ಪ್ರೊಫ಼ೈಲ್ ನಲ್ಲಿದ್ದ ಈ ಸಾಲು ಅಷ್ಟೊಂದು ಮುಖ್ಯ ಅಂತ ಅನಿಸಿರಲಿಲ್ಲ.ಇಷ್ಟೊಂದು ಪ್ರಶ್ನೆಗಳನ್ನು ಹುಟ್ಟುಹಾಕಬಹುದು ಅಂತಾನೂ ಊಹಿಸಿರಲಿಲ್ಲ.ಕೊಡಗಿನ ಮಾಮನ ಮನೆಯ ಗೌಜಿಯಲ್ಲಿ ಯಾವತ್ತೋ ಸ್ವಲ್ಪ ಗುಟುಕರಿಸಿದ್ದ ವೈನ್ ತುಂಬ ಇಷ್ಟ ಆಗಿತ್ತು.ಮನೆಗೆ ವಾಪಸಾದ ಮೇಲೂ ಹಟ ಮಾಡಿ ’ಗೋಲ್ಕೊಂಡ ರೆಡ್ ವೈನ್’ ತರಿಸಿದ್ದೆ.ಅದರ ಸಣ್ಣ,ಉದ್ದನೆ ಕುತ್ತಿಗೆಯ ಬಾಟಲ್ ಕೂಡ ಮುದ್ದಾಗಿತ್ತು.ಅಪ್ಪನ ಮಂಗಳೂರಿನ ಗೆಳೆಯರೊಬ್ಬರು ಇದರ ಔಷಧೀಯ ಗುಣಗಳ ಪಟ್ಟಿಮಾಡಿದ ಮೇಲಂತೂ ಅಧಿಕೃತವಾಗಿ ಪರವಾನಗಿ ಸಿಕ್ಕಂತಾಗಿತ್ತು!ನಾಲಗೆಗೆ ಸಂಪೂರ್ಣ ಜೀವ ಎರೆದುಬಿಡುವ ಅದರ ರುಚಿ ಮತ್ತು ಗಾಢ ಮೋಹಕ ಬಣ್ಣ ಅಧ್ಬುತ ಎನಿಸಿತ್ತು! ಆದರೆ ಯಾವತ್ತೂ ನಿಶೆ ಏರಿಸುವ ಮಟ್ಟಿಗೆ ಅದರ ಸಹವಾಸ ಮಾಡಿರಲಿಲ್ಲವಷ್ಟೆ.
ಹೊಸಪರಿಚಯದ ಆತ ಕೇಳುತ್ತಿದ್ದ..: "ನಿಜಾನ,..?! ನೀನ್ ಕುಡೀತೀಯಾ..?!" ಮಹಾಪರಾಧದ ಪರಮಾವಧಿಯ ಬಗ್ಗೆ ಎಚ್ಚರಿಸುವ ಧಾಟಿಯಲ್ಲಿತ್ತು ಆತನ ಧ್ವನಿ.ತಕ್ಷಣಕ್ಕೆ ಮುಜುಗರ ಎನಿಸಿದರೂ ಪೂರ್ವಾಗ್ರಹದ ಕುರುಡು ಪ್ರಶ್ನೆಯಂತೆ ಕೇಳಿಸಿದ್ದರಿಂದ ಸಣ್ಣ ಸಿಟ್ಟು ಬಂತು.ಆದರೆ ಅದು ಆತನ ಸ್ವಂತ ಪ್ರಶ್ನೆ ಅನಿಸದೆ,ಇಡೀ ವ್ಯವಸ್ಥೆಯ ಪೂರ್ವನಿಯೋಜಿತ ಪರೀಕ್ಷೆಯ ಉರುಹೊಡೆದ ಪದಗಳಂತೆ ಕೇಳಿಸಿ ಅವನ ಬಗ್ಗೆ ಕೊಂಚ ಕರುಣೆಯೂ ಮೂಡಿತ್ತು.

ಹುಡುಗಿಯರನ್ನು ಬಲವಂತದ ಕಟ್ಟುಪಾಡುಗಳ ಚೌಕಟ್ಟಿನ ಒಳಗೇ ನೋಡಲಿಚ್ಛಿಸುವ ಸಮೂಹ ಸನ್ನಿಯಂಥ ಮನಸ್ಥಿತಿಗಿಂತ ಅಸಹ್ಯವಾದುದು ಬೇರೆ ಏನಿರಲು ಸಾಧ್ಯ..?!
ಹಾಗೆಯೇ ಆಧುನಿಕರೆನಿಸಿಕೊಳ್ಳುವ ಧಿಮಾಕಿನ ಅವಸರದಲ್ಲಿ ಕುಡಿತ,ಧೂಮಪಾನದ ಚಟ ಹತ್ತಿಸಿಕೊಳ್ಳುವ ಹುಡುಗಿಯರ ತರ್ಕವೂ ಅಷ್ಟೇ ಅಸಂಬದ್ಧ.
ತನ್ನಷ್ಟಕ್ಕೆ ತಾನಿರುವ,ಅಷ್ಟೊಂದು ಮುದ್ದಾದ ’ರೆಡ್ ವೈನ್’ ಗೆ ಕ್ರಿಮಿನಲ್ ಪಟ್ಟ ಕಟ್ಟುವುದು ಯಾವತ್ತೂ ನನಗಿಷ್ಟವಿಲ್ಲದ ವಿಷಯ!
’chat box’ ಅಲ್ಲಿ ಅವನ ಪ್ರಶ್ನೆ ಹಾಗೇ ಇತ್ತು.ಇದು ಹೊಸದೇನಲ್ಲವಾದ್ದರಿಂದ,ಯಾಕೋ ತಮಾಷೆಯ ಪರಿಧಿಯೊಳಗೆ ಎಳೆಯಬಹುದಾದ ವಿಷಯದಂತೆಯೂ ಇರದಿದ್ದರಿಂದ ನನ್ನನ್ನು ನಾನು ಸಮರ್ಥಿಸಿಕೊಳ್ಳುವ ಯಾವುದೇ ಧಾವಂತ ಇಲ್ಲದೆ ತಣ್ಣಗೆ ಹೇಳಿದೆ..:"ನನ್ನ ಒಳ್ಳೆಯತನ,ಕೆಟ್ಟತನ,ಸಂಕೋಚ,ಹುಚ್ಚು,ಮೊಂಡಾಟ,ಸಿಟ್ಟು...ಎಲ್ಲವನ್ನೂ ಸರಿಯಾಗಿ ತಿಳಿಯಬಲ್ಲ ಗೆಳೆಯರು ನಿಜಕ್ಕೂ ಸಂಭ್ರಮ ಹುಟ್ಟಿಸುತ್ತಾರೆ.ಹೊಗಳುಭಟ್ಟರಂತೆ ಸದಾ ಗುಣಗಾನ ಮಾಡುವವರು ಅಥವಾ ಸೀಮಿತ ಚೌಕಟ್ಟಿನ ಬಣ್ಣದ ಕನ್ನಡಕದ ಮೂಲಕ ನೋಡುವವರು ಬರೀ ಬೋರ್ ಹೊಡೆಸಬಹುದು ಅಷ್ಟೆ.ಹಾಗೇ ತಮ್ಮನ್ನು ತಾವು ಸರ್ವಗುಣಸಂಪನ್ನರಂತೆ ಬಿಂಬಿಸುತ್ತಾ ಶ್ರೀಮದ್ಗಾಂಭೀರ್ಯ ಧರಿಸಿ,ಪದ್ಮಾಸನದಲ್ಲಿ ನೇರ ಸೊಂಟ ಇಟ್ಟು ಬಾಯಿಪಾಠ ಒಪ್ಪಿಸುವವರೂ ನಗು ತರಿಸುತ್ತಾರೆ..."
ಪ್ರೊಫ಼ೈಲ್ ಕಾಲಂ ತುಂಬುವಾಗ ಅದೆಷ್ಟು ಜನರು ತಡವರಿಸಿರಬಹುದು; ಎಂತೆಂಥ ಸೋಗು ಹಾಕಿರಬಹುದು ಎಂದು ನೆನೆದು ನಗು ಉಕ್ಕಿ ಬಂತು. ಯಾವುದನ್ನೂ ಸ್ವಂತದ್ದು ಎನಿಸಲು ಆಸ್ಪದ ಕೊಡದ ಈ ವ್ಯವಸ್ಥೆಯ ಮಾರಣಾಂತಿಕ ಬಿಗಿತದ ಬಗ್ಗೆ ವಿಷಾದವೆನಿಸಿತು.
ಅವನ ಪುನರಾವರ್ತಿತ ಪ್ರಶ್ನೆಗಳಿಗೆ ಉತ್ತರವೆಂಬಂತೆ ಒಂದು 'clear smile' ರವಾನಿಸಿ,ಪ್ರಶ್ನೆ ಕೇಳಿದ್ದರ ಬಗ್ಗೆ ಆತನಲ್ಲಿ ಮೂಡಿರಬಹುದಾದ ಸಣ್ಣ ಅಳುಕನ್ನು ಹಾಗೇ ಇರಲು ಬಿಟ್ಟು, ಲಾಗ್ಔಟ್ ಮಾಡಿ ಸುಮ್ಮನೆ ಕುಳಿತೆ...