ಬುಧವಾರ, ಜೂನ್ 15, 2011

ತಾದಾತ್ಮ್ಯದ ತಾಯಿ ; ಬೆರಗಿನ ಕೂಸು - ವೈ. ಜಯಮ್ಮ
   ನಾನು ಕಾವಾ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಒಮ್ಮೆ ಜಯಮ್ಮನವರ ಮನೆ/ಗ್ಯಾಲರಿಗೆ ಭೇಟಿ ಕೊಟ್ಟ ನೆನಪು. ಮಾಸಲು ಸೀರೆಯ, ಮಂದಕಿವಿಯ, ಈ ಲೋಕ-ಜನ-ಜಂಜಾಟದ ಉಸಾಬರಿಯೆ ಇಲ್ಲದ ನಿರ್ಲಿಪ್ತ ನಿಲುವು. ಕಿವಿ ಕೇಳುತ್ತಿದ್ದಿಲ್ಲವಾದ್ದರಿಂದ ನಮ್ಮಮಾತು, ಅವರ ಉತ್ತರ ಹಿಡಿತಕ್ಕೆ ಸಿಗದ ಬರಿಯ ಶಬ್ದಗಳಂತೆ ಅವರ ಮನೆ ಕಿಟಕಿಯಿಂದ ಜಿಗಿದು ಪಕ್ಕದ ರಸ್ತೆಯ ವಾಹನಗಳ ಚೀರಾಟದೊಂದಿಗೆ ಸೇರಿಹೋಗಿದ್ದವು. ಕಲಾವಿದೆ ಜಯಮ್ಮರನ್ನು ಹೆಚ್ಚು ಹತ್ತಿರದಿಂದ ನೋಡಲು-ಕೇಳಲು-ವಿಸ್ಮಯಗೊಳ್ಳಲು ಸಾಧ್ಯವಾದುದು ಇತ್ತೀಚೆಗೆ.

   ಮೈಸೂರಿನ ಇರ್ವಿನ್ ರಸ್ತೆ ನೆಹರು ಸರ್ಕಲ್ ಸೇರುವಲ್ಲಿ, ಸಿಟಿ ಸೆಂಟ್ರಲ್ ಬ್ಯಾಂಕ್ ಎದುರು ನಿಂತು ಪ್ರಯತ್ನಪೂರ್ವಕ ಕಣ್ಣಾಡಿಸಿದರೆ  'ಜಯಾ ಶಂಖು-ಶುಕ್ತಿ ಕಲಾಕೇಂದ್ರ' ಎಂಬ ಬೋರ್ಡ್ ಕಂಡೀತು. ಅದು ಕಲಾವಿದೆ ವೈ. ಜಯಮ್ಮನವರ ಮನೆ ಮತ್ತು ಗ್ಯಾಲರಿ. ಮೂರುಹೊತ್ತು ಗಿಜಿಗುಡುವ ಆ ರಸ್ತೆಯಿಂದ ಮನೆಯನ್ನು ನೆಪಮಾತ್ರಕ್ಕೆಂಬಂತೆ ವಿಭಜಿಸಿರುವುದು ಜಗುಲಿಯ ತುದಿಯಿಂದ ಬಾಗಿಲೆತ್ತರಕ್ಕೆ ಅಳವಡಿಸಿರುವ ಕಬ್ಬಿಣದ ಜಾಲರಿ. ಅದರ ಮೆಟಲ್ ಗೇಟ್ ತೆರೆದು ಉದ್ದನೆಯ ಹಜಾರಕ್ಕೆ ಬಂದರೆ, ಯಾವುದೋ ಭದ್ರಕೋಟೆಯೊಳಗೆ ಪ್ರವೇಶ ಸಿಕ್ಕಂತೆ. ಮತ್ತೆ, ಸ್ವಲ್ಪ ಗಲಿಬಿಲಿಗೊಳಿಸಲೆಂಬಂತೆ ಎರಡು ಮೂರು ದೊಡ್ಡ ಬಾಗಿಲುಗಳು ಕಾವಲುಗಾರರಂತೆ ನಿಂತಿವೆ. ಅತ್ತ ಬಾಗಿಲು ತಟ್ಟಿ, ಮತ್ತೊಂದು ತುದಿಯ ಕಾಲಿಂಗ್ ಬೆಲ್ ಅದುಮಿ, ಅತ್ತಿತ್ತ ಶತಪಥ ತಿರುಗಿ ಪ್ರತಿಕ್ರಿಯೆ ಬರದಿದ್ದಾಗ ಹೊರಡಲು ತೊಡಗುತ್ತಿದ್ದಂತೆ  ಒಂದು ಬಾಗಿಲು ತೆರೆದುಕೊಳ್ಳುತ್ತದೆ. ಕಿವಿಗೆ ಕೇಳಿಸದಿದ್ದರೂ, ತಪಸ್ಸು ಭಂಗಗೊಳಿಸಿದ್ದಕ್ಕೆ ನಿಮಗೆ ಸಣ್ಣ ಶಾಪವಂತೂ ಗ್ಯಾರಂಟಿ!

  

ಅದು ಜಯಮ್ಮನವರ ಕರ್ಮಭೂಮಿ-ಸ್ಟುಡಿಯೊ. ಒಂದಲ್ಲ ಒಂದು ಕಲಾಕೃತಿ ಮಾತುಪಡೆಯುವ ಹಂತದಲ್ಲಿದ್ದುದು ನಿಮ್ಮ ಬಲವಂತದ ಅತಿಕ್ರಮಣದಿಂದಾಗಿ ಮೌನತಾಳಿ ಕುಳಿತುಬಿಟ್ಟಿರುತ್ತದೆ. ಆ ದೊಡ್ಡ ಹಾಲ್ ಸುತ್ತಲೂ ಮುಗುಳ್ನಗುವ ಮೂಕಾಂಬಿಕೆ, ಕತ್ತಿ ಹಿಡಿದ ರಾವಣ, ರೆಕ್ಕೆ ಕಳೆದುಕೊಂಡಿರುವ ಜಟಾಯು, ಮುಖ ಮುಚ್ಚಿದ ಸೀತೆ, ಗಧಾಯುಧ್ಧದ ಮಲ್ಲರು, ಬಾಯಿತೆರೆದ ಪೂತನ, ಗದೆಹಿಡಿದು ಅತ್ತ ತಿರುಗಿದ ಹನುಮಂತ, ದಿವ್ಯನಗೆ ಬೀರುತ್ತ ನಿಂತಿರುವ ಕಲಾಂ - ಎಲ್ಲರೂ ಜಯಮ್ಮರೊಂದಿಗಿನ ಸಲ್ಲಾಪ ನಿಲ್ಲಿಸಿ ಅಲುಗಾಡದೆ ನಿಂತಿದ್ದಾರೆ. ಇತ್ತ ಉಗ್ರನರಸಿಂಹನಿಗೆ ಇನ್ನೂ ಕೈ-ಬಾಯಿ ಜೋಡಿಸಿಲ್ಲದ್ದರಿಂದ ಆತ ತನ್ನ ದಪ್ಪನೆಯ ದುಂಡು ಶಂಖದ ಕಣ್ಣುಗಳನ್ನು ನಿಮ್ಮತ್ತಲೇ ತಿರುಗಿಸಿ ಹೂಂಕರಿಸುತ್ತ ಕುಳಿತಿದ್ದಾನೆ. ತೊಂದರೆ ಕೊಟ್ಟಿದ್ದಕ್ಕೆ ನೀವು ಅನಿವಾರ್ಯವಾಗಿ ಭಂಡನಗೆಯೊಂದಿಗೆ ಮಾತಾಡುವುದಾದರೂ ಗಟ್ಟಿದನಿಯಲ್ಲಿ ಮಾತ್ರ ಸಂಪರ್ಕ ಸಾಧ್ಯ. ಅವರಿಗೆ ಕಿವಿ ಕೇಳುವುದಿಲ್ಲ. ಬಹುಷಃ ಇದು ನಿಮಗೆ ಸಣ್ಣ ಶಿಕ್ಷೆಯೂ ಆಗಿರಬಹುದು. ಆದರೆ, ಆ ನಿರಂತರಗಲಾಟೆಯ ರಸ್ತೆಗೆ ಓಗೊಡಲಾಗದೆ, ತಮ್ಮ ತದೇಕಚಿತ್ತದ ಚಿಪ್ಪಿನೊಳಗೆ ಅಡಗಲೆಂದೇ ಅವರಿಗೆ ಕಿವುಡುಂಟಾಗಿರಬಹುದು ಅನಿಸದೆ ಇರದು. ಮುಜುಗರದಿಂದಲೆ ದೊಡ್ಡ ದನಿಯಲ್ಲಿ ಮಾತಿಗೆ ತೊಡಗಿದ ನನಗೆ, ನಂತರ ಅವರ ನಿರರ್ಗಳ ಸ್ವಗತಕ್ಕೆ ಸಾಕ್ಷಿಯಾಗಿ ಮಾತ್ರ ಅಲ್ಲಿದ್ದಂತೆ ಅನಿಸಿತ್ತು. ಜಯಮ್ಮನವರ ತಾದಾತ್ಮ್ಯ ಅಂಥದ್ದು. ಅವರ ಭಾವಾತಿರೇಕದ, ಅಮಿತೋತ್ಸಾಹದ, ಭಕ್ತಿಯ ಪರಾಕಾಷ್ಠೆಯಲ್ಲಿ ಈ ಲೋಕದ ಜಿಗುಟು ಕೊಚ್ಚಿಹೋಗಲೇಬೇಕು!

   ಮೈಸೂರು ಒಡೆಯರ ಕಾಲದಲ್ಲಿ ಸ್ಥಾನಮಾನ ಗಳಿಸಿದ್ದ ಮನೆತನ ಇವರದ್ದು. ತಂದೆ ಎಂ.ವೈ.ಸ್ವಾಮಿ  ಸಿನಿಮಾ ಡಿಸ್ಟ್ರಿಬ್ಯೂಟರ್ ಆಗಿದ್ದವರು. ತಾತ ಯಾಲಕ್ಕಾಚಾರ್ ಪ್ರಮುಖ ಕಂಟ್ರಾಕ್ಟರ್ (ಲಲಿತಮಹಲ್, ದೊಡ್ಡ ಗಡಿಯಾರ, ಚಾಮುಂಡಿ ಬೆಟ್ಟದ ಅರಮನೆ ಇತ್ಯಾದಿ ಕಟ್ಟಡಗಳು ಇವರ ನೇತೃತ್ವದಲ್ಲಿ ಆದದ್ದು.) ಆಗಿನ ಅರಮನೆ ಕಲಾವಿದರಲ್ಲಿ ಒಬ್ಬರಾಗಿದ್ದ ಎಸ್.ಎನ್.ಸ್ವಾಮಿ ಜಯಮ್ಮನವರ ಸೋದರಮಾವ. ಈ ಹಿನ್ನೆಲೆಯಲ್ಲಿ ಬೆಳೆದ ಇವರಿಗೆ ಸಹಜವಾಗಿಯೆ ಕಲೆ-ಕುಶಲತೆಯ ಸೃಜನಶೀಲ ಹುಡುಕಾಟದ ನಂಟು. ತಮ್ಮ ಕಲಾಸಕ್ತಿಗೆ ತಾಯಿಯಿಂದ ಪ್ರಮುಖ ಒತ್ತಾಸೆ ಸಿಕ್ಕಿದ್ದಾಗಿ ಧನ್ಯತೆಯಿಂದ ನೆನಪಿಸಿಕೊಳ್ಳುತ್ತಾರೆ.

   ಮೈಸೂರು ವಿ.ವಿ.ಯಲ್ಲಿ ಸೋಷಿಯಾಲಜಿ ರ್ಯಾಂಕ್ ವಿದ್ಯಾರ್ಥಿಯಾಗಿದ್ದ ಇವರಿಗೆ ಸಿ.ಟಿ.ಐ. ನಲ್ಲಿ (ಈಗಿನ ಕಾವಾ)  ಪ್ರವೇಶ ದೊರಕಿತ್ತಾದರೂ ವೇಳೆ ಹೊಂದಿಸಲಾಗದೆ ಕಲಾವಿದ್ಯಾರ್ಥಿಯಾಗಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಜೆ.ಎಸ್.ಎಸ್.ನ ಡಿ.ಎಡ್. ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ ಜಯಮ್ಮನವರಿಗೆ ತಮ್ಮ ನೆಚ್ಚಿನ ಕಲಾಕೃತಿ ರಚನೆಯಲ್ಲಿ ಸಂಪೂರ್ಣ ತೊಡಗಿಕೊಳ್ಳಲು ಸಮಯ ಸಿಕ್ಕಿದ್ದು ನಿವೃತ್ತಿಯ ನಂತರವೆ. ಅವರೇ ಹೇಳುವಂತೆ ನಿದ್ದೆ-ಊಟ-ಜನ-ಗೌಜು ಎಲ್ಲವನ್ನೂ ಮರೆಸಿಬಿಡುವಂಥ ನಂಟು ಕಲೆಯೊಂದಿಗೆ  ಅವರದ್ದು.

  

'ಪೂತನಾ ಸಂಹಾರ'

'ಸಿಂಹಿಕೆ' (ವಿವರ)

ಅಪರೂಪದ ಮಾಧ್ಯಮವಾದ ಶಂಖ-ಚಿಪ್ಪುಗಳನ್ನು ಬಳಸಿ ಕೃತಿ ರಚಿಸುವಂತೆ ತಮ್ಮ ತಾಯಿಯೆ ಮಾರ್ಗದರ್ಶನ ಮಾಡಿದುದಾಗಿ ಹೇಳುತ್ತಾರೆ. ಶಂಖ ಮತ್ತು ಚಿಪ್ಪುಗಳ ವಿವಿಧ ಅಳತೆ, ಮೈವಳಿಕೆ, ಬಣ್ಣಗಳ ಪ್ರಪಂಚದಲ್ಲೇ ತಮ್ಮ ಕಲ್ಪನಾಲೋಕವನ್ನು ಹರಡಿಕೊಂಡು ಕೂರುವ ಜಯಮ್ಮ ಕನ್ನಡ ಸಾಹಿತ್ಯ, ಪುರಾಣ, ಉಪಕಥೆಗಳಲ್ಲಿ ಬರುವ ದೇವ-ದಾನವರನ್ನು ಶಂಖ ಚಿಪ್ಪುಗಳ ವಿಶಿಷ್ಟ ಮೈವಳಿಕೆಗಳಲ್ಲಿ ಮೂರ್ತಗೊಳಿಸುತ್ತಾರೆ. ಚಾಮುಂಡೇಶ್ವರಿ, ಸರಸ್ವತಿ, ಹನುಮಂತ, ಶೇಷಶಾಯಿ ವಿಷ್ಣು, ಭೀಮ-ದುರ್ಯೋಧನರ ಗಧಾಯುಧ್ಧ, ರುಂಡಮಾಲಿನಿ, ಗಜೇಂದ್ರ ಮೋಕ್ಷ, ಪೂತನಾ ಸಂಹಾರ, ಸಿಂಹಿಕೆ,... ಹೀಗೆ ಎಲ್ಲವೂ ಇವರ ಶಂಖು-ಶುಕ್ತಿಯ(ಚಿಪ್ಪು) ವಿಶಿಷ್ಟ ಕೃತಿಗಳು. ರಾಮಾಯಣದ ಒಕ್ಕಣ್ಣ 'ಕಬಂಧ' ಇಲ್ಲಿ ಹಸಿರು ಮಿಶ್ರಿತ ಕಪ್ಪುಚಿಪ್ಪುಗಳಿಂದ ಒಡಮೂಡಿದ್ದಾನೆ. ಸುಮಾರು ನಾಲ್ಕು ಅಡಿ ಎತ್ತರದ ಅಮೂರ್ತ ದೇಹ ಮತ್ತು ಏಳು ಅಡಿ ಉದ್ದದ ಕೈಗಳು ಈತನದ್ದು. ಚಾಮುಂಡೇಶ್ವರಿ, ಗಧಾಯುಧ್ಧ, ಸೀತಾಪಹರಣ ಮುಂತಾದ ಹಲವು ಬೃಹದ್ಗಾತ್ರದ ಕೃತಿಗಳು ಜಯಮ್ಮನವರಿಂದ ರಚಿತಗೊಂಡಿವೆ.

 
'ಗದಾಯುಧ್ಧ'

'ಕಬಂಧ'

ಶಂಖ ಮತ್ತು ಚಿಪ್ಪುಗಳ ಒರಟು ಮೈವಳಿಕೆ, ಅಪರೂಪದ ವರ್ಣಸಂಯೋಜನೆ ಮತ್ತು ವಿಚಿತ್ರ ಡಿಸೈನ್ ಗಳಿಗೆ ತಕ್ಕ ಪಾತ್ರ ಸೃಷ್ಟಿ ಮಾಡುತ್ತಾರೆ ಜಯಮ್ಮ. ಅದರಿಂದಲೋ ಏನೊ, ಇವರು ಆಯ್ದುಕೊಂಡ ಬಹುಪಾಲು ಪಾತ್ರಗಳು ರಾಕ್ಷಸ ಗಣಗಳದ್ದು! ಬಹುಷಃ ತಮ್ಮ ಅಭಿವ್ಯಕ್ತಿಗೆ ಹೆಚ್ಚು ಸಶಕ್ತ 'ಧ್ವನಿ' ಇದರಿಂದ ದೊರಕಿರಬಹುದು. ದೊಡ್ಡ ದನಿಯಲ್ಲಿ ಚೀತ್ಕರಿಸುವ, ಒಮ್ಮೆಗೇ ಸ್ಫೋಟಗೊಡಂತೆ ಕಾಣುವ ಈ ಕೃತಿಗಳು ಕಲಾವಿದೆಯ ಗಾಢಾನುಭವದ ತೀಕ್ಷ್ಣ ಅಭಿವ್ಯಕ್ತಿಯಂತೆ ಕಾಣುತ್ತವೆ. ಆಂತೆಯೆ ಪ್ರತಿಯೊಂದು ವಿವರವೂ ಸಂಪೂರ್ಣ ಮಗ್ನತೆಯಿಂದ ಸಾಕ್ಷಾತ್ಕರಿಸಿಕೊಂಡಂತಿದ್ದು ಒಟ್ಟಾರೆ ಕಲಾಕೃತಿ ನೋಡುಗನಲ್ಲಿ ಬಹುಕಾಲದವರೆಗೆ ಪ್ರತಿಧ್ವನಿಯ ತರಂಗಗಳನ್ನು ಹೊಮ್ಮಿಸುವಷ್ಟು ಶಕ್ತವಾಗಿವೆ.

   ಪೌರಾಣಿಕ, ಸಾಹಿತ್ಯಿಕ ಪಾತ್ರಗಳಲ್ಲದೆ ಮಾರ್ಷಲ್ ಕಾರ್ಯಪ್ಪ, ರಾಷ್ಟ್ರಪತಿ ಅಬ್ದುಲ್ ಕಲಾಂ ಮುಂತಾದ ತಮ್ಮ ನೆಚ್ಚಿನ ವ್ಯಕ್ತಿಗಳನ್ನೂ ರಚಿಸಿದ್ದಾರೆ ಜಯಮ್ಮ. ಗಾಯಕ ಜೇಸುದಾಸ್ ಕೂಡ ಹಾಡಲಿದ್ದಾರೆ ಇಲ್ಲಿ. ಸದ್ಯಕ್ಕೆ ಹಂಪಿಯ 'ಉಗ್ರನರಸಿಂಹ' ಇವರ ಸ್ಟುಡಿಯೊದಲ್ಲಿ ಅವತರಿಸುತ್ತಿದ್ದಾನೆ. ಮೂವತ್ತು ವರ್ಷಗಳ ಕಲಾನುಭವದಿಂದ ಸಾಕಷ್ಟು ಪರಿಪಕ್ವಗೊಂಡಂತೆ ಕಾಣುವ ಇವರ  ನರಸಿಂಹ ಒಮ್ಮೆ ಮನಸಾರೆ 'ಘರ್ಜಿಸಲು' ತವಕಿಸುತ್ತಿದ್ದಾನೆ!

  
'ಕೊಲ್ಲೂರು ಮೂಕಾಂಬಿಕೆ'

" ಎಷ್ಟ್ ಛೆನಾಗಿದೆ ನೋಡಮ್ಮ,... ಇದ್ ಹೆಂಗ್ ಬಂತು...ನಾನೇ ಮಾಡಿದ್ದಾ ಇದು? ಅಂತ ನಂಗೇ ಆಶ್ಚರ್ಯ ಆಗುತ್ತೆ ಕಣಮ್ಮ!" ಅನ್ನುತ್ತ ಕೆನ್ನೆಯ ಮೇಲೆ ಕೈಯಿಟ್ಟು ಪುಟ್ಟ ಮಗುವಿನಂತೆ ಬೆರಗುಗಣ್ಣು ಬಿಡುತ್ತ ಉದ್ಗರಿಸುತ್ತಾರೆ ಜಯಮ್ಮ. ಕೃತಿರಚನೆಯ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಂಡು ಮಲಗಿದ್ದಾಗ ಕನಸಿನಲ್ಲಿ ಒಂದು ಬಿಳೀಕೈ ತಾನಾಗೇ ಚಿಪ್ಪುಗಳನ್ನು ಜೋಡಿಸಿ ತೋರಿಸಿತಂತೆ. ತಕ್ಷಣ ಎದ್ದು, ಕನಸಿನಲ್ಲಿ ಕಂಡಂತೆಯೆ ಜೋಡಿಸಿ ಅಂಟಿಸಿಟ್ಟರಂತೆ. ಅದು ಅವರ ಮೊದಲ ಮಾಸ್ಟರ್ ಪೀಸ್- 'ಬೆರಳ್ಗೆ ಕೊರಳ್'(ಕುವೆಂಪುರವರಿಂದ ಪ್ರೇರಿತ).

   ಎಪ್ಪತ್ತೆರಡರ ಹರೆಯದ ಜಯಮ್ಮ ತಾವು ಅವಿವಾಹಿತರಾಗಿಯೆ ಉಳಿದುದಕ್ಕೆ ತಮ್ಮ ಹತ್ತಿಕ್ಕಲಾಗದ ಕಲಾಪ್ರೇಮವೇ ಕಾರಣ ಎನ್ನುತ್ತಾರೆ. ತಮ್ಮ ಜೀವನಶೈಲಿಗೆ, ಕಲೆಯ ತುಡಿತಕ್ಕೆ ಹೊಂದುವಾತ ಸಿಗದಿದ್ದರಿಂದ ಹೀಗೆಯೆ ಉಳಿದೆ ಎನ್ನುವ  ಇವರು, ಮದುವೆಯ ಬಂಧನಕ್ಕೆ ಸಿಲುಕದಿರುವುದು ತಮ್ಮ ಅದೃಷ್ಟ ಎಂದು ನಿಟ್ಟುಸಿರುಬಿಡುತ್ತಾರೆ. ಅಕ್ಕ ಸರೋಜಾರವರ ಸಂಸಾರದೊಂದಿಗೆ ತಾವೂ ನೆಲೆಸಿದ್ದಾರೆ. ಸರೋಜಕ್ಕನೇ ಅಮ್ಮ, ಗೆಳತಿ, ತಂಗಿಯ ಕಲಾಕೃತಿಯ ಮೊದಲ ವೀಕ್ಷಕಿ, ವಿಮರ್ಶಕಿ. ಈ ಲೋಕದ ಸಿಹಿಪಾಲೊಂದು ಇವರೊಂದಿಗೇ ನಿರಂತರ ವಾಗಿ ಹೆಪ್ಪುಗಟ್ಟಿರುವುದೇನೋ ಎಂಬಂತೆ ಈ ಅಕ್ಕತಂಗಿಯರು ತಮ್ಮಷ್ಟಕ್ಕೆ ತಾವು ತಮ್ಮದೇ ಭಾವಲಹರಿಯಲ್ಲಿ ಹರಟುತ್ತಾರೆ. ಜಯಮ್ಮನವರ ಕಲಾಕೃತಿಗಳಿಗೆ ಶಾಶ್ವತ ನೆಲೆ ಕಲ್ಪಿಸುವ ಬಗೆಗಿನ ತಳಮಳವೂ ಇವರಲ್ಲಿದೆ.ಕೆಲವು ಕೃತಿಗಳನ್ನು ತಮ್ಮ ಸಂಗ್ರಹಕ್ಕೆ ಪಡೆಯುವುದಾಗಿ ಹೇಳಿದ್ದ ಧರ್ಮಸ್ಥಳದ ವೀರೇಂದ್ರ ಹೆಗಡೆಯವರನ್ನು ಸಾಕಷ್ಟು ಬಾರಿ ಸಂಪರ್ಕಿಸಿದರೂ ಯಾವುದೆ ಪ್ರತಿಕ್ರಿಯೆ ದೊರೆತಿಲ್ಲ. ಇನ್ನು ಮೈಸೂರಿನಲ್ಲೆ ಶಾಶ್ವತ ನೆಲೆ ಕಲ್ಪಿಸುವುದು ಕಲಾಸಕ್ತರ ನೆರವಿನಿಂದ ಮಾತ್ರ ಸಾಧ್ಯವಾಗಬಲ್ಲದು.

 

ಸರೋಜಕ್ಕನೊಂದಿಗೆ ಜಯಮ್ಮನವರು

ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಬಹುಮಾನ ಗಳಿಸಿರುವ ಇವರ ಕೆಲವು ಕಲಾಕೃತಿಗಳು ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರದರ್ಶನಗೊಂಡು ಮೆಚ್ಚುಗೆಗಳಿಸಿವೆ. ಅಲ್ಲದೆ, ಇವರ 'ಸಿಂಹಿಕೆ' ಮತ್ತು 'ಪೂತನಾ ಸಂಹಾರ'  ಲಂಡನ್ ಮತ್ತು ಚೆನ್ನೈ ಪ್ರದರ್ಶನಕ್ಕೆ ಪ್ರಯಾಣ ಬೆಳೆಸಿವೆ.

".. ಕಾಳಿ,..ಶಿರ್ಸಿ ಕಾಳಿ ಮಾಡ್ಬೇಕು, ತುಂಬ ಚೆನಾಗಿದಾಳೆ ಅವ್ಳು..." ಅನ್ನುವಾಗ ಮೈಮೇಲೆ ಕಾಳಿಯನ್ನೇ ಆವಾಹಿಸಿಕೊಂಡಂತೆ ಒಂದುಕ್ಷಣ ಆವೇಶಗೊಳ್ಳುತ್ತಾರೆ. "ಇನ್ನೂ ಎಷ್ಟೆಲ್ಲಾ ಮಾಡ್ಬೇಕು ಕಣಮ್ಮ,.. ನಂಗೆ ಇನ್ನೂ ಜಾಸ್ತಿ ಆಯಸ್ಸು ಬೇಕಿತ್ತು, ಇದನ್ನೆಲ್ಲ ತುಂಬ ಲೇಟಾಗ್ ಶುರುಮಾಡ್ದೆ.." ಎನ್ನುತ್ತ ಕೈಕೈ ಹೊಸಕಿಕೊಳ್ಳುತ್ತ ತಮ್ಮಷ್ಟಕ್ಕೆ ಗೊಣಗಿಕೊಳ್ಳುವಾಗ ನನಗೆ ನಿಜಕ್ಕು ಸಮಾಧಾನ ಮಾಡುವ ವಿಧಾನ ತಿಳಿಯಲಿಲ್ಲ. ಸ್ವಗತದ ಲಹರಿಯಲ್ಲಿದ್ದ ಅವರ ತಣಿಯದ ಹಸಿವಿಗೆ, ದಣಿಯದ ಚೇತನಕ್ಕೆ, ಅಗಾಧ ಬೆರಗು ಮತ್ತು ಶುದ್ಧ ಸಂಭ್ರಮಕ್ಕೆ ಶಿರಬಾಗುವುದಷ್ಟೆ ನನಗೆ ಸಾಧ್ಯವಾದುದು.

    ನೂರು ವರ್ಷ ಹಳೆಯದಾದ ಇವರ ದೊಡ್ಡ ಮನೆಯ ಮಹಡಿಯ ಹಜಾರದಲ್ಲಿ ಅಷ್ಟೂ ಕೃತಿಪಾತ್ರಗಳು ಒಮ್ಮೆಗೆ ಮಾತಾಡತೊಡಗುತ್ತವೆ. ಕೆಳಗಿನ  ತಮ್ಮ ಸ್ಟುಡಿಯೊದಲ್ಲೆ  ಜಯಮ್ಮನವರ ಎಂದಿನ ವಾಸ್ತವ್ಯ. ನೆಚ್ಚಿನ ಕಲಾಕೃತಿಗಳ ನಡುವೆ ಸಂಭ್ರಮ, ತಳಮಳ, ಉತ್ಸಾಹ, ಕನಸುಗಳನ್ನು ಹೊದ್ದ ಜಯಮ್ಮ ಒಮ್ಮೆ ಮಹಾಯೋಗಿನಿಯಂತೆ, ಮತ್ತೊಮ್ಮೆ ಶುಧ್ಧ ಬೆರಗಿನ ಕೂಸಿನಂತೆ, ಮಗದೊಮ್ಮೆ ಯಾವುದೋ ಅಲೌಕಿಕ ರುಚಿ ಚಪ್ಪರಿಸುವ ಸಂತೃಪ್ತಿಯ ಭಾವದಲ್ಲಿ ತಲೆಯಾಡಿಸುತ್ತ ಪುಳಕಗೊಂಡಂತೆ ಕಣ್ಮುಚ್ಚಿ ಕುಳಿತುಬಿಡುತ್ತಾರೆ.
ಜಯಮ್ಮನವರ ವಿಳಾಸ :

1397, 'ಜಯಾ ಶಂಖು-ಶುಕ್ತಿ ಕಲಾಕೇಂದ್ರ'
ಎಸ್.ಬಿ.ಎಂ. ಎದುರು, ನೆಹರು ವೃತ್ತ
ಇರ್ವಿನ್ ರಸ್ತೆ, ಮೈಸೂರು.

ದೂರವಾಣಿ : 0821-2447181


( ಈ ತಿಂಗಳ 'ನಮ್ಮ ಮಾನಸ' ದಲ್ಲಿ ಪ್ರಕಟಿತ. -ಇಳಾ ಪ್ರಕಾಶನ-)