ಗುರುವಾರ, ಜನವರಿ 8, 2009
ಕರೆವ ದಾರಿಯ ಕಲರವ...
ಹೀಗೇ,.. ಮತ್ತೆ ಕುಕ್ಕರಗಾಲಲ್ಲಿ ಮುದ್ದೆಯಾಗಿ ಕೂತು ನನ್ನ ಪುಟ್ಟ ಡೈರಿಯ ಬೆಚ್ಚನೆ ಪುಟ ತೆರೆದು, ಅದರ ಕೆನೆಹಳದಿ ಹಾಳೆಗಳ ಆಪ್ತತೆಯಿಂದ ಮುದಗೊಳ್ಳುತ್ತಾ,ನನ್ನ ಅತ್ಯಂತ ಪ್ರಿಯ ಮಿತ್ರನ ಗಾಢ ಬೆಸುಗೆಯೋ ಎಂಬಂತೆ ಎಡಗೈಯ ಬಿಸಿಯಲ್ಲಿ ಪುಟಕರಗುವಂತೆ ಹಿಡಿದು,ಈ ಕಂಡೂಕಾಣದ ಗೆರೆಗಳನ್ನು ತೊಳೆದುಹಾಕುವಂತೆ ಅಕ್ಷರಬಿಡಿಸುವುದು ಎಂಥ ಪುಳಕ..!
ನನಗಾಗಿ ತನ್ನೆದೆಯನ್ನು ಇಷ್ಟಗಲ ತೆರೆದು,ಪ್ರತಿ ಹಲುಬಿಕೆಯ ಸ್ಪರ್ಷ ಮನಸಾರ ಪಡೆದು ಧನ್ಯತೆಯ ನಗುತೋರುವ ಈ ಪುಟಗಳಿಗಿಂತ ಮತ್ತ್ಯಾವ ಗೆಳೆಯ..?!
ಮಗುವಿನಂಥ ಮುದ್ದು ಬಣ್ಣದ ಈ ಹಾಳೆಗಳು ಹಲವು ವರ್ಷಗಳಿಂದ ನನಗಾಗಿ ಮಾತ್ರ ಇವೆ..!
ನೀಲಿ ಡಾಟ್ ಪೆನ್ ನಿಂದ ಬಿಡಿಸಿದ ಚಿತ್ರಗಳಂಥ ಅಕ್ಷರಗಳು ಸೂಸುವ ಸುವಾಸನೆ ನನ್ನನ್ನು ಅಪ್ಪಿ, ಮತ್ತೆ ಮತ್ತೆ ಕರೆ ಕಳಿಸುತ್ತದೆ.
ಬೆಳ್ಳಂಬಿಳೀ ಕ್ಯಾನ್ವಾಸ್ ನ ಇಡೀ ಆವರಣದ ಎಡಮಧ್ಯದಲ್ಲಿ ಇಟ್ಟ ಸೇಬು ಫಳಫಳ ಹೊಳೆದು ಜಗತ್ತಿನ ಅಷ್ಟೂ ಸೌಭಾಗ್ಯ ತಾನೇ ಪಡೆದಂತೆ ಹುಳಿ-ಸಿಹಿ-ಒಗರು ರುಚಿಯ ಕೆಂಪು ನಗುಬೀರುತ್ತಿದೆ.ಈ ಪುಟಗಳ ಪರಿಮಳದಂತೆಯೇ ಮೃದುವಾಗಿ ಅಪ್ಪಿ ಮುದಗೊಳಿಸುವುದು ಆ ಸೇಬಿನ ಸುವಾಸನೆ.
ಆ ಕೆಂಪು ಸೇಬನ್ನು ಬಿಳೀ ಕ್ಯಾನ್ವಾಸ್ ನಲ್ಲಿ ಇರಿಸಿ ದೂರದಿಂದ ನೋಡುತ್ತಿದ್ದಂತೆ ತುಂಟನಗು ಸುಳಿದುಹೋಗುತ್ತಿದೆ.ಪಾಪ,ಅದಕ್ಕೆ ನೆರಳುತೋರಿಸಿ ಕೂರಿಸದೆ,ಹಾಗೇ ಗಾಳಿಯಲ್ಲಿ ತೇಲಿಸುತ್ತ ಇಡೀ ಕ್ಯಾನ್ವಾಸ ನಲ್ಲಿ ಒಂಟಿಯಾಗಿ ಬಿಟ್ಟು ಸ್ವಲ್ಪ ಹೆದರಿಕೆ ಹುಟ್ಟಿಸಿದ್ದೇನೆ.ಅಚ್ಚಬಿಳೀ ಬಣ್ಣ ಕೆಂಪನ್ನು ಇಡಿಯಾಗಿ ನುಂಗಿಬಿಡಲು ತಿಣುಕುತ್ತಿದ್ದರೂ,ದಿಟ್ಟ ಸುಂದರಿಯಂತೆ ಸೆಣಸುತ್ತಲೇ ಆತಂಕಗೊಂಡಂತಿದೆ ಸೇಬು.ಆದರೆ ನಿಜಕ್ಕೂ ಬಿಳಿ ಹಿನ್ನೆಲೆಯಲ್ಲಿ ಕಿತ್ತಳೆಗೆಂಪು ಸ್ವಲ್ಪ ನೇರಳೆಗುಲಾಬಿ ರಂಗಿನಲ್ಲಿ ಅಪ್ರತಿಮ ಸುಂದರಿಯಂತೆ ಕಾಣುತ್ತಿರುವುದು ಸುಳ್ಳಲ್ಲ.ನಾಳೆ ಅದನ್ನು ಮಾತಾಡಿಸುವವರೆಗೂ ಹಾಗೇ ಇರಲಿ ಬಿಡಿ.
ಕ್ಯಾನ್ವಾಸ್ ನಲ್ಲಿ ಸೇಬು ಇರಿಸುವುದು,..ಈ ನೀಲಿ ಅಕ್ಷರ ಬಿಡಿಸುವುದು,..ಕಾಣುವ ಬಣ್ಣಗಳಷ್ಟನ್ನೂ ಎಣಿಸುವುದು,..ಸುಂದರ ನಗುವನ್ನು ಪದಗಳಿಗೆ ಇಳಿಸುವುದು,... ಇವೆಲ್ಲ ಎಂಥ ಅನೂಹ್ಯ ಸಂಕಟ ಹುಟ್ಟಿಸುತ್ತವೆ..!
ಇಂಥ ಅತಿಭಾವುಕತೆ ನನ್ನ ಎಚ್ಚರ ತಪ್ಪಿಸಿ ಎಲ್ಲೆಲ್ಲೋ ಅಲೆದಾಡಿಸುತ್ತಿರುತ್ತೆ.
ಮಾಮನ ಮನೆಯ ಗಾಢ ಮಾಧುರ್ಯ,ಕಾಡಿನ ಕತ್ತಲೆಯ ಏಕಾಂತ,ಪ್ರತಿ ವಸ್ತುವಿನಲ್ಲಿ ಅವಿತ ಗಾಂಭೀರ್ಯವನ್ನು ಪದೇ ಪದೇ ನೆನಪಿಸುವ ಮೌನ...
ಮೊನ್ನೆಯ ಭೇಟಿಯಲ್ಲಿ ಪ್ರತಿಯೊಂದು ಹೊಸ ಉಸಿರು ಹೊಸತಾಗಿಯೇ ಮನವರಿಕೆಯಾದಂತಿತ್ತು.
ಆ ಕಾಲುದಾರಿ ಕರೆದೊಯ್ದಿದ್ದು ಅಲ್ಲಿ ಜೋಡಿಸಿಟ್ಟ ಜೋಡಿ ಕುರ್ಚಿಗಳ ಬಳಿಗೆ.ಒಂದೇ ಅಳತೆಯ ಸ್ವಯಂಪೂರ್ಣ ಸುಖಿಗಳಂತೆ ಕಂಡವು ಆ ಕುರ್ಚಿಗಳು.ಯಾರ ಪರಿವೆಯೂ ಇಲ್ಲದೆ,ಅನಂತ ಸಂತೃಪ್ತಿ ಹೆಪ್ಪುಗಟ್ಟಿದ ಮೌನದಲ್ಲಿ ಪಿಸುಮಾತನ್ನೂ ಮರೆತು ಸಮಾಧಿಸ್ಥಿತಿಯಲ್ಲಿ ಐಕ್ಯವಾದಂತೆ ಕಂಡವು ಅವು.ಅಗಲ ಎಲೆಗಳ ಪುಟ್ಟ ಮರದ ರೆಂಬೆಗಳು ಕುರ್ಚಿಗಳ ತಲೆಯ ಮೇಲೆ ಹರಡಿ ಅಭಯ ನೀಡುತ್ತಿದ್ದವು.ಗುಡ್ಡದ ಮೇಲಿನ ’ಅನುರಾಗಿ’ಗಳ ಮುಂದೆ ಧಿಗ್ಗನೆ ಥಿಯೇಟರ್ ಪರದೆಯಲ್ಲಿ ಕಂಡಂತೆ ಅಷ್ಟಗಲ ಚಾಚಿಕೊಂಡ ವಿಸ್ತಾರದ ಇಳಿಜಾರಿನ ಹರವು.ವೆಂಕಟಪ್ಪನವರ ವಾಟರ್ ಕಲರ್ ಚಿತ್ರಗಳನ್ನು ನೆನಪಿಸುವ ಭೂದೃಶ್ಯ.ದೂರದ ತಿಳಿನೀಲಿ ಬೆಟ್ಟ ಅಡ್ಡಡ್ಡ ಮೈಚಾಚಿ ಮಲಗಿ,ಪಕ್ಕದ ಹಸಿರು ಮೈಗೂ ಜಾಗಬಿಟ್ಟುಕೊಟ್ಟಿದೆ..
ಅಲ್ಲೆಲ್ಲೋ ದೂರದಲ್ಲಿ ಇಷ್ಟೇ ಇಷ್ಟು ಕಾಣುವ ಬಿಳಿಗೋಡೆಯ ಕೆಂಪುಹೆಂಚಿನ ಪುಟ್ಟಮನೆ ನೋಡುಗರಲ್ಲಿ ಮುದ್ದುಹುಟ್ಟಿಸುವ ಹಟತೊಟ್ಟಂತೆ ಕಂಡಿದ್ದರಿಂದ ನಾನು ಬೇಕೆಂತಲೆ ಉದಾಸೀನ ನಟಿಸಿದೆ.ಆದರೂ ಅದು ಮುದ್ದಾಗೇ ಇತ್ತು..! ಆಹೊತ್ತು ಆಕಾಶದ ನೀಲಿ ಕೂಡ ಮೊದಲಬಾರಿಗೆ ಅತಿಶುಭ್ರವಾಗಿ ಕಂಡಿತ್ತು!
ಕುರ್ಚಿಗಳ ಬಲಪಕ್ಕದಲ್ಲಿ ಮೇಲಿನಿಂದ ಇಳಿಜಾರಿಗೆ ಜಾರುತ್ತಿದ್ದ ಕಾಲುದಾರಿ ಮಾತ್ರ ಪಕ್ಕಾ ರೊಮ್ಯಾಂಟಿಕ್ ಕಲಾವಿದನ ಪೂರ್ವಯೋಜನೆಯಂತೆಯೇ ಕಂಡು ಸಂಶಯ ಹುಟ್ಟಿಸಿತು.ಕುರ್ಚಿಗಳ ಪ್ರೇಮಸಮಾಧಿಯ ಸ್ಥಿರತೆಗೆ ಅಡಚಣೆಯ ಅಲೆಗಳ ಕಾಟ ತಪ್ಪಿಸಲೆಂಬಂತೆ 'ಇದೋ ನಿಮ್ಮ ದಾರಿ ಹೀಗೆ..' ಎಂದು ತಲೆಮೊಟಕಿ ಕರೆಯುವಂತಿತ್ತು ಕಾಲುದಾರಿಯ ನಿಲುವು.ಆದರೂ ಅದು ಹೀಗೇ ಒಂದಿಲ್ಲೊಂದು ನೆಪಮಾಡಿ ಮತ್ತೇನನ್ನೋ ನನಗಾಗಿ ತೋರಿಸಲು ತವಕಿಸುತ್ತಿದ್ದುದು ತಿಳಿದಿತ್ತಾದ್ದರಿಂದ ಮರುಮಾತಾಡದೆ ಅನುರಾಗದ ಘಮಲು ಹೀರುತ್ತಾ ಕರೆದ ದಾರಿಗೆ ಕಾಲೊಪ್ಪಿಸಿದೆ...
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
14 ಕಾಮೆಂಟ್ಗಳು:
ಚರಿತ .. ಏನ್ ಕಾಮೆಂಟ್ ಮಾಡ್ಲಿ ಅಂತ ಗೊತ್ತಾಗ್ತಾ ಇಲ್ಲ..I am so crooked with my own words..
thank you for this , i am just curious to know ,as i am little unpad this days ,so did you shoot the picture first or did you write this romantic lines and than shot the appropriate picture to your writing .if you find this comment silly please ignore this,if not write about it.i mean no trouble just small answer.
ಛಾಯಾಚಿತ್ರಗಳು ಸುಂದರವಾಗಿವೆ,ಹಾಗೆಯೇ ನಿಮ್ಮ ಬ್ಲಾಗ್ ಸಹ.
ಧನ್ಯವಾದಗಳು
ಅಶೋಕ ಉಚ್ಚಂಗಿ
http://mysoremallige01.blogspot.com/
ellinda elligo arivu mooduva hejjegaliduttale ninna bahara aparatheyanu terediduttade charitha.ni hididiva bhavalahariya sogagu saviyalu aahlaadavaagide thank u
ಈಶಕುಮಾರ್,
ನಿಮ್ಮ ಪ್ರತಿಕ್ರಿಯೆ ನೋಡಿ ಖುಶಿಯಾಯ್ತು.
ಸಮಾನಮನಸ್ಕ ಗೆಳೆಯರನ್ನು ಪಡೆದದ್ದಕ್ಕಾಗಿ ಹರ್ಷಿಸುತ್ತೇನೆ.
ಅಮೂರ್ತತೆಯನ್ನು ಮನಗಾಣುವ ನಿಮ್ಮಂಥ ಸಹೃದಯರಿಗೆ ಯಾವತ್ತೂ ಅನಂತ ಧನ್ಯವಾದಗಳು..
@ santosh,
ಇದಕ್ಕಿಂತ ಬೇರೆ ಕಾಮೆಂಟ್ ಏನ್ ಬೇಕು..?!
ಗೊತ್ತಾಯ್ತು ಬಿಡಿ.........:-)
@ suresh,
....:-)
@ ashok,
thank u...
ನಿರ್ಜೀವ ವಸ್ತುಗಳಿಗೂ ಜೀವ ತುಂಬಿಸಿ, ಕಲ್ಪಿಸಿ, ಬರೆದದ್ದು ತುಂಬಾ ಚೆನ್ನಾಗಿದೆ, ಭಾಷೆಯ ಮೇಲಿನ ಹಿಡಿತ ಲೇಖನದಲ್ಲಿ ಎದ್ದು ಕಾಣುತ್ತದೆ...
ನಿಮ್ಮ `ಕರೆವ ದಾರಿಯ ಕಲರವ`ಲೇಖನ ಮೋಹಕವಾಗಿದೆ
ನಿಮ್ಮ ಬ್ಲ್ಯಾಗ ನೋಡಿ ತುಂಭಾ ಸಂತೋಷವಾಯತು.ಯಾಕೆ ಗೊತ್ತೆ ನಿಮ್ಮ ಬರಹಗಳು ಹೃದಯಕ್ಕೆ ಹತ್ತಿರವಾಗುತ್ತವೆ
ದನ್ಯವಾದಗಳು
ಪ್ರೀತಿ ಇರಲಿ
ಬಿಡುವಿದ್ದಾಗ ನನ್ನ ಕನಸಿಗೆ ಬನ್ನಿ ಎಂದು
ಸ್ವಾಗತಿಸುತ್ತ.
-ಕನಸು
Akka Nimma 'Kareva Dariya' Kalarava Nanage Hidisitu. Bahala Aptavagi Barediddiri
- Basavaraja Halli
ಚರಿತ ಅವರೆ,
ಕಾವ್ಯಾತ್ಮಕ ಬರಹ ಮತ್ತು ಸೊಗಸಾದ ಫೋಟೋ ತುಂಬ ತುಂಬ ಚೆನ್ನಾಗಿದೆ. ಇನ್ನು ಮೇಲೆ ನಿಮ್ಮ ಬ್ಲಾಗಿನ ಖಾಯಂ ಓದುಗ ನಾನು.
ಎಲ್ಲಿದ್ದೀರಿ ಬಹಳ ದಿನಗಳಾಯ್ತು ನಿಮ್ಮ ಲೇಖನ ಬಂದು, ಬಹಳ ಚೆಂದವಾಗಿ ಬರೆಯುತ್ತಿದ್ದಿರಿ, ಯಾಕೆ ನಿಲ್ಲಿಸಿಬಿಟ್ಟಿರಿ...
Hi charitha,
this is malini here..i am amazed by your power of writing...though i love to reply in kannada, but short of knowledge to type, think or emote....your grasp on kannada is amazing, it is a treat to the senses of people who enjoy the beauty of a language as well as the expression you bring out in your writings....please continue to write regularly....pleasure would be ours to have a talented person around us...the sad part in me is, i have lost my roots in Kannada, and i am sure to regain it by reading your works
ಏನ್ರಿ ಇಷ್ಟೊಂದು ಚೆನ್ನಾಗಿ ಬರಿತೀರ? ಇಷ್ಟು ದಿನ ಯಾಕೆ ಓದಲಿಲ್ಲ ಅಂತ ಅನ್ನಿಸೋ ಹಾಗೆ ಬರೆದಿದ್ದೀರ. ಹೀಗೆ ಸುಖವಾಗಿ, ಹಿತವಾಗಿ ಬರಿತಾ ಇರಿ.
ಶುಭವಾಗಲಿ :)
ಕಾಮೆಂಟ್ ಪೋಸ್ಟ್ ಮಾಡಿ