ಭಾನುವಾರ, ಅಕ್ಟೋಬರ್ 19, 2008

ಮೋಹದ ಮಾಯೆಗೆ ಯಾವ ರಾಗದ ಹಂಗು..?!
ಬರೆಯಲು ಹೊರಟಿದ್ದು ನೆಚ್ಚಿನ ಕಲಾವಿದನ ಬಗ್ಗೆ. ಬರೆಸಿಕೊಳ್ಳುತ್ತಿರುವುದು ಮಾತ್ರ ನನ್ನೊಂದಿಗೇ ಉಳಿದುಬಿಟ್ಟ ಹಳೆಯ ಗೆಳೆಯನ ನೆನಕೆ. ಎಷ್ಟು ತಾತ್ಸಾರ,ಜಿಗುಪ್ಸೆ,ಕೋಪ ಹುಟ್ಟಿಸಿಕೊಳ್ಳಲು ಪ್ರಯತ್ನಿಸಿದರೂ ಕೊನೆಗೆ ಆವರಿಸಿಬಿಡುವುದು ಆತನ ಒದ್ದೆಕಂಗಳ ಮುದುಡಿದ ಮುಖ,ನಿಸ್ಸಹಾಯಕ ನೋಟ,..ಎಷ್ಟು ಬಗೆದರೂ ತೀರದ ಪ್ರೀತಿಯೊರತೆಯ ಎದೆ...

ಪುಸ್ತಕ ತಿರುವುತ್ತಾ ಸಿಕ್ಕಿದ್ದು - ನಾನು ತೆಗೆದ ಆತನ ಫೋಟೊ. ನಕ್ಕಾಗ ಕಣ್ಪಕ್ಕ ಬೀಳುವ ಗೆರೆ,ಮೀಸೆಯಂಚು,ನಗುಮೆತ್ತಿಕೊಂಡ ಕೆನ್ನೆ ಕಿವಿ ಕುತ್ತಿಗೆ ಇಷ್ಟು ಮಾತ್ರ ಇರುವ ಆತನ ಅದ್ಭುತ ಭಾವ ಚಿತ್ರ ಅದು..! ಹಲವು ವರ್ಷಗಳ ನಂತರ ಯಾಕೋ ಮತ್ತೆ ಆರ್ದ್ರಗೊಳಿಸುತ್ತಿದೆ. ’ಎಮೋಶನಲ್ ಆಗ್ಬ್ಯಾಡ್ಲೆ ಚೆರಿ’ ಎನ್ನುವ ಗೆಳೆಯರ ಕಳಕಳಿಯನ್ನು ಪ್ರೀತಿಯಿಂದ ಪಕ್ಕಕ್ಕಿಟ್ಟು , ತುಸು ಹೊತ್ತು ಮೌನವಾಗಿ ಪ್ರಾಮಾಣಿಕ ಕ್ಷಣಗಳನ್ನು ಪುರಸ್ಕರಿಸಿಬಿಡುವ ಮೋಹ..!

ಈ ಕ್ಷಣದ ’ನಿಜ’ವೆಂಬುದು ಮರುಕ್ಷಣದಲ್ಲಿ ಮತ್ತೆಂದೂ ಬದಲಿಸಲಾಗದ ವೇಷ ತೊಟ್ಟುಬಿಡುವುದು,ಗಂಟಲಲ್ಲಿ ನುಂಗಲಾರದ ತಳಮಳವಾಗಿ ಉಳಿದುಬಿಡುವುದು, ಯಾವ ಬಣ್ಣ ಬಳಿದರೂ ಮರುಕಳಿಸದೆ ಮರೆಯಾಗಿಬಿಡುವುದು, ಸಣ್ಣ ಹತಾಶೆಯ ನಗುವಾಗಿ ಸದಾಕಾಲ ತುಟಿಯಂಚಿನಲ್ಲಿ ಜಾಗ ಪಡೆದುಬಿಡುವುದು... ಗಹಗಹಿಸಿ ನಕ್ಕು ಈ ಎಲ್ಲವನ್ನೂ ಅಲೆಅಲೆಯಾಗಿ ಬಹುದೂರ ತೇಲಿಬಿಟ್ಟುಬಿಡುವ ತುಡಿತ..!

ಭಾವನೆಗಳನ್ನು ತಕ್ಕಡಿಯಲ್ಲಿ ತೂಗಿ,ಅಳೆದು,ಲೆಕ್ಕ ಸಮಗೊಳಿಸಿ..ಪೊಟ್ಟಣ ಕಟ್ಟಿ,..ಬಿಟ್ಟಿ ಹಂಚಿಬಿಡುವುದು ಯಾವ ಘನೋದ್ದೇಶಕ್ಕೋ ಏನೋ !

ಈ ’ಪ್ರೀತಿ-ಪ್ರೇಮ'ಎಂಬ ತುಮುಲವನ್ನು ವೇದಿಕೆ ಹತ್ತಿಸಿ,ಹಾರ ಹಾಕಿ,ಚಪ್ಪಾಳೆ ತಟ್ಟಿ, ಫೋಟೊ ತೆಗೆದು ಶಾಶ್ವತವಾಗಿ ಆಲ್ಬಮ್ ಮಾಡಿ ಸಮಾಧಾನಗೊಳಿಸುವುದು ಸ್ವಲ್ಪ ಜಾಣತನ ಇರಬಹುದು.ಆದರೆ ವ್ಯಂಗ್ಯ,ವಿಮರ್ಶೆ ಎಲ್ಲವು ಅಂತಿಮವಾಗಿ ನಮ್ಮ ನಮ್ಮ ಭಾವಚಿತ್ರಗಳೇ ಆಗಿರುತ್ತವೆ..

ಕಾಡುವ ನೆನಪುಗಳನ್ನು ಯಾವುದಾದರೂ ನೆಪದಲ್ಲಿ ಹಾಳೆಗಳ ನಡುವೆ..ಪೆನ್ಸಿಲ್ ಬಾಕ್ಸ್ ಒಳಗೆ..ಅಥವ ಬಾಚಣಿಗೆಯ ಹಲ್ಲುಗಳ ಮಧ್ಯೆ..ಕಡೆ ಪಕ್ಷ ಕುರ್ತಾ ಜೇಬಿನಲ್ಲೆಲ್ಲಾದರೂ ಅಡಗಿಸಿಟ್ಟು ಮರೆತುಬಿಡುವ ಹುನ್ನಾರ ಯಾಕೋ ಕೈಗೂಡುವಂತೆ ಕಾಣುತ್ತಿಲ್ಲ....

ನಾನು ಗಂಭೀರ ವಿದ್ಯಾರ್ಥಿಯಾಗಲು ಹವಣಿಸಿದಾಗೆಲ್ಲ ಹೀಗೆ ಏನಾದರೊಂದು ನೆಪ ಹಣಕಿ ಹಾಕುತ್ತ ಗೋಳಾಡಿಸುವುದು ಗಮನಿಸಿದರೆ, ಇದು ಟಾಲ್ಸ್ಟಾಯ್ ಕಥೆಗಳಲ್ಲಿ ಬರುವ ಸೈತಾನನ ಮಸಲತ್ತು ಇರಬಹುದೆಂಬ ಸಂದೇಹ ಗಟ್ಟಿಯಾಗುತ್ತಿದೆ.ಆ ಮಹಾಶಯ ಕಾಣಲು ಸಿಕ್ಕರೆ,ಬಳಿ ಕೂರಿಸಿಕೊಂಡು ಪುಸಲಾಯಿಸಿ ಬೀಳ್ಕೊಡುವ ಮಾರ್ಗ ಹುಡುಕುತ್ತಿದ್ದೇನೆ.