ಮಂಗಳವಾರ, ನವೆಂಬರ್ 11, 2008

ತನ್ನರಿವು ತನಗೀವ ತಾವು


ಎಲ್ಲೆಲ್ಲೋ ಕಳೆದುಹೋಗಿಬಿಡುತ್ತಿರುವಂತೆ ಅನಿಸಿದಾಗೆಲ್ಲ ಚೆಲ್ಲಿಹೋದ ಎಲ್ಲವನ್ನೂ ಹೆಕ್ಕಿ,ಇಡಿಯಾಗಿ ಮತ್ತೆ ವಾಸ್ತವಕ್ಕೆ ಎಳೆದು ತರುವುದು ಬರವಣಿಗೆ ಮತ್ತು ಚಿತ್ರಗಳ ಪ್ರಾಮಾಣಿಕ ಮೌನ.ಇದನ್ನೂ ’ವಾಸ್ತವ’ ಎನ್ನುವುದು ಹೇಗೆ..? ಕಲ್ಪನೆ ಮತ್ತು ವಾಸ್ತವಕ್ಕೆ ನನ್ನ ಮಟ್ಟಿಗೆ ಹೆಚ್ಚು ವ್ಯತ್ಯಾಸವೇನೂ ಕಾಣುತ್ತಿಲ್ಲ.ವಾಸ್ತವಿಕತೆಯೆಂಬುದು ನಮ್ಮ ನಮ್ಮ ದೃಷ್ಟಿ ಚಾಚಬಲ್ಲಷ್ಟು ಕಾಲ್ಪನಿಕ ಪರಿಧಿಯೊಳಗೆ ಮಾತ್ರ ಎಂಬುದು ನಿಜವಷ್ಟೆ.

ಬಸ್,ಟ್ರ್ಯಾಫ಼ಿಕ್,ಮಾರ್ಕೆಟ್,ಥಿಯೇಟರ್...ಎಲ್ಲದರ ಬಣ್ಣ,ವಾಸನೆ,ಸದ್ದು,ಸ್ಪರ್ಶ ಸಿಕ್ಕಷ್ಟೂ ದೂರ ಛಿದ್ರವಾಗಿ ಹರಡಿಹೋಗಿರುತ್ತೇನೆ.ಬಸ್ ಇಳಿದು ರಸ್ತೆ ನಡೆಯುವಾಗ ಕಂಡ ಕಾರು,ಸೈಕಲ್,ಜನ ಅಲ್ಲಷ್ಟು,ಇಲ್ಲಷ್ಟು ಉಳಿದು ಮತ್ತೆ ಇಡಿಯಾಗಿ ಮನೆ ಹೊಕ್ಕರೆ ಪುನಃ ಹಂಚಿಕೊಂಡುಬಿಡುವ ಗೋಡೆಯ ಚಿತ್ರ,ಕುರ್ಚಿ ಸಂಸಾರ,ಚಪ್ಪಲಿ ಗೂಡು,ಸ್ವೆಟರ್ ಬಣ್ಣ,ಬೆಡ್ ಶೀಟ್ ಅಂಚಿನ ಡಿಸೈನ್,ದುಪಟ್ಟ,..ಕಡೆಗೆ ನನ್ನ ಕಣ್ಕಪ್ಪು,ಯಾರ್ಡ್ಲಿ ಪರ್ಫ಼್ಯೂಂ...ನನ್ನನ್ನು ಹೀಗೀಗೇ ಇಂತಿಷ್ಟೇ ಎಂದು ಪರಿಚಯಿಸಿಕೊಳ್ಳುವುದು ಹೇಗೆ..?!

ನೋಡಿದ ನೋಟ,ಆಡಿದ ಮಾತು,ತಡವಿದ ರಾಗ ಅಲೆಯಾಗಿ ಎಲ್ಲೆಲ್ಲಿ ಸುತ್ತಿ,ಬಳಸಿ,ಸುಳಿದು ಹರಡಿದೆಯೋ ಅಲ್ಲೆಲ್ಲ ನಾನೇ.
ಅಂದಮೇಲೆ ’ಏಕಾಂಗಿ’ ಅಂತೇನಾದರು ಅನಿಸಿದರೆ ನೆಪ ಹುಡುಕುವ ನನ್ನ ಬಗ್ಗೆ ನನಗೇ ನಗು ಬಂದೀತು.

ಮೊನ್ನೆ ಥಿಯೇಟರ್ನಲ್ಲಿ ’ಫ಼್ಯಾಶನ್’ ನೋಡಿದ ಮೇಲೆ ಹೀಗೆ...ಕಳೆದದ್ದು,ಪಡೆದದ್ದು ಎಲ್ಲ ಗಿರಕಿ ಹೊಡೆಯುತ್ತಾ ’ನಾನು’ ಎಂಬ ಒಟ್ಟು ಮೊತ್ತದ ಅಂದಾಜು ಹಾಕಲು ಹೊರಟುಬಿಟ್ಟಿದೆ ನನ್ನೊಳಗಿನ ನಾನು..!

ಬಾಲಿವುಡ್ ಮಂದಿ ಕೆಲವೊಮ್ಮೆ ಹೀಗೆ ಆಶ್ಚ್ಚರ್ಯ ಹುಟ್ಟಿಸುವಂತೆ ನನ್ನನ್ನು ಕಾಡಿಬಿಡುತ್ತಾರಲ್ಲ ಎಂಬುದೇ ಒಗಟು ಈಗ !
ನೀಟಾದ,ಅಚ್ಚುಕಟ್ಟಾದ ಸೌಂದರ್ಯದ ಬಗ್ಗೆ ಯಾಕೋ ತಾತ್ಸಾರ.’ಸುಂದರ’ ಎನಿಸಿಕೊಳ್ಳುವ ಮುಖಗಳೆಲ್ಲ ಒಂದೇ ಅಚ್ಚಿನ ಎರಕಗಳಂತೆ ಕಂಡು ಕೊನೆಗೆ ಕೃತ್ರಿಮ ಮುಖವಾಡಗಳಾಗಿ ಕಣ್ಣಿಗಷ್ಟೆ ರಾಚಿ ಮರೆಯಾಗಿಬಿಡುತ್ತವೆ.

ರಾಣಿಮುಖರ್ಜಿಯ ಅಳು,ಶಾರುಖ್ ನ ನೋಟ,ಆಮಿರ್ ನ ಸಿಟ್ಟು,ಕಾಜೋಲಳ ತುಂಟತನ...ಇವೆಲ್ಲವುಗಳ ಆವಾಹನೆಯ ಅವರ ಸಾಮರ್ಥ್ಯ ಮಾತ್ರ ಗಣನೆಯಲ್ಲಿ ನಿಂತು, ಬಾಲಿವುಡ್ ಎಂಬ ಬಹುಚರ್ಚಿತ ವಲಯದ ಬೆಡಗು ತಲೆತಿರುಗಿಸುವ ತೀಕ್ಷ್ಣ ಅತ್ತರಿನಂತೆ ಅಡರಿ ನನ್ನನ್ನು ಮತ್ತಷ್ಟು ಅರಸಿಕತೆಗೆ ತಳ್ಳುವುದುಂಟು.

ಹೆಚ್ಚು ಜನಪ್ರಿಯಗೊಂಡ ಯಾವುದೇ ’ಬ್ರ್ಯಾಂಡ್’ ನನ್ನಲ್ಲಿ ಅಷ್ಟೇ ಸಂದೇಹ ಮತ್ತು ಭಯ ಹುಟ್ಟಿಸುತ್ತದೆ.ಜನಪ್ರಿಯತೆಯ ಅಬ್ಬರದಲ್ಲಿ ಕಳೆದು ಹೋಗುತ್ತಾ ನಮ್ಮನ್ನೇ ನಾವು ಮರೆತುಬಿಡುವ ಅಪಾಯದಿಂದ ಸದಾ ಹಿಂದೆಸರಿಯುತ್ತ ಪೆಪ್ಸಿ,ಲ್ಯಾಕ್ಮೆ,ಲಕ್ಸ್ ...ಎಲ್ಲವುಗಳಿಂದ ಸಾಕಷ್ಟು ದೂರವಿದ್ದುಬಿಡುವುದು ನನ್ನಮಟ್ಟಿಗೆ ಸಮಾಧಾನದ ವಿಷಯ.ಕಿವಿಗಡಚಿಕ್ಕುವ ಇವೆಲ್ಲದರ ಸಡಗರದ ಗದ್ದಲ ನಿಧಾನವಾಗಿ ನಮ್ಮ ಎಲ್ಲವನ್ನೂ ಆವರಿಸುತ್ತ ಅತಿಸಹಜವೆಂಬಂತೆ ತನ್ನ ಅಗಾಧ ಭದ್ರಬಾಹುಗಳಿಂದ ಬರಸೆಳೆದು ಪ್ರೀತಿಯ ಭ್ರಮೆ ಬರುವಂತೆ ಗಟ್ಟಿಯಾಗಿ ಅಪ್ಪುತ್ತಾ ಉಸಿರುಗಟ್ಟಿಸಿಬಿಡುವ ಮುನ್ನ ಸರಿಯಾದ ದೂರಕಾಯ್ದುಕೊಂಡುಬಿಡಲು ಹೆಣಗುತ್ತಿರುತ್ತೇನೆ.
ಇವನ್ನೆಲ್ಲ ತಮಾಷೆಯ,ಕೇವಲ ಮರಂಜನೆಯ ವಸ್ತುಗಳಷ್ಟೆ ಎಂದು ನಂಬಿ,ನಿಟ್ಟುಸಿರುಬಿಟ್ಟು ಹಗುರಾಗಿಬಿಡುವಹಾಗಿದ್ದರೆ ಚೆನ್ನಾಗಿತ್ತೇನೋ! ಆದರೆ ಇದು ಅಷ್ಟು ಸುಲಭ ಇರುವಂತೆ ಕಾಣುತ್ತಿಲ್ಲ.ನಮ್ಮ ದೃಷ್ಟಿ,ಗ್ರಹಿಕೆ..ಕಡೆಗೆ ವ್ಯಕ್ತಿತ್ವವನ್ನೂ ಖರೀದಿಸಿಬಿಡುವ ರಾಕ್ಷಸ ಶಕ್ತಿ ಜನಪ್ರಿಯತೆಯ ಲೇಬಲ್ ಗೆ ಇರುತ್ತದೆ !

ಈ ಎಲ್ಲಾ ತಾಕಲಾಟಗಳನ್ನು ಕೆಲಹೊತ್ತು ಪಕ್ಕಕ್ಕೆ ಸರಿಸಿ,ನಿರಾಳವಾಗಿ ಮಧುರ್ ಭಂಡಾರ್ಕರ್ ನ ’ಫ಼್ಯಾಶನ್’ನೋಡಲು ಹೋದೆ.ಜನಪ್ರಿಯ ದೃಷ್ಟಿಯಲ್ಲಿ ’ಸೌಂದರ್ಯ’ದ ಅಳತೆಗೋಲು ಹಿಡಿದು ನೋಡಿದರೆ ಆತ ಕೂಡ ಸುಂದರಾಂಗನೇ.
ಸ್ವಲ್ಪ ಕೂಡ 'ವಕ್ರತೆ' ಇಲ್ಲದ ಅವನಿಂದ ಎಂಥ ಸಿನಿಮಾ ಬಂದಿರಬಹುದು ಎಂಬ ಸಣ್ಣ ಕುಹಕದ ತರ್ಕ ಬಂದು ಹೋಯ್ತು.ನಂತರ ಯಾಕೋ ಕೇಡೆನಿಸಿ,ಆತನ ಬಗ್ಗೆ ಕನಿಕರ ಮೂಡಿದಂತಾಗಿ ಮಾತಿನ ಮಥನಕ್ಕೆ ವಿರಾಮ ಕೊಟ್ಟು ಸಿನಿಮಾ ಮೊರೆಹೋದೆ.

ತನಗೇ ಗೊತ್ತಿದ್ದೋ ಗೊತ್ತಿಲ್ಲದೆಯೋ ಆ ಇಡೀ ಚಿತ್ರ ಆಳವಾದ ಅಲೆಗಳನ್ನು ಸಾಕಷ್ಟು ಸಮರ್ಥವಾಗಿ ಎಬ್ಬಿಸುವಂತೆ ಭಾಸವಾಯ್ತು.ಪ್ರಿಯಾಂಕ,ಕಂಗನಾ ಆಶ್ಚರ್ಯ ಹುಟ್ಟಿಸುವಷ್ಟು ಪ್ರತಿಭಾವಂತರಂತೆ ಕಂಡರು.ಫ಼್ಯಾಶನ್ ಜಗತ್ತಿನ ಥಳುಕಿನ ಹಿಂದಿರುವ ಯಾತನೆ,ದುರಂತಗಳನ್ನು ಕೆಲವು ಫ಼್ರೇಂಗಳಲ್ಲಿ ತೀಕ್ಷ್ಣ ಸಂಭಾಷಣೆಗಳ ಮೂಲಕ ಮನಮುಟ್ಟುವಂತೆ ಕಟ್ಟಿಕೊಟ್ಟಿರುವುದು ಸಿನಿಮಾದ ಹೆಗ್ಗಳಿಕೆ.

ಇದು ಕೇವಲ ಗ್ಲ್ಯಾಮರ್ ಜಗತ್ತಿನ ದುರಂತ ಎನಿಸದೆ ಎಲ್ಲಾ ಮಹತ್ವಾಕಾಂಕ್ಷಿಗಳ ಯಾತನೆ ಎನಿಸುವುದರಿಂದ ಹೆಚ್ಚು ಆಪ್ತವಾಗುತ್ತದೆ.ಯಶಸ್ಸಿನ ಬೆನ್ನಹಿಂದೆ ನಡೆಯಲು ಬೇಕಾದ ತೀಕ್ಷ್ಣ ದೃಷ್ಟಿ ಮತ್ತು ಕೆಚ್ಚೆದೆಯ ಕೃತ್ರಿಮ ಅನಿವಾರ್ಯತೆ ದಂಗುಬಡಿಸುತ್ತದೆ.
ಜನಪ್ರಿಯತೆಯ ತುತ್ತತುದಿಯಲ್ಲಿ ಕಾಣಸಿಗಬಹುದಾದ ಕಿತ್ತುತಿನ್ನುವ ಏಕಾಂತ,ಔದ್ಯೋಗಿಕ-ವೈಯಕ್ತಿಕ ಸಂಬಂಧಗಳ ತಾಕಲಾಟ,ಯಶಸ್ಸಿನ ಮೆಟ್ಟಿಲು ಏರುವಾಗ ಕಾಣಸಿಗುವ ಅವೇ ಮುಖಗಳನ್ನು ಇಳಿಯುವಾಗಲೂ ಎದುರುಗೊಳ್ಳಬೇಕಾದ ವೈರುಧ್ಯ,ನಮ್ಮತನವನ್ನು ಕಳೆದುಕೊಂಡು ಹೊಸ ಪರಿಮಳ-ಸದ್ದು-ಸ್ಪರ್ಶ ಎಲ್ಲದ್ದಕ್ಕೂ ಅಪರಿಚಿತರಾಗಿಬಿಡುವ ದುರಂತ,...ಇವೆಲ್ಲವನ್ನೂ ಬಹುದಿನಗಳವರೆಗೂ ಕಾಡುವಂತೆ ನಮ್ಮೊಂದಿಗೆ ಉಳಿಸಿಬಿಡುವಷ್ಟು ಶಕ್ತವಾಗಿದೆ ಈ ಚಿತ್ರ.

ಕಡೆಗೂ ಯಾವುದೇ ಯಶಸ್ಸು,ಒಣಪ್ರತಿಷ್ಠೆ,ಢಾಂಬಿಕತೆಯ ತಲೆಗೆ ಹೊಡೆದಂತೆ ತನ್ನ ಸ್ಥಿತಿ ಸ್ಥಾಪಿಸುವುದು ಮಾತ್ರ ಮನುಷ್ಯ ಸಂಬಂಧಗಳ ಬೆಚ್ಚನೆಯ ಸ್ಪರ್ಶ,ಪ್ರೀತಿ,ಮಮಕಾರದ ಹಂಬಲ...

’Fashion’ ಇನ್ನಷ್ಟು 'passionate' ಆಗಲು ಸಾಧ್ಯವಿತ್ತೇನೋ ಅನಿಸಿದರೂ ಹೊಸಪ್ರಯತ್ನಕ್ಕೆ ಕೈಹಾಕಿರುವ ಭಂಡಾರ್ಕರ್ ’ಸೌಂದರ್ಯ’ ಮೆಚ್ಚಲೇಬೇಕು !

11 ಕಾಮೆಂಟ್‌ಗಳು:

Basavaraju S.Benakanahalli ಹೇಳಿದರು...

hi, chennagi bareddiyaya. how true it is. life is difficult na; but the providence gives you choices. ultimately left to individuals to choose.......anyways, great, succinct writing which makes u to 'think'.......keep going........:)

Sushrutha Dodderi ಹೇಳಿದರು...

ಈ ವೀಕೆಂಡಾದ್ರೂ ಹೋಗ್ಬೇಕು ಫ್ಯಾಷನ್‍ಗೆ..

Umesh ಹೇಳಿದರು...

hi charita lekhana chennagi mudi bandhidae.eeegaee nim payana sagali.....:)

Santhosh Rao ಹೇಳಿದರು...

ಹೆಚ್ಚು ಜನಪ್ರಿಯಗೊಂಡ ಯಾವುದೇ ಬ್ರ್ಯಾಂಡ್ ಬಗ್ಗೆ ಸಂದೇಹ ಹುಟ್ಟುವುದು ಸಹಜ ಇರಬಹುದು .. ಆದರೆ ಭಯ ಪಡುವ ಅಗತ್ಯ ಇಲ್ಲ ಅಂತ ಅಂದುಕೊಳ್ತಿನಿ.ಯಾಕೆ ಅಂದ್ರೆ ಸ್ನಾನಕ್ಕೆ ಯಾವುದಾದರು ಒಂದು ಸೋಪು ಉಪಯೋಗಿಸಲೇ ಬೇಕು .. ಈಗ ಸೀಗೆಕಯಿಗೂ ಬ್ರಾಂಡ್ ಗಳು ಬಂದಿವೆ

ಇನ್ನು ಸರಕು ಸಂಸ್ಕೃತಿಯ ಅಬ್ಬರದಲ್ಲಿ, ಕೊಳ್ಳು ಬಾಕ ಸಂಸ್ಕೃತಿಯಲ್ಲಿ ಕಳೆದು ಹೋಗುತ್ತೇವೆಂಬ ಭಯ ನನ್ನನು ಸಾಕಷ್ಟು ಕಾಡಿದ್ದಿದೆ, ನಾನು ಎಲ್ಲಿ ಗುಂಪಿನಲ್ಲಿ ಕಳೆದು ಹೋಗ್ತಿನೂ ....ಯಾಕೆ ಅಂದ್ರೆ everyone is getting on the band wagon…

ಕೊನೆಗೆ ಹೃದಯಕ್ಕೆ , ಮನಸ್ಸಿಗೆ ಎಲ್ಲದಕ್ಕೂ ಒಂದು ಬ್ರಾಂಡ್ ಅಂಟಿಸಿಕೊಂಡು ತಿರುಗಾಡುವವರು ಕಮ್ಮಿ ಇಲ್ಲ ಬಿಡಿ .. :)

"Fashion" ಚಿತ್ರದ ಬಗ್ಗೆ ಚೆನ್ನಾಗಿ ವಿಮರ್ಶೆ ಮಾಡಿದ್ದಿರ .. so ವಿಮರ್ಶೆ ಮೇಲೆ ಇನೊಂದು ವಿಮರ್ಶೆ ಬೇಡ ಅಂದ್ಕೊಳ್ತೀನಿ ..

ಕೊನೆಗೆ ಫ್ಯಾಷನ್ ಜಗತ್ತು - fashion is all about eventualy becoming naked

jomon varghese ಹೇಳಿದರು...

ಸೊಗಸಾದ ಬರಹ. ಕಲಾಕಾರರು ಸೌಂದರ್ಯವನ್ನು ನೋಡುವ, ಅನುಭವಿಸುವ ರೀತಿಯು ಬೇರೆಯೇ ಇರಬಹುದೇನೋ? ಫ್ಯಾಶನ್ `ಚಿತ್ರ`ದ ಕುರಿತ ನಿಮ್ಮ ಒಳನೋಟಗಳು ನೈಜವಾಗಿ ಮೂಡಿಬಂದಿದೆ.

ನಿಮ್ಮ ಬರಹಗಳನ್ನು ಓದುವುದಕ್ಕಿಂತ ನೀವು ಬರೆದಿರುವ ಚಿತ್ರಗಳನ್ನೇ ಹೆಚ್ಚು ಮೆಚ್ಚುಗೆಯಿಂದ ನೋಡುವುದರಿಂದ, ಬರಹ ಚೆನ್ನಾಗಿತ್ತೋ, ಚಿತ್ರ ಚೆನ್ನಾಗಿತ್ತೋ ಎಂದು ಕೇಳಿದರೆ ಎರಡನ್ನೂ ಬಿಟ್ಟುಕೊಡದೆ ಉತ್ತರಿಸುವುದು ಕಷ್ಟವಾಗುತ್ತದೆ.

ಈ ಸಲದ ಪೋಸ್ಟ್ ಇಷ್ಟವಾಯಿತು.

shivu.k ಹೇಳಿದರು...

fashion ಸಿನಿಮಾ ಬಗ್ಗೆ ಸೊಗಸಾದ ವಿಮರ್ಶೆ. ಬರವಣಿಗೆಯೂ ಹಿತವೆನಿಸುತ್ತದೆ.

Unknown ಹೇಳಿದರು...

ನಾನು ಓದಿದ ಒಳ್ಳೆಯ ವಿಮರ್ಶೆ,ಹಾಗೆ ಬರವಣಿಗೆಯ ಶೈಲಿಯು ಸಹ ಚೆನ್ನಾಗಿದೆ, ನಾನು ಈ ಸಿನಿಮಾ ನೋಡಬೇಕು ಈ ವಾರನಾದ್ರೂ...

Unknown ಹೇಳಿದರು...

ನಾನು ಓದಿದ ಒಳ್ಳೆಯ ವಿಮರ್ಶೆ,ಹಾಗೆ ಬರವಣಿಗೆಯ ಶೈಲಿಯು ಸಹ ಚೆನ್ನಾಗಿದೆ, ನಾನು ಈ ಸಿನಿಮಾ ನೋಡಬೇಕು ಈ ವಾರನಾದ್ರೂ...

Ittigecement ಹೇಳಿದರು...

ಚರಿತಾರವರೆ...
ಫಾಷನ್ ಸಿನೇಮ ನೋಡಿದೆ, ಆದರೆ ನನ್ನ ಅಭಿಪ್ರಾಯ ಬೇರೆ.
ಸಿನೇಮಾದಲ್ಲಿ ಗಂಡು ಗಂಡನ್ನು ಮದುವೆಯಾಗುವ ವಿಷಯವನ್ನು ಅನಗತ್ಯವಾಗಿ ತೂರಿಸಲಾಗಿದೆ. ಆ ವ್ರತ್ತಿ ರಂಗದಲ್ಲಿ ಅದು ಇದೆ ಅಂದಾಕ್ಷಣ ಅದನ್ನು ವೈಭವಿಕರಿಸ ಬಾರದಿತ್ತು. ಈ ವಿಷಯವನ್ನು ಅಲ್ಲಿ ಕಥೆಗೆ ಪೂರಕವೆನಿಸುವಂತೆ ಮಾಡಿ(ಅನಿವಾರ್ಯ ಅಲ್ಲವಾಗಿತ್ತು), ಒಂದು ಹೆಣ್ಣು ಅಂತಹ ಗಂಡನ್ನು ಮದುವೆಯಾಗಿ..ದತ್ತು ಮಗು ತೆಗೆದುಕೊಂಡು, ಜೀವನದಲ್ಲಿ ಮೌಲ್ಯಕ್ಕಿಂತ ಹಣ, ಬದುಕಿನ ಶೈಲಿ ಮುಖ್ಯ ಎನ್ನುವದನ್ನು ನಮಗೆ ಗೊತ್ತಾಗದ ಹಾಗೆ ಹೌದೆನಿಸುತ್ತಾರೆ.
ಇದು ದುರಂತ.
ಇದು ನನ್ನ ಅಭಿಪ್ರಾಯ.
ನಿಮ್ಮ ವಿಮರ್ಶೆ ತುಂಬಾ ಚೆನ್ನಾಗಿದೆ.
ಧನ್ಯವಾದಗಳು..

Harisha - ಹರೀಶ ಹೇಳಿದರು...

ಗೆಳೆಯರೆಲ್ಲ ಚೆನ್ನಾಗಿಲ್ಲ ಎಂದು ಹೇಳಿದ್ದಕ್ಕೆ ನೋಡಿರಲಿಲ್ಲ.. ಈ ವಾರಾಂತ್ಯ ಆದರೆ ನೋಡುತ್ತೇನೆ..

ಹಳ್ಳಿ ಬಸವ ಹೇಳಿದರು...

Akka Nimma Kareva Dariya kalarava Bahala Isthavayitu
- Basavaraja Halli