆ ಮೋಹವುಂಟಾಯ್ತಂತೆ. ಅವನ ತೇಜಸ್ಸು, ಬಣ್ಣ, ಶಕ್ತಿಗೆ ಯಾರು ತಾನೆ ಮರುಳಾಗದವರು?! ಅವನಿಗೆ ತನ್ನ ಪ್ರೇಮ ನಿವೇದಿಸಿಕೊಂಡಿದ್ದೂ ಆಯ್ತು. ಆ ಸೂರ್ಯ ಅನ್ನೋ ಸೂರ್ಯನೂ ಅವಳ ಜೊತೆ ಸಾಕಷ್ಟು ಸಲುಗೆ ಬೆಳೆಸಿಕೊಂಡು, ಸರಿಯಾದ ಸಮಯನೋಡಿ 'ಟಾಟಾ' ಅಂದನಂತೆ. ಈ ರಾಜಕುಮಾರಿಯ ಗೋಳು ಕೇಳುವವರ್ಯಾರು?  ಸ್ವತಃ ಮಹಾರಾಜನೇ ಸೂರ್ಯನೆಂಬೋ ಸುಂದರಾಂಗನನ್ನು  ಬೇಡಿಕೊಂಡಾಗಲೂ ಆತ 'ಕ್ಯಾರೇ' ಅನ್ನಲಿಲ್ಲ. ಇತ್ತಕಡೆ ನಮ್ಮ ರಾಜಕುಮಾರಿಯ ಪಾಡು ದಿನೇದಿನೇ ಕೆಡುತ್ತಾ ಬಂತು. ಅನ್ನ-ನೀರು ಬಿಟ್ಟು, ನಿದ್ದೆ-ನಗು ಬಿಟ್ಟು, ಬಿಳುಚಿಕೊಂಡು, ಕೃಶಳಾಗಿ, ಕಡೆಗೊಂದು ದಿನ ಆ ಸುಕುಮಾರಿ ಸತ್ತೇಹೋದಳು ಪಾಪ! ಆಗ ಆ ಮಹಾರಾಜ ತನ್ನ ಮಗಳಿಗೆ 'ಪಾರಿಜಾತ'ವಾಗಿ ಹುಟ್ಟುವಂತೆ ವರಕೊಟ್ಟನಂತೆ. ಅದಕ್ಕೇ ಅಂತೆ, ಪಾರಿಜಾತದ ಟೊಂಗೆ, ಎಲೆ ಬಿಳುಚಿಕೊಂಡಿರುವುದು. ಅದಕ್ಕೇ ಅಂತೆ, ಅವಳು ರಾತ್ರಿ ಮಾತ್ರ ಅರಳಿ, ಸೂರ್ಯನ ಮೋರೆ ಕಾಣುವ ಮೊದಲೇ ಉದುರಿಹೋಗುವುದು... ಪಾರಿಜಾತದ ತೊಟ್ಟಿನ ಬಣ್ಣ ಕೂಡ ಸೂರ್ಯನದ್ದೇ!! "ಇದೆಲ್ಲಾ ನಿಜವೇನೆ?" ಅಂತ ಇವಳನ್ನು ಕೇಳಿದರೆ,  ಒಮ್ಮೆ "ಹ್ಞೂ ಕಣೆ" ಅನ್ನೋಹಾಗೆ; ಮತ್ತೊಮ್ಮೆ "ಏನೋಪ್ಪ,..ನನಗೊಂದೂ ನೆನಪಿಲ್ಲ" ಅನ್ನೋಹಾಗೆ ತಲೆ ಆಡಿಸುತ್ತ ನಿಂತಿದ್ದಾಳೆ. ನಿಮ್ಮ ಮನೆಯಂಗಳದಲ್ಲೂ ಇಂಥ ಹುಡುಗಿಯಿದ್ದರೆ ಆಗಾಗ ಮಾತಾಡಿಸುತ್ತಿರಿ. ಅವಳ ಕಥೆ ಏನೋ ಎಂತೋ... 

ಛಾಯಾಚಿತ್ರ : ಚರಿತಾಬೆಳಬೆಳಗ್ಗೆ, ಬೆಳಕು ಕಣ್ಬಿಡುವ ಹೊತ್ತಿಗೆ ಸರಿಯಾಗಿ, ಪಾರಿಜಾತದಂಥದ್ದೆ ಬಿಳಿಜುಬ್ಬ ತೊಟ್ಟು, ದಿನಾಲು ತಪ್ಪದೆ ಹೂವು ಆಯಲು ಒಬ್ಬ ಅಜ್ಜ ಬರುತ್ತಿದ್ದದ್ದು ಗಮನಿಸಿದ್ದೆ. ನನ್ನ ಬಟ್ಟಲಿಗೂ ಸಾಕಾಗುವಷ್ಟು ಉಳಿಯುತ್ತಿದ್ದರೂ, ಯಾಕೊ ನನ್ನ ಮರದ ಜೊತೆಗಿನ ಹೊಸ ಸ್ನೇಹಸಂಬಂಧ ನನಗೆ ಅಷ್ಟಾಗಿ ಹಿಡಿಸಿರಲಿಲ್ಲ.  ಈ ವಿಷಯ ಹೇಗೆ ತಿಳಿಯಿತೋ ಏನೊ, ಈಗ ತುಂಬಾ ದಿನಗಳಿಂದ ಆ ಅಜ್ಜನ ಪತ್ತೆಯಿಲ್ಲ. ದಿನಾಲು ಪ್ಲಾಸ್ಟಿಕ್ ಕವರ್ ತಂದು ಹೂವು ತುಂಬಿಕೊಂಡು ಹೋಗುತ್ತಿದ್ದ ಅಜ್ಜ ಇಲ್ಲೆಲ್ಲಾದರೂ ಕಂಡರೆ, "ಈಗ ಯಾಕೆ ಬರ್ತಿಲ್ಲಜ್ಜ?" ಅಂತ ಕೇಳಬೇಕು ನಾನು... ಯಾಕೋ ಕಂಡೇ ಇಲ್ಲ ಅವರು ...


ಛಾಯಾಚಿತ್ರ : ಚರಿತಾ

ಮಂಗಳವಾರ, ಜುಲೈ 9, 2013

ಪುಟಗಳಿಗೆ ಕಿಟಕಿಗಳಿಲ್ಲ...

ಚಿತ್ರ : ಚರಿತಾ


      ಅನಿಸಿದ್ದೆಲ್ಲ ಬರೆಯಲಾಗದ ಹಾಗೆ, ಬರೆದದ್ದೆಲ್ಲ ತಿರುಗಿನೋಡಲಾಗದ ಹಾಗೆ, ನನಗೆ ಕಂಡ ಕಥೆಗಳೆಲ್ಲ ನೆನ್ನೆ ಮೊನ್ನೆಗಳಲ್ಲಿ ಸರಿದುಹೋಗುತ್ತ, ಮತ್ತೆ ನನ್ನ ಕಡೆ ತಲೆಯೆತ್ತಿ ನೋಡಲಾಗದೆ, ದನಿಮಾಡಿ ಕರೆಯಲಾಗದೆ, ನಿರ್ಲಿಪ್ತತೆಯ ಮುಸುಕುಹೊದ್ದು ವಿಪರೀತ ಛಳಿಯ ನೆಪ ಹೇಳುತ್ತಿವೆ. ಮಾತು ಮರೆತು ಕೂತ ಲೈಬ್ರರಿ ಕಪಾಟಿನ ಪುಸ್ತಕಗಳು ಕಣ್ಣು ತೆರೆದು ಮುಚ್ಚುವುದು ಧೂಳು ಒರೆಸುವಾಗ ಮಾತ್ರ. ಅವುಗಳ ಕಥೆ ಕೇಳುವುದಿರಲಿ, 'ಹೇಗಿದೀಯ' ಅಂತ ತೋರಿಕೆಯ ಒಂದು ಸದ್ದು ಕೂಡ ಹೊರಡದೆ, ಅಕ್ಷರಗಳು ಅಲುಗಾಡುತ್ತಿಲ್ಲ. ಅಚ್ಚುಕಟ್ಟಾಗಿ ಸಾಲಾಗಿ ನಿಂತ ಅಕ್ಷರಗಳಿಗೆ ಪುಟಗಳಿಂದ ಹೊರಪುಟಿಯಲು ಕಿಟಕಿಗಳಿಲ್ಲ. ಕಥೆ ಹೇಳುವ ಅವಕಾಶ ಸಿಗದ ಚಂದದ ಹೊದಿಕೆಯ ಪುಸ್ತಕಗಳಿಗೆ ಮೋಕ್ಷವಾದರೂ ಹೇಗೆ ಸಿಗಬೇಕು?!

     ಹಿತ್ತಲಿನ 'ಬಟರ್ ಫ್ರೂಟ್' ಮರ ಉದುರಿಸುವ ಒಣ ಎಲೆಗಳನ್ನೆಲ್ಲ ಗುಡಿಸಿ ಗುಡ್ಡೆಹಾಕುವಾಗಲೂ ಅವುಗಳ ಬಗ್ಗೆ ಹೀಗೆ ಅನಿಸುತ್ತೆ. ಹೇಗೋ ಅವುಗಳಿಗಿಷ್ಟಬಂದಹಾಗೆ ತಲೆಕೊಟ್ಟು, ಕಾಲುಚಾಚಿ ಬಿದ್ದುಕೊಂಡಿರಲೂ ಬಿಡುತ್ತಿಲ್ಲ ನಾನು. ತಮ್ಮಷ್ಟಕ್ಕೆ ಕಣ್ಣುಮುಚ್ಚಿ ಮಣ್ಣುಮುಕ್ಕುವ ಅವುಗಳ ಕೊನೆಯ ಆಸೆಗೂ ನನ್ನ ಅನುಮತಿ ಬೇಕಾಗಿದೆ. ಅಷ್ಟಗಲ ಜಾಗದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರೋದು 'ಚೆನ್ನಾಗಿ ಕಾಣಲ್ಲ' ಅಂತ ತೀರ್ಪು ಕೊಟ್ಟು, ಅವುಗಳನ್ನೆಲ್ಲ ಅನಾಮತ್ತಾಗಿ ತಿಪ್ಪೆಗೆ ಸಾಗಿಸಿಬಿಡುವ ನಿರ್ಧಾರ ಯಾಕೋ ಸರಿಯಲ್ಲ ಅನಿಸುತ್ತಿರುತ್ತೆ.

   
ಇಂಟರ್ನೆಟ್ ಚಿತ್ರ


         ಮನೆಮುಂದಿನ ಲಾನ್ನಲ್ಲಿ ಆಗಾಗ ತಲೆಯೆತ್ತಿ ನಿಲ್ಲುವ ಥರಾವರಿ ಗಿಡಗಳಿಗೆ ಪಾಪ, ಬೈಗುಳದಂಥ ಹೆಸರು-'ಕಳೆ'. ಅವುಗಳಿಗೆ ನಗುವ, ತೊನೆದಾಡುವ ಯಾವ ಹಕ್ಕೂ ಇಲ್ಲ. ಅಕಸ್ಮಾತ್ ಅಂಥ ಹಕ್ಕು-ಪಕ್ಕು ಅಂತೇನಾದರೂ ಇದ್ದರೆ ನಮ್ಮ ಕಣ್ಣಿಗೆ ಕಾಣದ ಹಾಗೆ ಒಂದೆರಡು ದಿನ ಇದ್ದು ಹೋಗಿಬಿಟ್ಟರೆ ಕ್ಷೇಮ. ನೀಟಾಗಿ, ಟಿಪ್ಟಾಪಾಗಿರಬೇಕಾದ ನಮ್ಮ ಲಾನ್ನಲ್ಲಿ ಪಡ್ಡೆ ಹೈಕಳ ಥರ ಚಡ್ಡಿ ಏರಿಸುತ್ತ, ಗೊಣ್ಣೆ ಒರೆಸುತ್ತ, ಕೇಕೆ ಹಾಕೋದು ಕಂಡರೆ ಅಷ್ಟೆ - ಬುಡಸಮೇತ ಗೇಟ್ ಪಾಸ್ ಗ್ಯಾರಂಟಿ. ಇದೂ ಕೂಡ ಯಾಕೊ ಫ್ಯೂಡಲ್ ಮನಸ್ಥಿತಿಯ ತರ್ಕದ ಹಾಗಿದೆ... ಅನುಕೂಲಗಳ ಸುತ್ತ ಹೆಣೆದುಕೊಳ್ಳುವ ತರ್ಕಗಳಿಗೆ ನಿಜಕ್ಕೂ ಇಂಥದ್ದೇ ಬಣ್ಣ, ರೂಪ, ಅಳತೆಯಿರಬೇಕೆಂದೇನಿಲ್ಲ. ಒಂದು ಅನುಕೂಲದ ತಳಪಾಯ ನೂರು ಸಮಾಧಿಗಳದ್ದಾಗಿರಬಹುದು. ಅಬ್ಬರಕ್ಕೆ ಒಗ್ಗಿಕೊಂಡ ನಮ್ಮ ಕಿವಿಗಳಿಗೆ ಪಿಸುದನಿಯ ಆಲಾಪ ಸೋಕದೆಯೇ ಕಳೆದುಹೋಗಬಹುದು.. ಅಬ್ಬರಿಸದ, ಅರ್ಥವಾಗದ ಜಗತ್ತಿನ ಜೊತೆಗೆ ಲಾಭದ ಹೊರತಾದ ಸ್ನೇಹ ನಮಗೆ ಸಾಧ್ಯವಾಗುವುದಾದರೂ ಯಾವಾಗ?!


ಇಂಟರ್ನೆಟ್ ಚಿತ್ರ


        ಈ ಸ್ಟೆಡ್ಲರ್ ಕಲರ್ ಪೆನ್ಗಳಿಗೆ ಹೀಗೆ ನನ್ನ ಡೈರಿಯ ಪುಟಗಳನ್ನು ತುಂಬುವುದು ಇಷ್ಟವೊ, ಚಿತ್ರ ಬರೆಯುವುದಿಷ್ಟವೊ ಅಥವಾ ಸುಮ್ಮನೆ ಗೀಚುತ್ತ ಕೂರುವುದಿಷ್ಟವೊ - ಕೇಳಿದವರ್ಯಾರು? ಅಷ್ಟು ಚಂದದ ನನ್ನ ಪೆನ್ಬಾಕ್ಸಲ್ಲಿ ಇವುಗಳಿಗೆ ಜಾಗ ಕೊಟ್ಟಿರೋದೇ ನಾನು ಕರುಣಿಸಿರುವ ಭಾಗ್ಯ ಅಂತ ಇವು ತಿಳಿಯಬೇಕು ಅನ್ನೋದು ನನ್ನ ಎಣಿಕೆಯಿರಬಹುದು! ನಮ್ಮದೇ ತೋಟದ ಗುಲಾಬಿಗಿಡದಲ್ಲಿ ತನ್ನಷ್ಟಕ್ಕೆ ನಗುತ್ತಲಿದ್ದು ಒಮ್ಮೆ ಉದುರಿಹೋಗುವ ಹೂವು ನನಗೆ ಹೇಳಿಯೇ ಹೋಗಬೇಕೆಂದೇನೂ ಇಲ್ಲ. ಆದರೂ ಕಣ್ತಪ್ಪಿಸಿಹೋದವುಗಳಿಗೆ ಮೋಕ್ಷವೇ ಇಲ್ಲ ಅಂತ ಸ್ಯಾಡಿಸ್ಟ್ ಥರ ಉರಿದುಬೀಳೋದು ಅಷ್ಟೇನೂ ಅಪಾಯಕಾರಿಯಲ್ಲ ಅಂತ ಸಮಾಧಾನ ಮಾಡಿಕೊಳ್ತೀನಿ!

     ಯಾವತ್ತಿಗೂ ಬೆಳಕು ಕಾಣದ ಪುಟಗಳಿಗೆ; ಧೂಳು ಒರೆಸಲು ಕೈಗೆಟುಕದ ಕಪಾಟಿನ ಸಂದಿಗಳಿಗೆ; ಇಷ್ಟಪಟ್ಟು ತಂದು, ಬೀರುವಿನಲ್ಲಿ ಮಡಚಿಟ್ಟು  ಉಡದೆ, ತಗೆದು ಕೂಡ ನೋಡದೆ ಹಳೆಯದಾಗಿಬಿಟ್ಟಿರುವ ಬಟ್ಟೆಗಳಿಗೆ, ಶೋಕೇಸಿನೊಳಗೆ ಗಾಜಿನ ಲೋಟಗಳ ಮರೆಯಲ್ಲಿ ಅಷ್ಟು ವರ್ಷಗಳಿಂದ ಅನಾಥವಾಗಿ ಕುಳಿತುಬಿಟ್ಟಿರುವ ಆ ಬಟ್ಟಲಿಗೆ - ನಿಜಕ್ಕೂ ಏನನಿಸುತ್ತಿರಬಹುದು? ಇವುಗಳೆಲ್ಲ ಗಾಢ ನಿದ್ದೆಗೆ ಜಾರಿರಬಹುದಾ? ನನ್ನ ಜೊತೆ ಮುನಿಸಿಕೊಂಡು ಮಾತುಬಿಟ್ಟು, ಕೊನೆಗೆ ಮಾತಾಡುವುನ್ನೇ ಮರೆತುಬಿಟ್ಟಿರಬಹುದಾ? ಇದು ಆರ್ತತೆಯ ಪರಮಾವಧಿಯ ಅಗಾಧ ಮೌನವೇ ಇರಬಹುದು,.. ಪ್ರತಿಭಟನೆಯ ಕಟ್ಟಕಡೆಯ ತಂತ್ರವೂ ಆಗಿರಬಹುದು. ಇವುಗಳು ಇನ್ನೂ ನನ್ನ ಕರುಣೆಗಾಗಿ ಕಾಯುತ್ತಿರಬಹುದಾ ಅಥವಾ ಬುದ್ಧನ ಗುರುಗಳ ಹಾಗೆ ನನ್ನ ಕಡೆಗೇ ಕರುಣೆಯಿಂದ ಮುಗುಳ್ನಗುತ್ತಿರಬಹುದಾ?!

ಇಂಟರ್ನೆಟ್ ಚಿತ್ರ

       "ಹೀಗ್ಯಾಕೆ  ಸುಮ್ಮನಿದ್ದುಬಿಟ್ಟಿದ್ದೀಯ? ಮಾತಾಡು, ಏನಾದರೂ ಬರಿ, ತಂತಿ ಮೀಟಿ ರಾಗತೆಗಿ, ಸದ್ದುಬರುವಂತೆ ಪಾದ ಒತ್ತಿ ನಡೆದಾಡು, ನೀರು ಗುಟುಕರಿಸುವಾಗ ಬೇಕಂತಲೇ ಗಂಟಲು ಕೊಂಕಿಸು, ಉಸಿರಾಟ ನೆನಪಾದಾಗೆಲ್ಲ ಸ್ವಲ್ಪ ಜೋರಾಗಿ ಉಸಿರೆಳೆದುಕೊ, ಆಗಾಗ ಕನ್ನಡಿ ನೋಡಿಕೊಂಡು ಮುಖಯಿದೆಯಾ ಅಂತ ಖಾತ್ರಿಮಾಡಿಕೊ, ಸದ್ದು-ಗಿದ್ದು ಮಾಡದೆ ಹಾಗೇ ಹೋಗಿಬಿಟ್ಟರೆ ನಿನ್ನಪಾಲಿನ ಮೋಕ್ಷದ ಪ್ಯಾಕೇಜ್ ವಿನಾಕಾರಣ ವೇಸ್ಟ್ ಆಗೋಗುತ್ತೆ ನೋಡು..." ಅಂತ ಒಂದೇಸಮ ವರಾತ ತೆಗೆಯುವ ಲೌಡ್ ಸ್ಪೀಕರುಗಳಿಗೆ ಸಣ್ಣಗೆ  'ಶಟಪ್' ಹೇಳಿ,  ಹುಳಿಮೊಸರಿಗೆ ಮುತ್ತಿರುವ ನುಸಿಗಳನ್ನು ಓಡಿಸುತ್ತ, "... ನೆನ್ನೆ ನೆನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ..."  ಗುನುಗುತ್ತಿದ್ದೀನಿ.

     ಬೆಳಕು ಕಾಣದ ಆ ಪುಟಗಳಿಗೆ ಗರ್ಭದ ಕತ್ತಲಿನ ಮೌನ ದೊರಕಲಿ...
     ಈ ನಗುವಿನಂಥ ನಗು ಕೆಲವೊಮ್ಮೆ ನನಗಾದರೂ ಅರ್ಥವಾಗಲಿ...
ಶುಕ್ರವಾರ, ಏಪ್ರಿಲ್ 6, 2012

ಹಕ್ಕಿಪುಕ್ಕ ನಕ್ಕಿದ್ದ್ಯಾಕೆ..?     'ಹಕ್ಕಿ' ಅನ್ನುವ ಹಗುರ ಹೆಸರಿಗಿಂತ ಹಗೂರವಾದ, ವಿಸ್ಮಯದ ಈ ಪುಟ್ಟ ಜೀವಗಳು ಈಗ ನನ್ನ ನಿತ್ಯದ ಜೊತೆಗಾರರು. ನಮ್ಮ ಅಡುಗೆಮನೆಯ ಹಿಂದಿರುವ ಇಷ್ಟಗಲ ಜಾಗವನ್ನು ಈಗ 'ಹಿತ್ತಲು' ಅನ್ನುವುದಕ್ಕಿಂತ ನಮ್ಮ 'ಮೀಟಿಂಗ್ ಸ್ಪಾಟ್' ಅಂದರೆ ಹಿತ್ತಲಿಗೂ ಇಷ್ಟ ಆಗಬಹುದು! ನಮ್ಮ ದಾಳಿಂಬೆ ಗಿಡದ ಬುಡದ ನೆರಳಲ್ಲಿ ಈ ಕೀಟಲೆ ಹಕ್ಕಿಗಳಿಗೆ ಅಂತಾನೇ ಒಂದು ಮಣ್ಣಿನ 'ಬಾತ್ ಟಬ್' ಇಟ್ಟದೀನಿ. ಪುಟ್ಟ ಮಣ್ಣಿನ ಪಾಟ್(Pot) ಅದು. ಹೂವಿನಕುಂಡಕ್ಕಿಂತ ಹೆಚ್ಚಾಗಿ ಬಾತ್ ಟಬ್ ನಂತೆಯೇ ಇದ್ದ ಇದರ ಕಿಂಡಿಗೆ ಎಮ್ಸೀಲ್ ಬಳಿದು ಮುಚ್ಚಿ, ನೀರು ತುಂಬಿಸಿಟ್ಟು ಜೀವನ ಸಾರ್ಥಕ ಮಾಡಿಬಿಟ್ಟಿದೀನಿ! ಖಂಡಿತವಾಗಿಯೂ ಈ ಸುಂದರ ಪಾಟ್ ನನಗೆ ದಿನಾಲೂ ಎಷ್ಟು ಥ್ಯಾಂಕ್ಸ್ ಹೇಳುತ್ತಿರುತ್ತೆ ಅಂತ ನಂಗೊತ್ತು! ಮೊದಲ ದಿನ ನೀರು ತುಂಬಿಸಿಟ್ಟು ಬಾಗಿಲ ಮರೆಯಲ್ಲಿ ನಿಂತು ಸುಮಾರು ಹೊತ್ತು ಕಾದರೂ ಯಾವ ಹಕ್ಕಿಯೂ ನಂಗೆ ಕಾಣುವಂತೆ ನೀರು ಕುಡೀಲಿಲ್ಲ.ಎರಡಲ್ಲ ಮೂರನೇ ದಿನ ನಂಗೆ ಜಾಸ್ತಿ ಬೇಜಾರು ಮಾಡೋದು ಬೇಡ ಅಂತ್ಲೋ ಏನೋ ಪುಟ್ಟದೊಂದು ರಾಬಿನ್ ಹಕ್ಕಿ ನನಗೆ ಕಾಣೋ ಹಾಗೆ ಸುಮಾರು ಹೊತ್ತು ನೀರು ಕುಡಿದು, "ಸಾಕಾ? ಖುಶಿ ಆಯ್ತಾ ಈಗ?" ಅಂತ ಕೇಳಿ, ರೆಕ್ಕೆ ಬಡಿದು, ಹಾರೋಯ್ತು. ಓಹ್! ಅದೆಂಥ ಸಾರ್ಥಕ ದಿನ! ಆ ಪಾಟ್ (Pot) ಜೀವನಾನೂ ಪಾವನ ಆದ ದಿನ!

     ಆ ಪುಟ್ಟ ಪಾಟ್ ಎಷ್ಟು ಚೆನಾಗಿದೆ ಗೊತ್ತಾ? ಅಡ್ಡಡ್ಡಲಾದ ಉದ್ದ ಮೂತಿ, ಮಧ್ಯದಲ್ಲಿ ಸ್ವಲ್ಪ ಪ್ರೆಸ್ ಆದಂತಿರುವ ತಿರುವಿನ ಅಂಚು, ಅಂಚಿನಲ್ಲಿ ಪುಟ್ಟ ಗೆರೆಗಳ ಡಿಸೈನ್, ನೆರಿಗೆ ಇರದ ಸೀರೆ ಉಡಿಸಿದಂತೆ ಕಾಣುವ ನಡೂಮಧ್ಯದ ಎರಡು ತೆಳುಗೆರೆಗಳು,...ಒಟ್ಟಿನಲ್ಲಿ ನನ್ನ ಕೀಟಲೆ ಪಿಟ್ಟೆಗಳಿಗೆ ಅಂತಾನೇ ಹೇಳಿ ಮಾಡಿಸಿದ ಸುಂದರ 'ನೀರ್ಕುಂಡ'. ಗಂಭೀರವಾಗಿ ಖುಶಿ ತುಳುಕಿಸುತ್ತ ಕೂತಿದೆ. ದಿನಾ ಹೊಸ ಕನ್ನಡಿಯಂಥ ನೀರು ತುಂಬಿಸಿಕೊಂಡು, ನಾನಿಟ್ಟ ಕಡೆ ಮುಖಮಾಡಿ ಕೂರೋದಂದ್ರೆ ಅದಕ್ಕೆ ಎಷ್ಟು ಇಷ್ಟ!

ಚೈನೀಸ್ ವಾಟರ್ ಕಲರ್

     ಹಿತ್ತಲ ಜಗಲಿಯ ಮೇಲೆ ನಾನು ತಿಂಡಿ ತಿನ್ನುತ್ತಲೋ, ಓದುತ್ತಲೋ ಅಥವಾ ಹೀಗೆ ಹರಟುತ್ತಲೋ ಇರುವಾಗ ಈ ಮಳ್ಳ ಹಕ್ಕಿಗಳು ಸ್ವಲ್ಪ ಹೊತ್ತು ದೂರದ ಟೊಂಗೆಯಲ್ಲಿ ಕೂತು ಕಿಚಕಿಚ ಅನ್ನುತ್ತ ನನ್ನ ಗಮನಿಸುತ್ತವೆ. ನಾನಾಗ ನಿಧಾನ ಉಸಿರಾಡುತ್ತ, ಆದಷ್ಟೂ ಅಲ್ಲಾಡದಂತೆ ಕೂತ ಹಾಗೇ ಕೂರಬೇಕು. ಕಪ್ಪು ತಲೆ-ಬಳಿ ಪುಕ್ಕದ ಈ ಹಕ್ಕಿ ಕೀಟಲೆ ಪುಟ್ಟಿಯಂತೆ ಕತ್ತನ್ನು ಮುದ್ದಮುದ್ದಾಗಿ ಹಾಗೂ ಹೀಗೂ ಕೊಂಕಿಸುತ್ತ, ಆಂಟೆನಾದ ಹಾಗೆ ಪುಕ್ಕ ಆಡಿಸುತ್ತ, ಸುಮ್ಮಸುಮ್ಮನೆ ಹೊಟ್ಟೆಉಬ್ಬರಿಸಿ ಪಿಕ್ಕೆ ಹಾಕುತ್ತ ನನ್ನ ನೋಡೇನೋಡುತ್ತೆ. ನಾನು ಮಾತ್ರ ಸ್ವಲ್ಪವೂ ಅಲ್ಲಾಡದೇ, ನನ್ನ ಕಣ್ಣಾಲಿಗಳನ್ನು ಮಾತ್ರ  ಇದು ನೆಗೆದತ್ತೆಲ್ಲ ತಿರುಗಿಸಲು ಪ್ರಯಾಸ ಪಡುತ್ತ ಕೂತಿರಬೇಕು. ಆ ಪುಟ್ಟ ಕಿಲಾಡಿ ಆಕಡೆ ಈಕಡೆ ಜಾಗ ಬದಲಿಸುತ್ತ ಬೇರೆ ಬೇರೆ ಕೋನಗಳಿಂದ ವಾರೆಗಣ್ಣಿಂದ ನೋಡುತ್ತ ಯೋಚಿಸುತ್ತೆ: "ಈ ಕಲರ್ ಕಲರ್ ಪ್ರಾಣಿ ನನ್ನ ಹಾಗೇ ಹಾರಿ ಬಂದು ಎರಗುತ್ತೊ ಅಥವಾ ಹೀಗೇ ಗಡವನ ಥರ ಕೂತಿರುತ್ತೊ" ಅಂತ! ಸದ್ಯಕ್ಕೆ ತೊಂದ್ರೆ ಇಲ್ಲ ಅಂತ ಅನಿಸಿದ ಮೇಲೆ ಒಂದೊಂದೇ ನೆಗೆತ ನೆಗೆಯುತ್ತ ನೀರಿನ ಕುಂಡದ ಹತ್ತಿರ ಬಂದು, ಆ ಡಿಸೈನ್ ಇರುವ ಅಂಚನ್ನು ತನ್ನ ತೆಳುವಾದ ಪುಟ್ಟ ಕಾಲುಗಳಿಂದ ಹಿಡಿದು ಕೂತು, ಬಾಗಿ ಮುಖ ನೋಡಿಕೊಳ್ಳುತ್ತೆ... ಇಷ್ಟಿಷ್ಟೇ ನೀರನ್ನು ಕೊಕ್ಕಲ್ಲಿ ತುಂಬಿಕೊಂಡು ಕತ್ತು ಮೇಲೆತ್ತಿ ಒಳಗಿಳಿಸುತ್ತೆ, ನಾಲಿಗೆಯಲ್ಲಿ ಚಪ್ಪರಿಸುತ್ತೆ. ಬಹುಷಃ ಅವುಗಳ ಕೊಕ್ಕು-ಗಂಟಲಿನ ವಿನ್ಯಾಸದಲ್ಲಿ ಹೀರಿಕೊಳ್ಳುವ ವ್ಯವಸ್ಥೆ ಇಲ್ಲವೇನೊ. ಕೆಲವೊಮ್ಮೆ ಸರದಿ ಮೇಲೆ ನಾನು, ತಾನು ಅಂತ ನೀರಲ್ಲಿ ಮುಳುಗು ಹಾಕಿ, ಮೈಕೊಡವಿಕೊಂಡು ಒಂದೊಳ್ಳೆ ಸ್ನಾನ ಮುಗಿಸಿ, ಪಕ್ಕದ ರೆಂಬೆ ಮೇಲೆ ಕೂತು ,ಕೊಕ್ಕಿಂದ ಪುಕ್ಕ ನೀವಿಕೊಳ್ಳುತ್ತ ಮೈ ಆರಿಸಿಕೊಳ್ಳುವ ಖುಶಿಯೇ ಖುಶಿ.

ಚಿತ್ರ : ಫ್ರ್ಯಾಂಕ್ ಗೊನ್ಸಾಲೆಸ್


      ಏನೇ ಮಾಡುವಾಗಲೂ ಈ ಪುಟ್ಟಜೀವಗಳಿಗೆ ಮೈಯೆಲ್ಲ ಕಣ್ಣು. ಮೈಮರೆತು ಹಾಯಾಗಿ ವಿರಮಿಸುವ ಕಂಫರ್ಟ್( Comfort) ಇರೋದು ಕೇವಲ ಮನುಷ್ಯರಿಗೆ ಮತ್ತು ಮುದ್ದಿನ ಸಾಕುಪ್ರಾಣಿಗಳಿಗೆ ಮಾತ್ರ ಅಂತ ಕಾಣುತ್ತೆ! ಮನುಷ್ಯನಿಗೆ ಮನುಷ್ಯನಿಗಿಂತ ದೊಡ್ಡ ಶತ್ರು ಬೇರೆ ಯಾರಿದಾರೆ?!  ಆದರೆ ಈ ಪುಟ್ಟ ಜೀವಕ್ಕೆ ಪ್ರತಿಕ್ಷಣವೂ ಧ್ಯಾನ - ಎಚ್ಚರದ, ಪ್ರಙ್ಙಪೂರ್ವಕ   ಧ್ಯಾನ, ಅಲರ್ಟ್ ನೆಸ್ ಅಂತಾರಲ್ಲ ಅದು. ಪ್ರಕೃತಿಸಹಜವಾದ ಈ ಸ್ವತಂತ್ರಜೀವಗಳಿಗೆ ಉಸಿರಾಟದಷ್ಟೇ ಸಹಜವಾದ 'ಎಚ್ಚರದ ಧ್ಯಾನ'ವೂ ಇರುತ್ತೆ. ನಾವು-ನೀವು ಮಾತ್ರ ಜೆ.ಕೆ. ಯವರ ಪುಸ್ತಕಗಳಲ್ಲೊ, ವಿಪಸನ ಸೆಂಟರ್ ಗಳಲ್ಲೊ ಸಹಜತೆಯ ಪಾಠವನ್ನು ಕಲಿಯಬೇಕಾದ, ನಮ್ಮತನವನ್ನು ಮತ್ತೆ ನೆನಪುಮಾಡಿಕೊಳ್ಳಬೇಕಾದ ದುಃಸ್ಥಿತಿ ತಂದುಕೊಂಡಿದೀವಿ!


ಚೈನೀಸ್ ವಾಟರ್ ಕಲರ್

     ಕಪ್ಪುತಲೆ-ಬಿಳಿ ಹೊಟ್ಟೆಯ ರಾಬಿನ್ ಜೋಡಿ, ತಲೆಯಲ್ಲಿ ಜುಟ್ಟು ಬಿಟ್ಕೊಂಡು, ಕಣ್ಣ ಪಕ್ಕಕ್ಕೆ-ಕುಂಡಿಗೆ ಕೆಂಪು ಬಳ್ಕೊಂಡು ಬರುವ ಒಂದು ಜೋಡಿ (ಪಿಕಳಾರ ಇರ್ಬೇಕು), ಮುಷ್ಟಿಯಿಂದಲೂ ನುಣುಚಿಕೊಳ್ಳುವಷ್ಟು ಪುಟ್ಟದಾದ ತಿಳಿಹಸಿರಿನ 'ಚಿಟ್ಟೆಹಕ್ಕಿ', ಕೆಲವೊಮ್ಮೆ ಗುಬ್ಬಚ್ಚಿಗಳು, ಚೋರೆಹಕ್ಕಿ (ಕಾಡು ಪಾರಿವಾಳ), ಗುಬ್ಬಿಯಂಥದ್ದೇ ಒಂದು ಬ್ಲ್ಯಾಕ್ ಅಂಡ್ ವೈಟ್ ಹಕ್ಕಿ,..ಹೀಗೆ ನಮ್ಮ ಬಾತ್ ಟಬ್ ಪರಿವಾರದ ಪಟ್ಟಿ ಬೆಳಿತಾ ಹೋಗುತ್ತೆ... ನಮ್ಮ ವಿಶೇಷ ಅತಿಥಿ ಮಾತ್ರ - 'ಚಂಬೂಕ'. 'ಕೆಂಬೂತ' ಅಂತ ಕೂಡ ಕರೀತಾರೆ ಇದನ್ನ. ತುಂಬಾ ಸುಂದರ, ಸಧೃಡ ಹಕ್ಕಿ ಇದು. ಮಿರಮಿರ ಕಪ್ಪುಚುಕ್ಕೆಯ ಕೆಂಪು ಕಣ್ಣು. ಹೊಳೆಯುವ ಕರೀ ದೇಹ, ನಶ್ಯ ಬಣ್ಣದ ರೆಕ್ಕೆ, ಉದ್ದನೆ ಪುಕ್ಕ, ಮಾಟವಾಗಿ ಬಾಗಿದ ಕಪ್ಪು ಕೊಕ್ಕು. ನನ್ನ ಕಣ್ಣಿಗೆ ಬಿದ್ದಾಗೆಲ್ಲ, ಕಣ್ಣೊಳಗೆ ಆದಷ್ಟೂ ತುರುಕಿಕೊಳ್ಳಲು ತವಕಿಸುತ್ತಾ ಇರ್ತೀನಿ ನಾನು. ಅಷ್ಟು ಸುಂದರ ಹಕ್ಕಿ ಇದು!  "ಊಂ..ಊಂ.." ಅಂತ ಹೆದರಿಸೋ ಹಾಗೆ ಧ್ವನಿ ಹೊರಡಿಸುತ್ತೆ ಇದು. "ಊಂ..ನಂಗೊತ್ತು,..ಊಂ" ಅನ್ನೋ ಥರ ಕೇಳಿಸುತ್ತೆ! ಅದಕ್ಕಿಂತ ಸಣ್ಣ ಗಾತ್ರದ ಹಕ್ಕಿಗಳನ್ನು ದೂರ ಓಡಿಸಿ, ಸುತ್ತ ಅಷ್ಟಗಲ ಯಾವ ಹಕ್ಕಿಯೂ ಬರದ ಹಾಗೆ ತನ್ನ 'ಏರಿಯಾ' ಮಾಡಿಕೊಳ್ಳುತ್ತೆ. ಗಂಭೀರ ನಡಿಗೆ ಇದರದು. ತಪ್ಪು ಮಾಡಿದ ಮನುಷ್ಯರಂತೆ ಕೆಲವೊಮ್ಮೆ ಪೆದ್ದುಪೆದ್ದಾಗಿ ಕತ್ತು ಕುಣಿಸುತ್ತ ಬೆದರಿಕೊಳ್ಳುತ್ತೆ! ಉಳಿದಂತೆ, ಕಂಡವರನ್ನು ಹೆದರಿಸುವ ಮುಖಚಹರೆ, ನುಂಗಿಬಿಡುವಂಥ ಕೆಂಗಣ್ಣು. ಅದಕ್ಕೇ ಇದರ ಹೆಸರು - 'ಕೆಂಬೂತ'.
     ಈ ಕೆಂಬೂತದ ಬಗ್ಗೆ ಯಾವಾಗಲೋ, ಎಲ್ಲೋ ಓದಿದ ಕಥೆ ಇದು : ತುಂಬಾ ಹಿಂದೊಮ್ಮೆ ಕೆಂಬೂತಕ್ಕೆ ಚೆಂದದ, ಬಣ್ಣಬಣ್ಣದ ಊದ್ದನೆ ಪುಕ್ಕಗಳಿದ್ದುವಂತೆ. ಹಕ್ಕಿಗಳಲ್ಲೆಲ್ಲ ಅತೀ ಸುಂದರ ಹಕ್ಕಿ ಅನ್ನೋ ಬಿರುದು ಬೇರೆ ಇತ್ತು! ಆ ಕಾಲದಲ್ಲಿ ನಮ್ಮ ನವಿಲಪ್ಪನಿಗೆ ಬಣ್ಣದ ಪುಕ್ಕ ಇರ್ಲಿಲ್ಲ. ಒಮ್ಮೆ ನವಿಲಪ್ಪಂಗೆ ಕೆಂಬೂತದ ಬಣ್ಣದ ಪುಕ್ಕ-ಗರಿಗಳು ತನಗೆ ಬೇಕು ಅನ್ನೋ ಆಸೆ ಆಯ್ತಂತೆ. ಬಾಯ್ಬಿಟ್ಟು ಕೇಳಿಯೂ ಬಿಡ್ತು, "ಒಂದೇ ಒಂದು ದಿನದ ಮಟ್ಟಿಗೆ ನಮ್ಮಿಬ್ಬರ ಪುಕ್ಕಗಳನ್ನ ಎಕ್ಸ್ಛೇಂಜ್ ಮಾಡಿಕೊಳ್ಳೋಣ್ವ"?..ಅಂತ. ಕೆಂಬೂತ ಉದಾರ ಮನಸ್ಸಿನಿಂದ "ಪಾಪ ಹೋಗ್ಲಿಬಿಡು, ಒಂದಿನ ತಾನೆ? ಶೋಕಿ ಮಾಡ್ಲಿ" ಅಂದ್ಕೊಂಡು, "ಓಕೆ" ಅಂತು. ಮಾರನೇ ದಿನ ಹೊತ್ತು ಮೂಡುವ ಮುಂಚೆ ತಮ್ಮ ತಮ್ಮ ಮೊದಲಿನ ಪುಕ್ಕಗಳನ್ನು ವಾಪಸ್ ಪಡೆಯುವ ಕರಾರು ಅದು. ಸರಿ, ನವಿಲಪ್ಪ ಹೊಸ ಪುಕ್ಕ ಕಟ್ಕೊಂಡು ಕುಣಿದಿದ್ದೇ ಕುಣಿದಿದ್ದು. ವಾಪಸ್ ಕೊಡುವ ಮಾತೆಲ್ಲಿ ಬಂತು? ಒಂದಿನ ಅಲ್ಲ, ಎರಡ್ ದಿನ ಅಲ್ಲ, ಶತಮಾನಗಳಿಂದ್ಲೂ.., ಈವತ್ತಿಗೂ ಪುಕ್ಕ ಹಿಂದಿರುಗಿಸುವ ಮನಸ್ಸೇ ಆಗಿಲ್ಲ ಅದಕ್ಕೆ. ಈಗ ನಮ್ಮ 'ರಾಷ್ಟ್ರೀಯ ಪಕ್ಷಿ' ಅನ್ನೋ ಪಟ್ಟ ಬೇರೆ ಪಡ್ಕೊಂಡಿದೆ ನೋಡ್ರಪ್ಪ! ಆವತ್ತಿಂದ, ಈವತ್ತಿನವರೆಗೂ ಕಣ್ಣು ಕೆಂಪು ಮಾಡ್ಕೊಂಡು, ಊಂ,..ಊಂ..ಅನ್ನುತ್ತ ಬಣ್ಣದ ಪುಕ್ಕ ಹುಡುಕ್ತಾನೇ ಇದಾನೆ ನಮ್ಮ ಶೋಷಿತರ ಪ್ರತಿನಿಧಿ ಕೆಂಬೂತಣ್ಣ!


ಚೈನೀಸ್ ವಾಟರ್ ಕಲರ್

      ನಮ್ಮ ಹಕ್ಕಿಬಳಗಕ್ಕೆ ಮತ್ತೊಂದು ಅಪರೂಪದ ಹಿಂಡು ಬರುತ್ತೆ. ಇವುಗಳಿಗೆ ಯಾರು, ಏನು ಹೆಸರಿಟ್ಟದ್ದಾರೋ ಗೊತ್ತಿಲ್ಲ. ನಮ್ಮಮ್ಮ ಮಾತ್ರ ಇವುಗಳನ್ನ 'ಪೆದ್ದು ಹಕ್ಕಿಗಳು' ಅಂತಾರೆ. ಬೇರೆ ಹಕ್ಕಿಗಳಷ್ಟು ಚುರುಕಾಗಿಲ್ಲದ ಇವುಗಳು ಯಾವಾಗಲೂ ಗುಂಪಿನಲ್ಲೇ ಇರ್ತಾವೆ. ಕುಪ್ಪಳಿಸುತ್ತ ಓಡಾಡ್ತಾವೆ. ಮೈಪೂರ್ತಿ ಬೂದು ಬಣ್ಣ. ಹೊಟ್ಟೆ ಮತ್ತು ಕಣ್ಣಸುತ್ತ ಮಾತ್ರ ತೆಳು ಬೂದು. ಕಣ್ಣು ಮತ್ತು ಕೊಕ್ಕು ತೆಳೂ ಹಳದಿ. ನಂಗಂತೂ ಇವನ್ನ 'ಪೆದ್ದ್ ಮರಿಗಳು' ಅನ್ನೋ ಮನಸ್ಸಾಗಲ್ಲ. ಅಷ್ಟು ಮುದ್ದಾಗಿವೆ ಇವು! ಈಗ ತಾನೆ ನಿದ್ದೆಯಿಂದ ಎದ್ದು, ತಲೆಬಾಚದೆ, ಹಲ್ಲುಜ್ಜದೆ, ಸ್ನಾನ ಮಾಡದೆ ಹಾಗೇ ಪಿಕ್ ನಿಕ್ ಹೊರಟಹಾಗೆ. ಕಿಚಪಿಚ ಕಚಪಚ ಅಂತ ಒಂದೇ ಸಮನೆ ಅದೇನು ಗಾಸಿಪ್ ಮಾತಾಡ್ಕೋತಾವೋ ಏನೊ! ಇವುಗಳ ಕಾಡುಹರಟೆ ಮಾತ್ರ ಒಂದು ಕ್ಷಣ ಕೂಡ ನಿಲ್ಲೋದಿಲ್ಲ. ಅದು ಹಾಗಿರ್ಲಿ,.. ಹೀಗೇ ಒಂದಿನ, ಈ ಹರಟೆಮಲ್ಲ ಹಕ್ಕಿಗಳು ಬಾತ್ ಟಬ್ ಪಕ್ಕ ಹರಡಿದ್ದ ಅನ್ನದ ಅಗುಳನ್ನೆಲ್ಲ ಒಂದೂ ಬಿಡದೆ ಕ್ಲೀನ್ ಮಾಡಿ, ದಾಳಿಂಬೆ ಗಿಡದ ಮರೆಯಲ್ಲಿ ನನಗೆ ಕಾಣಿಸೋ ಹಾಗೇನೇ ಬಿಂದಾಸಾಗಿ, 'ಪಾರ್ಕ್ ಜೋಡಿ'ಗಳನ್ನೂ ನಾಚಿಸುವಂತೆ ಪಕ್ಕ ಪಕ್ಕ ಅಂಟಿ ಕೂತು ಏನೋ ಭಾಳಾ ಗಂಭೀರವಾಗಿ, ಈ ಲೋಕಾನೇ ಮರೆತವರಂತೆ ತುಂಬಾ ಹೊತ್ತು ಪಿಸಪಿಸ ಮಾತಾಡಿಕೊಂಡ್ವು,..ಪರಸ್ಪರ ಕೊಕ್ಕಿನಿಂದ ಕಚಗುಳಿ ಮಾಡ್ಕೊಂಡ್ವು.. ಈ ಜೋಡಿಯಿಂದ ತುಂಬಾ ಹೊತ್ತು ದೂರ ಕೂತು ಬೋರ್ ಹೊಡೆಸಿಕೊಂಡ ಇದೇ ಗುಂಪಿನ ಮತ್ತೊಂದು ಹಕ್ಕಿ,.. ತಾನೂ ಹೋಗಿ ಜೋಡಿಹಕ್ಕಿಗಳಿಗೆ ಅಂಟಿ ಕೂತ್ಕೊಳ್ತು. ಪ್ರೀತಿಯನ್ನೇ ಉಸಿರಾಡುತ್ತಿರುವ ಶುದ್ಧ ಮುದ್ದುಗಳಂತೆ ಕಂಡವು ಇವು. ಹೀಗೇ ಪರಸ್ಪರ ಮುದ್ದು ಮಾತಾಡ್ಕೊತಾ ಇದ್ದ ಗುಂಪನ್ನು ನನ್ನ ಕ್ಯಾಮರಾದಲ್ಲಿ ಝೂಂ ಮಾಡಿ ಕೆಲವು ಕ್ಲಿಕ್ ತಕೊಂಡೆ. 'ಹ್ಯಾಪಿ ಫ್ಯಾಮಿಲಿ' ಅಂದ್ರೆ ಇದು ಕಣಪ್ಪ ಅಂದ್ಕೊಂಡು, ಯಾಕೋ ಇವುಗಳ ಪ್ರೈವೆಸಿ ಹಾಳುಮಾಡೋದು ಬೇಡ ಅನಿಸಿ, ಒಳಗೆದ್ದು ಹೋದೆ..


ಚೈನೀಸ್ ವಾಟರ್ ಕಲರ್


ಬುಧವಾರ, ಜೂನ್ 15, 2011

ತಾದಾತ್ಮ್ಯದ ತಾಯಿ ; ಬೆರಗಿನ ಕೂಸು - ವೈ. ಜಯಮ್ಮ
   ನಾನು ಕಾವಾ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಒಮ್ಮೆ ಜಯಮ್ಮನವರ ಮನೆ/ಗ್ಯಾಲರಿಗೆ ಭೇಟಿ ಕೊಟ್ಟ ನೆನಪು. ಮಾಸಲು ಸೀರೆಯ, ಮಂದಕಿವಿಯ, ಈ ಲೋಕ-ಜನ-ಜಂಜಾಟದ ಉಸಾಬರಿಯೆ ಇಲ್ಲದ ನಿರ್ಲಿಪ್ತ ನಿಲುವು. ಕಿವಿ ಕೇಳುತ್ತಿದ್ದಿಲ್ಲವಾದ್ದರಿಂದ ನಮ್ಮಮಾತು, ಅವರ ಉತ್ತರ ಹಿಡಿತಕ್ಕೆ ಸಿಗದ ಬರಿಯ ಶಬ್ದಗಳಂತೆ ಅವರ ಮನೆ ಕಿಟಕಿಯಿಂದ ಜಿಗಿದು ಪಕ್ಕದ ರಸ್ತೆಯ ವಾಹನಗಳ ಚೀರಾಟದೊಂದಿಗೆ ಸೇರಿಹೋಗಿದ್ದವು. ಕಲಾವಿದೆ ಜಯಮ್ಮರನ್ನು ಹೆಚ್ಚು ಹತ್ತಿರದಿಂದ ನೋಡಲು-ಕೇಳಲು-ವಿಸ್ಮಯಗೊಳ್ಳಲು ಸಾಧ್ಯವಾದುದು ಇತ್ತೀಚೆಗೆ.

   ಮೈಸೂರಿನ ಇರ್ವಿನ್ ರಸ್ತೆ ನೆಹರು ಸರ್ಕಲ್ ಸೇರುವಲ್ಲಿ, ಸಿಟಿ ಸೆಂಟ್ರಲ್ ಬ್ಯಾಂಕ್ ಎದುರು ನಿಂತು ಪ್ರಯತ್ನಪೂರ್ವಕ ಕಣ್ಣಾಡಿಸಿದರೆ  'ಜಯಾ ಶಂಖು-ಶುಕ್ತಿ ಕಲಾಕೇಂದ್ರ' ಎಂಬ ಬೋರ್ಡ್ ಕಂಡೀತು. ಅದು ಕಲಾವಿದೆ ವೈ. ಜಯಮ್ಮನವರ ಮನೆ ಮತ್ತು ಗ್ಯಾಲರಿ. ಮೂರುಹೊತ್ತು ಗಿಜಿಗುಡುವ ಆ ರಸ್ತೆಯಿಂದ ಮನೆಯನ್ನು ನೆಪಮಾತ್ರಕ್ಕೆಂಬಂತೆ ವಿಭಜಿಸಿರುವುದು ಜಗುಲಿಯ ತುದಿಯಿಂದ ಬಾಗಿಲೆತ್ತರಕ್ಕೆ ಅಳವಡಿಸಿರುವ ಕಬ್ಬಿಣದ ಜಾಲರಿ. ಅದರ ಮೆಟಲ್ ಗೇಟ್ ತೆರೆದು ಉದ್ದನೆಯ ಹಜಾರಕ್ಕೆ ಬಂದರೆ, ಯಾವುದೋ ಭದ್ರಕೋಟೆಯೊಳಗೆ ಪ್ರವೇಶ ಸಿಕ್ಕಂತೆ. ಮತ್ತೆ, ಸ್ವಲ್ಪ ಗಲಿಬಿಲಿಗೊಳಿಸಲೆಂಬಂತೆ ಎರಡು ಮೂರು ದೊಡ್ಡ ಬಾಗಿಲುಗಳು ಕಾವಲುಗಾರರಂತೆ ನಿಂತಿವೆ. ಅತ್ತ ಬಾಗಿಲು ತಟ್ಟಿ, ಮತ್ತೊಂದು ತುದಿಯ ಕಾಲಿಂಗ್ ಬೆಲ್ ಅದುಮಿ, ಅತ್ತಿತ್ತ ಶತಪಥ ತಿರುಗಿ ಪ್ರತಿಕ್ರಿಯೆ ಬರದಿದ್ದಾಗ ಹೊರಡಲು ತೊಡಗುತ್ತಿದ್ದಂತೆ  ಒಂದು ಬಾಗಿಲು ತೆರೆದುಕೊಳ್ಳುತ್ತದೆ. ಕಿವಿಗೆ ಕೇಳಿಸದಿದ್ದರೂ, ತಪಸ್ಸು ಭಂಗಗೊಳಿಸಿದ್ದಕ್ಕೆ ನಿಮಗೆ ಸಣ್ಣ ಶಾಪವಂತೂ ಗ್ಯಾರಂಟಿ!

  

ಅದು ಜಯಮ್ಮನವರ ಕರ್ಮಭೂಮಿ-ಸ್ಟುಡಿಯೊ. ಒಂದಲ್ಲ ಒಂದು ಕಲಾಕೃತಿ ಮಾತುಪಡೆಯುವ ಹಂತದಲ್ಲಿದ್ದುದು ನಿಮ್ಮ ಬಲವಂತದ ಅತಿಕ್ರಮಣದಿಂದಾಗಿ ಮೌನತಾಳಿ ಕುಳಿತುಬಿಟ್ಟಿರುತ್ತದೆ. ಆ ದೊಡ್ಡ ಹಾಲ್ ಸುತ್ತಲೂ ಮುಗುಳ್ನಗುವ ಮೂಕಾಂಬಿಕೆ, ಕತ್ತಿ ಹಿಡಿದ ರಾವಣ, ರೆಕ್ಕೆ ಕಳೆದುಕೊಂಡಿರುವ ಜಟಾಯು, ಮುಖ ಮುಚ್ಚಿದ ಸೀತೆ, ಗಧಾಯುಧ್ಧದ ಮಲ್ಲರು, ಬಾಯಿತೆರೆದ ಪೂತನ, ಗದೆಹಿಡಿದು ಅತ್ತ ತಿರುಗಿದ ಹನುಮಂತ, ದಿವ್ಯನಗೆ ಬೀರುತ್ತ ನಿಂತಿರುವ ಕಲಾಂ - ಎಲ್ಲರೂ ಜಯಮ್ಮರೊಂದಿಗಿನ ಸಲ್ಲಾಪ ನಿಲ್ಲಿಸಿ ಅಲುಗಾಡದೆ ನಿಂತಿದ್ದಾರೆ. ಇತ್ತ ಉಗ್ರನರಸಿಂಹನಿಗೆ ಇನ್ನೂ ಕೈ-ಬಾಯಿ ಜೋಡಿಸಿಲ್ಲದ್ದರಿಂದ ಆತ ತನ್ನ ದಪ್ಪನೆಯ ದುಂಡು ಶಂಖದ ಕಣ್ಣುಗಳನ್ನು ನಿಮ್ಮತ್ತಲೇ ತಿರುಗಿಸಿ ಹೂಂಕರಿಸುತ್ತ ಕುಳಿತಿದ್ದಾನೆ. ತೊಂದರೆ ಕೊಟ್ಟಿದ್ದಕ್ಕೆ ನೀವು ಅನಿವಾರ್ಯವಾಗಿ ಭಂಡನಗೆಯೊಂದಿಗೆ ಮಾತಾಡುವುದಾದರೂ ಗಟ್ಟಿದನಿಯಲ್ಲಿ ಮಾತ್ರ ಸಂಪರ್ಕ ಸಾಧ್ಯ. ಅವರಿಗೆ ಕಿವಿ ಕೇಳುವುದಿಲ್ಲ. ಬಹುಷಃ ಇದು ನಿಮಗೆ ಸಣ್ಣ ಶಿಕ್ಷೆಯೂ ಆಗಿರಬಹುದು. ಆದರೆ, ಆ ನಿರಂತರಗಲಾಟೆಯ ರಸ್ತೆಗೆ ಓಗೊಡಲಾಗದೆ, ತಮ್ಮ ತದೇಕಚಿತ್ತದ ಚಿಪ್ಪಿನೊಳಗೆ ಅಡಗಲೆಂದೇ ಅವರಿಗೆ ಕಿವುಡುಂಟಾಗಿರಬಹುದು ಅನಿಸದೆ ಇರದು. ಮುಜುಗರದಿಂದಲೆ ದೊಡ್ಡ ದನಿಯಲ್ಲಿ ಮಾತಿಗೆ ತೊಡಗಿದ ನನಗೆ, ನಂತರ ಅವರ ನಿರರ್ಗಳ ಸ್ವಗತಕ್ಕೆ ಸಾಕ್ಷಿಯಾಗಿ ಮಾತ್ರ ಅಲ್ಲಿದ್ದಂತೆ ಅನಿಸಿತ್ತು. ಜಯಮ್ಮನವರ ತಾದಾತ್ಮ್ಯ ಅಂಥದ್ದು. ಅವರ ಭಾವಾತಿರೇಕದ, ಅಮಿತೋತ್ಸಾಹದ, ಭಕ್ತಿಯ ಪರಾಕಾಷ್ಠೆಯಲ್ಲಿ ಈ ಲೋಕದ ಜಿಗುಟು ಕೊಚ್ಚಿಹೋಗಲೇಬೇಕು!

   ಮೈಸೂರು ಒಡೆಯರ ಕಾಲದಲ್ಲಿ ಸ್ಥಾನಮಾನ ಗಳಿಸಿದ್ದ ಮನೆತನ ಇವರದ್ದು. ತಂದೆ ಎಂ.ವೈ.ಸ್ವಾಮಿ  ಸಿನಿಮಾ ಡಿಸ್ಟ್ರಿಬ್ಯೂಟರ್ ಆಗಿದ್ದವರು. ತಾತ ಯಾಲಕ್ಕಾಚಾರ್ ಪ್ರಮುಖ ಕಂಟ್ರಾಕ್ಟರ್ (ಲಲಿತಮಹಲ್, ದೊಡ್ಡ ಗಡಿಯಾರ, ಚಾಮುಂಡಿ ಬೆಟ್ಟದ ಅರಮನೆ ಇತ್ಯಾದಿ ಕಟ್ಟಡಗಳು ಇವರ ನೇತೃತ್ವದಲ್ಲಿ ಆದದ್ದು.) ಆಗಿನ ಅರಮನೆ ಕಲಾವಿದರಲ್ಲಿ ಒಬ್ಬರಾಗಿದ್ದ ಎಸ್.ಎನ್.ಸ್ವಾಮಿ ಜಯಮ್ಮನವರ ಸೋದರಮಾವ. ಈ ಹಿನ್ನೆಲೆಯಲ್ಲಿ ಬೆಳೆದ ಇವರಿಗೆ ಸಹಜವಾಗಿಯೆ ಕಲೆ-ಕುಶಲತೆಯ ಸೃಜನಶೀಲ ಹುಡುಕಾಟದ ನಂಟು. ತಮ್ಮ ಕಲಾಸಕ್ತಿಗೆ ತಾಯಿಯಿಂದ ಪ್ರಮುಖ ಒತ್ತಾಸೆ ಸಿಕ್ಕಿದ್ದಾಗಿ ಧನ್ಯತೆಯಿಂದ ನೆನಪಿಸಿಕೊಳ್ಳುತ್ತಾರೆ.

   ಮೈಸೂರು ವಿ.ವಿ.ಯಲ್ಲಿ ಸೋಷಿಯಾಲಜಿ ರ್ಯಾಂಕ್ ವಿದ್ಯಾರ್ಥಿಯಾಗಿದ್ದ ಇವರಿಗೆ ಸಿ.ಟಿ.ಐ. ನಲ್ಲಿ (ಈಗಿನ ಕಾವಾ)  ಪ್ರವೇಶ ದೊರಕಿತ್ತಾದರೂ ವೇಳೆ ಹೊಂದಿಸಲಾಗದೆ ಕಲಾವಿದ್ಯಾರ್ಥಿಯಾಗಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಜೆ.ಎಸ್.ಎಸ್.ನ ಡಿ.ಎಡ್. ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ ಜಯಮ್ಮನವರಿಗೆ ತಮ್ಮ ನೆಚ್ಚಿನ ಕಲಾಕೃತಿ ರಚನೆಯಲ್ಲಿ ಸಂಪೂರ್ಣ ತೊಡಗಿಕೊಳ್ಳಲು ಸಮಯ ಸಿಕ್ಕಿದ್ದು ನಿವೃತ್ತಿಯ ನಂತರವೆ. ಅವರೇ ಹೇಳುವಂತೆ ನಿದ್ದೆ-ಊಟ-ಜನ-ಗೌಜು ಎಲ್ಲವನ್ನೂ ಮರೆಸಿಬಿಡುವಂಥ ನಂಟು ಕಲೆಯೊಂದಿಗೆ  ಅವರದ್ದು.

  

'ಪೂತನಾ ಸಂಹಾರ'

'ಸಿಂಹಿಕೆ' (ವಿವರ)

ಅಪರೂಪದ ಮಾಧ್ಯಮವಾದ ಶಂಖ-ಚಿಪ್ಪುಗಳನ್ನು ಬಳಸಿ ಕೃತಿ ರಚಿಸುವಂತೆ ತಮ್ಮ ತಾಯಿಯೆ ಮಾರ್ಗದರ್ಶನ ಮಾಡಿದುದಾಗಿ ಹೇಳುತ್ತಾರೆ. ಶಂಖ ಮತ್ತು ಚಿಪ್ಪುಗಳ ವಿವಿಧ ಅಳತೆ, ಮೈವಳಿಕೆ, ಬಣ್ಣಗಳ ಪ್ರಪಂಚದಲ್ಲೇ ತಮ್ಮ ಕಲ್ಪನಾಲೋಕವನ್ನು ಹರಡಿಕೊಂಡು ಕೂರುವ ಜಯಮ್ಮ ಕನ್ನಡ ಸಾಹಿತ್ಯ, ಪುರಾಣ, ಉಪಕಥೆಗಳಲ್ಲಿ ಬರುವ ದೇವ-ದಾನವರನ್ನು ಶಂಖ ಚಿಪ್ಪುಗಳ ವಿಶಿಷ್ಟ ಮೈವಳಿಕೆಗಳಲ್ಲಿ ಮೂರ್ತಗೊಳಿಸುತ್ತಾರೆ. ಚಾಮುಂಡೇಶ್ವರಿ, ಸರಸ್ವತಿ, ಹನುಮಂತ, ಶೇಷಶಾಯಿ ವಿಷ್ಣು, ಭೀಮ-ದುರ್ಯೋಧನರ ಗಧಾಯುಧ್ಧ, ರುಂಡಮಾಲಿನಿ, ಗಜೇಂದ್ರ ಮೋಕ್ಷ, ಪೂತನಾ ಸಂಹಾರ, ಸಿಂಹಿಕೆ,... ಹೀಗೆ ಎಲ್ಲವೂ ಇವರ ಶಂಖು-ಶುಕ್ತಿಯ(ಚಿಪ್ಪು) ವಿಶಿಷ್ಟ ಕೃತಿಗಳು. ರಾಮಾಯಣದ ಒಕ್ಕಣ್ಣ 'ಕಬಂಧ' ಇಲ್ಲಿ ಹಸಿರು ಮಿಶ್ರಿತ ಕಪ್ಪುಚಿಪ್ಪುಗಳಿಂದ ಒಡಮೂಡಿದ್ದಾನೆ. ಸುಮಾರು ನಾಲ್ಕು ಅಡಿ ಎತ್ತರದ ಅಮೂರ್ತ ದೇಹ ಮತ್ತು ಏಳು ಅಡಿ ಉದ್ದದ ಕೈಗಳು ಈತನದ್ದು. ಚಾಮುಂಡೇಶ್ವರಿ, ಗಧಾಯುಧ್ಧ, ಸೀತಾಪಹರಣ ಮುಂತಾದ ಹಲವು ಬೃಹದ್ಗಾತ್ರದ ಕೃತಿಗಳು ಜಯಮ್ಮನವರಿಂದ ರಚಿತಗೊಂಡಿವೆ.

 
'ಗದಾಯುಧ್ಧ'

'ಕಬಂಧ'

ಶಂಖ ಮತ್ತು ಚಿಪ್ಪುಗಳ ಒರಟು ಮೈವಳಿಕೆ, ಅಪರೂಪದ ವರ್ಣಸಂಯೋಜನೆ ಮತ್ತು ವಿಚಿತ್ರ ಡಿಸೈನ್ ಗಳಿಗೆ ತಕ್ಕ ಪಾತ್ರ ಸೃಷ್ಟಿ ಮಾಡುತ್ತಾರೆ ಜಯಮ್ಮ. ಅದರಿಂದಲೋ ಏನೊ, ಇವರು ಆಯ್ದುಕೊಂಡ ಬಹುಪಾಲು ಪಾತ್ರಗಳು ರಾಕ್ಷಸ ಗಣಗಳದ್ದು! ಬಹುಷಃ ತಮ್ಮ ಅಭಿವ್ಯಕ್ತಿಗೆ ಹೆಚ್ಚು ಸಶಕ್ತ 'ಧ್ವನಿ' ಇದರಿಂದ ದೊರಕಿರಬಹುದು. ದೊಡ್ಡ ದನಿಯಲ್ಲಿ ಚೀತ್ಕರಿಸುವ, ಒಮ್ಮೆಗೇ ಸ್ಫೋಟಗೊಡಂತೆ ಕಾಣುವ ಈ ಕೃತಿಗಳು ಕಲಾವಿದೆಯ ಗಾಢಾನುಭವದ ತೀಕ್ಷ್ಣ ಅಭಿವ್ಯಕ್ತಿಯಂತೆ ಕಾಣುತ್ತವೆ. ಆಂತೆಯೆ ಪ್ರತಿಯೊಂದು ವಿವರವೂ ಸಂಪೂರ್ಣ ಮಗ್ನತೆಯಿಂದ ಸಾಕ್ಷಾತ್ಕರಿಸಿಕೊಂಡಂತಿದ್ದು ಒಟ್ಟಾರೆ ಕಲಾಕೃತಿ ನೋಡುಗನಲ್ಲಿ ಬಹುಕಾಲದವರೆಗೆ ಪ್ರತಿಧ್ವನಿಯ ತರಂಗಗಳನ್ನು ಹೊಮ್ಮಿಸುವಷ್ಟು ಶಕ್ತವಾಗಿವೆ.

   ಪೌರಾಣಿಕ, ಸಾಹಿತ್ಯಿಕ ಪಾತ್ರಗಳಲ್ಲದೆ ಮಾರ್ಷಲ್ ಕಾರ್ಯಪ್ಪ, ರಾಷ್ಟ್ರಪತಿ ಅಬ್ದುಲ್ ಕಲಾಂ ಮುಂತಾದ ತಮ್ಮ ನೆಚ್ಚಿನ ವ್ಯಕ್ತಿಗಳನ್ನೂ ರಚಿಸಿದ್ದಾರೆ ಜಯಮ್ಮ. ಗಾಯಕ ಜೇಸುದಾಸ್ ಕೂಡ ಹಾಡಲಿದ್ದಾರೆ ಇಲ್ಲಿ. ಸದ್ಯಕ್ಕೆ ಹಂಪಿಯ 'ಉಗ್ರನರಸಿಂಹ' ಇವರ ಸ್ಟುಡಿಯೊದಲ್ಲಿ ಅವತರಿಸುತ್ತಿದ್ದಾನೆ. ಮೂವತ್ತು ವರ್ಷಗಳ ಕಲಾನುಭವದಿಂದ ಸಾಕಷ್ಟು ಪರಿಪಕ್ವಗೊಂಡಂತೆ ಕಾಣುವ ಇವರ  ನರಸಿಂಹ ಒಮ್ಮೆ ಮನಸಾರೆ 'ಘರ್ಜಿಸಲು' ತವಕಿಸುತ್ತಿದ್ದಾನೆ!

  
'ಕೊಲ್ಲೂರು ಮೂಕಾಂಬಿಕೆ'

" ಎಷ್ಟ್ ಛೆನಾಗಿದೆ ನೋಡಮ್ಮ,... ಇದ್ ಹೆಂಗ್ ಬಂತು...ನಾನೇ ಮಾಡಿದ್ದಾ ಇದು? ಅಂತ ನಂಗೇ ಆಶ್ಚರ್ಯ ಆಗುತ್ತೆ ಕಣಮ್ಮ!" ಅನ್ನುತ್ತ ಕೆನ್ನೆಯ ಮೇಲೆ ಕೈಯಿಟ್ಟು ಪುಟ್ಟ ಮಗುವಿನಂತೆ ಬೆರಗುಗಣ್ಣು ಬಿಡುತ್ತ ಉದ್ಗರಿಸುತ್ತಾರೆ ಜಯಮ್ಮ. ಕೃತಿರಚನೆಯ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಂಡು ಮಲಗಿದ್ದಾಗ ಕನಸಿನಲ್ಲಿ ಒಂದು ಬಿಳೀಕೈ ತಾನಾಗೇ ಚಿಪ್ಪುಗಳನ್ನು ಜೋಡಿಸಿ ತೋರಿಸಿತಂತೆ. ತಕ್ಷಣ ಎದ್ದು, ಕನಸಿನಲ್ಲಿ ಕಂಡಂತೆಯೆ ಜೋಡಿಸಿ ಅಂಟಿಸಿಟ್ಟರಂತೆ. ಅದು ಅವರ ಮೊದಲ ಮಾಸ್ಟರ್ ಪೀಸ್- 'ಬೆರಳ್ಗೆ ಕೊರಳ್'(ಕುವೆಂಪುರವರಿಂದ ಪ್ರೇರಿತ).

   ಎಪ್ಪತ್ತೆರಡರ ಹರೆಯದ ಜಯಮ್ಮ ತಾವು ಅವಿವಾಹಿತರಾಗಿಯೆ ಉಳಿದುದಕ್ಕೆ ತಮ್ಮ ಹತ್ತಿಕ್ಕಲಾಗದ ಕಲಾಪ್ರೇಮವೇ ಕಾರಣ ಎನ್ನುತ್ತಾರೆ. ತಮ್ಮ ಜೀವನಶೈಲಿಗೆ, ಕಲೆಯ ತುಡಿತಕ್ಕೆ ಹೊಂದುವಾತ ಸಿಗದಿದ್ದರಿಂದ ಹೀಗೆಯೆ ಉಳಿದೆ ಎನ್ನುವ  ಇವರು, ಮದುವೆಯ ಬಂಧನಕ್ಕೆ ಸಿಲುಕದಿರುವುದು ತಮ್ಮ ಅದೃಷ್ಟ ಎಂದು ನಿಟ್ಟುಸಿರುಬಿಡುತ್ತಾರೆ. ಅಕ್ಕ ಸರೋಜಾರವರ ಸಂಸಾರದೊಂದಿಗೆ ತಾವೂ ನೆಲೆಸಿದ್ದಾರೆ. ಸರೋಜಕ್ಕನೇ ಅಮ್ಮ, ಗೆಳತಿ, ತಂಗಿಯ ಕಲಾಕೃತಿಯ ಮೊದಲ ವೀಕ್ಷಕಿ, ವಿಮರ್ಶಕಿ. ಈ ಲೋಕದ ಸಿಹಿಪಾಲೊಂದು ಇವರೊಂದಿಗೇ ನಿರಂತರ ವಾಗಿ ಹೆಪ್ಪುಗಟ್ಟಿರುವುದೇನೋ ಎಂಬಂತೆ ಈ ಅಕ್ಕತಂಗಿಯರು ತಮ್ಮಷ್ಟಕ್ಕೆ ತಾವು ತಮ್ಮದೇ ಭಾವಲಹರಿಯಲ್ಲಿ ಹರಟುತ್ತಾರೆ. ಜಯಮ್ಮನವರ ಕಲಾಕೃತಿಗಳಿಗೆ ಶಾಶ್ವತ ನೆಲೆ ಕಲ್ಪಿಸುವ ಬಗೆಗಿನ ತಳಮಳವೂ ಇವರಲ್ಲಿದೆ.ಕೆಲವು ಕೃತಿಗಳನ್ನು ತಮ್ಮ ಸಂಗ್ರಹಕ್ಕೆ ಪಡೆಯುವುದಾಗಿ ಹೇಳಿದ್ದ ಧರ್ಮಸ್ಥಳದ ವೀರೇಂದ್ರ ಹೆಗಡೆಯವರನ್ನು ಸಾಕಷ್ಟು ಬಾರಿ ಸಂಪರ್ಕಿಸಿದರೂ ಯಾವುದೆ ಪ್ರತಿಕ್ರಿಯೆ ದೊರೆತಿಲ್ಲ. ಇನ್ನು ಮೈಸೂರಿನಲ್ಲೆ ಶಾಶ್ವತ ನೆಲೆ ಕಲ್ಪಿಸುವುದು ಕಲಾಸಕ್ತರ ನೆರವಿನಿಂದ ಮಾತ್ರ ಸಾಧ್ಯವಾಗಬಲ್ಲದು.

 

ಸರೋಜಕ್ಕನೊಂದಿಗೆ ಜಯಮ್ಮನವರು

ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಬಹುಮಾನ ಗಳಿಸಿರುವ ಇವರ ಕೆಲವು ಕಲಾಕೃತಿಗಳು ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರದರ್ಶನಗೊಂಡು ಮೆಚ್ಚುಗೆಗಳಿಸಿವೆ. ಅಲ್ಲದೆ, ಇವರ 'ಸಿಂಹಿಕೆ' ಮತ್ತು 'ಪೂತನಾ ಸಂಹಾರ'  ಲಂಡನ್ ಮತ್ತು ಚೆನ್ನೈ ಪ್ರದರ್ಶನಕ್ಕೆ ಪ್ರಯಾಣ ಬೆಳೆಸಿವೆ.

".. ಕಾಳಿ,..ಶಿರ್ಸಿ ಕಾಳಿ ಮಾಡ್ಬೇಕು, ತುಂಬ ಚೆನಾಗಿದಾಳೆ ಅವ್ಳು..." ಅನ್ನುವಾಗ ಮೈಮೇಲೆ ಕಾಳಿಯನ್ನೇ ಆವಾಹಿಸಿಕೊಂಡಂತೆ ಒಂದುಕ್ಷಣ ಆವೇಶಗೊಳ್ಳುತ್ತಾರೆ. "ಇನ್ನೂ ಎಷ್ಟೆಲ್ಲಾ ಮಾಡ್ಬೇಕು ಕಣಮ್ಮ,.. ನಂಗೆ ಇನ್ನೂ ಜಾಸ್ತಿ ಆಯಸ್ಸು ಬೇಕಿತ್ತು, ಇದನ್ನೆಲ್ಲ ತುಂಬ ಲೇಟಾಗ್ ಶುರುಮಾಡ್ದೆ.." ಎನ್ನುತ್ತ ಕೈಕೈ ಹೊಸಕಿಕೊಳ್ಳುತ್ತ ತಮ್ಮಷ್ಟಕ್ಕೆ ಗೊಣಗಿಕೊಳ್ಳುವಾಗ ನನಗೆ ನಿಜಕ್ಕು ಸಮಾಧಾನ ಮಾಡುವ ವಿಧಾನ ತಿಳಿಯಲಿಲ್ಲ. ಸ್ವಗತದ ಲಹರಿಯಲ್ಲಿದ್ದ ಅವರ ತಣಿಯದ ಹಸಿವಿಗೆ, ದಣಿಯದ ಚೇತನಕ್ಕೆ, ಅಗಾಧ ಬೆರಗು ಮತ್ತು ಶುದ್ಧ ಸಂಭ್ರಮಕ್ಕೆ ಶಿರಬಾಗುವುದಷ್ಟೆ ನನಗೆ ಸಾಧ್ಯವಾದುದು.

    ನೂರು ವರ್ಷ ಹಳೆಯದಾದ ಇವರ ದೊಡ್ಡ ಮನೆಯ ಮಹಡಿಯ ಹಜಾರದಲ್ಲಿ ಅಷ್ಟೂ ಕೃತಿಪಾತ್ರಗಳು ಒಮ್ಮೆಗೆ ಮಾತಾಡತೊಡಗುತ್ತವೆ. ಕೆಳಗಿನ  ತಮ್ಮ ಸ್ಟುಡಿಯೊದಲ್ಲೆ  ಜಯಮ್ಮನವರ ಎಂದಿನ ವಾಸ್ತವ್ಯ. ನೆಚ್ಚಿನ ಕಲಾಕೃತಿಗಳ ನಡುವೆ ಸಂಭ್ರಮ, ತಳಮಳ, ಉತ್ಸಾಹ, ಕನಸುಗಳನ್ನು ಹೊದ್ದ ಜಯಮ್ಮ ಒಮ್ಮೆ ಮಹಾಯೋಗಿನಿಯಂತೆ, ಮತ್ತೊಮ್ಮೆ ಶುಧ್ಧ ಬೆರಗಿನ ಕೂಸಿನಂತೆ, ಮಗದೊಮ್ಮೆ ಯಾವುದೋ ಅಲೌಕಿಕ ರುಚಿ ಚಪ್ಪರಿಸುವ ಸಂತೃಪ್ತಿಯ ಭಾವದಲ್ಲಿ ತಲೆಯಾಡಿಸುತ್ತ ಪುಳಕಗೊಂಡಂತೆ ಕಣ್ಮುಚ್ಚಿ ಕುಳಿತುಬಿಡುತ್ತಾರೆ.
ಜಯಮ್ಮನವರ ವಿಳಾಸ :

1397, 'ಜಯಾ ಶಂಖು-ಶುಕ್ತಿ ಕಲಾಕೇಂದ್ರ'
ಎಸ್.ಬಿ.ಎಂ. ಎದುರು, ನೆಹರು ವೃತ್ತ
ಇರ್ವಿನ್ ರಸ್ತೆ, ಮೈಸೂರು.

ದೂರವಾಣಿ : 0821-2447181


( ಈ ತಿಂಗಳ 'ನಮ್ಮ ಮಾನಸ' ದಲ್ಲಿ ಪ್ರಕಟಿತ. -ಇಳಾ ಪ್ರಕಾಶನ-)