'ಹಕ್ಕಿ' ಅನ್ನುವ ಹಗುರ ಹೆಸರಿಗಿಂತ ಹಗೂರವಾದ, ವಿಸ್ಮಯದ ಈ ಪುಟ್ಟ ಜೀವಗಳು ಈಗ ನನ್ನ ನಿತ್ಯದ ಜೊತೆಗಾರರು. ನಮ್ಮ ಅಡುಗೆಮನೆಯ ಹಿಂದಿರುವ ಇಷ್ಟಗಲ ಜಾಗವನ್ನು ಈಗ 'ಹಿತ್ತಲು' ಅನ್ನುವುದಕ್ಕಿಂತ ನಮ್ಮ 'ಮೀಟಿಂಗ್ ಸ್ಪಾಟ್' ಅಂದರೆ ಹಿತ್ತಲಿಗೂ ಇಷ್ಟ ಆಗಬಹುದು! ನಮ್ಮ ದಾಳಿಂಬೆ ಗಿಡದ ಬುಡದ ನೆರಳಲ್ಲಿ ಈ ಕೀಟಲೆ ಹಕ್ಕಿಗಳಿಗೆ ಅಂತಾನೇ ಒಂದು ಮಣ್ಣಿನ 'ಬಾತ್ ಟಬ್' ಇಟ್ಟದೀನಿ. ಪುಟ್ಟ ಮಣ್ಣಿನ ಪಾಟ್(Pot) ಅದು. ಹೂವಿನಕುಂಡಕ್ಕಿಂತ ಹೆಚ್ಚಾಗಿ ಬಾತ್ ಟಬ್ ನಂತೆಯೇ ಇದ್ದ ಇದರ ಕಿಂಡಿಗೆ ಎಮ್ಸೀಲ್ ಬಳಿದು ಮುಚ್ಚಿ, ನೀರು ತುಂಬಿಸಿಟ್ಟು ಜೀವನ ಸಾರ್ಥಕ ಮಾಡಿಬಿಟ್ಟಿದೀನಿ! ಖಂಡಿತವಾಗಿಯೂ ಈ ಸುಂದರ ಪಾಟ್ ನನಗೆ ದಿನಾಲೂ ಎಷ್ಟು ಥ್ಯಾಂಕ್ಸ್ ಹೇಳುತ್ತಿರುತ್ತೆ ಅಂತ ನಂಗೊತ್ತು! ಮೊದಲ ದಿನ ನೀರು ತುಂಬಿಸಿಟ್ಟು ಬಾಗಿಲ ಮರೆಯಲ್ಲಿ ನಿಂತು ಸುಮಾರು ಹೊತ್ತು ಕಾದರೂ ಯಾವ ಹಕ್ಕಿಯೂ ನಂಗೆ ಕಾಣುವಂತೆ ನೀರು ಕುಡೀಲಿಲ್ಲ.ಎರಡಲ್ಲ ಮೂರನೇ ದಿನ ನಂಗೆ ಜಾಸ್ತಿ ಬೇಜಾರು ಮಾಡೋದು ಬೇಡ ಅಂತ್ಲೋ ಏನೋ ಪುಟ್ಟದೊಂದು ರಾಬಿನ್ ಹಕ್ಕಿ ನನಗೆ ಕಾಣೋ ಹಾಗೆ ಸುಮಾರು ಹೊತ್ತು ನೀರು ಕುಡಿದು, "ಸಾಕಾ? ಖುಶಿ ಆಯ್ತಾ ಈಗ?" ಅಂತ ಕೇಳಿ, ರೆಕ್ಕೆ ಬಡಿದು, ಹಾರೋಯ್ತು. ಓಹ್! ಅದೆಂಥ ಸಾರ್ಥಕ ದಿನ! ಆ ಪಾಟ್ (Pot) ಜೀವನಾನೂ ಪಾವನ ಆದ ದಿನ!
ಆ ಪುಟ್ಟ ಪಾಟ್ ಎಷ್ಟು ಚೆನಾಗಿದೆ ಗೊತ್ತಾ? ಅಡ್ಡಡ್ಡಲಾದ ಉದ್ದ ಮೂತಿ, ಮಧ್ಯದಲ್ಲಿ ಸ್ವಲ್ಪ ಪ್ರೆಸ್ ಆದಂತಿರುವ ತಿರುವಿನ ಅಂಚು, ಅಂಚಿನಲ್ಲಿ ಪುಟ್ಟ ಗೆರೆಗಳ ಡಿಸೈನ್, ನೆರಿಗೆ ಇರದ ಸೀರೆ ಉಡಿಸಿದಂತೆ ಕಾಣುವ ನಡೂಮಧ್ಯದ ಎರಡು ತೆಳುಗೆರೆಗಳು,...ಒಟ್ಟಿನಲ್ಲಿ ನನ್ನ ಕೀಟಲೆ ಪಿಟ್ಟೆಗಳಿಗೆ ಅಂತಾನೇ ಹೇಳಿ ಮಾಡಿಸಿದ ಸುಂದರ 'ನೀರ್ಕುಂಡ'. ಗಂಭೀರವಾಗಿ ಖುಶಿ ತುಳುಕಿಸುತ್ತ ಕೂತಿದೆ. ದಿನಾ ಹೊಸ ಕನ್ನಡಿಯಂಥ ನೀರು ತುಂಬಿಸಿಕೊಂಡು, ನಾನಿಟ್ಟ ಕಡೆ ಮುಖಮಾಡಿ ಕೂರೋದಂದ್ರೆ ಅದಕ್ಕೆ ಎಷ್ಟು ಇಷ್ಟ!
ಚೈನೀಸ್ ವಾಟರ್ ಕಲರ್ |
ಹಿತ್ತಲ ಜಗಲಿಯ ಮೇಲೆ ನಾನು ತಿಂಡಿ ತಿನ್ನುತ್ತಲೋ, ಓದುತ್ತಲೋ ಅಥವಾ ಹೀಗೆ ಹರಟುತ್ತಲೋ ಇರುವಾಗ ಈ ಮಳ್ಳ ಹಕ್ಕಿಗಳು ಸ್ವಲ್ಪ ಹೊತ್ತು ದೂರದ ಟೊಂಗೆಯಲ್ಲಿ ಕೂತು ಕಿಚಕಿಚ ಅನ್ನುತ್ತ ನನ್ನ ಗಮನಿಸುತ್ತವೆ. ನಾನಾಗ ನಿಧಾನ ಉಸಿರಾಡುತ್ತ, ಆದಷ್ಟೂ ಅಲ್ಲಾಡದಂತೆ ಕೂತ ಹಾಗೇ ಕೂರಬೇಕು. ಕಪ್ಪು ತಲೆ-ಬಳಿ ಪುಕ್ಕದ ಈ ಹಕ್ಕಿ ಕೀಟಲೆ ಪುಟ್ಟಿಯಂತೆ ಕತ್ತನ್ನು ಮುದ್ದಮುದ್ದಾಗಿ ಹಾಗೂ ಹೀಗೂ ಕೊಂಕಿಸುತ್ತ, ಆಂಟೆನಾದ ಹಾಗೆ ಪುಕ್ಕ ಆಡಿಸುತ್ತ, ಸುಮ್ಮಸುಮ್ಮನೆ ಹೊಟ್ಟೆಉಬ್ಬರಿಸಿ ಪಿಕ್ಕೆ ಹಾಕುತ್ತ ನನ್ನ ನೋಡೇನೋಡುತ್ತೆ. ನಾನು ಮಾತ್ರ ಸ್ವಲ್ಪವೂ ಅಲ್ಲಾಡದೇ, ನನ್ನ ಕಣ್ಣಾಲಿಗಳನ್ನು ಮಾತ್ರ ಇದು ನೆಗೆದತ್ತೆಲ್ಲ ತಿರುಗಿಸಲು ಪ್ರಯಾಸ ಪಡುತ್ತ ಕೂತಿರಬೇಕು. ಆ ಪುಟ್ಟ ಕಿಲಾಡಿ ಆಕಡೆ ಈಕಡೆ ಜಾಗ ಬದಲಿಸುತ್ತ ಬೇರೆ ಬೇರೆ ಕೋನಗಳಿಂದ ವಾರೆಗಣ್ಣಿಂದ ನೋಡುತ್ತ ಯೋಚಿಸುತ್ತೆ: "ಈ ಕಲರ್ ಕಲರ್ ಪ್ರಾಣಿ ನನ್ನ ಹಾಗೇ ಹಾರಿ ಬಂದು ಎರಗುತ್ತೊ ಅಥವಾ ಹೀಗೇ ಗಡವನ ಥರ ಕೂತಿರುತ್ತೊ" ಅಂತ! ಸದ್ಯಕ್ಕೆ ತೊಂದ್ರೆ ಇಲ್ಲ ಅಂತ ಅನಿಸಿದ ಮೇಲೆ ಒಂದೊಂದೇ ನೆಗೆತ ನೆಗೆಯುತ್ತ ನೀರಿನ ಕುಂಡದ ಹತ್ತಿರ ಬಂದು, ಆ ಡಿಸೈನ್ ಇರುವ ಅಂಚನ್ನು ತನ್ನ ತೆಳುವಾದ ಪುಟ್ಟ ಕಾಲುಗಳಿಂದ ಹಿಡಿದು ಕೂತು, ಬಾಗಿ ಮುಖ ನೋಡಿಕೊಳ್ಳುತ್ತೆ... ಇಷ್ಟಿಷ್ಟೇ ನೀರನ್ನು ಕೊಕ್ಕಲ್ಲಿ ತುಂಬಿಕೊಂಡು ಕತ್ತು ಮೇಲೆತ್ತಿ ಒಳಗಿಳಿಸುತ್ತೆ, ನಾಲಿಗೆಯಲ್ಲಿ ಚಪ್ಪರಿಸುತ್ತೆ. ಬಹುಷಃ ಅವುಗಳ ಕೊಕ್ಕು-ಗಂಟಲಿನ ವಿನ್ಯಾಸದಲ್ಲಿ ಹೀರಿಕೊಳ್ಳುವ ವ್ಯವಸ್ಥೆ ಇಲ್ಲವೇನೊ. ಕೆಲವೊಮ್ಮೆ ಸರದಿ ಮೇಲೆ ನಾನು, ತಾನು ಅಂತ ನೀರಲ್ಲಿ ಮುಳುಗು ಹಾಕಿ, ಮೈಕೊಡವಿಕೊಂಡು ಒಂದೊಳ್ಳೆ ಸ್ನಾನ ಮುಗಿಸಿ, ಪಕ್ಕದ ರೆಂಬೆ ಮೇಲೆ ಕೂತು ,ಕೊಕ್ಕಿಂದ ಪುಕ್ಕ ನೀವಿಕೊಳ್ಳುತ್ತ ಮೈ ಆರಿಸಿಕೊಳ್ಳುವ ಖುಶಿಯೇ ಖುಶಿ.
ಚಿತ್ರ : ಫ್ರ್ಯಾಂಕ್ ಗೊನ್ಸಾಲೆಸ್ |
ಏನೇ ಮಾಡುವಾಗಲೂ ಈ ಪುಟ್ಟಜೀವಗಳಿಗೆ ಮೈಯೆಲ್ಲ ಕಣ್ಣು. ಮೈಮರೆತು ಹಾಯಾಗಿ ವಿರಮಿಸುವ ಕಂಫರ್ಟ್( Comfort) ಇರೋದು ಕೇವಲ ಮನುಷ್ಯರಿಗೆ ಮತ್ತು ಮುದ್ದಿನ ಸಾಕುಪ್ರಾಣಿಗಳಿಗೆ ಮಾತ್ರ ಅಂತ ಕಾಣುತ್ತೆ! ಮನುಷ್ಯನಿಗೆ ಮನುಷ್ಯನಿಗಿಂತ ದೊಡ್ಡ ಶತ್ರು ಬೇರೆ ಯಾರಿದಾರೆ?! ಆದರೆ ಈ ಪುಟ್ಟ ಜೀವಕ್ಕೆ ಪ್ರತಿಕ್ಷಣವೂ ಧ್ಯಾನ - ಎಚ್ಚರದ, ಪ್ರಙ್ಙಪೂರ್ವಕ ಧ್ಯಾನ, ಅಲರ್ಟ್ ನೆಸ್ ಅಂತಾರಲ್ಲ ಅದು. ಪ್ರಕೃತಿಸಹಜವಾದ ಈ ಸ್ವತಂತ್ರಜೀವಗಳಿಗೆ ಉಸಿರಾಟದಷ್ಟೇ ಸಹಜವಾದ 'ಎಚ್ಚರದ ಧ್ಯಾನ'ವೂ ಇರುತ್ತೆ. ನಾವು-ನೀವು ಮಾತ್ರ ಜೆ.ಕೆ. ಯವರ ಪುಸ್ತಕಗಳಲ್ಲೊ, ವಿಪಸನ ಸೆಂಟರ್ ಗಳಲ್ಲೊ ಸಹಜತೆಯ ಪಾಠವನ್ನು ಕಲಿಯಬೇಕಾದ, ನಮ್ಮತನವನ್ನು ಮತ್ತೆ ನೆನಪುಮಾಡಿಕೊಳ್ಳಬೇಕಾದ ದುಃಸ್ಥಿತಿ ತಂದುಕೊಂಡಿದೀವಿ!
ಚೈನೀಸ್ ವಾಟರ್ ಕಲರ್ |
ಕಪ್ಪುತಲೆ-ಬಿಳಿ ಹೊಟ್ಟೆಯ ರಾಬಿನ್ ಜೋಡಿ, ತಲೆಯಲ್ಲಿ ಜುಟ್ಟು ಬಿಟ್ಕೊಂಡು, ಕಣ್ಣ ಪಕ್ಕಕ್ಕೆ-ಕುಂಡಿಗೆ ಕೆಂಪು ಬಳ್ಕೊಂಡು ಬರುವ ಒಂದು ಜೋಡಿ (ಪಿಕಳಾರ ಇರ್ಬೇಕು), ಮುಷ್ಟಿಯಿಂದಲೂ ನುಣುಚಿಕೊಳ್ಳುವಷ್ಟು ಪುಟ್ಟದಾದ ತಿಳಿಹಸಿರಿನ 'ಚಿಟ್ಟೆಹಕ್ಕಿ', ಕೆಲವೊಮ್ಮೆ ಗುಬ್ಬಚ್ಚಿಗಳು, ಚೋರೆಹಕ್ಕಿ (ಕಾಡು ಪಾರಿವಾಳ), ಗುಬ್ಬಿಯಂಥದ್ದೇ ಒಂದು ಬ್ಲ್ಯಾಕ್ ಅಂಡ್ ವೈಟ್ ಹಕ್ಕಿ,..ಹೀಗೆ ನಮ್ಮ ಬಾತ್ ಟಬ್ ಪರಿವಾರದ ಪಟ್ಟಿ ಬೆಳಿತಾ ಹೋಗುತ್ತೆ... ನಮ್ಮ ವಿಶೇಷ ಅತಿಥಿ ಮಾತ್ರ - 'ಚಂಬೂಕ'. 'ಕೆಂಬೂತ' ಅಂತ ಕೂಡ ಕರೀತಾರೆ ಇದನ್ನ. ತುಂಬಾ ಸುಂದರ, ಸಧೃಡ ಹಕ್ಕಿ ಇದು. ಮಿರಮಿರ ಕಪ್ಪುಚುಕ್ಕೆಯ ಕೆಂಪು ಕಣ್ಣು. ಹೊಳೆಯುವ ಕರೀ ದೇಹ, ನಶ್ಯ ಬಣ್ಣದ ರೆಕ್ಕೆ, ಉದ್ದನೆ ಪುಕ್ಕ, ಮಾಟವಾಗಿ ಬಾಗಿದ ಕಪ್ಪು ಕೊಕ್ಕು. ನನ್ನ ಕಣ್ಣಿಗೆ ಬಿದ್ದಾಗೆಲ್ಲ, ಕಣ್ಣೊಳಗೆ ಆದಷ್ಟೂ ತುರುಕಿಕೊಳ್ಳಲು ತವಕಿಸುತ್ತಾ ಇರ್ತೀನಿ ನಾನು. ಅಷ್ಟು ಸುಂದರ ಹಕ್ಕಿ ಇದು! "ಊಂ..ಊಂ.." ಅಂತ ಹೆದರಿಸೋ ಹಾಗೆ ಧ್ವನಿ ಹೊರಡಿಸುತ್ತೆ ಇದು. "ಊಂ..ನಂಗೊತ್ತು,..ಊಂ" ಅನ್ನೋ ಥರ ಕೇಳಿಸುತ್ತೆ! ಅದಕ್ಕಿಂತ ಸಣ್ಣ ಗಾತ್ರದ ಹಕ್ಕಿಗಳನ್ನು ದೂರ ಓಡಿಸಿ, ಸುತ್ತ ಅಷ್ಟಗಲ ಯಾವ ಹಕ್ಕಿಯೂ ಬರದ ಹಾಗೆ ತನ್ನ 'ಏರಿಯಾ' ಮಾಡಿಕೊಳ್ಳುತ್ತೆ. ಗಂಭೀರ ನಡಿಗೆ ಇದರದು. ತಪ್ಪು ಮಾಡಿದ ಮನುಷ್ಯರಂತೆ ಕೆಲವೊಮ್ಮೆ ಪೆದ್ದುಪೆದ್ದಾಗಿ ಕತ್ತು ಕುಣಿಸುತ್ತ ಬೆದರಿಕೊಳ್ಳುತ್ತೆ! ಉಳಿದಂತೆ, ಕಂಡವರನ್ನು ಹೆದರಿಸುವ ಮುಖಚಹರೆ, ನುಂಗಿಬಿಡುವಂಥ ಕೆಂಗಣ್ಣು. ಅದಕ್ಕೇ ಇದರ ಹೆಸರು - 'ಕೆಂಬೂತ'.
ಈ ಕೆಂಬೂತದ ಬಗ್ಗೆ ಯಾವಾಗಲೋ, ಎಲ್ಲೋ ಓದಿದ ಕಥೆ ಇದು : ತುಂಬಾ ಹಿಂದೊಮ್ಮೆ ಕೆಂಬೂತಕ್ಕೆ ಚೆಂದದ, ಬಣ್ಣಬಣ್ಣದ ಊದ್ದನೆ ಪುಕ್ಕಗಳಿದ್ದುವಂತೆ. ಹಕ್ಕಿಗಳಲ್ಲೆಲ್ಲ ಅತೀ ಸುಂದರ ಹಕ್ಕಿ ಅನ್ನೋ ಬಿರುದು ಬೇರೆ ಇತ್ತು! ಆ ಕಾಲದಲ್ಲಿ ನಮ್ಮ ನವಿಲಪ್ಪನಿಗೆ ಬಣ್ಣದ ಪುಕ್ಕ ಇರ್ಲಿಲ್ಲ. ಒಮ್ಮೆ ನವಿಲಪ್ಪಂಗೆ ಕೆಂಬೂತದ ಬಣ್ಣದ ಪುಕ್ಕ-ಗರಿಗಳು ತನಗೆ ಬೇಕು ಅನ್ನೋ ಆಸೆ ಆಯ್ತಂತೆ. ಬಾಯ್ಬಿಟ್ಟು ಕೇಳಿಯೂ ಬಿಡ್ತು, "ಒಂದೇ ಒಂದು ದಿನದ ಮಟ್ಟಿಗೆ ನಮ್ಮಿಬ್ಬರ ಪುಕ್ಕಗಳನ್ನ ಎಕ್ಸ್ಛೇಂಜ್ ಮಾಡಿಕೊಳ್ಳೋಣ್ವ"?..ಅಂತ. ಕೆಂಬೂತ ಉದಾರ ಮನಸ್ಸಿನಿಂದ "ಪಾಪ ಹೋಗ್ಲಿಬಿಡು, ಒಂದಿನ ತಾನೆ? ಶೋಕಿ ಮಾಡ್ಲಿ" ಅಂದ್ಕೊಂಡು, "ಓಕೆ" ಅಂತು. ಮಾರನೇ ದಿನ ಹೊತ್ತು ಮೂಡುವ ಮುಂಚೆ ತಮ್ಮ ತಮ್ಮ ಮೊದಲಿನ ಪುಕ್ಕಗಳನ್ನು ವಾಪಸ್ ಪಡೆಯುವ ಕರಾರು ಅದು. ಸರಿ, ನವಿಲಪ್ಪ ಹೊಸ ಪುಕ್ಕ ಕಟ್ಕೊಂಡು ಕುಣಿದಿದ್ದೇ ಕುಣಿದಿದ್ದು. ವಾಪಸ್ ಕೊಡುವ ಮಾತೆಲ್ಲಿ ಬಂತು? ಒಂದಿನ ಅಲ್ಲ, ಎರಡ್ ದಿನ ಅಲ್ಲ, ಶತಮಾನಗಳಿಂದ್ಲೂ.., ಈವತ್ತಿಗೂ ಪುಕ್ಕ ಹಿಂದಿರುಗಿಸುವ ಮನಸ್ಸೇ ಆಗಿಲ್ಲ ಅದಕ್ಕೆ. ಈಗ ನಮ್ಮ 'ರಾಷ್ಟ್ರೀಯ ಪಕ್ಷಿ' ಅನ್ನೋ ಪಟ್ಟ ಬೇರೆ ಪಡ್ಕೊಂಡಿದೆ ನೋಡ್ರಪ್ಪ! ಆವತ್ತಿಂದ, ಈವತ್ತಿನವರೆಗೂ ಕಣ್ಣು ಕೆಂಪು ಮಾಡ್ಕೊಂಡು, ಊಂ,..ಊಂ..ಅನ್ನುತ್ತ ಬಣ್ಣದ ಪುಕ್ಕ ಹುಡುಕ್ತಾನೇ ಇದಾನೆ ನಮ್ಮ ಶೋಷಿತರ ಪ್ರತಿನಿಧಿ ಕೆಂಬೂತಣ್ಣ!
ಚೈನೀಸ್ ವಾಟರ್ ಕಲರ್ |
ನಮ್ಮ ಹಕ್ಕಿಬಳಗಕ್ಕೆ ಮತ್ತೊಂದು ಅಪರೂಪದ ಹಿಂಡು ಬರುತ್ತೆ. ಇವುಗಳಿಗೆ ಯಾರು, ಏನು ಹೆಸರಿಟ್ಟದ್ದಾರೋ ಗೊತ್ತಿಲ್ಲ. ನಮ್ಮಮ್ಮ ಮಾತ್ರ ಇವುಗಳನ್ನ 'ಪೆದ್ದು ಹಕ್ಕಿಗಳು' ಅಂತಾರೆ. ಬೇರೆ ಹಕ್ಕಿಗಳಷ್ಟು ಚುರುಕಾಗಿಲ್ಲದ ಇವುಗಳು ಯಾವಾಗಲೂ ಗುಂಪಿನಲ್ಲೇ ಇರ್ತಾವೆ. ಕುಪ್ಪಳಿಸುತ್ತ ಓಡಾಡ್ತಾವೆ. ಮೈಪೂರ್ತಿ ಬೂದು ಬಣ್ಣ. ಹೊಟ್ಟೆ ಮತ್ತು ಕಣ್ಣಸುತ್ತ ಮಾತ್ರ ತೆಳು ಬೂದು. ಕಣ್ಣು ಮತ್ತು ಕೊಕ್ಕು ತೆಳೂ ಹಳದಿ. ನಂಗಂತೂ ಇವನ್ನ 'ಪೆದ್ದ್ ಮರಿಗಳು' ಅನ್ನೋ ಮನಸ್ಸಾಗಲ್ಲ. ಅಷ್ಟು ಮುದ್ದಾಗಿವೆ ಇವು! ಈಗ ತಾನೆ ನಿದ್ದೆಯಿಂದ ಎದ್ದು, ತಲೆಬಾಚದೆ, ಹಲ್ಲುಜ್ಜದೆ, ಸ್ನಾನ ಮಾಡದೆ ಹಾಗೇ ಪಿಕ್ ನಿಕ್ ಹೊರಟಹಾಗೆ. ಕಿಚಪಿಚ ಕಚಪಚ ಅಂತ ಒಂದೇ ಸಮನೆ ಅದೇನು ಗಾಸಿಪ್ ಮಾತಾಡ್ಕೋತಾವೋ ಏನೊ! ಇವುಗಳ ಕಾಡುಹರಟೆ ಮಾತ್ರ ಒಂದು ಕ್ಷಣ ಕೂಡ ನಿಲ್ಲೋದಿಲ್ಲ. ಅದು ಹಾಗಿರ್ಲಿ,.. ಹೀಗೇ ಒಂದಿನ, ಈ ಹರಟೆಮಲ್ಲ ಹಕ್ಕಿಗಳು ಬಾತ್ ಟಬ್ ಪಕ್ಕ ಹರಡಿದ್ದ ಅನ್ನದ ಅಗುಳನ್ನೆಲ್ಲ ಒಂದೂ ಬಿಡದೆ ಕ್ಲೀನ್ ಮಾಡಿ, ದಾಳಿಂಬೆ ಗಿಡದ ಮರೆಯಲ್ಲಿ ನನಗೆ ಕಾಣಿಸೋ ಹಾಗೇನೇ ಬಿಂದಾಸಾಗಿ, 'ಪಾರ್ಕ್ ಜೋಡಿ'ಗಳನ್ನೂ ನಾಚಿಸುವಂತೆ ಪಕ್ಕ ಪಕ್ಕ ಅಂಟಿ ಕೂತು ಏನೋ ಭಾಳಾ ಗಂಭೀರವಾಗಿ, ಈ ಲೋಕಾನೇ ಮರೆತವರಂತೆ ತುಂಬಾ ಹೊತ್ತು ಪಿಸಪಿಸ ಮಾತಾಡಿಕೊಂಡ್ವು,..ಪರಸ್ಪರ ಕೊಕ್ಕಿನಿಂದ ಕಚಗುಳಿ ಮಾಡ್ಕೊಂಡ್ವು.. ಈ ಜೋಡಿಯಿಂದ ತುಂಬಾ ಹೊತ್ತು ದೂರ ಕೂತು ಬೋರ್ ಹೊಡೆಸಿಕೊಂಡ ಇದೇ ಗುಂಪಿನ ಮತ್ತೊಂದು ಹಕ್ಕಿ,.. ತಾನೂ ಹೋಗಿ ಜೋಡಿಹಕ್ಕಿಗಳಿಗೆ ಅಂಟಿ ಕೂತ್ಕೊಳ್ತು. ಪ್ರೀತಿಯನ್ನೇ ಉಸಿರಾಡುತ್ತಿರುವ ಶುದ್ಧ ಮುದ್ದುಗಳಂತೆ ಕಂಡವು ಇವು. ಹೀಗೇ ಪರಸ್ಪರ ಮುದ್ದು ಮಾತಾಡ್ಕೊತಾ ಇದ್ದ ಗುಂಪನ್ನು ನನ್ನ ಕ್ಯಾಮರಾದಲ್ಲಿ ಝೂಂ ಮಾಡಿ ಕೆಲವು ಕ್ಲಿಕ್ ತಕೊಂಡೆ. 'ಹ್ಯಾಪಿ ಫ್ಯಾಮಿಲಿ' ಅಂದ್ರೆ ಇದು ಕಣಪ್ಪ ಅಂದ್ಕೊಂಡು, ಯಾಕೋ ಇವುಗಳ ಪ್ರೈವೆಸಿ ಹಾಳುಮಾಡೋದು ಬೇಡ ಅನಿಸಿ, ಒಳಗೆದ್ದು ಹೋದೆ..
ಚೈನೀಸ್ ವಾಟರ್ ಕಲರ್ |
9 ಕಾಮೆಂಟ್ಗಳು:
ನಿಮ್ಮ ಹಕ್ಕಿ ಬಳಗ ತುಂಬಾ ಚೆನ್ನಾಗಿದೆ.. ನಮ್ಮೂರಲ್ಲಿ ಬೆಳ್ಳಂ ಬೆಳಿಗ್ಗೆ ಏಳುವಾಗ ಈ ಹಕ್ಕಿ ಬಳಗಗಳ ಕಿಚಕಿಚ ಸದ್ದು ಎಷ್ಟೊಂದು ಇಂಪಾಗಿರುತಿತ್ತು. ಲೇಖನ ಚೆನ್ನಾಗಿದೆ ಹಾಗೆ ಚೈನೀಸೆ ವಾಟರ್ ಕಲರ್ ಪೇಂಟಿಂಗ್ ಕೂಡ ತುಂಬಾ ಚೆನ್ನಾಗಿದೆ.
ಚರಿತ ನೀವು ಕೂಡ ಆ ಹಕ್ಕಿಗಳೊಂದಿಗೆ ಸೇರಿ ಎಚ್ಚರದ ದ್ಯಾನದಲ್ಲಿದ್ದೀರಿ ಎನ್ನುವಂತಿದೆ ನಿಮ್ಮ ಬರಹ. ತುಂಬಾ ಆಪ್ತವಾಗಿ ಬರೆದಿದ್ದೀರ. ನಾನು ನಮ್ಮ ಮನೆಯ ಮೇಲೆ ನಿಮ್ಮ ಅನುಭವದ experiment ಮಾಡ್ತೀನಿ...:) ಧನ್ಯವಾದಗಳು.
ಹಕ್ಕಿಗಳ ಬಗ್ಗೆ ಆತ್ಮೀಯ ಬರಹ,, ಹಕ್ಕಿಗಳಿಗೆ ಓದಲಿಕ್ಕೆ ಬರುವುದಿದ್ದರೆ ನಿಮ್ಮ ಬರಹ ಮೆಚ್ಚಿ ಪತ್ರಗಲ ಮಹಾಪೂರವೇ ಹರಿದು ಬರುತ್ತಿತ್ತೇನೋ,,ಚರಿತಾ ಅವರ ಮನದಲ್ಲಿ ಹಕ್ಕಿಗಳ ಬಗೆಗಿನ ಆಪ್ತತೆ ಇಷ್ಟೊಂದು ಗಾಢವಾಗಿತ್ತೆ ಎಂಬ ಅಚ್ಚರಿ ಕೂಡಾ ನನ್ನನ್ನು ಕಾಡಿದೆ,,ನನ್ನ "ಗೀಜಗನ ಹಕ್ಕಿ" ಕಥಾಸಂಕಲನದಲ್ಲಿ ಗೀಜಗನ ಹಕ್ಕಿಯೊಂದಿಗಿನ ನನ್ನ ಒಡನಾಟ ಮತ್ತೊಮ್ಮೆ ನೆನಪಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು
-ಮ.ನಾ.ಕೃಷ್ಣಮೂರ್ತಿ
thanks ಸಂತೋಷ್,
ನಿಜ. ಇಂಥ ಚೆಂದದ ಹಕ್ಕಿಬಳಗ ನೋಡಲು, ಆವುಗಳ ಹಾಡು ಕೇಳಲು ಸಾಧ್ಯ ಆಗುವ ಪರಿಸ್ಥಿತಿಯಲ್ಲಿ ನಾವಿರೋದೆ ಸಂತೋಷದ ಸಂಗತಿ.
ರಾಜೇಶ್,
ಈ ಪುಟ್ಟ ಹಕ್ಕಿಗಳೇ ನನ್ನ ಧ್ಯಾನದ ಗುರುಗಳು. :-)
ನೀವೂ ಒಮ್ಮೆ ನಿಮ್ಮ ಮನೆ ಸುತ್ತ ಅಲೆಯುವ ಇವುಗಳನ್ನು ಮಾತಾಡಿಸಿ, ನಿಮಗೇ ತಿಳಿಯುತ್ತೆ.:-)
ಪ್ರತಿಕ್ರಿಯೆಗೆ ಧನ್ಯವಾದ
ಕೃಷ್ಣಮೂರ್ತಿಯವರೆ,
ಪ್ರತಿಕ್ರಿಯೆಗೆ ಧನ್ಯವಾದ.
ಅವುಗಳು ಓದಲು ಯಾಕೆ ಕಲೀಬೇಕು ಬಿಡಿ. ಓದುಬರಹ, ಬೇಕಾದ್ದು, ಬೇಡದ್ದು ಏನೆಲ್ಲ ಕಲಿತುಕೊಂಡ ನಮಗಿಂತ ಸಂತೋಷವಾಗಿ, ಸಹಜವಾಗಿವೆ ಅವು!
ಅಂದಹಾಗೆ, ನಿಮ್ಮೆಲ್ಲರ ಮೆಚ್ಚುಗೆಯ ಮಾತುಗಳನ್ನು ನಮ್ಮ ಬಾತ್ ಟಬ್ ಬಳಗದ ಸದಸ್ಯರೆಲ್ಲರಿಗು ಖಂಡಿತ ತಿಳಿಸ್ತೀನಿ. :-)
ನಿಮ್ಮ ಗೀಜಗನ ಹಕ್ಕಿಯ ಕಥೆಗಳನ್ನೂ ಓದುವ ಕುತೂಹಲ ನನಗೆ. ಖಂಡಿತ ಓದ್ತೀನಿ.
ಈ ನಡುವೆ ನಾನು ನೋಡಿದ ಅತ್ಯುತ್ತಮ ಬ್ಲಾಗ್ ಇದು. ವಸ್ತು ವಿನ್ಯಾಸ, ಚಿತ್ರಗಳ ಬಳಕೆ, ಭಾಷಾ ಸರಳತೆ ಮತ್ತು ನಿರೂಪಣೆ ಅಮೋಘ.
ಹಕ್ಕಿಗಳಿಗೆ ನೀರುಣಿಸುವ ನೀವು ತಣ್ಣಗಿರಿ.
ನನ್ನ ಬ್ಲಾಗುಗಳಿಗೂ ಸ್ವಾಗತ.
ಅತ್ಯುತ್ತಮ ಬ್ಲಾಗ್.ಲೇಖನ ಚೆನ್ನಾಗಿದೆ ಹಾಗೆ ಚೈನೀಸೆ ವಾಟರ್ ಕಲರ್ ಪೇಂಟಿಂಗ್ ಕೂಡ ತುಂಬಾ ಚೆನ್ನಾಗಿದೆ.
ಹಕ್ಕಿಯೊಂದಿಗಿನ ನಿಮ್ಮ ಒಡನಾಟ ಇಷ್ಟೊಂದು ಗಾಢವಾಗಿದೇ."ಶೋಷಿತರ ಪ್ರತಿನಿಧಿ" ಕೆಂಬೂತಣ್ಣನ ಕಥೆ ತಮಾಷೆಯಾಗಿದೆ.
ನಿಮಗೆ ಧನ್ಯವಾದಗಳು
ಬದರೀನಾಥ್ ಅವರೆ,
ನಿಮ್ಮ ಅಭಿಮಾನದ ಮಾತುಗಳಿಗೆ ವಂದನೆ. :-)
ಕಮಲಾ ಮೇಡಂ,
ನಿಮಗೂ ಧನ್ಯವಾದಗಳು. :-)
ಚಂದದ ಬರಹ..ಲವಲವಿಕೆ ಮಡುಗಟ್ಟಿದೆ..ಇಷ್ಟವಾಯ್ತು..
ಕಾಮೆಂಟ್ ಪೋಸ್ಟ್ ಮಾಡಿ