ತನ್ನ ವಿಶಿಷ್ಟ-ವಿಸ್ಮಯಕರ ಶಾರೀರಿಕ ಗುಣಲಕ್ಷಣ ಮತ್ತು ಸೂಕ್ಷ್ಮ ಮನಸ್ಸು ಹೆಣ್ಣಿನ ಅಗಾಧ ಚೈತನ್ಯಕ್ಕೆ ಕಾರಣವಾದಂತೆಯೇ ದಮನಕ್ಕೆ ಒಳಗಾಗಲೂ ಕಾರಣವಾದುದು ವಿಪರ್ಯಾಸ. ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ವಂಚಿತವಾಗಿರುವ ಶೋಷಿತವರ್ಗದಲ್ಲಿ ಮಹಿಳೆಗೆ ಅಗ್ರಸ್ಥಾನ. ಇಲ್ಲಿ ಜಾತಿ, ವರ್ಗ, ದೇಶ-ಕಾಲ ಎಲ್ಲವನ್ನೂ ಮೀರಿದ ಏಕತೆಯಿದೆ !
ಸ್ವಭಾವತಃ ಮಾನಸಿಕ ಮತ್ತು ದೈಹಿಕ ಸಂವೇದನೆಗಳಿಗೆ ಸೂಕ್ಷ್ಮವಾಗಿ ಸ್ಪಂದಿಸುವ ಮಹಿಳೆ ಇಂದು ತನ್ನ ಭಾವಾಭಿವ್ಯಕ್ತಿಗಾಗಿ ಹಲವು ಸೃಜನಶೀಲಮಾಧ್ಯಮಗಳ ಮೊರೆಹೋಗಿದ್ದಾಳೆ. ಇಪ್ಪತ್ತನೆ ಶತಮಾನದ ಅರವತ್ತರ ದಶಕಗಳಲ್ಲಿ ಪಾಶ್ಚಾತ್ಯ ಕಲಾಕ್ಷೇತ್ರದಲ್ಲಿ ರೂಪುಗೊಂಡ ಸ್ತ್ರೀವಾದಿ ನೆಲೆಯ ಕಲಾಚಳುವಳಿ, ಪ್ರಮುಖ ಮಹಿಳಾ ಕಲಾವಿದರು ಮತ್ತು ಅವರ ಕಲಾಕೃತಿಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.
ಎರಡನೇ ಮಹಾಯುದ್ಧದ (1939-1945) ನಂತರ ಸಾಮಾಜಿಕ ವಲಯದಲ್ಲಿ ಕೆಲಸಗಳ ಒತ್ತಡ ಹೆಚ್ಚಾದುದರಿಂದ ಮನೆಯ ಕೆಲಸಗಳಿಗೆ ಸೀಮಿತವಾಗಿದ್ದ ಮಹಿಳೆಯನ್ನು ಪುರುಷವರ್ಗವೇ ಸಾಮಾಜಿಕ ಹೊರವಲಯದಲ್ಲಿ ಕಾರ್ಯನಿರ್ವಹಣೆಗೆ ಪ್ರೇರೇಪಿಸಿತು. ಇದರಿಂದ ಹೊಸ ಸ್ವಾತಂತ್ರ್ಯವನ್ನು ಅನುಭವಿಸಿದ ಮಹಿಳೆ ಎಚ್ಚೆತ್ತುಕೊಂಡು, ಸಂಘಟನೆಗಳ ಮೂಲಕ ಲಿಂಗತಾರತಮ್ಯದ ವಿರುಧ್ಧ ದನಿ ಎತ್ತಲು ಸಾಧ್ಯವಾಯಿತು. ಕ್ರಿ. ಶ. 1960 ರ ದಶಕಗಳಲ್ಲಿ ರೂಪಿತಗೊಂಡ ಸ್ತ್ರೀವಾದಿ ಕಲಾಚಳುವಳಿಯು 70 ರ ದಶಕಗಳಲ್ಲಿ ಹೆಚ್ಚು ಜನಜನಿತವಾಯಿತು. ಮುಖ್ಯವಾಗಿ ಅಮೆರಿಕ, ಫ್ರಾನ್ಸ್, ಬ್ರಿಟನ್, ಜರ್ಮನಿ ದೇಶಗಳಲ್ಲಿ ಸ್ತ್ರೀಪರ ಹೆಚ್ಚು ಗಟ್ಟಿದನಿ ಹುಟ್ಟಿತು. 1971 ರಲ್ಲಿ ಲಿಂಡಾ ನೊಚ್ಲಿನ್ ಎಂಬ ಅಮೆರಿಕದ ಕಲಾವಿಮರ್ಶಕಿ ತನ್ನ 'Why have there been no great women artists?' ಎಂಬ ಲೇಖನದ ಮೂಲಕ ಕಲಾವಲಯದಲ್ಲಿ ಮಹಿಳೆಯನ್ನು ಮೂಲೆಗುಂಪು ಮಾಡಿರುವುದರ ಕಡೆಗೆ ಗಮನಸೆಳೆದಳು. ನಂತರದ ದಿನಗಳಲ್ಲಿ ಮಹಿಳಾ ಕಲಾವಿದರನ್ನು ಗುರುತಿಸುವ ಕೆಲಸ ಹೆಚ್ಚು ನಿಯೋಜಿತವಾಗಿ ನಡೆದುಬಂದಿದೆ.
'ಸೌಂದರ್ಯ'ಕ್ಕೆ ಪರ್ಯಾಯವೆಂಬಂತೆ 'ಸ್ತ್ರೀ ನಗ್ನತೆ' ಕಲಾಮಾಧ್ಯಮದಲ್ಲಿ ಬಿಂಬಿಸಲ್ಪಟ್ಟಿದೆ. ಐಷಾರಾಮಿ ಭೋಗಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸಲ್ಪಟ್ಟು, ಮಾನಸಿಕ/ಲೈಂಗಿಕ ಶೋಷಣೆಗೆ ಒಳಗಾಗುತ್ತ ಬಂದ ಮಹಿಳಾವರ್ಗವನ್ನು ಮೊದಲಿನಿಂದಲೂ ಕಲಾ ಅಧ್ಯಯನ, ಕಲಾಪ್ರದರ್ಶನ / ಮಾರುಕಟ್ಟೆ ವ್ಯವಸ್ಥೆಯಿಂದ ಹೊರಗಿಡುತ್ತ ಬರಲಾಗಿತ್ತು.
ಕಲಾಕ್ಷೇತ್ರದಲ್ಲಿ ಸ್ತ್ರೀವಾದಿ ಅಲೆ ಏಳುವುದಕ್ಕೆ ಮುಂಚೆ ಇದ್ದೂ ಇಲ್ಲದಂತೆ ಹಲವು ಮಹಿಳಾ ಕಲಾವಿದರು ಆಗಿಹೋಗಿದ್ದಾರೆ. ಹತ್ತೊಂಬತ್ತನೆ ಶತಮಾನದ ಬರ್ತ್ ಮಾರಿಸಾತ್ (Berth Morisot), ಮೇರಿ ಕಸಾತ್, ಗ್ವೆನ್ ಜಾನ್ ಥರದ ಕೆಲವು ಮುಂಚೂಣಿಯಲ್ಲಿದ್ದ ಬೆರಳೆಣಿಕೆಯ ಕಲಾವಿದೆಯರನ್ನು ಹೆಸರಿಸಬಹುದು. ಹೊರಗಿನ ಪ್ರಭಾವಗಳನ್ನು ಹೊರತುಪಡಿಸಿ ಇವರೆಲ್ಲರ ಚಿತ್ರಗಳಲ್ಲಿರುವ ಸಾಮಾನ್ಯ ಅಂಶವೆಂದರೆ - 'ಮೌನ'
Mary Cassatt - 'Mother and Child' |
ಮಹಿಳೆಯರ ಖಾಸಗಿ ಬದುಕಿನ ಕ್ಷಣಗಳಲ್ಲಿ ಅಡಗಿದ ಮೌನ ಇವರೆಲ್ಲರ ಕೃತಿಗಳಲ್ಲಿ ಮೂಡಿದೆ. ಹಾಗೆಯೇ ಇವರ ಚಿತ್ರಗಳ ರೂಪದರ್ಶಿಯೂ ಮಹಿಳೆಯೇ ! ಓದಿನಲ್ಲಿ ತಲ್ಲೀನೆಯಾಗಿರುವ ಹುಡುಗಿ/ಮಹಿಳೆ, ಉದ್ಯಾನವನದಲ್ಲಿ ತನ್ನನ್ನು ತಾನು ಮರೆತು ಕುಳಿತ ಮಹಿಳೆ, ಮಕ್ಕಳ ಪಾಲನೆಯಲ್ಲಿ ತೊಡಗಿರುವ ಮಹಿಳೆ, ತನ್ನಷ್ಟಕ್ಕೆ ತಾನು ಗೃಹಕಾರ್ಯಗಳಲ್ಲಿ ಮಗ್ನಳಾಗಿರುವ, ಬಟ್ಟೆ ಹೊಲಿಯುವ ಮಹಿಳೆ - ಇತ್ಯಾದಿ ಎಲ್ಲಾ ಚಿತ್ರಗಳಲ್ಲೂ ಗಾಢವಾದ ಮೌನ ಅಡಗಿ ಕುಳಿತಂತೆ ಭಾಸವಾಗುತ್ತದೆ. ಸ್ಫೋಟಗೊಳ್ಳದ ಯಾವುದೋ ಅವ್ಯಕ್ತ ಮಗ್ನತೆ ಈ ಎಲ್ಲಾ ಚಿತ್ರಗಳ ಜೀವಾಳ. ಗಾಢ ನಿಶ್ಯಬ್ದದ ಪರಿಧಿಯೊಳಗೇ ತನ್ನ ಲೋಕ ಕಟ್ಟಿಕೊಳ್ಳುವ ಮಹಿಳೆಯ ತಾಳ್ಮೆ ಮತ್ತು ಗಾಢಸ್ಮೃತಿ ನೋಡುಗರನ್ನು ಆವರಿಸಿಕೊಳ್ಳುತ್ತದೆ.
Gwen John - 'Nude Girl' |
ಗ್ವೆನ್ ಜಾನಳ ಚಿತ್ರಗಳಲ್ಲಿ ಕಂಡುಬರುವ ಅಷ್ಟೂ ಸ್ತ್ರೀಪಾತ್ರಗಳು ಪೇಲವವಾಗಿ, ಬತ್ತಿಹೋದಂತಿರುವ ದೇಹ-ಮನಸ್ಸುಗಳನ್ನು ಬಿಂಬಿಸುತ್ತವೆ. ಆಕೆಯ ಎಲ್ಲಾ ಕೃತಿಗಳು ತಣ್ಣನೆಯ, ಒಳಹರಿವಿನ ದುಗುಡ ತುಂಬಿಕೊಂಡಂತೆ ಕಾಣುತ್ತವೆ. ಸ್ವಲ್ಪ ಸಹಾನುಭೂತಿ ತೋರಿದರೂ ಧುಮ್ಮಿಕ್ಕಿ ಹರಿದುಬಿಡಲು ಹಾತೊರೆಯುತ್ತಿರುವ ಅದುಮಿಟ್ಟ ಬಿಕ್ಕು ಅದು. ಅಂತರ್ಮುಖಿತ್ವದ ಗಾಢಛಾಯೆ ಈ ಪ್ರತಿಯೊಬ್ಬ ಕಲಾವಿದೆಯ ಕಲಾಕೃತಿಯಲ್ಲಿ ಕಂಡುಬರುವ ಸಾಮಾನ್ಯ ಅಂಶ. ಮಹಿಳಾ ಕಲಾವಿದರಿಂದ ಚಿತ್ರಿತಗೊಂಡ 'ನಗ್ನತೆ' ಲೈಂಗಿಕ ಶೋಷಣೆಯ ವಿರುಧ್ಧ ಎತ್ತಿದ ದನಿಯಂತೆ ಮುಟ್ಟುತ್ತದೆಯೇ ಹೊರತು ಚಪಲ ಹೆಚ್ಚಿಸುವ, ಆಸ್ವಾದ್ಯಗೊಳ್ಳುವ, ತೋರಿಕೆಯ ಬಾಹ್ಯಸೌಂರ್ಯದ ಹಗುರ ಅಭಿವ್ಯಕ್ತಿಯಂತಲ್ಲ.
ಸ್ತ್ರೀ ಮತ್ತು ಪುರುಷರ ದೃಷ್ಟಿಗ್ರಹಣದ ಮೂಲವ್ಯತ್ಯಾಸದ ಕುರಿತಂತೆ ಮಾರ್ಕ್ಸ್ ವಾದಿ ವಿಮರ್ಶಕ ಜಾನ್ ಬರ್ಜರ್ ತನ್ನ 'Ways of Seeing' ಎಂಬ ಪುಸ್ತಕದಲ್ಲಿ ಹೀಗೆ ಹೇಳುತ್ತಾನೆ : "Men look at women; women watch themselves being looked at" (ಪುರುಷರು ಸ್ತ್ರೀಯರನ್ನು ನೋಡುತ್ತಾರೆ, ಸ್ತ್ರೀಯರು ನೋಡಲ್ಪಡುತ್ತಿರುವ ತಮ್ಮನ್ನೆ ಗಮನಿಸಿಕೊಳ್ಳುತ್ತಾರೆ.)
ಸ್ತ್ರೀದೇಹ ಮತ್ತು ಲೈಂಗಿಕ ಅವಯವಗಳ ಸಾಂಕೇತಿಕ ಅಭಿವ್ಯಕ್ತಿಯ ಮೂಲಕ ವಿಶಿಷ್ಟ ಕಲಾಕೃತಿಗಳನ್ನು ರಚಿಸಿದಾಕೆ ಅಮೆರಿಕಾದ ಜಾರ್ಜಿಯಾ ಓಕೀಫ್. ಹೂವಿನ ಸರಣಿ ಚಿತ್ರಗಳು ಈಕೆಯ ದಿಟ್ಟ ಅಭಿವ್ಯಕ್ತಿಯ ವಸ್ತುವಿಷಯವಾಗಿದೆ. ದಮನಿತ ಭಾವನೆಗಳಿಗೆ ಬಣ್ಣಕೊಟ್ಟ ಗ್ವೆನ್ ಜಾನ್, ಕಸಾತ್, ಮಾರಿಸಾತ್ ರಿಗಿಂತ ಭಿನ್ನವಾಗಿ ಕಾಣಿಸುತ್ತಾಳೆ ಈಕೆ. ಕುದುರೆಯ ತಲೆಬುರುಡೆಯೊಂದಿಗೆ ಇರಿಸಿದ ಹೂವಿನ ಸರಣಿಚಿತ್ರಗಳು ಲೈಂಗಿಕತೆಗೆ ಹೊಸ ಆಯಾಮವನ್ನು ಒದಗಿಸುತ್ತವೆ. (ಕುದುರೆ ಮತ್ತು ಹೂವು - ಎರಡೂ ಲೈಂಗಿಕ ಸಂಕೇತಗಳು). ಭಾರತದ 'ತಾಂತ್ರಿಕ' ಕಲೆಯನ್ನೂ ಈಕೆಯ ಚಿತ್ರಗಳು ನೆನಪಿಗೆ ತರುತ್ತವೆ.
Georgia-o-Keefe- 'Flower Series' |
ಜರ್ಮನಿಯ ಕ್ಯಾಥೆ ಕೋಲ್ವಿಝ್ ಮತ್ತೊಬ್ಬ ಪ್ರೌಢ ಕಲಾವಿದೆ. ಮೊದಲ ಮಹಾಯುದ್ಧದಲ್ಲಿ ತನ್ನ ಮಗನನ್ನು ಕಳೆದುಕೊಳ್ಳುವ ಈಕೆ ತನ್ನ ಚಿತ್ರಸರಣಿಯಲ್ಲಿ ಹೆಪ್ಪುಗಟ್ಟಿದ ನಿರಾಸೆ, ಭಯ, ದುಃಖವನ್ನು ಕಪ್ಪು-ಬಿಳುಪಿನ ಸಶಕ್ತ ಮಾಧ್ಯಮದಲ್ಲಿ ಅಭಿವ್ಯಕ್ತಿಸಿದ್ದಾಳೆ. ವುಡ್ ಕಟಿಂಗ್, ಎಚಿಂಗ್, ಲಿಥೋಗ್ರಾಫ್ ಮೂಲಕ ಭಾರವಾದ ಮತ್ತು ಅಷ್ಟೇ ಧೃಢವಾದ ದೃಶ್ಯರೂಪಣ ಸೃಷ್ಟಿಸಿದ್ದಾಳೆ. ಶಿಲ್ಪಮಾಧ್ಯಮವೂ ಈಕೆಯ ಅಭಿವ್ಯಕ್ತಿಗೆ ಹೆಗಲುಕೊಟ್ಟಿದೆ. ಅತೀ ಶಕ್ತವಾಗಿ ಸಂವಹಿಸುವ ಆಕೆಯ ದುಃಖದ ಭಾರ ಇಡೀ ಸ್ತ್ರೀವರ್ಗದ ಪ್ರಾತಿನಿಧಿಕ ಭಾವವಾಗಿ ಉಳಿಯುತ್ತದೆ. ಒಟ್ಟಾರೆ ಸ್ತ್ರೀಸಂವೇದನೆಗೆ ಸಾಮೂಹಿಕ ನೆಲೆಗಟ್ಟಿನ ಚೌಕಟ್ಟಿರುವಂತೆ ಕಂಡುಬರುತ್ತದೆ.
Kathe kolwiz- 'Death seizing a woman' |
1960-70 ರ ದಶಕಗಳಲ್ಲಿ ಮತ್ತು ನಂತರದ ದಿನಗಳಲ್ಲಿ ಕಂಡುಬಂದ ಸ್ತ್ರೀವಾದಿ ಅಲೆಯ ಮುಂಚೂಣಿಯ ಪ್ರಮುಖ ಕಲಾವಿದರಲ್ಲಿ ಬಾರ್ಬರಾ ಕ್ರೂಗರ್, ಪೌಲಾ ರೆಗೊ, ಗೆರಿಲ್ಲ ಗರ್ಲ್ಸ್ (ಸಮೂಹ), ಜೂಡಿ ಶಿಕಾಗೊ, ಇವಾ ಹೆಸ್ ಮುಂತಾದವರನ್ನು ಹೆಸರಿಸಬಹುದು.
ಬಂಡಾಯದ ದಿಟ್ಟನಿಲುವು, ಹರಿತ ಅಭಿವ್ಯಕ್ತಿ ಹಲವು ಕಲಾವಿದೆಯರಿಂದ ಸಾಧ್ಯವಾಯಿತು. ಪೋರ್ಚುಗೀಸ್ ಕಲಾವಿದೆ ಪೌಲಾ ರೆಗೊ ಅಂಥವರ ಪೈಕಿ ಒಬ್ಬಳು. ಮಕ್ಕಳ ಕಥೆಗಳ ಕಾಮಿಕ್ ಶೈಲಿಯ ನಿರೂಪಣೆ ಈಕೆಯ ಪ್ರಾರಂಭದ ಚಿತ್ರಗಳಲ್ಲಿ ಕಂಡುಬರುತ್ತದೆ. 1990 ರ ದಶಕಗಳ 'ಡಾಗ್ ವುಮನ್' ಮತ್ತು 'ಡಾನ್ಸಿಂಗ್ ಆಸ್ಟ್ರಿಚಸ್' ಸರಣಿಯ ಚಿತ್ರಗಳು ಅದುವರೆಗಿನ ದೃಶ್ಯ ಸಿದ್ಧಾಂತದ 'ಸೌಂದರ್ಯ'ದ ಪರಿಕಲ್ಪನೆಯನ್ನು ಬೆಚ್ಚಿಬೀಳಿಸುವಷ್ಟು ಸಶಕ್ತವಾದ ಹೊಸಭಾಷೆ ಸೃಷ್ಟಿಸಿದೆ. ಕಥಾನಿರೂಪಣಾ ಶೈಲಿಯ, ಕುತೂಹಲಭರಿತ ನಾಟಕದ ಸ್ತಬ್ಧಚಿತ್ರದಂತೆ ಕಾಣುವ ಈಕೆಯ ಚಿತ್ರಗಳು ತಮ್ಮೊಳಗೆ ವಿಚಿತ್ರ ನಿಗೂಢತೆಯನ್ನು ಒಳಗೊಂಡಿವೆ. ಆಕೆಯ 'ದ ಮೇಯ್ಡ್ಸ್', 'ದ ಫಿಟ್ಟಿಂಗ್', 'ದ ಫ್ಯಾಮಿಲಿ' ಚಿತ್ರಗಳು ಸಾಂಕೇತಿಕ ದೃಶ್ಯನಿರೂಪಣೆ ಅತಿವಿಶಿಷ್ಟವಾದ ಮನೋ ಆವರಣವನ್ನು ಸೃಷ್ಟಿಸುತ್ತವೆ. ಮನುಷ್ಯ ಸಂಭಂಧಗಳ ವೈಚಿತ್ರ್ಯ ಮತ್ತು ನಿಗೂಢತೆ ಈ ಚಿತ್ರಗಳಲ್ಲಿ ಮೂಡಿಬಂದಿದೆ.
'ಡಾಗ್ ವುಮನ್' ಮತ್ತು 'ಡಾನ್ಸಿಂಗ್ ಆಸ್ಟ್ರಿಚಸ್' ಈಕೆಯ ಪ್ರಸಿದ್ಧ ಸರಣಿ ಚಿತ್ರಗಳು. 'ಮಹಿಳೆಯನ್ನು ನಾಯಿಗೆ ಹೋಲಿಸಿದರೆ ಅದನ್ನು ನಿಕೃಷ್ಟವಾಗಿ ಭಾವಿಸಬೇಕಿಲ್ಲ. ಬದಲಾಗಿ ಆ ಮಹಿಳೆಯನ್ನು ಮತ್ತಷ್ಟು ಸಬಲಳಾಗಿ ಕಾಣಬೇಕು. ತನ್ನ ರಕ್ಷಣೆಯನ್ನು ತಾನು ಮಾಡಿಕೊಳ್ಳಬಲ್ಲ, ಆಕ್ರಮಣಕಾರಿಯಾಗಿರುವುದು ಒಳ್ಳೆಯದೆ. ಮಹಿಳೆಯನ್ನು ನಾಯಿಗೆ ಹೋಲಿಸಿದರೆ ಆಶ್ಚರ್ಯಪಡುವಂಥದ್ದೇನಿಲ್ಲ!' ಎನ್ನುತ್ತಾಳೆ ಈಕೆ. ಅಂತೆಯೇ ಶಕ್ತಿಯುತವಾದ, ಆತ್ಮಸ್ಥೈರ್ಯದ ಆಕ್ರಮಣಕಾರಿ ಮಹಿಳೆಯ ಚಿತ್ರಣ ಈ ಮಾತುಗಳನ್ನು ಬಲಪಡಿಸುತ್ತವೆ !
Paula Rego -'Dancing Ostriches Series' |
'ಡಾನ್ಸಿಂಗ್ ಆಸ್ಟ್ರಿಚಸ್' ಸರಣಿ ಮೂಲತಃ ವಾಲ್ಟ್ ಡಿಸ್ನಿಯ 'ಫ್ಯಾಂಟೇಶಿಯ' ಎಂಬ ಕಾರ್ಟೂನ್ ಸರಣಿಯಿಂದ ಪ್ರೇರಿತವಾದುದು. ಆಕೆಯ ಬಹುತೇಕ ಚಿತ್ರಗಳಂತೆ ಇಲ್ಲಿಯೂ ಕೂಡ ಪ್ರಾಣಿ-ಪಕ್ಷಿಗಳಿಗೆ ಮನುಷ್ಯರನ್ನು ಹೋಲಿಸುವ ಭ್ರಾಮಕ ಮನೋಧರ್ಮದ ನಿರೂಪಣೆ ಕಾಣಬಹುದು. ಇಲ್ಲಿನ ನರ್ತಕಿಯರೆಲ್ಲರೂ ಮಧ್ಯವಯಸ್ಕರು. ಸುಂದರವಲ್ಲದ, ಹಲವು ಒತ್ತಡಗಳಿಗೆ ಒಳಗಾದಂತೆ ಕಾಣುವ, ಒರಟು ದೇಹದ ಮಹಿಳೆಯರು. ಕನಸುಗಳನ್ನು ಪೂರೈಸಿಕೊಳ್ಳಲಾಗದ, ಲೈಂಗಿಕ ಅಸಂತೃಪ್ತಿಯ, ಹಲವು ನಿರೀಕ್ಷೆಗಳನ್ನಿಟ್ಟುಕೊಂಡ ಭಾವ ಈ ಚಿತ್ರದಲ್ಲಿದೆ. ಇಲ್ಲಿ ಸ್ತ್ರೀರೂಪದ ಸಹಜ ಮತ್ತು ನೈಜ ನಿರೂಪಣೆಯ ಸಾಧ್ಯತೆಯನ್ನು ಹೆಚ್ಚು ಪೂರಕವಾಗಿ ಬಳಸಿಕೊಳ್ಳಲಾಗಿದೆ.
ಮಹಿಳಾಮನೋಧರ್ಮದ ಒತ್ತಾಸೆಗಳಿಗೆ ಪೂರಕವಾಗಿ ತಮಾಷೆ, ವ್ಯಂಗ್ಯದ ದೃಶ್ಯರೂಪಣೆಯ ಜೊತೆಗೆ ತೀಕ್ಷ್ಣ ಬರಹಗಳನ್ನೂ ಅಭಿವ್ಯಕ್ತಿ ಸಾಧನವಾಗಿ ಬಳಸಿಕೊಂಡ ಪ್ರಮುಖ ಕಲಾವಿದೆ ಅಮೆರಿಕಾದ ಬಾರ್ಬರಾ ಕ್ರೂಗರ್. 'Mademoiselle' ನಿಯತಕಾಲಿಕೆಯ ಹೆಡ್ ಡಿಸೈನರ್ ಆದ ಈಕೆ 'ಪೋಸ್ಟರ್' ಮಾಧ್ಯಮದ ಮೂಲಕ ಹೆಚ್ಚು ಸುಲಭವಾಗಿ ಮತ್ತು ಪ್ರಭಾವಶಾಲಿಯಾಗಿ ಜನರನ್ನು ತಲುಪುವ ಕೃತಿಗಳನ್ನು ರಚಿಸಿದ್ದಾಳೆ. ಕಪ್ಪು-ಬಿಳುಪಿನ ಸಶಕ್ತ ಛಾಯಾಚಿತ್ರದ ಜೊತೆಗೆ ಕೆಂಪು ಹಿನ್ನೆಲೆಯಲ್ಲಿ ಮೂಡಿದ ಕಪ್ಪು-ಬಿಳುಪಿನ ಅಕ್ಷರಗಳು ನೋಡುಗನನ್ನು ತಕ್ಷಣ ಸೆಳೆಯುವುದಲ್ಲದೆ, ತೀಕ್ಷ್ಣ ಸವಾಲನ್ನು ಸಮರ್ಥವಾಗಿ ಜನರಿಗೆ ತಲುಪಿಸುತ್ತವೆ.
ಕೊಳ್ಳುಬಾಕ ಸಂಸ್ಕೃತಿಯನ್ನು ಬಿಂಬಿಸುವ ' I shop, therefore I am' ಎಂಬ ಬರಹದ ಕೆಂಪು ಕಾರ್ಡನ್ನು ಹಿಡಿದು ತೋರಿಸುತ್ತಿರುವ ಕಪ್ಪು-ಬಿಳುಪಿನ ಅಂಗೈಯ ಚಿತ್ರ ಶಾಪಿಂಗ್ ಬ್ಯಾಗ್ಗಳ ಮೇಲೆ ಮುದ್ರಿತವಾದುದು ಮನರಂಜನೆಯೊದಗಿಸುವುದರ ಜೊತೆಗೆ ಗಂಭೀರ ಯೋಚನೆಗೂ ಒಳಗುಮಾಡುತ್ತದೆ. ಬಿಲ್ ಬೋರ್ಡ್ ಗಳು , ಟೀ-ಷರ್ಟ್, ಷಾಪಿಂಗ್ ಬ್ಯಾಗ್, ದೂರದರ್ಶನ, ಬಸ್ ನಿಲ್ದಾಣ - ಈ ಎಲ್ಲವೂ ಈಕೆಯ ಕಲಾಪ್ರದರ್ಶನದ ಸುಲಭ ತಾಣಗಳು. ಎಂಬತ್ತರ ದಶಕಗಳಲ್ಲಿ ಪ್ರಚಲಿತವಾಗಿದ್ದ ಮುರಿದು ಕಟ್ಟುವ ಮನೋಧರ್ಮ(Deconstruction) ಈಕೆಯ ಕೃತಿಗಳಲ್ಲೂ ಕಂಡುಬಂದಿದೆ. ಸಾಂಪ್ರದಾಯಿಕ ನಿಲುವನ್ನು ತಿರಸ್ಕರಿಸಿ ಹೊಸ ಚಿಂತನೆಗಳಿಗೆ ಚಾಲನೆ ಕೊಡುವ ನಿಟ್ಟಿನಲ್ಲಿ ಈಕೆಯ ಕೃತಿಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ.
By Barbara Kruger |
''Your gaze hits the side of my face' - (ನಿನ್ನ ನೋಟ ನನ್ನ ಮುಖದ ಪಾಶ್ರ್ವಕ್ಕೆ ತಗಲುತ್ತಿದೆ) . ಹೆಣ್ಣು ಶಿಲ್ಪದ ಮುಖದ ಒಂದು ಪಾಶ್ರ್ವದ ಮೇಲೆ ಈ ಹೇಳಿಕೆಯಿದೆ. ಇದು ಹೆಣ್ಣನ್ನು ದಿಟ್ಟಿಸುವ ಪೂರ್ವಾಗ್ರಹಿತ ಪುರುಷನೋಟವನ್ನು ಕುರಿತದ್ದು. ಈಕೆಯ ಇತರೆ ಪ್ರಮುಖ ಕೃತಿಗಳು :
'ಯುವರ್ ಬಾಡಿ ಈಸ್ ಎ ಬ್ಯಾಟ್ಲ್ ಗ್ರೌಂಡ್',
'ಯು ಆರ್ ನಾಟ್ ಯುವರ್ಸೆಲ್ಫ್',
'ಇಟ್ಸ್ ಎ ಸ್ಮಾಲ್ ವರ್ಲ್ಡ್, ಬಟ್ ನಾಟ್ ಇಫ್ ಯು ವಾಂಟ್ ಟು ಕ್ಲೀನ್ ಇಟ್',
'ಟೆಲ್ ಅಸ್ ಸಮ್ ಥಿಂಗ್ ವಿ ಡೋಂಟ್ ನೊ'
ಲೈಂಗಿಕತೆ, ಲಿಂಗ ತಾರತಮ್ಯ, ಹಿಂಸೆ, ರಾಜಕೀಯ, ಸಾಮಾಜಿಕ ಸಮಸ್ಯೆಗಳನ್ನು ಪ್ರಖರ ವಿಮರ್ಶಾತ್ಮಕ ಬರಹ-ದೃಶ್ಯಗಳ ಮೂಲಕ ಈಕೆಯ ಕೃತಿಗಳು ಚರ್ಚೆಗೊಳಪಡಿಸುತ್ತವೆ.
1985 ರಲ್ಲಿ ನ್ಯೂಯಾರ್ಕ್ ನಲ್ಲಿ ರೂಪಿತಗೊಂಡ 'ಗೆರಿಲ್ಲ ಗರ್ಲ್ಸ್' ಎಂಬ ಸಂಘಟನೆ ಸ್ತ್ರೀವಾದಿ ಚಿಂತಕರು, ಕಲಾವಿದರು, ಲೇಖಕರು, ನಾಟಕಕಾರರನ್ನು ಒಳಗೊಂಡಿದೆ. ಗೊರಿಲ್ಲ ಮುಖವಾಡ ಧರಿಸಿ ಕಾಣಿಸಿಕೊಳ್ಳುವ ಇವರು ತಮ್ಮನ್ನು ವೈಯಕ್ತಿಕವಾಗಿ ಗುರ್ತಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಪ್ರಚಲಿತ ಸಮಸ್ಯೆಗಳತ್ತ ಗಮನ ಸೆಳೆಯುವ ಕುರಿತು ಆಸಕ್ತರು. ಇವರು ತಮ್ಮನ್ನು ರಾಬಿನ್ ಹುಡ್, ಬ್ಯಾಟ್ ಮ್ಯಾನ್ ಥರದ ಜನಾನುರಾಗಿ ಸುಧಾರಕರಿಗೆ ಹೋಲಿಸಿಕೊಳ್ಳುತ್ತಾರೆ. ಹಾಸ್ಯ ಮತ್ತು ನಿಗೂಢತೆಯ ಮೂಲಕ ಜನರನ್ನು ಸುಲಭವಾಗಿ ಸೆಳೆಯುವ ಜಾಣ ತಂತ್ರ ಇವರದು. ಹೆಣ್ಣನ್ನು ಸೌಂದರ್ಯಕ್ಕೆ ಪರ್ಯಾಯವಾಗಿ ಪರಿಗಣಿಸುವ ಮತ್ತು ಆ ಮೂಲಕ ಆಕೆಯನ್ನು ಭೋಗಸಾಮಗ್ರಿಯ ಮಟ್ಟಕ್ಕೆ ಇಳಿಸುವ ಮನೋಸ್ಥಿತಿಯನ್ನು ಗೊರಿಲ್ಲ ಮುಖವಾಡ ಧರಿಸಿ ವ್ಯಂಗ್ಯ ಮಾಡುತ್ತಾರೆ.
By Guerilla Girls |
ಪ್ರಸಿದ್ಧ ನಿಯೋಕ್ಲಾಸಿಕಲ್ ಕಲಾವಿದ ಡೊಮಿನಿಕ್ ಇಂಗ್ರೆಯ 'ಗ್ರ್ಯಾಂಡ್ ಒಡಲಿಸ್ಕ್' ಎಂಬ ಕೃತಿಯಲ್ಲಿರುವ ನಗ್ನಸ್ತ್ರೀ ಚಿತ್ರಕ್ಕೆ ಗೊರಿಲ್ಲ ಮುಖವಾಡ ಹಾಕಿದ ಹಳದಿ ಹಿನ್ನೆಲೆಯ ಪೋಸ್ಟರ್ ಹೀಗೆ ಹೇಳುತ್ತದೆ :
'Do women Have to be naked to get into U.S. Museums?'(1989)- (ಮೆಟ್ರೊಪಾಲಿಟನ್ ಮ್ಯೂಸಿಯಂನಲ್ಲಿ ಜಾಗ ಪಡೆಯಲು ಸ್ತ್ರೀಯರು ನಗ್ನರಾಗಲೇಬೇಕೆ?)
ನವ್ಯಕಲಾ ವಿಭಾಗದಲ್ಲಿರುವ ಕಲಾವಿದರಲ್ಲಿ ಮಹಿಳೆಯರು ಶೇಕಡಾ ಐದಕ್ಕಿಂತ ಕಡಿಮೆ. ಆದರೆ ಶೇಕಡಾ ಎಂಬತ್ತೈದರಷ್ಟು ನಗ್ನಚಿತ್ರಗಳು ಮಹಿಳೆಯರವೇ ಎಂಬ ಕುರಿತಾಗಿಯೂ ಈ ಪೋಸ್ಟರ್ ಗಮನ ಸೆಳೆಯುತ್ತದೆ.
ಜಗತ್ತಿನ ಎಲ್ಲೆಡೆ ಮ್ಯೂಸಿಯಂಗಳಲ್ಲಿ ಮಹಿಳೆಯರನ್ನು ಬಂಧಿಸಿ, ಕಣ್ಮರೆಮಾಡಿ ಇಡಲಾಗಿದೆ. ಆ ಮ್ಯೂಸಿಯಂಗಳು ಹೆಚ್ಚು ಮಹಿಳಾ ಕಲಾವಿದರ ಕೃತಿ ಪ್ರದರ್ಶಿಸುವಂತೆ ಒತ್ತಾಯಿಸುತ್ತೇವೆ ಎಂಬುದು ಮತ್ತೊಂದು ಪೋಸ್ಟರ್ನಲ್ಲಿನ ಹೇಳಿಕೆ. ಪ್ರಸಿದ್ಧ ಕಲಾವಿದೆಯರ ಭಾವಚಿತ್ರಗಳ ಕೊಲ್ಯಾಜ್ ಮಾಡಿ ಅವರನ್ನು ಕಂಬಿಗಳ ಹಿಂದೆ ಬಂಧಿಸಿರುವಂತೆ ತೋರಿಸಲಾಗಿದೆ.
'ಗೆರಿಲ್ಲಾ ಗರ್ಲ್ಸ್' ಸಂಘಟನೆ 1989 ರಲ್ಲಿ ಹೊರಡಿಸಿರುವ ಪಟ್ಟಿ ಹೀಗಿದೆ :
ಸ್ತ್ರೀ ಕಲಾವಿದೆಗೆ ಇರುವ ಅನುಕೂಲಗಳು :
- ಯಶಸ್ಸಿನ ಒತ್ತಡವಿಲ್ಲದೆ ಕೆಲಸ ಮಾಡುವುದು.
- ಪುರುಷರ ಕಲಾಕೃತಿಗಳೊಂದಿಗೆ ತಮ್ಮ ಕೃತಿಗಳನ್ನು ಪ್ರದರ್ಶಿಸುವ ಗೋಜಿಗೆ ಸಿಲುಕದಿರುವುದು.
- ತನಗೆ ಎಂಬತ್ತು ವರ್ಷ ತುಂಬಿದ ನಂತರವೇ ವೃತ್ತಿಜೀವನ ಸುಧಾರಿಸಬಹುದೆಂಬ ಅರಿವು ಪಡೆದಿರುವುದು.
- ರಚಿಸುವ ಎಲ್ಲಾ ಕೃತಿಗಳೂ 'ಮಹಿಳೆಯಿಂದ ರಚಿತವಾದುದು' ಎಂಬ ಹಣೆಪಟ್ಟಿಗೆ ಒಳಗಾಗುವುದು.
- ಮಾತೃತ್ವ ಮತ್ತು ವೃತ್ತಿಜೀವನ - ಎರಡರಲ್ಲಿ ಒಂದನ್ನು ಆಯ್ದುಕೊಳ್ಳುವ ಅವಕಾಶ ಒದಗುವುದು.
- 'ಸಿಗಾರ್' ಸೇದುತ್ತ, ಇಟ್ಯಾಲಿಯನ್ ಸೂಟ್ ಧರಿಸಿ ಚಿತ್ರರಚಿಸುವ ಬಿಕ್ಕಟ್ಟು ಇಲ್ಲದಿರುವುದು.
- 'ಜೀನಿಯಸ್' ಎಂದು ಕರೆಸಿಕೊಳ್ಳುವ ಮುಜುಗರಕ್ಕೊಳಗಾಗುವ ಸಂದರ್ಭ ಒದಗದಿರುವುದು.
- ಮಕ್ಕಳನ್ನು ಪಾಲಿಸುವ ಜವಾಬ್ದಾರಿಯ ನಡುವೆ ಸಾಕಷ್ಟು 'ಬಿಡುವು' ಪಡೆಯುವ ಅವಕಾಶವಿರುವುದು.
ಲಿಂಗತಾರತಮ್ಯ ಮತ್ತು ಸ್ತ್ರೀಶೋಷಣೆಯ ಕುರಿತ ಸಮಸ್ಯೆಗಳನ್ನು ತಮ್ಮದೇ ರೀತಿಯಲ್ಲಿ ವಿಡಂಬನಾತ್ಮಕವಾಗಿ ಹಾಗೂ ಅಷ್ಟೇ ಮೊನಚಾಗಿ ಬಿಂಬಿಸುವ ಈ ಮಾತುಗಳು ಶೋಷಿತರ ಹೆಪ್ಪುಗಟ್ಟಿದ ನೋವು ಮತ್ತು ಅತಿಗಂಭೀರ ಹತಾಶೆಯನ್ನು ಪ್ರತಿನಿಧಿಸುತ್ತವೆ.
ಸ್ವಾನುಕಂಪ, ಬಿಗುಮಾನ ಮತ್ತು ಮೌನದ ಮೊರೆಹೋಗಿದ್ದ ಮಹಿಳೆ ನಿಧಾನವಾಗಿಯಾದರೂ ಹೆಚ್ಚು ತೀಕ್ಷ್ಣ, ದಿಟ್ಟ ಮತ್ತು ಸ್ಪಷ್ಟವಾದ ಅಭಿವ್ಯಕ್ತಿಗಳಿಸಿಕೊಂಡಿರುವುದನ್ನು ಗಮನಿಸಬೇಕು. ತನ್ನನ್ನು ಸಮಾಜದ ವಿವಿಧ ಸ್ತರಗಳಲ್ಲಿ ಅನನ್ಯವಾಗಿ ಗುರುತಿಸಿಕೊಳ್ಳುವ ಜೊತೆಗೆ ತನ್ನನ್ನೇ ತಾನು ವಿಡಂಬನೆಗೆ ಒಳಗು ಮಾಡಿಕೊಳ್ಳುವ ಪ್ರಬುದ್ಧತೆಯ ಆರೋಗ್ಯಕರ ಒಳನೋಟ ದಕ್ಕಿರುವುದು ಮುಂದಿನ ಸವಾಲುಗಳನ್ನು ಹಗುರಗೊಳಿಸಬಲ್ಲದು.
Barbara Kruger - 'Your body is a battle ground' |
( ಇಳಾ ಪ್ರಕಾಶನದ 'ನಮ್ಮ ಮಾನಸ' ಪತ್ರಿಕೆಯ ಈ ತಿಂಗಳ ವಿಶೇಷ ಸಂಚಿಕೆಯಲ್ಲಿ ಪ್ರಕಟಿತ ಲೇಖನ )
9 ಕಾಮೆಂಟ್‌ಗಳು:
thanks dear for the upload,hope you can make series of these writings on various art practices and emerging trends of Indian art too.
which in fact will make more awareness and impact on other then our own visual artist.(?)
saw your blog,nice blog. and especially your artworks are awesome..
ನಮನಗಳು
ಅಭಿವಂದನೆಗಳು
ನಿಮ್ಮ ಕಲಾತ್ಮಕ ಮನದ ಸ್ಥಿತಿಗೆ ನಾನು ಬೆರಗಾಗಿದ್ದೇನೆ. ಬಹುಮುಖ ಪ್ರತಿಭೆ ನಿಮಗೆ ಶರಣು
nice blog...... i like it very much...........
ಕಲಾ ಮಾಧ್ಯಮದಲ್ಲಿ ಸ್ತ್ರೀವಾದಿ ಚಿಂತನೆ ನ=ನಿಮ್ಮ ಲೇಖನ ಮನೋಜ್ಞವಾಗಿ ಮೂಡಿ ಬಂದಿದೆ. ನೀವು ರಚಿಸಿದ ಚಿತ್ರಗಳಲ್ಲಿಯೂ ಸ್ತ್ರೀವಾದಿ ಚಿಂತನೆ ಚಿತ್ರಗಳನ್ನು ನಾನು ಗುರುತಿಸಿದ್ದೀನಿ. ನಿಮ್ಮ ಬರಹ ಹಾಗೂ ಚಿತ್ರಗಳನ್ನು ನಾನು ಕುತೂಹಲದಿಂದ ಕಾಯುತ್ತಿರುವೆ
ಚೆನ್ನಾಗಿದೆ, ತೀಕ್ಶ್ಣವಾದ ಚಿತ್ರಗಳು, ಯೋಚನೆಗಳು, ಬರಹ ಚೆನ್ನಾಗಿದೆ. ಕಲಾ ಮಾಧ್ಯಮದ ಬಗ್ಗೆ ಇನ್ನಷ್ಟು ಬರೆಯಿರಿ.
Very nice Blog...Awesome Paintings... I just liked all paintings and theme of the paintings....
Very nice Blog...Awesome Paintings... I just liked all paintings and theme of the paintings....
Some more Blogs please.
ಕಾಮೆಂಟ್ ಪೋಸ್ಟ್ ಮಾಡಿ