ಸೋಮವಾರ, ನವೆಂಬರ್ 17, 2008

ರೆಡ್ ವೈನ್ ರಾದ್ಧಾಂತ

'Drinking : occasionally'..

ಪ್ರೊಫ಼ೈಲ್ ನಲ್ಲಿದ್ದ ಈ ಸಾಲು ಅಷ್ಟೊಂದು ಮುಖ್ಯ ಅಂತ ಅನಿಸಿರಲಿಲ್ಲ.ಇಷ್ಟೊಂದು ಪ್ರಶ್ನೆಗಳನ್ನು ಹುಟ್ಟುಹಾಕಬಹುದು ಅಂತಾನೂ ಊಹಿಸಿರಲಿಲ್ಲ.ಕೊಡಗಿನ ಮಾಮನ ಮನೆಯ ಗೌಜಿಯಲ್ಲಿ ಯಾವತ್ತೋ ಸ್ವಲ್ಪ ಗುಟುಕರಿಸಿದ್ದ ವೈನ್ ತುಂಬ ಇಷ್ಟ ಆಗಿತ್ತು.ಮನೆಗೆ ವಾಪಸಾದ ಮೇಲೂ ಹಟ ಮಾಡಿ ’ಗೋಲ್ಕೊಂಡ ರೆಡ್ ವೈನ್’ ತರಿಸಿದ್ದೆ.ಅದರ ಸಣ್ಣ,ಉದ್ದನೆ ಕುತ್ತಿಗೆಯ ಬಾಟಲ್ ಕೂಡ ಮುದ್ದಾಗಿತ್ತು.ಅಪ್ಪನ ಮಂಗಳೂರಿನ ಗೆಳೆಯರೊಬ್ಬರು ಇದರ ಔಷಧೀಯ ಗುಣಗಳ ಪಟ್ಟಿಮಾಡಿದ ಮೇಲಂತೂ ಅಧಿಕೃತವಾಗಿ ಪರವಾನಗಿ ಸಿಕ್ಕಂತಾಗಿತ್ತು!ನಾಲಗೆಗೆ ಸಂಪೂರ್ಣ ಜೀವ ಎರೆದುಬಿಡುವ ಅದರ ರುಚಿ ಮತ್ತು ಗಾಢ ಮೋಹಕ ಬಣ್ಣ ಅಧ್ಬುತ ಎನಿಸಿತ್ತು! ಆದರೆ ಯಾವತ್ತೂ ನಿಶೆ ಏರಿಸುವ ಮಟ್ಟಿಗೆ ಅದರ ಸಹವಾಸ ಮಾಡಿರಲಿಲ್ಲವಷ್ಟೆ.

ಹೊಸಪರಿಚಯದ ಆತ ಕೇಳುತ್ತಿದ್ದ..: "ನಿಜಾನ,..?! ನೀನ್ ಕುಡೀತೀಯಾ..?!" ಮಹಾಪರಾಧದ ಪರಮಾವಧಿಯ ಬಗ್ಗೆ ಎಚ್ಚರಿಸುವ ಧಾಟಿಯಲ್ಲಿತ್ತು ಆತನ ಧ್ವನಿ.ತಕ್ಷಣಕ್ಕೆ ಮುಜುಗರ ಎನಿಸಿದರೂ ಪೂರ್ವಾಗ್ರಹದ ಕುರುಡು ಪ್ರಶ್ನೆಯಂತೆ ಕೇಳಿಸಿದ್ದರಿಂದ ಸಣ್ಣ ಸಿಟ್ಟು ಬಂತು.ಆದರೆ ಅದು ಆತನ ಸ್ವಂತ ಪ್ರಶ್ನೆ ಅನಿಸದೆ,ಇಡೀ ವ್ಯವಸ್ಥೆಯ ಪೂರ್ವನಿಯೋಜಿತ ಪರೀಕ್ಷೆಯ ಉರುಹೊಡೆದ ಪದಗಳಂತೆ ಕೇಳಿಸಿ ಅವನ ಬಗ್ಗೆ ಕೊಂಚ ಕರುಣೆಯೂ ಮೂಡಿತ್ತು.

ಹುಡುಗಿಯರನ್ನು ಬಲವಂತದ ಕಟ್ಟುಪಾಡುಗಳ ಚೌಕಟ್ಟಿನ ಒಳಗೇ ನೋಡಲಿಚ್ಛಿಸುವ ಸಮೂಹ ಸನ್ನಿಯಂಥ ಮನಸ್ಥಿತಿಗಿಂತ ಅಸಹ್ಯವಾದುದು ಬೇರೆ ಏನಿರಲು ಸಾಧ್ಯ..?!
ಹಾಗೆಯೇ ಆಧುನಿಕರೆನಿಸಿಕೊಳ್ಳುವ ಧಿಮಾಕಿನ ಅವಸರದಲ್ಲಿ ಕುಡಿತ,ಧೂಮಪಾನದ ಚಟ ಹತ್ತಿಸಿಕೊಳ್ಳುವ ಹುಡುಗಿಯರ ತರ್ಕವೂ ಅಷ್ಟೇ ಅಸಂಬದ್ಧ.

ತನ್ನಷ್ಟಕ್ಕೆ ತಾನಿರುವ,ಅಷ್ಟೊಂದು ಮುದ್ದಾದ ’ರೆಡ್ ವೈನ್’ ಗೆ ಕ್ರಿಮಿನಲ್ ಪಟ್ಟ ಕಟ್ಟುವುದು ಯಾವತ್ತೂ ನನಗಿಷ್ಟವಿಲ್ಲದ ವಿಷಯ!

’chat box’ ಅಲ್ಲಿ ಅವನ ಪ್ರಶ್ನೆ ಹಾಗೇ ಇತ್ತು.ಇದು ಹೊಸದೇನಲ್ಲವಾದ್ದರಿಂದ,ಯಾಕೋ ತಮಾಷೆಯ ಪರಿಧಿಯೊಳಗೆ ಎಳೆಯಬಹುದಾದ ವಿಷಯದಂತೆಯೂ ಇರದಿದ್ದರಿಂದ ನನ್ನನ್ನು ನಾನು ಸಮರ್ಥಿಸಿಕೊಳ್ಳುವ ಯಾವುದೇ ಧಾವಂತ ಇಲ್ಲದೆ ತಣ್ಣಗೆ ಹೇಳಿದೆ..:"ನನ್ನ ಒಳ್ಳೆಯತನ,ಕೆಟ್ಟತನ,ಸಂಕೋಚ,ಹುಚ್ಚು,ಮೊಂಡಾಟ,ಸಿಟ್ಟು...ಎಲ್ಲವನ್ನೂ ಸರಿಯಾಗಿ ತಿಳಿಯಬಲ್ಲ ಗೆಳೆಯರು ನಿಜಕ್ಕೂ ಸಂಭ್ರಮ ಹುಟ್ಟಿಸುತ್ತಾರೆ.ಹೊಗಳುಭಟ್ಟರಂತೆ ಸದಾ ಗುಣಗಾನ ಮಾಡುವವರು ಅಥವಾ ಸೀಮಿತ ಚೌಕಟ್ಟಿನ ಬಣ್ಣದ ಕನ್ನಡಕದ ಮೂಲಕ ನೋಡುವವರು ಬರೀ ಬೋರ್ ಹೊಡೆಸಬಹುದು ಅಷ್ಟೆ.ಹಾಗೇ ತಮ್ಮನ್ನು ತಾವು ಸರ್ವಗುಣಸಂಪನ್ನರಂತೆ ಬಿಂಬಿಸುತ್ತಾ ಶ್ರೀಮದ್ಗಾಂಭೀರ್ಯ ಧರಿಸಿ,ಪದ್ಮಾಸನದಲ್ಲಿ ನೇರ ಸೊಂಟ ಇಟ್ಟು ಬಾಯಿಪಾಠ ಒಪ್ಪಿಸುವವರೂ ನಗು ತರಿಸುತ್ತಾರೆ..."

ಪ್ರೊಫ಼ೈಲ್ ಕಾಲಂ ತುಂಬುವಾಗ ಅದೆಷ್ಟು ಜನರು ತಡವರಿಸಿರಬಹುದು; ಎಂತೆಂಥ ಸೋಗು ಹಾಕಿರಬಹುದು ಎಂದು ನೆನೆದು ನಗು ಉಕ್ಕಿ ಬಂತು. ಯಾವುದನ್ನೂ ಸ್ವಂತದ್ದು ಎನಿಸಲು ಆಸ್ಪದ ಕೊಡದ ಈ ವ್ಯವಸ್ಥೆಯ ಮಾರಣಾಂತಿಕ ಬಿಗಿತದ ಬಗ್ಗೆ ವಿಷಾದವೆನಿಸಿತು.

ಅವನ ಪುನರಾವರ್ತಿತ ಪ್ರಶ್ನೆಗಳಿಗೆ ಉತ್ತರವೆಂಬಂತೆ ಒಂದು 'clear smile' ರವಾನಿಸಿ,ಪ್ರಶ್ನೆ ಕೇಳಿದ್ದರ ಬಗ್ಗೆ ಆತನಲ್ಲಿ ಮೂಡಿರಬಹುದಾದ ಸಣ್ಣ ಅಳುಕನ್ನು ಹಾಗೇ ಇರಲು ಬಿಟ್ಟು, ಲಾಗ್ಔಟ್ ಮಾಡಿ ಸುಮ್ಮನೆ ಕುಳಿತೆ...

ಮಂಗಳವಾರ, ನವೆಂಬರ್ 11, 2008

ತನ್ನರಿವು ತನಗೀವ ತಾವು


ಎಲ್ಲೆಲ್ಲೋ ಕಳೆದುಹೋಗಿಬಿಡುತ್ತಿರುವಂತೆ ಅನಿಸಿದಾಗೆಲ್ಲ ಚೆಲ್ಲಿಹೋದ ಎಲ್ಲವನ್ನೂ ಹೆಕ್ಕಿ,ಇಡಿಯಾಗಿ ಮತ್ತೆ ವಾಸ್ತವಕ್ಕೆ ಎಳೆದು ತರುವುದು ಬರವಣಿಗೆ ಮತ್ತು ಚಿತ್ರಗಳ ಪ್ರಾಮಾಣಿಕ ಮೌನ.ಇದನ್ನೂ ’ವಾಸ್ತವ’ ಎನ್ನುವುದು ಹೇಗೆ..? ಕಲ್ಪನೆ ಮತ್ತು ವಾಸ್ತವಕ್ಕೆ ನನ್ನ ಮಟ್ಟಿಗೆ ಹೆಚ್ಚು ವ್ಯತ್ಯಾಸವೇನೂ ಕಾಣುತ್ತಿಲ್ಲ.ವಾಸ್ತವಿಕತೆಯೆಂಬುದು ನಮ್ಮ ನಮ್ಮ ದೃಷ್ಟಿ ಚಾಚಬಲ್ಲಷ್ಟು ಕಾಲ್ಪನಿಕ ಪರಿಧಿಯೊಳಗೆ ಮಾತ್ರ ಎಂಬುದು ನಿಜವಷ್ಟೆ.

ಬಸ್,ಟ್ರ್ಯಾಫ಼ಿಕ್,ಮಾರ್ಕೆಟ್,ಥಿಯೇಟರ್...ಎಲ್ಲದರ ಬಣ್ಣ,ವಾಸನೆ,ಸದ್ದು,ಸ್ಪರ್ಶ ಸಿಕ್ಕಷ್ಟೂ ದೂರ ಛಿದ್ರವಾಗಿ ಹರಡಿಹೋಗಿರುತ್ತೇನೆ.ಬಸ್ ಇಳಿದು ರಸ್ತೆ ನಡೆಯುವಾಗ ಕಂಡ ಕಾರು,ಸೈಕಲ್,ಜನ ಅಲ್ಲಷ್ಟು,ಇಲ್ಲಷ್ಟು ಉಳಿದು ಮತ್ತೆ ಇಡಿಯಾಗಿ ಮನೆ ಹೊಕ್ಕರೆ ಪುನಃ ಹಂಚಿಕೊಂಡುಬಿಡುವ ಗೋಡೆಯ ಚಿತ್ರ,ಕುರ್ಚಿ ಸಂಸಾರ,ಚಪ್ಪಲಿ ಗೂಡು,ಸ್ವೆಟರ್ ಬಣ್ಣ,ಬೆಡ್ ಶೀಟ್ ಅಂಚಿನ ಡಿಸೈನ್,ದುಪಟ್ಟ,..ಕಡೆಗೆ ನನ್ನ ಕಣ್ಕಪ್ಪು,ಯಾರ್ಡ್ಲಿ ಪರ್ಫ಼್ಯೂಂ...ನನ್ನನ್ನು ಹೀಗೀಗೇ ಇಂತಿಷ್ಟೇ ಎಂದು ಪರಿಚಯಿಸಿಕೊಳ್ಳುವುದು ಹೇಗೆ..?!

ನೋಡಿದ ನೋಟ,ಆಡಿದ ಮಾತು,ತಡವಿದ ರಾಗ ಅಲೆಯಾಗಿ ಎಲ್ಲೆಲ್ಲಿ ಸುತ್ತಿ,ಬಳಸಿ,ಸುಳಿದು ಹರಡಿದೆಯೋ ಅಲ್ಲೆಲ್ಲ ನಾನೇ.
ಅಂದಮೇಲೆ ’ಏಕಾಂಗಿ’ ಅಂತೇನಾದರು ಅನಿಸಿದರೆ ನೆಪ ಹುಡುಕುವ ನನ್ನ ಬಗ್ಗೆ ನನಗೇ ನಗು ಬಂದೀತು.

ಮೊನ್ನೆ ಥಿಯೇಟರ್ನಲ್ಲಿ ’ಫ಼್ಯಾಶನ್’ ನೋಡಿದ ಮೇಲೆ ಹೀಗೆ...ಕಳೆದದ್ದು,ಪಡೆದದ್ದು ಎಲ್ಲ ಗಿರಕಿ ಹೊಡೆಯುತ್ತಾ ’ನಾನು’ ಎಂಬ ಒಟ್ಟು ಮೊತ್ತದ ಅಂದಾಜು ಹಾಕಲು ಹೊರಟುಬಿಟ್ಟಿದೆ ನನ್ನೊಳಗಿನ ನಾನು..!

ಬಾಲಿವುಡ್ ಮಂದಿ ಕೆಲವೊಮ್ಮೆ ಹೀಗೆ ಆಶ್ಚ್ಚರ್ಯ ಹುಟ್ಟಿಸುವಂತೆ ನನ್ನನ್ನು ಕಾಡಿಬಿಡುತ್ತಾರಲ್ಲ ಎಂಬುದೇ ಒಗಟು ಈಗ !
ನೀಟಾದ,ಅಚ್ಚುಕಟ್ಟಾದ ಸೌಂದರ್ಯದ ಬಗ್ಗೆ ಯಾಕೋ ತಾತ್ಸಾರ.’ಸುಂದರ’ ಎನಿಸಿಕೊಳ್ಳುವ ಮುಖಗಳೆಲ್ಲ ಒಂದೇ ಅಚ್ಚಿನ ಎರಕಗಳಂತೆ ಕಂಡು ಕೊನೆಗೆ ಕೃತ್ರಿಮ ಮುಖವಾಡಗಳಾಗಿ ಕಣ್ಣಿಗಷ್ಟೆ ರಾಚಿ ಮರೆಯಾಗಿಬಿಡುತ್ತವೆ.

ರಾಣಿಮುಖರ್ಜಿಯ ಅಳು,ಶಾರುಖ್ ನ ನೋಟ,ಆಮಿರ್ ನ ಸಿಟ್ಟು,ಕಾಜೋಲಳ ತುಂಟತನ...ಇವೆಲ್ಲವುಗಳ ಆವಾಹನೆಯ ಅವರ ಸಾಮರ್ಥ್ಯ ಮಾತ್ರ ಗಣನೆಯಲ್ಲಿ ನಿಂತು, ಬಾಲಿವುಡ್ ಎಂಬ ಬಹುಚರ್ಚಿತ ವಲಯದ ಬೆಡಗು ತಲೆತಿರುಗಿಸುವ ತೀಕ್ಷ್ಣ ಅತ್ತರಿನಂತೆ ಅಡರಿ ನನ್ನನ್ನು ಮತ್ತಷ್ಟು ಅರಸಿಕತೆಗೆ ತಳ್ಳುವುದುಂಟು.

ಹೆಚ್ಚು ಜನಪ್ರಿಯಗೊಂಡ ಯಾವುದೇ ’ಬ್ರ್ಯಾಂಡ್’ ನನ್ನಲ್ಲಿ ಅಷ್ಟೇ ಸಂದೇಹ ಮತ್ತು ಭಯ ಹುಟ್ಟಿಸುತ್ತದೆ.ಜನಪ್ರಿಯತೆಯ ಅಬ್ಬರದಲ್ಲಿ ಕಳೆದು ಹೋಗುತ್ತಾ ನಮ್ಮನ್ನೇ ನಾವು ಮರೆತುಬಿಡುವ ಅಪಾಯದಿಂದ ಸದಾ ಹಿಂದೆಸರಿಯುತ್ತ ಪೆಪ್ಸಿ,ಲ್ಯಾಕ್ಮೆ,ಲಕ್ಸ್ ...ಎಲ್ಲವುಗಳಿಂದ ಸಾಕಷ್ಟು ದೂರವಿದ್ದುಬಿಡುವುದು ನನ್ನಮಟ್ಟಿಗೆ ಸಮಾಧಾನದ ವಿಷಯ.ಕಿವಿಗಡಚಿಕ್ಕುವ ಇವೆಲ್ಲದರ ಸಡಗರದ ಗದ್ದಲ ನಿಧಾನವಾಗಿ ನಮ್ಮ ಎಲ್ಲವನ್ನೂ ಆವರಿಸುತ್ತ ಅತಿಸಹಜವೆಂಬಂತೆ ತನ್ನ ಅಗಾಧ ಭದ್ರಬಾಹುಗಳಿಂದ ಬರಸೆಳೆದು ಪ್ರೀತಿಯ ಭ್ರಮೆ ಬರುವಂತೆ ಗಟ್ಟಿಯಾಗಿ ಅಪ್ಪುತ್ತಾ ಉಸಿರುಗಟ್ಟಿಸಿಬಿಡುವ ಮುನ್ನ ಸರಿಯಾದ ದೂರಕಾಯ್ದುಕೊಂಡುಬಿಡಲು ಹೆಣಗುತ್ತಿರುತ್ತೇನೆ.
ಇವನ್ನೆಲ್ಲ ತಮಾಷೆಯ,ಕೇವಲ ಮರಂಜನೆಯ ವಸ್ತುಗಳಷ್ಟೆ ಎಂದು ನಂಬಿ,ನಿಟ್ಟುಸಿರುಬಿಟ್ಟು ಹಗುರಾಗಿಬಿಡುವಹಾಗಿದ್ದರೆ ಚೆನ್ನಾಗಿತ್ತೇನೋ! ಆದರೆ ಇದು ಅಷ್ಟು ಸುಲಭ ಇರುವಂತೆ ಕಾಣುತ್ತಿಲ್ಲ.ನಮ್ಮ ದೃಷ್ಟಿ,ಗ್ರಹಿಕೆ..ಕಡೆಗೆ ವ್ಯಕ್ತಿತ್ವವನ್ನೂ ಖರೀದಿಸಿಬಿಡುವ ರಾಕ್ಷಸ ಶಕ್ತಿ ಜನಪ್ರಿಯತೆಯ ಲೇಬಲ್ ಗೆ ಇರುತ್ತದೆ !

ಈ ಎಲ್ಲಾ ತಾಕಲಾಟಗಳನ್ನು ಕೆಲಹೊತ್ತು ಪಕ್ಕಕ್ಕೆ ಸರಿಸಿ,ನಿರಾಳವಾಗಿ ಮಧುರ್ ಭಂಡಾರ್ಕರ್ ನ ’ಫ಼್ಯಾಶನ್’ನೋಡಲು ಹೋದೆ.ಜನಪ್ರಿಯ ದೃಷ್ಟಿಯಲ್ಲಿ ’ಸೌಂದರ್ಯ’ದ ಅಳತೆಗೋಲು ಹಿಡಿದು ನೋಡಿದರೆ ಆತ ಕೂಡ ಸುಂದರಾಂಗನೇ.
ಸ್ವಲ್ಪ ಕೂಡ 'ವಕ್ರತೆ' ಇಲ್ಲದ ಅವನಿಂದ ಎಂಥ ಸಿನಿಮಾ ಬಂದಿರಬಹುದು ಎಂಬ ಸಣ್ಣ ಕುಹಕದ ತರ್ಕ ಬಂದು ಹೋಯ್ತು.ನಂತರ ಯಾಕೋ ಕೇಡೆನಿಸಿ,ಆತನ ಬಗ್ಗೆ ಕನಿಕರ ಮೂಡಿದಂತಾಗಿ ಮಾತಿನ ಮಥನಕ್ಕೆ ವಿರಾಮ ಕೊಟ್ಟು ಸಿನಿಮಾ ಮೊರೆಹೋದೆ.

ತನಗೇ ಗೊತ್ತಿದ್ದೋ ಗೊತ್ತಿಲ್ಲದೆಯೋ ಆ ಇಡೀ ಚಿತ್ರ ಆಳವಾದ ಅಲೆಗಳನ್ನು ಸಾಕಷ್ಟು ಸಮರ್ಥವಾಗಿ ಎಬ್ಬಿಸುವಂತೆ ಭಾಸವಾಯ್ತು.ಪ್ರಿಯಾಂಕ,ಕಂಗನಾ ಆಶ್ಚರ್ಯ ಹುಟ್ಟಿಸುವಷ್ಟು ಪ್ರತಿಭಾವಂತರಂತೆ ಕಂಡರು.ಫ಼್ಯಾಶನ್ ಜಗತ್ತಿನ ಥಳುಕಿನ ಹಿಂದಿರುವ ಯಾತನೆ,ದುರಂತಗಳನ್ನು ಕೆಲವು ಫ಼್ರೇಂಗಳಲ್ಲಿ ತೀಕ್ಷ್ಣ ಸಂಭಾಷಣೆಗಳ ಮೂಲಕ ಮನಮುಟ್ಟುವಂತೆ ಕಟ್ಟಿಕೊಟ್ಟಿರುವುದು ಸಿನಿಮಾದ ಹೆಗ್ಗಳಿಕೆ.

ಇದು ಕೇವಲ ಗ್ಲ್ಯಾಮರ್ ಜಗತ್ತಿನ ದುರಂತ ಎನಿಸದೆ ಎಲ್ಲಾ ಮಹತ್ವಾಕಾಂಕ್ಷಿಗಳ ಯಾತನೆ ಎನಿಸುವುದರಿಂದ ಹೆಚ್ಚು ಆಪ್ತವಾಗುತ್ತದೆ.ಯಶಸ್ಸಿನ ಬೆನ್ನಹಿಂದೆ ನಡೆಯಲು ಬೇಕಾದ ತೀಕ್ಷ್ಣ ದೃಷ್ಟಿ ಮತ್ತು ಕೆಚ್ಚೆದೆಯ ಕೃತ್ರಿಮ ಅನಿವಾರ್ಯತೆ ದಂಗುಬಡಿಸುತ್ತದೆ.
ಜನಪ್ರಿಯತೆಯ ತುತ್ತತುದಿಯಲ್ಲಿ ಕಾಣಸಿಗಬಹುದಾದ ಕಿತ್ತುತಿನ್ನುವ ಏಕಾಂತ,ಔದ್ಯೋಗಿಕ-ವೈಯಕ್ತಿಕ ಸಂಬಂಧಗಳ ತಾಕಲಾಟ,ಯಶಸ್ಸಿನ ಮೆಟ್ಟಿಲು ಏರುವಾಗ ಕಾಣಸಿಗುವ ಅವೇ ಮುಖಗಳನ್ನು ಇಳಿಯುವಾಗಲೂ ಎದುರುಗೊಳ್ಳಬೇಕಾದ ವೈರುಧ್ಯ,ನಮ್ಮತನವನ್ನು ಕಳೆದುಕೊಂಡು ಹೊಸ ಪರಿಮಳ-ಸದ್ದು-ಸ್ಪರ್ಶ ಎಲ್ಲದ್ದಕ್ಕೂ ಅಪರಿಚಿತರಾಗಿಬಿಡುವ ದುರಂತ,...ಇವೆಲ್ಲವನ್ನೂ ಬಹುದಿನಗಳವರೆಗೂ ಕಾಡುವಂತೆ ನಮ್ಮೊಂದಿಗೆ ಉಳಿಸಿಬಿಡುವಷ್ಟು ಶಕ್ತವಾಗಿದೆ ಈ ಚಿತ್ರ.

ಕಡೆಗೂ ಯಾವುದೇ ಯಶಸ್ಸು,ಒಣಪ್ರತಿಷ್ಠೆ,ಢಾಂಬಿಕತೆಯ ತಲೆಗೆ ಹೊಡೆದಂತೆ ತನ್ನ ಸ್ಥಿತಿ ಸ್ಥಾಪಿಸುವುದು ಮಾತ್ರ ಮನುಷ್ಯ ಸಂಬಂಧಗಳ ಬೆಚ್ಚನೆಯ ಸ್ಪರ್ಶ,ಪ್ರೀತಿ,ಮಮಕಾರದ ಹಂಬಲ...

’Fashion’ ಇನ್ನಷ್ಟು 'passionate' ಆಗಲು ಸಾಧ್ಯವಿತ್ತೇನೋ ಅನಿಸಿದರೂ ಹೊಸಪ್ರಯತ್ನಕ್ಕೆ ಕೈಹಾಕಿರುವ ಭಂಡಾರ್ಕರ್ ’ಸೌಂದರ್ಯ’ ಮೆಚ್ಚಲೇಬೇಕು !