ಶುಕ್ರವಾರ, ಮಾರ್ಚ್ 6, 2015

"ಅತ್ತಿಹಣ್ಣಲ್ಲಿ ಹುಳು ಅಂತೆಲ್ಲ ನೋಡ್ಬಾರ್ದು; ಸುಮ್ನೆ ತಿನ್ಬೇಕಷ್ಟೆ"



     ಕಲಾವಿದ ಎಂ. ಎಸ್. ಪ್ರಕಾಶ್ ಬಾಬು ಅವರ ಸಿನಿಮಾ 'ಅತ್ತಿಹಣ್ಣು ಮತ್ತು ಕಣಜ' ಇತ್ತೀಚೆಗೆ ಮೈಸೂರಿನಲ್ಲಿ ಪ್ರದರ್ಶನಗೊಂಡಿತು. ಸಿನಿಮಾದ ನಂತರವೂ ತುಂಬಾ ಹೊತ್ತು ಅದರ ಗುಂಗಲ್ಲೇ ಇರುವ ನನಗೆ, ಆ ಕೂಡಲೆ ಪ್ರತಿಕ್ರಿಯಿಸುವುದು ಸ್ವಲ್ಪ ಕಷ್ಟದ ಸಂಗತಿ. ಯಾವುದೇ ಸಿನಿಮಾ ನಮ್ಮೊಳಗೆ ಪ್ರವಹಿಸುವುದಕ್ಕೂ ನಾವು ಅವಕಾಶ ಕೊಡಬೇಕಾಗುತ್ತದೆ. ಆ ಗುಂಗಿಂದ ಹೊರಬರುವವರೆಗೂ ಮೌನವೇ ಲೇಸು ಅಂತನಿಸುತ್ತೆ ನನಗೆ. ಆವತ್ತು ಹೇಳಲಾಗದೇ ಉಳಿದಿದ್ದನ್ನು ಈಗ ಹೀಗೆ ಬರೆಯಬೇಕೆನಿಸಿತು ...





  
    ದೃಶ್ಯ ಮತ್ತು ಶಬ್ದದ ಮೂಲಕ ಕತ್ತಲು ಮತ್ತು ಮೌನದ ಗಾಢತೆಯನ್ನು ಕಟ್ಟಿಕೊಡುವ ಸಿನಿಮಾ - 'ಅತ್ತಿಹಣ್ಣು ಮತ್ತು ಕಣಜ'. ಚಿತ್ರಕಲಾವಿದ ಎಂ.ಎಸ್. ಪ್ರಕಾಶ್ ಬಾಬು ಅವರ ಮೊದಲ ಫೀಚರ್ ಫಿಲ್ಮ್ ಇದು. ದೊಡ್ಡ ಕ್ಯಾನ್ವಾಸ್ ಮೇಲೆ ಅನಂತವಾಗಿ ಹಾಸಿನಿಂತಿರುವ ದಾರಿಗುಂಟ ನಿಲ್ಲದ ಪಯಣ... ನಿರಂತರ ಪಯಣಿಗರು...
'ವಾಹ್!' ಅನಿಸುವ ಅದ್ಭುತ ಶಾಟ್ ಮೂಲಕ ತೆರೆದುಕೊಳ್ಳುವ ಈ ಚಿತ್ರ ನಿಧಾನವಾಗಿ ಚಿತ್ರದ(ಪೇಂಟಿಂಗ್) ಪರಿಭಾಷೆಯಂತೆ ಫ್ರೇಮ್ ಗೊಳ್ಳುತ್ತ, ಸಾಂಕೇತಿಕಗೊಳ್ಳುತ್ತ, ಸ್ತಬ್ಧಗೊಳ್ಳುತ್ತ, ತನ್ನನ್ನು ತಾನು ಚಿತ್ರಿಸಿಕೊಳ್ಳುತ್ತ ನಿಧಾನವಾಗಿ ಸಾಗುತ್ತದೆ... ಹಲವು 'ಸ್ಟಿಲ್ ಲೈಫ್' ಗಳನ್ನು ಒಂದೊಂದಾಗಿ ಜೋಡಿಸಿಟ್ಟು ಚಲನೆಮೂಡಿಸುವಂತೆ ಇದು . ಚಲಿಸಬಲ್ಲ ಪಾತ್ರಗಳೂ ಕೂಡ ಇಲ್ಲಿ 'ಚಿತ್ರ'ಗಳಾಗಿ, ತಮ್ಮನ್ನು ತಾವು ಫ್ರೇಮ್ ಒಳಗೆ ಹೊಂದಿಸಿಕೊಳ್ಳುತ್ತ ನಿಂತುಬಿಡುತ್ತವೆ.  ಕ್ಯಾನ್ವಾಸಿನ ಚಿತ್ರಗಳಿಗೆ ಚಲನೆ ಬಂದಹಾಗೊಮ್ಮೆ ಕಂಡರೆ, ಮತ್ತೊಮ್ಮೆ ಸಿನಿಮಾದ ಪಾತ್ರಗಳೇ ಕ್ಯಾನ್ವಾಸಿಗಿಳಿದು ನಿಂತಹಾಗೂ ಕಾಣುತ್ತೆ! 
ಅನುಪಮ್ ಸೂದ್ ಅವರ ಕಲಾಕೃತಿ

    ಚಿತ್ರದಲ್ಲಿ ನಾಲ್ಕೈದು ಪ್ರಮುಖ ಪಾತ್ರಗಳಿದ್ದರೂ ಸಾಂಕೇತಿಕ ಗ್ರಹಿಕೆಯಾಗಿ ನಿಲ್ಲುವುದು ಮಾತ್ರ ಆಡಮ್ ಮತ್ತು ಈವ್ ರನ್ನು ನೆನಪಿಸುವಂಥ ಗಂಡು ಮತ್ತು ಹೆಣ್ಣು ಪಾತ್ರಗಳೆರಡೇ.

ದೊಡ್ಡ ಅತ್ತಿಹಣ್ಣಿನ ಮರದ ಕೆಳಗೆ ಅತ್ತಿಹಣ್ಣನ್ನು ಹೆಕ್ಕಿ ಉತ್ಸಾಹದಿಂದ ತಿನ್ನಲನುವಾಗುವ  ಆಕೆ,
ಅದನ್ನು ತಡೆಯಬಯಸುವ ಆತ,
"ಅತ್ತಿಹಣ್ಣಲ್ಲಿ ಹುಳು ಅಂತೆಲ್ಲ ನೋಡ್ಬಾರ್ದು; ಸುಮ್ನೆ ತಿನ್ಬೇಕಷ್ಟೆ" ಎನ್ನುವ ಅಶರೀರವಾಣಿಯಂಥ ಧ್ವನಿ ...

ಹೀಗೆ, ಸಂಕೇತಗಳ ಬೆನ್ನುಹತ್ತುವ ಚಿತ್ರ ಗಂಡು-ಹೆಣ್ಣು, ಬದುಕು, ಸಂಬಂಧ, ಪಯಣ, ಪ್ರಣಯ... ಈ ಎಲ್ಲವನ್ನೂ ಗಾಢ ಸ್ತಬ್ಧತೆಯಲ್ಲಿ ಮೂರ್ತಗೊಳಿಸುತ್ತ ಚಲಿಸುತ್ತದೆ. ನಿರ್ದೇಶಕರು ಈ ಇಡೀ ಸಿನಿಮಾವನ್ನು ಪೇಂಟಿಂಗಿನ ಸ್ವರೂಪದಲ್ಲೇ 'ಚಿತ್ರಿಸಲು' ಮಾಡಿರುವ ಎಚ್ಚರದ ಪ್ರಯತ್ನ ಪ್ರತಿಯೊಂದು ಫ್ರೇಮ್ನಲ್ಲೂ ಇದೆ. ಇಲ್ಲಿನ ಪಾತ್ರಗಳು ಪದೇಪದೇ ಅನುಪಮ್ ಸೂದ್ ಮತ್ತು
ಲಕ್ಷ್ಮಗೌಡ್ ಅವರ ಚಿತ್ರಗಳನ್ನು ನೆನಪಿಸುವುದೂ ಇದೇ ಕಾರಣಕ್ಕೆ ! ಪ್ರಮುಖ ಗಂಡುಪಾತ್ರವೊಂದು ಬೋಳುತಲೆ ಹೊಂದಿರುವುದು ಹಾಗೂ ಬೆತ್ತಲಾಗುವುದೂ ಕೂಡ ಇಂತಹ ಎಚ್ಚರದ ಚಿತ್ರಣದಂತೆಯೇ ಕಂಡುಬರುತ್ತದೆ. (ಗುಲ್ಬರ್ಗಾ ಸ್ಕೂಲ್ ಆಫ್ ಆರ್ಟಲ್ಲಿ ಕಲಿತ ಕಲಾವಿದರು ಸಾಮಾನ್ಯವಾಗಿ ಚಿತ್ರಿಸುವ ಬೋಳುತಲೆಯ ಗಂಡಸಿನ ಚಿತ್ರಗಳು ಕೂಡ ನೆನಪಾದವು!)

ಅನುಪಮ್ ಸೂದ್ ಅವರ ಕಲಾಕೃತಿ



    ಕಾರ್ ಡ್ರೈವ್ ಮಾಡುತ್ತ ಪ್ರಯಾಣದ ಉಸ್ತುವಾರಿವಹಿಸುವ  ಆಕೆಯೇ ಈ ಸಿನಿಮಾದ ಮುಖ್ಯ  'ಡ್ರೈವರ್' ಕೂಡ !
ಇಲ್ಲಿನ ಹೆಣ್ಣುಪಾತ್ರಗಳು ಭೂಮಿಯ ಹಾಗೆ, ತಾಯಿಬೇರಿನ ಹಾಗೆ ಗಂಭೀರ ಮೌನಿಗಳು. ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಲೇ ತನ್ನ ಗುರಿಮುಟ್ಟುವುದನ್ನು ಮಾತ್ರ ಧ್ಯೇಯವಾಗಿಸಿಕೊಂಡಿರುವ ರಿಸರ್ಚರ್, ಡಾಕ್ಯುಮೆಂಟರಿ ಫಿಲ್ಮ್ ಮೇಕರ್ ಒಬ್ಬಾಕೆಯಾದರೆ, ಮತ್ತೊಬ್ಬಳು ಕುಡುಕ ಗಂಡನ ಮಡದಿ, ತನ್ನ ಹೊಲಿಗೆಯಂತ್ರದ ಸದ್ದಲ್ಲೇ ಬದುಕಿಗೂ ತೇಪೆ ಹಾಕಿಕೊಳ್ಳುವವಳು.
ಹೊಲಿಗೆ ಮಶೀನೂ ತಾನೂ ಒಂದೇ ಎಂಬಂತೆ ಕಟಕಟಾ ಸದ್ದುಮಾಡುತ್ತ, ತಾನೇ ಒಂದು ಯಂತ್ರವಾಗಿರುವಾಕೆ.
ತನ್ನ ಬೆಕ್ಕುಮರಿಯನ್ನು ಮುದ್ದುಗರೆಯುತ್ತಲೇ ಅದರ ಕೊರಳಿಗೆ ಗಂಟೆ ಬಿಗಿಯುವ ಆಕೆಯ ಮಗಳು...
ಕಣ್ಣುಮುಚ್ಚಿ ಕುಂಟೋಬಿಲ್ಲೆ ಆಡುತ್ತ  'Am I right ?' ಎಂದು ಕೇಳುವ ಕನಸಿನಂಥ ಹುಡುಗಿ..


ಲಕ್ಶ್ಮ ಗೌಡ್ ಅವರ ಕಲಾಕೃತಿ

    ಹೀಗೆ ಸಾಂಕೇತಿಕವಾಗಿ ಅಭಿವ್ಯಕ್ತಗೊಳ್ಳುವ ಈ ಹೆಣ್ಣುಪಾತ್ರಗಳು ಹೆಚ್ಚು ಮಾತಿಗೆ ತೊಡಗದೆ, ಅವರ ಕೆಲಸ ಮತ್ತು ಚಲನೆಯ ಮೂಲಕವೇ ಸದ್ದುಮಾಡುವವರು. ಗಂಡಸಿನ ಪಾತ್ರ ಕೇವಲ ನೆಪಮಾತ್ರಕ್ಕೇನೊ ಎಂಬಂತೆ ತಮ್ಮದೇ ನೆಲದಲ್ಲಿ ತಮ್ಮದೇ ಬೇರುಗಳನ್ನು ಚಿಗುರಿಸಿಕೊಂಡ ಗಟ್ಟಿಜೀವಗಳಂತೆ ಈ ಹೆಂಗಸರು ಕಾಣುತ್ತಾರೆ. ಅಂತೆಯೇ ಇಡೀ ಸಿನಿಮಾ ಕೂಡ ಸ್ತ್ರೀಕೇಂದ್ರಿತ ದೃಷ್ಟಿಯಲ್ಲಿಯೇ ಚಿತ್ರಣಗೊಂಡಿದೆ ಅಂತಲೇ ನನಗನಿಸಿತು. ಅಂದರೆ, ಈ ಸಿನಿಮಾದ ಪ್ರತಿಯೊಂದು ಪಾತ್ರ ಮತ್ತು ಘಟನೆಗಳನ್ನು ಒಬ್ಬ ಹೆಣ್ಣು ಗ್ರಹಿಸಬಹುದಾದ ರೀತಿಯಲ್ಲಿಯೇ ಕಟ್ಟಿಕೊಡಲಾಗಿದೆ. ಇದನ್ನು ಇನ್ನೂ ಸ್ಪಷ್ಟಗೊಳಿಸಿ ಹೇಳುವುದಾದರೆ, ದೂರದ ಯಾವುದೋ ಅಪರಿಚಿತ ಹಳ್ಳಿಗೆ ಕೆಲಸದ ನಿಮಿತ್ತ ಹೋಗುವ ನಗರದ ಮಹಿಳೆಯೊಬ್ಬಳು ಅನಿರೀಕ್ಷಿತವಾಗಿ ಹಲವು ದಿನಗಳ ಕಾಲ ಅಲ್ಲೇ ಉಳಿಯಬೇಕಾಗಿಬಂದಾಗ, ಆಕೆ ಅನುಭವಿಸಬಹುದಾದ ಕಿರಿಕಿರಿ, ಬೋರ್ಡಮ್, ಅಪರಿಚಿತತೆ, ನಿರುತ್ಸಾಹ, ನಿರೀಕ್ಷೆ ಮತ್ತು ಗಾಢಮೌನ ಇಡೀ ಚಿತ್ರದುದ್ದಕ್ಕು ಪ್ರೇಕ್ಷಕರನ್ನೂ ಆವಾಹಿಸಿಕೊಳ್ಳುತ್ತದೆ. ಆಕೆಯ ಪೇಲವ ಮತ್ತು ಬೇಸರದ(ಆದರೆ ದೃಢವಾದ) ಮುಖಭಾವವೇ ಇಡೀ ಚಿತ್ರದ ಸ್ಥಾಯಿಭಾವವೂ ಆಗಿನಿಲ್ಲುತ್ತದೆ. ಇಲ್ಲಿನ ಗಂಡುಪಾತ್ರ ಆ ಹಳ್ಳಿಯ ಕೆಲವರನ್ನು ಪರಿಚಯಿಸಿಕೊಳ್ಳುವ ಪ್ರಯತ್ನ ಮಾಡಿದರೂ ಕೂಡ, ಪ್ರೇಕ್ಷಕರಿಗೆ ಆ ಹಳ್ಳಿ ಅಪರಿಚಿತವಾಗಿಯೇ ಉಳಿದುಬಿಡುತ್ತದೆ. ಹೊರಹೋಗದೆ, ಹೆಚ್ಚು ತಿಳಿಯುವ ಉತ್ಸಾಹ ತೋರದೆ, ತನ್ನಪಾಡಿಗೆ ಉಳಿಯುವ ಆ ಮಹಿಳೆಯ ಮನಸ್ಥಿತಿಯೇ ಪ್ರೇಕ್ಷಕರದ್ದೂ ಆಗಿಬಿಡುವುದು ಇಲ್ಲಿಯೇ! ಕೊಲೆಯನ್ನೂ ಒಳಗೊಂಡಂತೆ ಅಲ್ಲಿ ನಡೆಯುವ ಇತರೆಲ್ಲಾ ಘಟನಾವಳಿಗಳ ಬಗ್ಗೆ ಆಕೆಗಿರುವಷ್ಟೇ ಮಾಹಿತಿ ಪ್ರೇಕ್ಷಕರಿಗೂ ದಕ್ಕುವುದು! ಆಕೆಯ ಒಳತೋಟಿಯೇ ಈ ಇಡೀ ಸಿನಿಮಾದ ಆತ್ಮವೆಂಬಂತೆ ಭಾಸವಾಗುವುದು ನನಗಿಷ್ಟವಾದ ಅಂಶಗಳಲ್ಲೊಂದು.
 


    ಸಿನಿಮಾ ತುಂಬೆಲ್ಲ ಮೋಡಕವಿದುಕೊಂಡಿದ್ದು, ಒಳಪ್ರವಾಹವೊಂದು ಸದ್ದಿಲ್ಲದೆ ನಮ್ಮನ್ನು ಸೆಳೆದೊಯ್ಯುವುದು ಕತ್ತಲೆ ಮತ್ತು ಜಡಿಮಳೆಯ ಕೊನೆಯ ಶಾಟ್ ಗೆ. ಅಷ್ಟುಹೊತ್ತು ಕಂಡಿದ್ದ ಬಿಡಿಬಿಡಿ ಚಿತ್ರಗಳಷ್ಟೂ ಆ ಕತ್ತಲಲ್ಲಿ ಭಾರವಾಗಿ ಸೇರಿಹೋಗುತ್ತವೆ... ಅಷ್ಟಿಷ್ಟು ಸದ್ದುಮಾಡುತ್ತಿದ್ದ ಆ ಲೋಕ ಎಡೆಬಿಡದೆ ಧೋ ಎಂದು ಹರಿಯಲಾರಂಭಿಸುತ್ತದೆ... ಇಡೀ ಸಿನಿಮಾದ ತುಂಬ ಬಿಕ್ಕಳಿಸುತ್ತ ಒತ್ತರಿಸಿಕೊಳ್ಳುತ್ತಿದ್ದ ಕರಿಮೋಡಗಳು ಒಂದೇ ಸಲಕ್ಕೆ ಅಳುವಿನ ಕಟ್ಟೆಯೊಡೆದಂತೆ ಭಾಸವಾಗುತ್ತದೆ! ಇದೇ ಮೊದಲು ಅಥವಾ ಇದೇ ಕೊನೆ ಎಂಬಂತೆಯೂ ಆ ಮಳೆ ಸುರಿಯಲಾರಂಭಿಸುತ್ತದೆ... ಬದುಕಿನ ನಿರಂತರತೆಯನ್ನೂ, ಜೀವಂತಿಕೆಯನ್ನೂ ಇದು ಹಾಡತೊಡಗುತ್ತದೆ..  
ಸಿನಿಮಾದ ಮೊಟ್ಟಮೊದಲ ದೃಶ್ಯದಂತೆಯೇ ಅತ್ಯಂತ ಪರಿಣಾಮಕಾರಿ ನಿರೂಪಣೆ ಇದು. ಮೊದಲ ಮತ್ತು ಕಡೆಯ ಶಾಟ್ಗಳು ಒಟ್ಟು ಸಿನಿಮಾಗೊಂದು ಗಟ್ಟಿಚೌಕಟ್ಟು ಹಾಕಿಕೊಟ್ಟಿವೆ. ಸ್ಕ್ರೀನ್ ಮೇಲೆ ನಿಂತುಹೋದರೂ, ನನ್ನೊಳಗೆ ಮಾತ್ರ ಮೋಡಕವಿದ ಚಿತ್ರಗಳು ಮತ್ತು ಜಡಿಮಳೆಯಲ್ಲಿ ಕೊಚ್ಚಿಹೋದ ಆ ಸದ್ದುಗಳು ಸಿನಿಮಾ ಮುಂದುವರಿಸಿಯೇ ಇತ್ತು...

ಕಲಾವಿದನೊಳಗೆ ಇರಬಹುದಾದ ಗಾಢ ಏಕಾಂತದ ಮೌನ, ಆತನ/ಆಕೆಯ ನಿಗೂಢ ಜಗತ್ತು, ಅಮೂರ್ತ ಮನಸ್ಸಿನಂತೆಯೇ ಎಣಿಕೆಗೆ ಸಿಗದ ಅನೂಹ್ಯ ಭಾವನೆಗಳ ತಾಕಲಾಟ - ಈ ಎಲ್ಲವೂ ಪೇಲವಬಣ್ಣ ಮತ್ತು ಸದ್ದಿನ ಮೂಲಕ ಸಾಕಾರಗೊಳ್ಳುತ್ತವೆ. ಇಲ್ಲಿ ಬಣ್ಣ ಮತ್ತು ಸದ್ದು ಕೂಡ ಪ್ರಮುಖ ಪಾತ್ರಧಾರಿಗಳು! ಇದು ಚಿತ್ರಕಲಾವಿದರೊಬ್ಬರ ಸಿನಿಮಾ ಎಂಬ ಕಾರಣಕ್ಕೆ ಹೆಚ್ಚು ಆಸಕ್ತಿ ಹುಟ್ಟಿಸುವಂಥದ್ದು. ಇದಕ್ಕಾಗಿ ಕಲಾವಿದ ಪ್ರಕಾಶ್ ಬಾಬುರವರಿಗೆ ಅಭಿನಂದನೆಗಳು ಸಲ್ಲಬೇಕು.

ಲಕ್ಶ್ಮ ಗೌಡ್ ಅವರ ಕಲಾಕೃತಿ

    ಆದರೆ, ಇಂಥ ಗಾಢಾನುಭವದ ಹೊರತಾಗಿಯೂ ಕೇಳಬೇಕೆನಿಸಿದ ಕೆಲವು ಪ್ರಶ್ನೆಗಳು ಇವು :

- ಕ್ಯಾಮರಾದ ಮೂಲಕ ಚಿತ್ರಿತಗೊಳ್ಳುವ ಸಿನಿಮಾವೊಂದು ತನ್ನೆಲ್ಲಾ ಸಾಧ್ಯತೆಗಳ ಹೊರಗೆ ಪೇಂಟಿಂಗ್ ಸ್ವರೂಪದ ಚೌಕಟ್ಟಿನಲ್ಲಿಯೇ ಯಾಕೆ ಉಳಿಯಬೇಕು? ಸಿನಿಮಾ ಮಾಧ್ಯಮದ ಮೂಲಕ ಮತ್ತೆ ಯಾಕೆ ಪೇಂಟಿಂಗನ್ನೇ ಪ್ರತಿಪಾದಿಸಬೇಕು?

- ರಿತ್ವಿಕ್ ಘಟಕ್ ಅವರ ಸಿನಿಮಾಗಳು ಅಥವಾ ಇತ್ತೀಚಿನ 'ದೇವ್-ಡಿ'ಯಲ್ಲಿ ಕ್ಯಾಮರಾಗೆ ದಕ್ಕಿರುವ ಅನೂಹ್ಯ ಸ್ವಾತಂತ್ರ್ಯದಹಾಗೆ ಒಂದು ಕನ್ವೆನ್ಷನಲ್ ಚೌಕಟ್ಟಿನ ಹೊರಗೂ ಚಿತ್ರಗಳು ಚಲಿಸಲು ಸಾಧ್ಯವಿರುವಾಗ, ಚಿತ್ರಗಳಿಗೆ ಆ ಸ್ವಾತಂತ್ರ್ಯ ಯಾಕೆ ಕಲ್ಪಿಸಬಾರದು ?

- ಅತಿಯಾದ ಸಿಂಬಾಲಿಸಂ/ಸಾಂಕೇತಿಕತೆ ಕೂಡ ಚಿತ್ರಗಳಿಗೆ ನಾವು ಹಾಕುವ ಚೌಕಟ್ಟಲ್ಲವೆ? ಈ ಮೂಲಕ ಯಾವುದೇ ದೃಶ್ಯಕ್ಕೆ ತಂತಾನೇ ದಕ್ಕಬಹುದಾದ 'ಸ್ವಂತದ' ಆಗುವಿಕೆಯನ್ನು ಮೊಟಕುಗೊಳಿಸಿದಂತೆ ಆಗಲಿಲ್ಲವೆ? 

  


  

    ಒನ್ಲೈನ್ ಸ್ಟೋರಿ ಇಲ್ಲದ, ವಿಶೇಷ ನಿರೂಪಣೆಯ ಚಿತ್ರ 'ಅತ್ತಿಹಣ್ಣು ಮತ್ತು ಕಣಜ'. ಇತ್ತೀಚೆಗೆ ಮೈಸೂರಿನಲ್ಲಿ ಪ್ರದರ್ಶನಗೊಂಡಾಗ, ಬಹುಷಃ ಬೇರೆ ಯಾವ ಸಿನಿಮಾಗಿಂತಲೂ ಹೆಚ್ಚು ಪ್ರಶ್ನೆಗಳನ್ನು ಹುಟ್ಟುಹಾಕಿದ ಸಿನಿಮಾ ಇದು! ಕೆಲವರು ಆಕ್ರೋಶದಿಂದಲೂ, ಮತ್ತೆ ಕೆಲವರು ಕುತೂಹಲದಿಂದಲೂ, ಪ್ರೀತಿಯಿಂದಲೂ ಮಾತಾಡಿದರು, ಪ್ರಶ್ನಿಸಿದರು. ಇದು ಅರ್ಥವಾಗಲಿಲ್ಲ ಎಂಬ ಆಕ್ರೋಶದ ಪ್ರಶ್ನೆಗಳ ಜೊತೆಜೊತೆಗೇ ಇದನ್ನು ಅರ್ಥಮಾಡಿಕೊಳ್ಳುವುದು ಹೇಗೆಂಬ ಕುತೂಹಲ ಮತ್ತು ತುಡಿತವನ್ನು ಹುಟ್ಟುಹಾಕಿದ್ದು ಈ ಸಿನಿಮಾದ ಹೆಗ್ಗಳಿಕೆ ಅಂತಲೇ ನನ್ನ ಅನಿಸಿಕೆ. ಸಿನಿಮಾ ನೋಡುವ ಮತ್ತು ಗ್ರಹಿಸುವ ಅವರವರದ್ದೇ ಆದ ರೀತಿ ಎಲ್ಲರಿಗೂ ಇರುತ್ತೆ. ಅದನ್ನು ತಿದ್ದುವ ಅಥವಾ ಪಾಠ ಹೇಳುವ ಅವಶ್ಯಕತೆಯೇನೂ ಇರುವುದಿಲ್ಲವೇನೊ ! ಆದರೆ, ಹೊಸತನ್ನು ಗ್ರಹಿಸಲು ಬೇಕಾದ ಸಹನೆ ಮತ್ತು ಸಹಾನುಭೂತಿಯ ಸಹೃದಯತೆ ಮಾತ್ರ ಪ್ರೇಕ್ಷಕರಲ್ಲಿ ಮತ್ತಷ್ಟು ಬೇಕಿದೆ.




ಲಕ್ಶ್ಮ ಗೌಡ್ ಅವರ ಕಲಾಕೃತಿ