ಸೋಮವಾರ, ನವೆಂಬರ್ 17, 2008

ರೆಡ್ ವೈನ್ ರಾದ್ಧಾಂತ

'Drinking : occasionally'..

ಪ್ರೊಫ಼ೈಲ್ ನಲ್ಲಿದ್ದ ಈ ಸಾಲು ಅಷ್ಟೊಂದು ಮುಖ್ಯ ಅಂತ ಅನಿಸಿರಲಿಲ್ಲ.ಇಷ್ಟೊಂದು ಪ್ರಶ್ನೆಗಳನ್ನು ಹುಟ್ಟುಹಾಕಬಹುದು ಅಂತಾನೂ ಊಹಿಸಿರಲಿಲ್ಲ.ಕೊಡಗಿನ ಮಾಮನ ಮನೆಯ ಗೌಜಿಯಲ್ಲಿ ಯಾವತ್ತೋ ಸ್ವಲ್ಪ ಗುಟುಕರಿಸಿದ್ದ ವೈನ್ ತುಂಬ ಇಷ್ಟ ಆಗಿತ್ತು.ಮನೆಗೆ ವಾಪಸಾದ ಮೇಲೂ ಹಟ ಮಾಡಿ ’ಗೋಲ್ಕೊಂಡ ರೆಡ್ ವೈನ್’ ತರಿಸಿದ್ದೆ.ಅದರ ಸಣ್ಣ,ಉದ್ದನೆ ಕುತ್ತಿಗೆಯ ಬಾಟಲ್ ಕೂಡ ಮುದ್ದಾಗಿತ್ತು.ಅಪ್ಪನ ಮಂಗಳೂರಿನ ಗೆಳೆಯರೊಬ್ಬರು ಇದರ ಔಷಧೀಯ ಗುಣಗಳ ಪಟ್ಟಿಮಾಡಿದ ಮೇಲಂತೂ ಅಧಿಕೃತವಾಗಿ ಪರವಾನಗಿ ಸಿಕ್ಕಂತಾಗಿತ್ತು!ನಾಲಗೆಗೆ ಸಂಪೂರ್ಣ ಜೀವ ಎರೆದುಬಿಡುವ ಅದರ ರುಚಿ ಮತ್ತು ಗಾಢ ಮೋಹಕ ಬಣ್ಣ ಅಧ್ಬುತ ಎನಿಸಿತ್ತು! ಆದರೆ ಯಾವತ್ತೂ ನಿಶೆ ಏರಿಸುವ ಮಟ್ಟಿಗೆ ಅದರ ಸಹವಾಸ ಮಾಡಿರಲಿಲ್ಲವಷ್ಟೆ.

ಹೊಸಪರಿಚಯದ ಆತ ಕೇಳುತ್ತಿದ್ದ..: "ನಿಜಾನ,..?! ನೀನ್ ಕುಡೀತೀಯಾ..?!" ಮಹಾಪರಾಧದ ಪರಮಾವಧಿಯ ಬಗ್ಗೆ ಎಚ್ಚರಿಸುವ ಧಾಟಿಯಲ್ಲಿತ್ತು ಆತನ ಧ್ವನಿ.ತಕ್ಷಣಕ್ಕೆ ಮುಜುಗರ ಎನಿಸಿದರೂ ಪೂರ್ವಾಗ್ರಹದ ಕುರುಡು ಪ್ರಶ್ನೆಯಂತೆ ಕೇಳಿಸಿದ್ದರಿಂದ ಸಣ್ಣ ಸಿಟ್ಟು ಬಂತು.ಆದರೆ ಅದು ಆತನ ಸ್ವಂತ ಪ್ರಶ್ನೆ ಅನಿಸದೆ,ಇಡೀ ವ್ಯವಸ್ಥೆಯ ಪೂರ್ವನಿಯೋಜಿತ ಪರೀಕ್ಷೆಯ ಉರುಹೊಡೆದ ಪದಗಳಂತೆ ಕೇಳಿಸಿ ಅವನ ಬಗ್ಗೆ ಕೊಂಚ ಕರುಣೆಯೂ ಮೂಡಿತ್ತು.

ಹುಡುಗಿಯರನ್ನು ಬಲವಂತದ ಕಟ್ಟುಪಾಡುಗಳ ಚೌಕಟ್ಟಿನ ಒಳಗೇ ನೋಡಲಿಚ್ಛಿಸುವ ಸಮೂಹ ಸನ್ನಿಯಂಥ ಮನಸ್ಥಿತಿಗಿಂತ ಅಸಹ್ಯವಾದುದು ಬೇರೆ ಏನಿರಲು ಸಾಧ್ಯ..?!
ಹಾಗೆಯೇ ಆಧುನಿಕರೆನಿಸಿಕೊಳ್ಳುವ ಧಿಮಾಕಿನ ಅವಸರದಲ್ಲಿ ಕುಡಿತ,ಧೂಮಪಾನದ ಚಟ ಹತ್ತಿಸಿಕೊಳ್ಳುವ ಹುಡುಗಿಯರ ತರ್ಕವೂ ಅಷ್ಟೇ ಅಸಂಬದ್ಧ.

ತನ್ನಷ್ಟಕ್ಕೆ ತಾನಿರುವ,ಅಷ್ಟೊಂದು ಮುದ್ದಾದ ’ರೆಡ್ ವೈನ್’ ಗೆ ಕ್ರಿಮಿನಲ್ ಪಟ್ಟ ಕಟ್ಟುವುದು ಯಾವತ್ತೂ ನನಗಿಷ್ಟವಿಲ್ಲದ ವಿಷಯ!

’chat box’ ಅಲ್ಲಿ ಅವನ ಪ್ರಶ್ನೆ ಹಾಗೇ ಇತ್ತು.ಇದು ಹೊಸದೇನಲ್ಲವಾದ್ದರಿಂದ,ಯಾಕೋ ತಮಾಷೆಯ ಪರಿಧಿಯೊಳಗೆ ಎಳೆಯಬಹುದಾದ ವಿಷಯದಂತೆಯೂ ಇರದಿದ್ದರಿಂದ ನನ್ನನ್ನು ನಾನು ಸಮರ್ಥಿಸಿಕೊಳ್ಳುವ ಯಾವುದೇ ಧಾವಂತ ಇಲ್ಲದೆ ತಣ್ಣಗೆ ಹೇಳಿದೆ..:"ನನ್ನ ಒಳ್ಳೆಯತನ,ಕೆಟ್ಟತನ,ಸಂಕೋಚ,ಹುಚ್ಚು,ಮೊಂಡಾಟ,ಸಿಟ್ಟು...ಎಲ್ಲವನ್ನೂ ಸರಿಯಾಗಿ ತಿಳಿಯಬಲ್ಲ ಗೆಳೆಯರು ನಿಜಕ್ಕೂ ಸಂಭ್ರಮ ಹುಟ್ಟಿಸುತ್ತಾರೆ.ಹೊಗಳುಭಟ್ಟರಂತೆ ಸದಾ ಗುಣಗಾನ ಮಾಡುವವರು ಅಥವಾ ಸೀಮಿತ ಚೌಕಟ್ಟಿನ ಬಣ್ಣದ ಕನ್ನಡಕದ ಮೂಲಕ ನೋಡುವವರು ಬರೀ ಬೋರ್ ಹೊಡೆಸಬಹುದು ಅಷ್ಟೆ.ಹಾಗೇ ತಮ್ಮನ್ನು ತಾವು ಸರ್ವಗುಣಸಂಪನ್ನರಂತೆ ಬಿಂಬಿಸುತ್ತಾ ಶ್ರೀಮದ್ಗಾಂಭೀರ್ಯ ಧರಿಸಿ,ಪದ್ಮಾಸನದಲ್ಲಿ ನೇರ ಸೊಂಟ ಇಟ್ಟು ಬಾಯಿಪಾಠ ಒಪ್ಪಿಸುವವರೂ ನಗು ತರಿಸುತ್ತಾರೆ..."

ಪ್ರೊಫ಼ೈಲ್ ಕಾಲಂ ತುಂಬುವಾಗ ಅದೆಷ್ಟು ಜನರು ತಡವರಿಸಿರಬಹುದು; ಎಂತೆಂಥ ಸೋಗು ಹಾಕಿರಬಹುದು ಎಂದು ನೆನೆದು ನಗು ಉಕ್ಕಿ ಬಂತು. ಯಾವುದನ್ನೂ ಸ್ವಂತದ್ದು ಎನಿಸಲು ಆಸ್ಪದ ಕೊಡದ ಈ ವ್ಯವಸ್ಥೆಯ ಮಾರಣಾಂತಿಕ ಬಿಗಿತದ ಬಗ್ಗೆ ವಿಷಾದವೆನಿಸಿತು.

ಅವನ ಪುನರಾವರ್ತಿತ ಪ್ರಶ್ನೆಗಳಿಗೆ ಉತ್ತರವೆಂಬಂತೆ ಒಂದು 'clear smile' ರವಾನಿಸಿ,ಪ್ರಶ್ನೆ ಕೇಳಿದ್ದರ ಬಗ್ಗೆ ಆತನಲ್ಲಿ ಮೂಡಿರಬಹುದಾದ ಸಣ್ಣ ಅಳುಕನ್ನು ಹಾಗೇ ಇರಲು ಬಿಟ್ಟು, ಲಾಗ್ಔಟ್ ಮಾಡಿ ಸುಮ್ಮನೆ ಕುಳಿತೆ...

26 ಕಾಮೆಂಟ್‌ಗಳು:

Santhosh Rao ಹೇಳಿದರು...

ನಿಜ ಅದು ಆತನ ಸ್ವಂತ ಪ್ರಶ್ನೆ ಇರಬಹುದು, ಆದರೆ ಇಡೀ ವ್ಯವಸ್ಥೆಯ ಆಜ್ಞಾಪಕ ಪ್ರಶ್ನೆ ಎಂಬ ನಿಮ್ಮ ಮಾತನ್ನು ನಾನು ಖಂಡಿತ ಒಪ್ಪುವುದಿಲ್ಲ , ಏಕೆಂದರೆ ಒಂದು ವ್ಯವಸ್ಥೆ ಅಂದ ಮೇಲೆ ಅದರಲ್ಲಿ ಎಲ್ಲಾ ರೀತಿಯ ವಿಷಯಗಳು ಇರುವುದು ಸಾಮಾನ್ಯ .ಮುಗ್ದ ಮಗುವಿಗೆ , ನೀನು ಸರಿಯಿಲ್ಲ .. ನೋಡಲು ಚೆನ್ನಾಗಿಲ್ಲ ಅಂತ ಬಯ್ದರೆ, ಮಗು ತಾನೇ ಏನು ಮಾಡಬಲ್ಲದು ಎಂದು ಸ್ವಲ್ಪ ಯೋಚನೆ ಮಾಡಿ, ವ್ಯವಸ್ಥೆಯು ಸಹ ಮಗುವಿನಂತೆ.ಇಲ್ಲಿ ಇಡೀ ದೇಶವನ್ನು ಒಂದು ವ್ಯವಸ್ಥೆಗೆ ಹೊಲಿಸಲಿಕ್ಕೆ ಸಾದ್ಯ ಇಲ್ಲ . ಪ್ರತಿಯೊಂದು ಸಂಸ್ಕೃತಿ , ಉದ್ಯೋಗ , ಮನೆ ಎಲ್ಲಕ್ಕೂ ತನ್ನದೇ ಆದ ಒಂದು ವ್ಯವಸ್ಥೆ ಇರುತ್ತೆ .. ಅದರಲ್ಲಿ ಒಳ್ಳೇದು ಕೆಟ್ಟದು ನಮ್ಮನಮ್ಮಲ್ಲಿ ಬಿಟ್ಟಿದ್ದು

"ನಿಜಾನ,..?! ನೀನು ಕುಡೀತೀಯಾ..?!" ಅಂತ ಕೇಳಿದವನು . ಅವನ ಮನಸ್ಸಿಗೆ ತಕ್ಕಂತೆ mature ಆಗಿರ್ತಾನೆ . ಆತನಿಗೆ ಸಾಮಾಜ , ಸಂಸ್ಕೃತಿ , ನಿಮ್ಮ ವ್ಯವಸ್ಥೆ .. ಯಾವುದು ಅರ್ಥವಾಗದ ವಿಷಯ . ಆತನಿಗೆ ಬೇಕಾಗಿದ್ದು ನಿಮ್ಮೊಂದಿಗೆ ಮಾತು ಅಷ್ಟೇ ..

ಇದು ನನ್ನ ತರ್ಕ .. ನೀವೇನ್ ಹೇಳ್ತಿರ ??

shivu.k ಹೇಳಿದರು...

ಚರಿತಾ ಮೇಡಮ್,
ಈ ವಿಚಾರದಲ್ಲಿ ನಿಮ್ಮ ನಿಲುವನ್ನು ನಾನು ಒಪ್ಪುತ್ತೇನೆ. ಅಂದಮಾತ್ರಕ್ಕೆ ನಾನೇನು ಹೊಗಳುತ್ತಿಲ್ಲ. ಪ್ರತಿವಸ್ತುವಿನೆಡೆಗೆ ಇರುವಂತೆ ಈ ರೆಡ್ ವೈನ್ ಬಗೆಗೂ ನಿಮಗಿರುವ ಕುತೂಹಲ ನನಗೆ ಒಳ್ಳೆಯದೆನಿಸಿತು.

jomon varghese ಹೇಳಿದರು...

ವ್ಹಾ.. ಚೆಂದದ ಲೇಖನ. ಈಗ ಗೊತ್ತಾಯ್ತು ಬಿಡಿ! ನೀವು ಇಷ್ಟೊಂದು ಚೆಂದದ ಚಿತ್ರಗಳನ್ನು ಹೇಗೆ ಬಿಡಿಸುತ್ತೀರಾ ಎಂದು. ಎಲ್ಲಾ ಗೋಲ್ಕೊಂಡ ರೆಡ್ ವೈನ್ ಚಮತ್ಕಾರ..:)

ಸಂದೀಪ್ ಕಾಮತ್ ಹೇಳಿದರು...

ನನಗೂ ತುಂಬಾ ಜನ ಹೀಗೇ ಕೇಳಿದ್ದಾರೆ ’ಛೇ ನೀನೂ ಕುಡೀತೀಯಾ ?’ ಅಂತ!
ಅವರು ಹಾಗೆ ಕೇಳಿದಾಗ ತುಳು ನಾಟಕದ ಒಂದು ಡೈಲಾಗ್ ನೆನಪಾಗುತ್ತದೆ.
"ಈಗಿನ ಕಾಲದಲ್ಲಿ ಯಾರನ್ನೂ ಕುಡೀತೀಯ ಅಂತ ಕೇಳಬಾರದು - ಎಷ್ಟು ಕುಡಿತೀಯಾ ಅಂತ ಕೇಳಬೇಕು "

ನನಗ್ಯಾವತ್ತೂ ಕುಡಿತ,ಸಿಗರೇಟ್ ಕೆಟ್ಟ ಅಭ್ಯಾಸ ಅನ್ನಿಸೇ ಇಲ್ಲ - ಅದು ಬೇರೆಯವರಿಗೆ ತೊಂದರೆ ಕೊಡದ ಹೊರತು!

ಸಂದೀಪ್ ಕಾಮತ್ ಹೇಳಿದರು...

ಪೆಹಲೇ ಕಭಿ ತನ್ ಹಾಯೀ ಸೇ ಬಚ್ ನೇ ಕೇಲಿಯೆ ಪಿಯಾ ಕರ್ ತೇ ಥೆ ಹಮ್
ಪೆಹಲೇ ಕಭಿ ತನ್ ಹಾಯೀ ಸೇ ಬಚ್ ನೇ ಕೇಲಿಯೆ ಪಿಯಾ ಕರ್ ತೇ ಥೆ ಹಮ್
ಆಜ್ ತೋ ಪೀನೇ ಕೇ ಲಿಯೇ ಹಿ ತನ್ ಹಾ ತನ್ ಹಾ ರಹತೇಂ ಹೇಂ...


ಹೆ ಹೆ ಇದು ನಾನೇ ಬರೆದಿದ್ದು:)

ಅನಾಮಧೇಯ ಹೇಳಿದರು...

ಹ್ಹಾ ಹ್ಹ ಹ್ಹಾ.......... ವೈನಾಗಿದೆ! :D

ನೀವು ಹೇಳೋದು ಸರಿ ಚರಿತಾ. ಜಗತ್ತು ಇಂದು ಎಷ್ಟೇ ಫಾಸ್ಟ್ ಆದ್ರೂ ಹುಡುಗೀರು ಮತ್ತು ಮದ್ಯ ವಿರುದ್ದ ಪದಗಳೇ! ಸಂತೋಷ ಅವರ ವಾದ ನಂಗೆ ಸರಿ ಅನ್ನಿಸಲಿಲ್ಲ. ನಿಮನ್ನು ಕೇಳಿದವನ ಪ್ರಶ್ನೆ ಸ್ವಂತದ್ದೇ ಆದರೂ ಕೂಡ ಇದು ಹತ್ತಾರು ಅಥವಾ ಸುತ್ತಲಿನ ಜನರ ಮುಖದ ಮೇಲಿನ ಪ್ರಶ್ನಾರ್ಥಕ ಚಿನ್ಹೆಯೇ. ಅಂದಮೇಲೆ ಅದು ಸಮಾಜದ ಧ್ವನಿಯೇ ಆಯಿತಲ್ಲ? ಹುಡುಗಿ ಕುಡಿಯುವ ಸಂಗತಿ ( ಅದು ಅಪರೂಪಕ್ಕೇ ಆದರೂ ಕೂಡ ) ಬಂದಾಗ ಮಾತು ಹೊರಗೆ ಬರದಿದ್ದರೂ ಮನದಲ್ಲೊಂದು ಅಚ್ಚರಿಯ, ನಂತರ ಅಸಡ್ಡೆಯ ಭಾವ ಧ್ವನಿಸುವುದು ಗೊತ್ತಾಗೇ ಆಗುತ್ತದೆ. ನಮ್ಮಲ್ಲಿ ಅದು ಮಾಮೂಲು ಕೂಡ.
ನಾನಿರುವ ದೇಶದಲ್ಲಿ ಹುಡುಗಿಯರು, ಹೆಂಗಸರು, ಮಕ್ಕಳು ಎಂಬ ಬೇಧ ಇಲ್ಲದೆ ವೈನ್ ಬಳಕೆಯಾಗುತ್ತದೆ. ಅಲ್ಲದೇ ಅದು ಕುಡಿತದ ಲಿಸ್ಟ್ ನಲ್ಲಿ ಬರೋದೀಲ್ಲ. ನೀರು, ಚಹಾದ ಬದಲಿ ಬಳಕೆಯಂತೆ ವೈನ್! ಚಟವಾದರೆ ಯಾವುದು ಕೆಟ್ಟದ್ದಲ್ಲ?

ಅಷ್ಟಕ್ಕೂ ವೈನ್ ದೇವತೆಗಳ ಪಾನೀಯವಲ್ವೆ? ಕೆಟ್ಟದ್ದು ಹೇಗಾದೀತು? :) ನೀವು ಇದನ್ನೆಲ್ಲ ಮುಕ್ತವಾಗಿ ಹೇಳಿಕೊಂಡಿದ್ದು ಖುಷಿ ಕೊಟ್ಟಿತು! :)

- ಪ್ರೀತಿಯಿಂದ
ವೈಶಾಲಿ

ಚರಿತಾ ಹೇಳಿದರು...

ಸಂತೋಷ್,

ನಮ್ಮದು ಈಗಲೂ ಕೂಡ ಸನಾತನ ಅಜ್ಜನ ವಿಧೇಯ ಸಂತಾನದಂತೆ ಇರುವ ಪುರುಷ ವ್ಯವಸ್ಥೆ.
ಬಹುಪಾಲು ಜನರು ಸ್ವಂತ ಧ್ವನಿ ಮರೆತು ಇದನ್ನೇ ಪ್ರತಿಧ್ವನಿಸುತ್ತಿದ್ದಾರೆ ಅಷ್ಟೆ.

ಶಿವು,

ನನ್ನ ಪ್ರಬಂಧದ ಭಾವ ನಿಮಗೆ ಸರಿಯಾಗಿ ತಲುಪಿದ್ದಕ್ಕೆ ಖುಶಿಯಾಯ್ತು.

ಆರೋಗ್ಯಕರ ಪರಿಧಿಯಲ್ಲಿ ಕುತೂಹಲ ಇಟ್ಟುಕೊಳ್ಳುವ ಬಗ್ಗೆ ನನ್ನ ಸಹಮತ ಇದೆ.

ಚರಿತಾ ಹೇಳಿದರು...

@ಜೋಮನ್,

ಹಹ್ಹಹ್ಹಾ...
ವೈನಾಯ ನಮಃ...!!

@ಸಂದೀಪ್,

ಪೀನಾ ತೋ ಹಮೇಭೀ ಮನ್ ಜ಼ೂರ್ ಹೇ..
ಪೀನಾ ತೋ ಹಮೇಭೀ ಮನ್ ಜ಼ೂರ್ ಹೇ..
ಜೀನೇವಾಲೋಂಕಿ ಹುನರ್ ಯಹೀ ಜ಼ರೂರ್ ಹೇ..!!

ನಿಜ ವೈಶಾಲಿ,..
ಈ ಪೂರ್ವಾಗ್ರಹಗಳ ಗೋಜಿನಲ್ಲಿ ಸ್ವಂತ ವ್ಯಕ್ತಿತ್ವ, ಹೊಸತನ ಎಲ್ಲಾ ದೂರದ ಮಾತು.

Sushrutha Dodderi ಹೇಳಿದರು...

ನಂಗೆ ಈ ಪ್ರಾಮಾಣಿಕತೆ ಮತ್ತು ದಿಟ್ಟತನ ಇಷ್ಟವಾಗತ್ತೆ..

ಚರಿತಾ ಹೇಳಿದರು...

ಥ್ಯಾಂಕ್ಸ್ ಸುಶ್ರುತ.....

chetana ಹೇಳಿದರು...

ಚರಿತಾ,
ಹದವಾದ, ಹಿತವಾದ ಬರಹ... ನಿಮ್ಮ ನಿರೂಪಣೆ ಬಹಳ ಸರಾಗವಾಗಿದೆ. ನಾನೂ ನೀರಾ ಕುಡ್ದಿದೇನೆ. ಹುಳಿ ಬರುವ ಮುಂಚೆ! ಆದರೂ ಊರಲ್ಲಿ ‘ಥೂ... ಕಳ್ಳು ಕುಡ್ದ್ಯಾ?’ ಅಂದಿದ್ದು ಇದನ್ನು ಓದುತ್ತ ಓದುತ್ತ ನೆನಪಾಯ್ತು.
ಸಂತೋಷ್ ಗೆ ನೀವು ನೀಡಿರುವ ಉತ್ತರದಲ್ಲಿ ಒಂದೇ ಒಂದು ಕರೆಕ್ಷನ್ನು... ನಮ್ಮ ಸನಾತನ ಹೆಣ್ಣು ಮಕ್ಕಳು ಸುರಾ ಪಾನ ಮಾಡ್ತಿದ್ದರು... ಅದು ಪ್ರಬುದ್ಧತೆಯ, ಪ್ರತಿಷ್ಟೆಯ ಸಂಗತಿ ಕೂಡ ಆಗಿತ್ತು!
ನಿಮ್ಮ ಧಾವಂತ ಇಲ್ಲದ ತಣ್ಣನೆಯ ಉತ್ತರ ವಿಪರೀತ ಮೆಚ್ಚುಗೆಯಾಯ್ತು.

- ಚೇತನಾ ತೀರ್ಥಹಳ್ಳಿ

ಚರಿತಾ ಹೇಳಿದರು...

ಚೇತನಾ,..
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.

ಪ್ರೌಢತೆಯ ಪ್ರಶ್ನೆ ಬಂದಾಗ ಈಗಲೂ ಹಳ್ಳಿಯ ದುಡಿಯುವ ಹೆಂಗಸರು(ಬಯಲುಸೀಮೆಯ ಕೆಳವರ್ಗದ ಹೆಂಗಸರು) ನಗರದ ಮಧ್ಯಮವರ್ಗದ ಗೃಹಿಣಿಯರಿಗಿಂತ ಹೆಚ್ಚು ’ಉತ್ತಮ’ ಸ್ಥಿತಿಯಲ್ಲಿ ಇರೋ ಹಾಗೆ ಕಾಣ್ತಾರೆ.ಕಡೆ ಪಕ್ಷ ಅವರಿಗೆ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವಾದರೂ ಇದೆ.ಅವರ ತಂಬಾಕು,ಬೀಡಿ,ಹೆಂಡದ ಬಳಕೆ ಕೂಡ ಅಲ್ಲಿ ತಲೆಹೋಗುವ ಪ್ರಶ್ನೆಯಾಗುವುದಿಲ್ಲ.

chetana ಹೇಳಿದರು...

ಖಂಡಿತಾ ಒಪ್ಪಿಕೊಳ್ಳುವೆ. ಅವರದು ಮುಖವಾಡಗಳಿಲ್ಲದ ಬದುಕು.
ಮತ್ತಷ್ಟು ಬರೆಯಿರಿ...

ನಲ್ಮೆ,
ಚೇತನಾ

Santhosh Rao ಹೇಳಿದರು...

ಇಲ್ಲಿ ವಿಷಯಾಂತರವಾಗುತ್ತಿದೆ... ಎಲ್ರು ವೈನ್ / ನೀರಾ ಬಗ್ಗೆನೇ ಮಾತನಾಡ್ತಾ ಇದ್ದಾರೆ ...ವ್ಯವಸ್ಥೆ ಬಗ್ಗೆ kenecoffee ಬಿಡ್ರೆ ಯಾರು ಏನು ಹೇಳ್ತಾನೆ ಇಲ್ಲ . ಸಲ್ಲದು .. ತುಂಬಾ ತಪ್ಪು :) ... ಚರಿತಾ ಹುಷಾರಾಗಿ ಇರಿ ! :(

Ittigecement ಹೇಳಿದರು...

ಚರಿತಾರವರೆ..
ಪುರುಷ ಸಮಾಜ ಅಂತ ಹೇಳಿದರೆ ಎಲ್ಲ ಅರ್ಥವಾಗುತ್ತದೆ.
ಕುತೂಹಲದ ಕುಡಿತ ಚಟವಾದದ್ದು ಅನುಭವ, ಎಲ್ಲ ಕಡೆ ಅಪವಾದ ಇದ್ದೇ ಇದೆ..
ರೆಡ್ ವೈನ್ ನ ಅನುಭವ ಬರೆದರೆ ಮಾತ್ರ ಲೇಖನ ಪೂರ್ಣವಾಗಬಹುದು..!!
ಎಲ್ಲರೂ ಒಂದೊಂದು ನಶೆಯಲ್ಲಿರುತ್ತಾರೆ..
" ನಶೆ ಮೆ ಕೌನ್ ನಹಿ ಹೆ..?... ಮುಝೆ... ಬತಾವೊ ಜರಾ.."
ಅಮಿತಾಭ್ ನ ಶರಾಭಿ ಸಿನೇಮಾದ ಹಾಡಿನ ತುಣುಕು ನೆನಪಾಯಿತು..
ಲೇಖನ ಚೆನ್ನಾಗಿದೆ, ನಿಮ್ಮ ಅಭಿಪ್ರಾಯ ಎಲ್ಲರೂ ಒಪ್ಪುವಂಥದ್ದು .
ಧನ್ಯವಾದಗಳು..

Hema Powar ಹೇಳಿದರು...

ಚರಿತ, ನಿನ್ನ ಲೇಖನ ತುಂಬಾ ಇಷ್ಟವಾಯ್ತು. ಮೊನ್ನೆ ’ಸಿದ್ದಾಂತ’ ಅಂತ ಕತೆತರದ್ದು ನಾನೂ ಬರೆದಿದ್ದೀನಿ, ಅಲ್ಲಿ ನನ್ನ ಗೊಂದಲಗಳನ್ನು ಸರಿಯಾಗಿ ವ್ಯಕ್ತಪಡಿಸಿಲಿಕ್ಕೆ ಆಗಿರಲಿಲ್ಲ, ನೀನು ಬರೆದಿರೋದು ನನ್ನ ಯೋಚನೆಗಳಿಗೆ ಹೊಂದುತ್ತೆ. ಸಮಯವಿದ್ದರೆ ನನ್ನ ಸಿದ್ದಾಂತವನ್ನೊಮ್ಮೆ ನೋಡು.

ಹೇಮ

Harisha - ಹರೀಶ ಹೇಳಿದರು...

>> "ನಿಜಾನ,..?! ನೀನ್ ಕುಡೀತೀಯಾ..?!"

>> ನಮ್ಮದು ಈಗಲೂ ಕೂಡ ಸನಾತನ ಅಜ್ಜನ ವಿಧೇಯ ಸಂತಾನದಂತೆ ಇರುವ ಪುರುಷ ವ್ಯವಸ್ಥೆ.

ಆತ ಕೇಳಿದ ಪ್ರಶ್ನೆಯಲ್ಲಿ ಪುರುಷ ಪ್ರಧಾನ ವ್ಯವಸ್ಥೆಯ ಪ್ರಶ್ನೆ ಎಲ್ಲಿಂದ ಬಂತು ಎಂದೇ ಅರ್ಥವಾಗಲಿಲ್ಲ. "ಹುಡುಗಿಯಾಗಿ ನೀನ್ ಕುಡೀತೀಯಾ..?!" ಎಂದಾತ ಕೇಳಿದ್ದಾರೆ ನಿಮ್ಮ ಹೇಳಿಕೆ ಸರಿಯಾಗಿರುತ್ತಿತ್ತು. ಕುಡಿತ ತಪ್ಪು ಎಂದಾದರೆ ಗಂಡಾಗಲಿ, ಹೆಣ್ಣಾಗಲಿ ಯಾರು ಕುಡಿದರೂ ತಪ್ಪೇ. ಸರಿ ಎಂದಾದರೆ ಯಾರು ಕುಡಿದರೂ ಸರಿಯೇ. ನೀವು ಯಾಕೆ ಇಲ್ಲಿ "ಪುರುಷ ಪ್ರಧಾನ ವ್ಯವಸ್ಥೆ"ಯನ್ನು ಎಳೆದು ತಂದಿರಿ ಎಂದು ಅರ್ಥವಾಗಲಿಲ್ಲ. ಇದರ ಬಗ್ಗೆ ಸ್ಪಷ್ಟೀಕರಣ ಬಯಸುತ್ತೇನೆ.

Rajesh shetty meginamani ಹೇಳಿದರು...

I like u r "pen lines "....Its going smoothly ...with power
And thinking way ...I think u missing something , just search and find it what is that ...I like u r red wine radhantha ....Wish u happy BBBBBBBB Day

Prabhuraj Moogi ಹೇಳಿದರು...

nimma paaDige neevirade namgella heLiddu chennagide... bareyuva style super...

Sushma Sindhu ಹೇಳಿದರು...

ಚರಿತಾ ,
ಕವನಗಳು ಚೆನ್ನಾಗಿವೆ. ಆಲೋಚನೆ ಪ್ರಬುದ್ಧವಾಗಿವೆ. ಈ ಬ್ಲಾಗ ನೊಮ್ಮೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ. http://kandenanondhukanasu.blogspot.com/

ಚರಿತಾ ಹೇಳಿದರು...

@ ಸಿಮೆಂಟು ಮರಳು..

ನಮಸ್ತೆ,..ನನ್ನ ಬ್ಲಾಗ್ ಗೆ ಸ್ವಾಗತ..ನಿಮ್ಮ ಪ್ರತಿಕ್ರಿಯೆ ಕಂಡು ಖುಶಿಯಾಯ್ತು.

ಚರಿತಾ ಹೇಳಿದರು...

ಥ್ಯಾಂಕ್ಸ್ ಹೇಮ,...
ಖಂಡಿತ ನಿಮ್ಮ ಸಿದ್ಧಾಂತ ಓದುತ್ತೇನೆ.
ಸಮಯ ಸಿಕ್ಕಾಗೆಲ್ಲ ಹೀಗೆ ಭೇಟಿ ಮಾಡುತ್ತಿರಿ.

ಚರಿತಾ ಹೇಳಿದರು...

@ ಹರೀಶ,
ಎಲ್ಲರಿಗೂ ಅರ್ಥವಾಗಿದ್ದು ನಿಮಗೆ ಏಕೆ ಆಗಲಿಲ್ಲವೋ ಕಾಣೆ.
ನೀವೂ ಸ್ವಲ್ಪ ವೈನ್ ಟ್ರೈ ಮಾಡಿ ನೋಡಿ....:-)

ಚರಿತಾ ಹೇಳಿದರು...

@ rajesh and prabhu,

ಇಬ್ರಿಗೂ ತುಂಬಾ ಥ್ಯಾಂಕ್ಸ್..
ನಿಮ್ಮ ಸಹಚರ್ಯ ಹೀಗೇ ಇರಲಿ

ಚರಿತಾ ಹೇಳಿದರು...

ಥ್ಯಾಂಕ್ಸ್ ಸುಷ್ಮ,...
ನಿಮ್ಮ ಬ್ಲಾಗ್ ಖಂಡಿತ ನೋಡ್ತೀನಿ.

pRsurama kalal ಹೇಳಿದರು...

ರೆಡ್ ವೈನ್ ಬಗ್ಗೆ ಬರೆದಿದ್ದು ಇಷ್ಟ ಆಯಿತು. ಚರಿತಾ ಪುರುಷ ಪ್ರಧಾನ ಸಮಾಜ ಇದೆಯಲ್ಲಾ ಇದು ಮಹಿಳೆಗೂ ಒಂದು ವ್ಯಕ್ತಿತ್ವ ಇದೆ ಎಂದು ಒಪ್ಪುವುದೇ ಇಲ್ಲ. ಆಕೆಯನ್ನು ವ್ಯಕ್ತತ್ವಹೀನಳಾಗಿಯೇ ನೋಡುತ್ತಾ ಬಂದಿದೆ. ಇದಕ್ಕೆ ಚಾಟಿ ಏಟು ಕೊಟ್ಟಿದ್ದೀರಿ. ಕೊಡುತ್ತಲೇ ಇರಬೇಕು ಅದು ಬದಲಾಗುವವರಿಗೆ