ಶುಕ್ರವಾರ, ಜುಲೈ 30, 2010

" ಲಯವಾದರೆ ಲಯ ಇರುತ್ತೆ "


ಬಹುಷಃ ನಾನು ನಾನಾಗಿಯೇ ಇರುವಂತೆ ನನ್ನನಿರಿಸುವ ಕೆಲವೇ ಹತ್ತಿರದ ಜೀವಗಳಲ್ಲಿ ಇವರೂ ಒಬ್ಬರು. ಮನಸು ದಿಕ್ಕಾಪಾಲು ಓಲಾಡುವಾಗೆಲ್ಲ ಮತ್ತೆ ಬದುಕಿನ ಸಡಗರ ಮತ್ತು ಮಿತಿಗಳನ್ನು ಕವಿತೆಯೆಂಬ ಸಂಭ್ರಮದಲ್ಲಿ ಸುತ್ತಿ ಕೈಗಿಡುತ್ತ ಕಲ್ಲುಸಕ್ಕರೆಯ ನಗೆ ನಕ್ಕವರು. ನನ್ನನ್ನು ಬಹಳ ಚಿಕ್ಕವಳಿದ್ದಾಗಿಂದ ಕಂಡವರು. ಅವರೊಂದಿಗಿನ ಹರಟೆಯಲ್ಲದ ಹರಟೆ ಯಾವತ್ತೂ ನನ್ನ ಬೆರಗನ್ನು ಹೆಚ್ಚುಗೊಳಿಸುವುದೇ ಅಗಿತ್ತು...ಚಿತ್ರದ ಕ್ಯಾನ್ವಾಸನ್ನು ಎಳೆ ಎಳೆಯಾಗಿ ಬಿಡಿಸುತ್ತ... ಆ ಬಿಡಿಸುವ ನಿಧಾನದಲ್ಲಿ ಒಂದಿಷ್ಟೂ ಬೇಸರಿಸದೆ ಮತ್ತೆ ಅದನ್ನು ಜೋಡಿಸುತ್ತ...
"ಬಹುಷಃ ನಮ್ಮಿಬ್ಬರ ಚರ್ಚೆ ವಿಪರೀತ ಗಹನವಾದ್ದು ಮತ್ತು ಮುಖ್ಯವಾದ್ದು" ಎಂಬುದನ್ನು ಅವರು ನೆನಪಿಸುತ್ತಿದ್ದ ಬಗೆಗೆ ತಲೆದೂಗಿ ಮತ್ತಷ್ಟು ಬೆರಗು ತುಂಬಿಕೊಳ್ಳುತ್ತ ನಾನು ನಾನಾಗಿಬಿಡುತ್ತಿದ್ದುದು ಮತ್ತೆ ನೆನಪಾಯ್ತು.




ಮಂಜುನಾಥ್ ಮಾಮ - ನನ್ನ ಕೆಲವೇ ’ಮಾಮ’ಂದಿರಲ್ಲಿ ಒಬ್ಬರು ! " ಅಪ್ಪ ನಿಮ್ಮೊಂದಿಗೆ ಇರುವಷ್ಟು ಸಲುಗೆಯಿಂದ ನನ್ನೊಂದಿಗೆ ಇರೋದಿಲ್ಲ" - ಎಂಬ ನನ್ನ ಸೀರಿಯಸ್ ಕಂಪ್ಲೇಂಟ್ ಬಗ್ಗೆ ಹೀಗೆ ತಿಳಿಯ ಹೇಳಿದ್ದರು : " ನಿನ್ನೊಂದಿಗೆ ಗೆಳೆತನದ ಸಲುಗೆ ನಿನ್ನ ಗೆಳೆಯನಿಗೆ ಮಾತ್ರ ಸಾಧ್ಯ ಆಗಬಹುದು, ಅಪ್ಪನಿಗೆ ನಿನ್ನ ಅಪ್ಪನಾಗಿ ಅವರದೇ ಆದ ಮಿತಿಗಳಿವೆ." ಈಗಲೂ ನನ್ನ ಗೆಳೆಯನಲ್ಲಿ ನಾನು ಹುಡುಕುತ್ತಿರುವುದು ಬಹುಷಃ ಈ ಅಪ್ಪ ಮತ್ತು ಮಾಮನನ್ನೇ ಇರಬಹುದು !

"ಹಾಡಿದ್ದಷ್ಟೇ ಸಂಗೀತವಲ್ಲ,..ಬರೆದದ್ದಷ್ಟೇ ಕವನ ಅಲ್ಲ; ಹಾಡಿದ್ದರಿಂದ ಸಂಗೀತದ ಇರವು ತಿಳಿವುದು, ಅಗಾಧವಾಗಿ ಇರುವ ಕಾವ್ಯವನ್ನು ತೋರುವುದಕ್ಕಷ್ಟೆ ಕವನ ಬರೆವುದು... ಎನ್ನುವ ಇವರೊಂದಿಗಿನ ನಂಟೆಂದರೆ ನನ್ನ ನಾನಿರುವಂತೆ ತಿಳಿದು ನಾನಾಗುವುದು !

ನೆನ್ನೆ ಇಲ್ಲಿನ ಪುಸ್ತಕ ಪ್ರಾಧಿಕಾರದ ಮಳಿಗೆಯಲ್ಲಿ ಇವರ ಕವನ ವಾಚನವಿದ್ದದ್ದರಿಂದ ಮೊದಲಬಾರಿಗೆ ಮಳಿಗೆಯ ’ತಿಂಗಳ ಕಾರ್ಯಕ್ರಮ’ಕ್ಕೆ ಹೋಗಿದ್ದೆ. ಜೀವನಾನುಭವ ಇವರಲ್ಲಿ ಕವಿತೆಯಾಗುವ ಪರಿ ನಿಜಕ್ಕೂ ಸಂಭ್ರಮದ ಆಚರಣೆಯಂತೆ ಕಾಣುತ್ತದೆ. ಬಹುಷಃ ನೋವನ್ನೂ ಸಂಭ್ರಮಿಸಿಕೊಳ್ಳುವ ತೀವ್ರ ಪ್ರೀತಿಯಿಂದ ಮಾತ್ರ ಇದು ಸಾಧ್ಯ. ಅನುಭವದ ವಿವರಗಳು ತಮ್ಮ ಕವನಕ್ಕಾಗಿಯೇ ಹುಟ್ಟಿವೆಯೇನೋ ಎಂಬಂತೆ ಪದಗಳನ್ನು ಮುದ್ದಿಸುತ್ತ ತಮ್ಮ ಜೀವನದ ಪುಟಗಳನ್ನು ಮುತ್ತಿಟ್ಟು, ಅಮ್ಮನಂತೆ ಅವುಗಳನ್ನೆಲ್ಲ ಕಾಪಿಡುತ್ತ... ತನ್ನ ರಸಪಾಕದ ರುಚಿಗೆ ತಾನೇ ಹಿಗ್ಗುತ್ತ, ಕಟ್ಟಿಟ್ಟ ಬುತ್ತಿಯನ್ನು ನಮ್ಮೆಲ್ಲರಿಗು ಇಷ್ಟಿಷ್ಟೆ ಹಂಚಿ,.. ನಮ್ಮ ಸಂತೃಪ್ತಿಯ ಚಹರೆಯನ್ನು ಕಾಣಲು ಹಾತೊರೆಯುವ ಮಹಾತಾಯಿಯಂತೆಯೇ ಕಂಡರು ಇವರು..ಬಡಿಸಿದ ಇಷ್ಟೇ ಪಾಕದ ರುಚಿಯಲ್ಲಿ ಎಷ್ಟೆಲ್ಲ ಅಡಗಿದೆ ಕಂಡೆಯಾ ಕಂದಾ ಅನ್ನೋಹಾಗೆ !

ಅಗಾಧ ಪ್ರೀತಿ ಮತ್ತು ಬದುಕಿನ ತೀವ್ರತೆ, ಜೊತೆಗೆ ಆತ್ಮಪ್ರತ್ಯಯ - ಈ ಎಲ್ಲದರ ಸಾರಸಂಭ್ರಮ ಈ ಕವಿ. ’ಕವಿ’ ಎಂಬ ವಿಶೇಷಣವನ್ನು ಯಾವುದೇ ಕ್ಲೀಷೆ, ಕೃತಕತೆ ಮತ್ತು ಮಿತಿಗೆ ಒಳಪಡಿಸದೆ ಬಳಸುವುದಾದರೆ, ಅದು ಕವಿ ಎಸ್. ಮಂಜುನಾಥರಿಗೇ ಸಲ್ಲತಕ್ಕದ್ದು !

"ನಾನು ಕವಿತೆ ಬರೀತೀನಿ ಅನ್ನೋದೇ ತಪ್ಪು. ಭಾಷೆಗೇ ಕವನವಾಗುವ ಕಾತುರ ಇದೆ. ಭಾಷೆ - ವಾಕ್ಯವನ್ನು, ಆಲೋಚನೆಯನ್ನು ಮತ್ತು ಭಾವನೆಯನ್ನೂ ಕೂಡ ತಾನೇ ತಿದ್ದಿಕೊಳ್ಳುವಷ್ಟು ಶಕ್ತವಾದುದು. ಮಡಕೆ ರೂಪುಗೊಳ್ಳುವ ಹಂತದಲ್ಲಿ ಹೀಗೆ ಕೈಯಿಟ್ಟು ತೆಗೆದುಬಿಡುವ ಕುಂಬಾರನ ಕೆಲಸದಂತೆ ಇದು...ಕವಿತೆ ಅಂದ್ರೆ, ಅನುಭವದ ಎರಕದಲ್ಲಿ ಮನಸ್ಸನ್ನು ಕರಗಿಸಿಕೊಳ್ಳುವುದು".

ರಿಲ್ಕ್ ಕವಿಯ ಮಾತನ್ನು ಹೀಗೆ ನೆನಪಿಸಿಕೊಂಡರು : "ದೇವರು ಎಲ್ಲೆಡೆ ಪ್ರಕಟವಾಗಲು ಹಾತೊರೆಯುತ್ತಿದ್ದಾನೆ. ಅವನು ನಿನ್ನ ಒಪ್ಪಿಗೆ ಕೇಳ್ತಾ ಇದ್ದಾನೆ. ನೀನು ಯೆಸ್ ಅಂದ್ರೆ ಇರ್ತಾನೆ, ಇಲ್ಲಾಂದ್ರೆ ಇಲ್ಲ !

"’ಲಯ’ ಎಂಬ ಪದಕ್ಕಿರುವ ’ನಾಶ’ ಮತ್ತು ’ರಿದಂ’ ಎಂಬ ಎರಡೂ ಅರ್ಥಗಳೂ ಒಂದೇ ಎಂಬುದು ಇತ್ತೀಚೆಗೆ ನನಗೆ ತಿಳೀತು...ಲಯವಾದರೆ ಲಯ ಇರುತ್ತೆ.."
"ಸರಿಯಾದ ಭವಿಯಾಗುವುದು ಕವಿಯಾಗುವುದಕ್ಕಿಂತ ಹೆಚ್ಚಿನದು" ... ನಿಜ, ಮಗಳು ಸೃಜಿಸಿದ ಸಂಭ್ರಮದ ಸಮುದ್ರದಲ್ಲಿ ಹಾಯಿದೋಣಿಗಳನ್ನು ಸಾಲಾಗಿ ಸಾಗಿಬಿಡುವ ಆಟವಾಡುತ್ತ ಮತ್ತೊಂದು ಮಗು ತಾವಾಗಿ, ಕವಿಗೆ ದೊರಕದೆ ಉಳಿದದ್ದನ್ನೂ ಪಡೆದವರಂತೆ ಕಾಣುತ್ತಾರೆ.
ತನ್ನ ಹೂಮರಿಗಳನ್ನು ಇಷ್ಟಗಲ ರೆಕ್ಕೆ ಹರಡಿ ಕಾಪಿಡುವ ತಾಯಿ ಕೋಳಿಗೆ ಇರುವ ಗತ್ತು, ಎಚ್ಚರ, ಸಣ್ಣ ಭೀತಿ ಮತ್ತು ನಿಷ್ಕಾರಣ ಪ್ರೀತಿಯನ್ನು ನೆನಪಿಸುವ ಇವರ ನಿಲುವು ಕಣ್ತುಂಬಿಕೊಳ್ಳುತ್ತ...ನನ್ನೊಳಗಿನ ಪ್ರೀತಿಯನ್ನು ಹದಗೊಳಿಸುವ ಈ ಮನಸ್ಸುಗಳ ಸಂಭ್ರಮಕ್ಕೆ ಸಂಭ್ರಮಿಸುತ್ತ,... ಓಹ್, ಈ ಜಗತ್ತು ಎಷ್ಟೊಂದು ಸುಂದರವಾಗಿರಲು ಸಾಧ್ಯವಿದೆ ಎಂದುಕೊಳ್ಳುತ್ತ ಮತ್ತೆ ನಾನು ನಾನಾಗಿದ್ದೇನೆ!





’ಜೀವಯಾನ’ದಿಂದ ಮಂಜುನಾಥ್ ಮಾಮನ ಒಂದು ಕವಿತೆ :

ಪಯಣಿಗನೆ ಚಲಿಸು

ಯಾರಯ್ಯಾ ಇಲ್ಲಿ ನಿನ್ನ ಸುಖ ದುಃಖದ ಲೆಕ್ಕವಿಟ್ಟವರು?
ಹಿತ್ತಲಿಂದ ಓಣಿಗೆ ಹರಿದಾಡುತ್ತಿದ್ದ ಹಾವು
ಎಲ್ಲಿ ಹೋಯಿತು ಎಂದು ಕೇಳಿದರೆ
ಮುಖ ನೋಡಿ ನಗೆಯಾಡುವರೆ ಎಲ್ಲರೂ!
ನಿನ್ನ ಕಚ್ಚಿದ ಹಾವನ್ನು ನೀನು ಅನ್ನವಿಕ್ಕಿದ ನಾಯಿಮರಿಯನ್ನು
ಯಾರು ನೆನಪಿಟ್ಟವರು ಇಲ್ಲಿ?
ಅನಾಥವಾಗಿ ಹಸಿದು, ಕಾಮಪೀಡಿತನಾಗಿ
ಜಗದ ಚಕ್ರವರ್ತಿಯೆ ತಾನು ಭಿಕ್ಷುಕವೇಷದಲ್ಲಿರುವೆನೆಂಬ
ಜಂಬದಲ್ಲಿ
ನಡೆದಾಡಿದ ಆ ಎಳಸು ಬಾಲಕನನ್ನಾದರೂ
ಗುರುತಿಸುವರು ಯಾರು? ಅದೇ ಅದೃಷ್ಟ
ದೊರೆಯಾಗಿ ಆನೆಯಮೇಲೆ ಹಾದು ಹೋದವರನುಳಿದು
ಗುರುತುಳಿಯದು
ಸುಖದ ಜಾಡಿನ ಸಾಮಾನ್ಯನದು
ಹಾಗೆಂದೇ- ಪಯಣಿಗನೆ
ಚಲಿಸು ನೀ ನಿರಾಳವಾಗಿ.