ಚಿಕ್ಕಂದಿನಲ್ಲಿ ಕಂಡಿದ್ದ ಮೇಲುಕೋಟೆಯ ನೆನಪು ಒಂದು ಕನಸಿನಂತೆ,ಕಪ್ಪು-ಬಿಳುಪು ಚಿತ್ರದ ನಿಗೂಢತೆಯಂತೆ ಕಾಡುತ್ತಿತ್ತು.ಹಳೆಯ ದೇಗುಲದ ಮೆಟ್ಟಿಲುಗಳು,ಮನಬಂದಂತೆ ಹರಿದಾಡಿ ದಿಕ್ಕು ತಪ್ಪಿಸುವ ರಸ್ತೆಗಳು,ಬಿಳಿಯ ಗಿರಿಗಿಟ್ಲೆ ಹೂವು,ಎಲ್ಲೊ ನೋಡಿದ ಕುದುರೆ,ನವಿಲು...ತಾಳೆಗರಿ ಹಸ್ತಪ್ರತಿ್ರತಿ.....ಇವೆಲ್ಲ ನನ್ನ ನೆನಪಲ್ಲಿ ಮಸಕು ಮಸಕಾಗಿ ಮೇಲುಕೋಟೆಯ ಚಿತ್ರ ಕಟ್ಟುತ್ತಿದ್ದವು.
ಮೊನ್ನೆ ಮತ್ತೊಮ್ಮೆ ಭೇಟಿ ಕೊಟ್ಟಾಗ, ಯಾವುದೋ ಹಳೆಯ ಆತ್ಮ ಪ್ರವೇಶ ಮಾಡಿದ ಹಾಗೆ ಅನಿಸಿತ್ತು !
ಪುರಾತನ ಪ್ರವರ ಮೈಚಾಚಿ ರಸ್ತೆ,ಮನೆ,ಬಾವಿ,ಎಲ್ಲೆಂದರಲ್ಲಿ ಹರಡಿಕೊಂಡು ಏದುಸಿರು ಬಿಡುವ ಹಾಗಿತ್ತು !
ಶಂಖ ಚಕ್ರದ ನಡುವೆ ವೆಂಕಟರಮಣನ ಹಣೆಯ ನಾಮ ಎಲ್ಲೆಲ್ಲು ಕಂಡುಬರುತ್ತಿತ್ತು.ತಮಿಳು ಅಯ್ಯಂಗಾರರ ಬೀಡು ಅದು.ಹನ್ನೆರಡನೆ ಶತಮಾನದಲ್ಲಿ ತಮಿಳಿನ ರಾಮಾನುಜಾಚಾರ್ಯರು ನಾಲ್ಕೈದು ಪ್ರಮುಖ ಮನೆತನಗಳೊಂದಿಗೆ ಇಲ್ಲಿಗೆ ಬಂದು ನೆಲೆ ನಿಂತರಂತೆ.
ಹದಿನಾಲ್ಕು ವರ್ಷ ಇಲ್ಲಿ ತಂಗಿದ ಯತಿಗಳು ಇದನ್ನು ಶ್ರೀ ವೈಶ್ಣವ ಜನಾಂಗದ ಪ್ರಮುಖ ನೆಲೆಬೀಡಾಗಿ ಮಾರ್ಪಡಿಸಿದರು ಎಂಬುದು ಪ್ರತೀತಿ.
ಹಳೆಯ ಮನೆಗಳು ಅರ್ಧಂಬರ್ಧ ಜೀವ ಉಳಿಸಿಕೊಂಡಂತೆ, ತಲೆಕೆದರಿ,ಕುಂಕುಮ ಅಳಿಸಿ, ಹಳೆಯ ಮಾಸಲು ಸೀರೆ ಉಟ್ಟ ಮಾಜಿ ಸುಂದರಿಯರಂತೆ ಕಾಣುತ್ತಿದ್ದವು. ಅವುಗಳೆಲ್ಲ ಯಾವುದೊ ಗತಕಾಲದ ಸುಂದರ ನೆನಪುಗಳ ಗುಂಗಿನಲ್ಲಿ ಹಾಗೇ ಲೋಕ ಮರೆತು ಕನಸು ಕಾಣುತ್ತ ನಿಂತುಬಿಟ್ಟ ಹಾಗಿವೆ. ಕಿಟಕಿ,ಬಾಗಿಲುಗಳು -ಮಳೆ,ಬಿಸಿಲು ಗಾಳಿ,ಧೂಳು ಎಲ್ಲವನ್ನೂ ಕಂಡು, ಈಗ ನೆಪಮಾತ್ರಕ್ಕೆಂಬಂತೆ ನಿಟ್ಟುಸಿರುಬಿಡುತ್ತಾ ,.ಹಳೆಯ ಸದ್ದು ಗದ್ದಲ,ಗುಸುಗುಸು ಎಲ್ಲವನ್ನೂ ಒಳಗೆ ಭದ್ರವಾಗಿ ಚಿಲಕ ಹಾಕಿ ಇಟ್ಟುಕೊಂಡಂತೆ ಮೌನವಾಗಿ ಪ್ರಲಾಪಿಸುತ್ತಿದ್ದವು.
ಬಾಗಿಲುಗಳ ಅಂಚಿನಲ್ಲಿ ಕೊರೆದು ಮಾಡಿದ ಅಲಂಕ್ರುತ ಪಟ್ಟಿಕೆಗಳು ಯಾಕೊ ಪ್ರೀತಿ ಹುಟ್ಟಿಸಿದವು. ಗೋಡೆಗಳಿಗೆ ಬಳಿದ ಗಾರೆ,ಮಣ್ಣು-ಇವುಗಳ ಮಧ್ಯೆ ಅಲ್ಲಲ್ಲಿ ಕಪ್ಪು ಕಿಟಕಿಗಳು ಅದ್ಭುತ ಚಿತ್ರ ಮಾಡಿಟ್ಟಿದ್ದವು !
ಹಳೆಯ ಮರದ ಬಾಗಿಲುಗಲ ಮೇಲೆ ಉದ್ದುದ್ದ ಗೆರೆಗಳು ಮೂಡಿ, ಅದಕ್ಕೆ ಹೊಂದುವ ಬಣ್ಣದ್ದೆ ಪಟ್ಟಿಗಳನ್ನು ಸಿಕ್ಕಿಸಿಕೊಂಡು ಚಿಲಕ-ಸರಳುಗಳನ್ನೆ ಕಣ್ಣು ಮೂಗಿನಂತೆ ಜೋಡಿಸಿಕೊಂಡು ನೋಡು ಬಾ ಎಂಬಂತೆ ನನಗಾಗಿ ಕಾಯುತ್ತಿದ್ದುದು ಕಂಡು ನಗು ಬಂತು !
ಅವುಗಳನ್ನೆಲ್ಲ ಬಿಟ್ಟೇನೆಲ್ಲಿ ? ಎಲ್ಲವನ್ನೂ ನನ್ನ ಹೊಸ ಕ್ಯಾಮೆರಾದಲ್ಲಿ ತುಂಬಿಸಿಕೊಂಡು ತಂದುಬಿಟ್ಟೆ. ಅದೆಷ್ಟು ಕಾಲದಿಂದ ನಿಂತಿದ್ದವೋ ಏನೋ !
ಉದ್ದುದ್ದ ರಸ್ತೆಗಳೆಲ್ಲ ಉಸ್ಸಪ್ಪಾ...ಅಂತ ಮೈಚಾಚಿ ಏನೂ ಗೊತ್ತಿಲ್ಲದ ಮಳ್ಳರಂತೆ ಬಿದ್ದುಕೊಂಡಿವೆ ಅಲ್ಲಿ.ಗೆಳೆಯನೊಂದಿಗೆ ತಿರುತಿರುಗಿ ಮತ್ತೆಮತ್ತೆ ಅದದೇ ರಸ್ತೆಗಳಿಗೆ ಎಡತಾಕುವ ನನ್ನ ಕಂಡು ಅವುಗಳು ಚೇಷ್ಟೆ ಮಾಡಿದ್ದು ಗೊತ್ತಾಯಿತು!
ಇನ್ನು ಆ ಚಿತ್ರಗಳಂಥ ಮನೆಗಳಲ್ಲಿ ವಾಸಿಸುವ ಜನರ ಬಗ್ಗೆ ಕುತೂಹಲ ಇದ್ದೆ ಇತ್ತು.ಹಳೆಯ ಮಾಸಲು ಚಿತ್ರಕ್ಕೆ ಫಳಫಳ ಫ಼್ರೇಂ ಹಾಕಿದಂತೆ ಪುರಾತನ ಮರಗಂಬಗಳ ಮೇಲೆ ಹೊಸ ಗೋಡೆಯ ಉಪ್ಪರಿಗೆ. ಅವರೆಲ್ಲರ ಇರವು ಆ ಪುಟ್ಟ ಊರಿನ ಹಳೆಯ ಅಧ್ಯಾಯಗಳ ನಡುವೆ ಸಿಲುಕಿದ, ಬಣ್ಣ ಮಾತ್ರ ಹೊಸದಾದ ಹಾಳೆಯಂತೆ ಕಾಣುತ್ತಿತ್ತು.
ಅಲ್ಲಿನ ಕೊಳಗಳ ಕಥೆಯೇ ಬೇರೆ.ನಾನು ಮೊನ್ನೆ ನೋಡಿದ್ದು ನಾಲ್ಕು ಮಾತ್ರ. ಒಟ್ಟು ೮೦ ಕೊಳಗಳಿವೆಯಂತೆ ಅಲ್ಲಿ.
ಹೆಚ್ಚಿನ ಮನೆಗಳೆಲ್ಲವೂ ಪ್ರತ್ಯೇಕ ಬಾವಿಗಳನ್ನು ಹೊಂದಿವೆ.
ಯಾವುದೋ ಪೌರಾಣಿಕ ನಾಟಕದ ’ಸೆಟ್’ನಂತೆ ಇದ್ದ ಮನೆಯ ಅಂಗಳದ ಬಾಗಿಲು ಮುಚ್ಚಿರಲಿಲ್ಲ.ಒಮ್ಮೆ ಇಣುಕಿದೆ,ಯಾರೂ ಕಾಣದಾದಾಗ ಒಳಗೆ ಒಂದು ಕಾಲಿಟ್ಟೆ. ಯಾವುದಾದರು ಧ್ವನಿಯೊಂದಿಗೆ ವೇಷಧಾರಿ ಜನ ಪ್ರತ್ಯಕ್ಷವಾಗಬಹುದು ಎಂದು ನಾನು ನಿರೀಕ್ಷಿಸಿದ್ದು ಸುಳ್ಳಾಯ್ತು. ಅದು ನಿಜಕ್ಕೂ ಬಂದು ನೋಡಲಿ ಎಂಬಂತೆ ಸುಮ್ಮನೆ ತೆರೆದೇ ಇತ್ತು.
ಆ ಚೆಂದದ ಚಿತ್ರಕೊರೆದ ಬಾಗಿಲು ದಾಟಿದಾಗ ನಾಟಕದ ’ರಂಗಸಜ್ಜಿಕೆ’ಯೊಳಗೆ ಪೂರ್ತಿ ಪ್ರವೇಶಿಸಿದಂತಾಯ್ತು.
ಸುಂದರ ಬಾವಿ,ಇಣುಕಿದರೆ ಆಳದಲ್ಲಿ ತಿಳಿನೀರು, ಬಾವಿಯ ಪಕ್ಕ ದೊಡ್ಡ ಕಡಾಯಿಯಲ್ಲಿ ಹಸಿರು ಬಣ್ಣದ ನೀರು. ಅದರ ಪಕ್ಕದ ಮೂಲೆಯಲ್ಲಿ ಸಂಯೋಜನೆ ಹೆಚ್ಚು ಕಡಿಮೆ ಆಗದಂತೆ ಜೋಡಿಸಿಟ್ಟಿದ್ದ ಪಾತ್ರೆಗಳು - ಎಲ್ಲ ಬೇರೆ ಬೇರೆ ಅಳತೆಯವು.
ನಡುನಡುವೆ ಹೂಕುಂಡ - ಅರೆ, ಎಲ್ಲಾ ಪೂರ್ವಯೊಜನೆಯಲ್ಲೇ ಜೋಡಿಸಿಟ್ಟಂತಿವೆ !
ಹಾಗೇ ಬಾಗಿಲ ಪಕ್ಕಕ್ಕೆ ಹರಿದು ಹೋದ ವೈರ್ ಚೇರ್ -ನನಗಾಗಿ ಇಟ್ಟಿದ್ದು ಅಂತೇನೂ ಅನ್ನಿಸಲಿಲ್ಲ.ಬದಲಿಗೆ ತೀರಾ ಸಾಮಾನ್ಯ 'ಸಂಯೋಜನೆ'ಯಲ್ಲಿ ಸರಿಯಾದ ಜಾಗ ನೋಡಿ ಇರಿಸಿದ್ದು ಅಷ್ಟೆ.
ಯಾಕೋ ಮುಜುಗರ ಆಗಿ, ಆ ಫ಼್ರೇಂ ನಿಂದ ಹೊರಬಂದುಬಿಟ್ಟೆ.
ಮತ್ತೆ, ಮೇಲುಕೋಟೆಗೆ ಹೋಗುವುದಿದೆ.
9 ಕಾಮೆಂಟ್ಗಳು:
..ತುಂಬಾ ಚೆನ್ನಾಗಿ ಬರೆದಿದ್ದೀರ ..ತುಂಬಾ ಚಿಕ್ಕವನಿರಬೇಕಾದರೆ ಹೋಗಿದ್ದೆ , ನಿಮ್ಮ ಬರಹ ಓದಿ ಮತ್ತೆ ಹೋಗ್ಬೇಕು ಅಂತ ಅನ್ನಿಸ್ತಾ ಇದೆ ..ಸ್ನೇಹಿತರ ಹತ್ತಿರ ಮೇಲುಕೋಟೆ ಟ್ರಿಪ್ ಪ್ರಸ್ತಾಪಿಸಿದಾಗ , ಎಲ್ಲರಿಗು ಆಶ್ಚರ್ಯ ಯಾಕೆಂದರೆ ನಂದು ಪಕ್ಕಾ ನೀರಿಶ್ವರವಾದ ..ಸ್ನೇಹಿತರೆಲ್ಲರೂ ನಕ್ಕಾಗ ನೆನಪಿಗೆ ಬಂದದ್ದು ..ಹಳೆಯ ಮನೆಗಳು ಅರ್ಧಂಬರ್ಧ ಜೀವ ಉಳಿಸಿಕೊಂಡಂತೆ, ತಲೆಕೆದರಿ,ಕುಂಕುಮ ಅಳಿಸಿ, ಹಳೆಯ ಮಾಸಲು ಸೀರೆ ಉಟ್ಟ ಮಾಜಿ ಸುಂದರಿಯರು
ಖಂಡಿತ ಮೇಲುಕೋಟೆಗೆ ಹೋಗ್ತಾ ಇದ್ದೀನಿ , ಗೊತ್ತಿಲ್ಲ ನನಗಾಗಿ ಯಾರ್ ಯಾರ್ ಕಾದಿದ್ದಾರೆ ಅಂತ !!!
ಅಪ್ಪಾ !! ಚೆಲುವರಾಯಸ್ವಾಮಿ ಜಾಸ್ತಿ ಆಸೆ ಇಟ್ಕೋಬೇಡ ದೇವಸ್ತಾನದ ಒಳಗಡೆ ಬರೋಲ್ಲ , ಬಂದ್ರು ಕೈ ಮುಗಿಯಲ್ಲ .
ಖಂಡಿತ ಹೋಗಿ ಬನ್ನಿ,..
ನೀವು ಅಲ್ಲಿಯ ಚೆಲುವಿಗೆ ಯಾವ ರೀತಿ ಕೈ ಮುಗಿದರೂ ಅದು ಚೆಲುವರಾಯ ಸ್ವಾಮಿಗೆ ತಲುಪುತ್ತೆ ಬಿಡಿ..
ಆತ ಏನು ಮುನಿಸಿಕೊಳ್ಳೋದಿಲ್ಲ.. :)
bhala chennagi varnisiddiri ....kaviyagiruva niinaa manassige ..yavattu baadadirali niina baravanige ya hambala
ನೇರ ವಿವರಣೆಗಳು, ಚಂದ ಉಪಮೆಗಳು.. ಚನಾಗ್ ಬರ್ದಿದೀರಾ. ಇಷ್ಟ ಆಯ್ತು.
ಆದ್ರೆ ತುಂಬಾನೇ ಸ್ಪೆಲಿಂಗ್ ಮಿಸ್ಟೇಕ್ಸ್ ಮಾಡ್ತೀರ. ಹೀಗೇ ಮಾಡ್ತಿದ್ರೆ ಮಾರ್ಕ್ಸ್ ಕಟ್ ಮಾಡ್ಬೇಕಾಗತ್ತೆ! ;)
Thumba channagide....
ಮೇಲುಕೋಟೆ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ! ಹೋಲಿಕೆಗಳು ಚೆನ್ನಾಗಿವೆ. ನಾನು ೮ ವರ್ಷದ ಹಿಂದೆ ಹೋಗಿದ್ದೆ. ಆಗ ಛಾಯಾಗ್ರಾಹಕನಾಗಿರಲಿಲ್ಲ. ಈಗ ಆದ ಮೇಲೆ ಹೋಗಬೇಕೆನ್ನಿಸುತ್ತಿದೆ. ನಾನು ಈ ಬ್ಲಾಗಿಗೆ ಹೊಸ ಸದಸ್ಯ. ನಾನು ಸಾಧ್ಯವಾದಷ್ಟು ಮಟ್ಟಿಗೆ ಫೋಟೊಗ್ರಫಿ ಬಗ್ಗೆ ಬರೆಯುತ್ತಿದ್ದೇನೆ. ನೀವೇಕೆ ನನ್ನ ಬ್ಲಾಗಿನೊಳಗೆ ಬಂದು ಫೋಟೊಗಳನ್ನು ನೋಡಬಾರದು.
ಶಿವು.ಕೆ
ನನ್ನ ಬ್ಲಾಗ್:
http://chaayakannadi.blogspot.com
@Shivu,
Sure i will read all your articles...
Nimma aa photo blog tumba channagidi..continue the same spirit.. :)
Hi, Really the article is superb...
ಕಾಮೆಂಟ್ ಪೋಸ್ಟ್ ಮಾಡಿ