ಮಂಗಳವಾರ, ಜುಲೈ 9, 2013

ಪುಟಗಳಿಗೆ ಕಿಟಕಿಗಳಿಲ್ಲ...

ಚಿತ್ರ : ಚರಿತಾ


      ಅನಿಸಿದ್ದೆಲ್ಲ ಬರೆಯಲಾಗದ ಹಾಗೆ, ಬರೆದದ್ದೆಲ್ಲ ತಿರುಗಿನೋಡಲಾಗದ ಹಾಗೆ, ನನಗೆ ಕಂಡ ಕಥೆಗಳೆಲ್ಲ ನೆನ್ನೆ ಮೊನ್ನೆಗಳಲ್ಲಿ ಸರಿದುಹೋಗುತ್ತ, ಮತ್ತೆ ನನ್ನ ಕಡೆ ತಲೆಯೆತ್ತಿ ನೋಡಲಾಗದೆ, ದನಿಮಾಡಿ ಕರೆಯಲಾಗದೆ, ನಿರ್ಲಿಪ್ತತೆಯ ಮುಸುಕುಹೊದ್ದು ವಿಪರೀತ ಛಳಿಯ ನೆಪ ಹೇಳುತ್ತಿವೆ. ಮಾತು ಮರೆತು ಕೂತ ಲೈಬ್ರರಿ ಕಪಾಟಿನ ಪುಸ್ತಕಗಳು ಕಣ್ಣು ತೆರೆದು ಮುಚ್ಚುವುದು ಧೂಳು ಒರೆಸುವಾಗ ಮಾತ್ರ. ಅವುಗಳ ಕಥೆ ಕೇಳುವುದಿರಲಿ, 'ಹೇಗಿದೀಯ' ಅಂತ ತೋರಿಕೆಯ ಒಂದು ಸದ್ದು ಕೂಡ ಹೊರಡದೆ, ಅಕ್ಷರಗಳು ಅಲುಗಾಡುತ್ತಿಲ್ಲ. ಅಚ್ಚುಕಟ್ಟಾಗಿ ಸಾಲಾಗಿ ನಿಂತ ಅಕ್ಷರಗಳಿಗೆ ಪುಟಗಳಿಂದ ಹೊರಪುಟಿಯಲು ಕಿಟಕಿಗಳಿಲ್ಲ. ಕಥೆ ಹೇಳುವ ಅವಕಾಶ ಸಿಗದ ಚಂದದ ಹೊದಿಕೆಯ ಪುಸ್ತಕಗಳಿಗೆ ಮೋಕ್ಷವಾದರೂ ಹೇಗೆ ಸಿಗಬೇಕು?!

     ಹಿತ್ತಲಿನ 'ಬಟರ್ ಫ್ರೂಟ್' ಮರ ಉದುರಿಸುವ ಒಣ ಎಲೆಗಳನ್ನೆಲ್ಲ ಗುಡಿಸಿ ಗುಡ್ಡೆಹಾಕುವಾಗಲೂ ಅವುಗಳ ಬಗ್ಗೆ ಹೀಗೆ ಅನಿಸುತ್ತೆ. ಹೇಗೋ ಅವುಗಳಿಗಿಷ್ಟಬಂದಹಾಗೆ ತಲೆಕೊಟ್ಟು, ಕಾಲುಚಾಚಿ ಬಿದ್ದುಕೊಂಡಿರಲೂ ಬಿಡುತ್ತಿಲ್ಲ ನಾನು. ತಮ್ಮಷ್ಟಕ್ಕೆ ಕಣ್ಣುಮುಚ್ಚಿ ಮಣ್ಣುಮುಕ್ಕುವ ಅವುಗಳ ಕೊನೆಯ ಆಸೆಗೂ ನನ್ನ ಅನುಮತಿ ಬೇಕಾಗಿದೆ. ಅಷ್ಟಗಲ ಜಾಗದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರೋದು 'ಚೆನ್ನಾಗಿ ಕಾಣಲ್ಲ' ಅಂತ ತೀರ್ಪು ಕೊಟ್ಟು, ಅವುಗಳನ್ನೆಲ್ಲ ಅನಾಮತ್ತಾಗಿ ತಿಪ್ಪೆಗೆ ಸಾಗಿಸಿಬಿಡುವ ನಿರ್ಧಾರ ಯಾಕೋ ಸರಿಯಲ್ಲ ಅನಿಸುತ್ತಿರುತ್ತೆ.

   
ಇಂಟರ್ನೆಟ್ ಚಿತ್ರ


         ಮನೆಮುಂದಿನ ಲಾನ್ನಲ್ಲಿ ಆಗಾಗ ತಲೆಯೆತ್ತಿ ನಿಲ್ಲುವ ಥರಾವರಿ ಗಿಡಗಳಿಗೆ ಪಾಪ, ಬೈಗುಳದಂಥ ಹೆಸರು-'ಕಳೆ'. ಅವುಗಳಿಗೆ ನಗುವ, ತೊನೆದಾಡುವ ಯಾವ ಹಕ್ಕೂ ಇಲ್ಲ. ಅಕಸ್ಮಾತ್ ಅಂಥ ಹಕ್ಕು-ಪಕ್ಕು ಅಂತೇನಾದರೂ ಇದ್ದರೆ ನಮ್ಮ ಕಣ್ಣಿಗೆ ಕಾಣದ ಹಾಗೆ ಒಂದೆರಡು ದಿನ ಇದ್ದು ಹೋಗಿಬಿಟ್ಟರೆ ಕ್ಷೇಮ. ನೀಟಾಗಿ, ಟಿಪ್ಟಾಪಾಗಿರಬೇಕಾದ ನಮ್ಮ ಲಾನ್ನಲ್ಲಿ ಪಡ್ಡೆ ಹೈಕಳ ಥರ ಚಡ್ಡಿ ಏರಿಸುತ್ತ, ಗೊಣ್ಣೆ ಒರೆಸುತ್ತ, ಕೇಕೆ ಹಾಕೋದು ಕಂಡರೆ ಅಷ್ಟೆ - ಬುಡಸಮೇತ ಗೇಟ್ ಪಾಸ್ ಗ್ಯಾರಂಟಿ. ಇದೂ ಕೂಡ ಯಾಕೊ ಫ್ಯೂಡಲ್ ಮನಸ್ಥಿತಿಯ ತರ್ಕದ ಹಾಗಿದೆ... ಅನುಕೂಲಗಳ ಸುತ್ತ ಹೆಣೆದುಕೊಳ್ಳುವ ತರ್ಕಗಳಿಗೆ ನಿಜಕ್ಕೂ ಇಂಥದ್ದೇ ಬಣ್ಣ, ರೂಪ, ಅಳತೆಯಿರಬೇಕೆಂದೇನಿಲ್ಲ. ಒಂದು ಅನುಕೂಲದ ತಳಪಾಯ ನೂರು ಸಮಾಧಿಗಳದ್ದಾಗಿರಬಹುದು. ಅಬ್ಬರಕ್ಕೆ ಒಗ್ಗಿಕೊಂಡ ನಮ್ಮ ಕಿವಿಗಳಿಗೆ ಪಿಸುದನಿಯ ಆಲಾಪ ಸೋಕದೆಯೇ ಕಳೆದುಹೋಗಬಹುದು.. ಅಬ್ಬರಿಸದ, ಅರ್ಥವಾಗದ ಜಗತ್ತಿನ ಜೊತೆಗೆ ಲಾಭದ ಹೊರತಾದ ಸ್ನೇಹ ನಮಗೆ ಸಾಧ್ಯವಾಗುವುದಾದರೂ ಯಾವಾಗ?!


ಇಂಟರ್ನೆಟ್ ಚಿತ್ರ


        ಈ ಸ್ಟೆಡ್ಲರ್ ಕಲರ್ ಪೆನ್ಗಳಿಗೆ ಹೀಗೆ ನನ್ನ ಡೈರಿಯ ಪುಟಗಳನ್ನು ತುಂಬುವುದು ಇಷ್ಟವೊ, ಚಿತ್ರ ಬರೆಯುವುದಿಷ್ಟವೊ ಅಥವಾ ಸುಮ್ಮನೆ ಗೀಚುತ್ತ ಕೂರುವುದಿಷ್ಟವೊ - ಕೇಳಿದವರ್ಯಾರು? ಅಷ್ಟು ಚಂದದ ನನ್ನ ಪೆನ್ಬಾಕ್ಸಲ್ಲಿ ಇವುಗಳಿಗೆ ಜಾಗ ಕೊಟ್ಟಿರೋದೇ ನಾನು ಕರುಣಿಸಿರುವ ಭಾಗ್ಯ ಅಂತ ಇವು ತಿಳಿಯಬೇಕು ಅನ್ನೋದು ನನ್ನ ಎಣಿಕೆಯಿರಬಹುದು! ನಮ್ಮದೇ ತೋಟದ ಗುಲಾಬಿಗಿಡದಲ್ಲಿ ತನ್ನಷ್ಟಕ್ಕೆ ನಗುತ್ತಲಿದ್ದು ಒಮ್ಮೆ ಉದುರಿಹೋಗುವ ಹೂವು ನನಗೆ ಹೇಳಿಯೇ ಹೋಗಬೇಕೆಂದೇನೂ ಇಲ್ಲ. ಆದರೂ ಕಣ್ತಪ್ಪಿಸಿಹೋದವುಗಳಿಗೆ ಮೋಕ್ಷವೇ ಇಲ್ಲ ಅಂತ ಸ್ಯಾಡಿಸ್ಟ್ ಥರ ಉರಿದುಬೀಳೋದು ಅಷ್ಟೇನೂ ಅಪಾಯಕಾರಿಯಲ್ಲ ಅಂತ ಸಮಾಧಾನ ಮಾಡಿಕೊಳ್ತೀನಿ!

     ಯಾವತ್ತಿಗೂ ಬೆಳಕು ಕಾಣದ ಪುಟಗಳಿಗೆ; ಧೂಳು ಒರೆಸಲು ಕೈಗೆಟುಕದ ಕಪಾಟಿನ ಸಂದಿಗಳಿಗೆ; ಇಷ್ಟಪಟ್ಟು ತಂದು, ಬೀರುವಿನಲ್ಲಿ ಮಡಚಿಟ್ಟು  ಉಡದೆ, ತಗೆದು ಕೂಡ ನೋಡದೆ ಹಳೆಯದಾಗಿಬಿಟ್ಟಿರುವ ಬಟ್ಟೆಗಳಿಗೆ, ಶೋಕೇಸಿನೊಳಗೆ ಗಾಜಿನ ಲೋಟಗಳ ಮರೆಯಲ್ಲಿ ಅಷ್ಟು ವರ್ಷಗಳಿಂದ ಅನಾಥವಾಗಿ ಕುಳಿತುಬಿಟ್ಟಿರುವ ಆ ಬಟ್ಟಲಿಗೆ - ನಿಜಕ್ಕೂ ಏನನಿಸುತ್ತಿರಬಹುದು? ಇವುಗಳೆಲ್ಲ ಗಾಢ ನಿದ್ದೆಗೆ ಜಾರಿರಬಹುದಾ? ನನ್ನ ಜೊತೆ ಮುನಿಸಿಕೊಂಡು ಮಾತುಬಿಟ್ಟು, ಕೊನೆಗೆ ಮಾತಾಡುವುನ್ನೇ ಮರೆತುಬಿಟ್ಟಿರಬಹುದಾ? ಇದು ಆರ್ತತೆಯ ಪರಮಾವಧಿಯ ಅಗಾಧ ಮೌನವೇ ಇರಬಹುದು,.. ಪ್ರತಿಭಟನೆಯ ಕಟ್ಟಕಡೆಯ ತಂತ್ರವೂ ಆಗಿರಬಹುದು. ಇವುಗಳು ಇನ್ನೂ ನನ್ನ ಕರುಣೆಗಾಗಿ ಕಾಯುತ್ತಿರಬಹುದಾ ಅಥವಾ ಬುದ್ಧನ ಗುರುಗಳ ಹಾಗೆ ನನ್ನ ಕಡೆಗೇ ಕರುಣೆಯಿಂದ ಮುಗುಳ್ನಗುತ್ತಿರಬಹುದಾ?!

ಇಂಟರ್ನೆಟ್ ಚಿತ್ರ

       "ಹೀಗ್ಯಾಕೆ  ಸುಮ್ಮನಿದ್ದುಬಿಟ್ಟಿದ್ದೀಯ? ಮಾತಾಡು, ಏನಾದರೂ ಬರಿ, ತಂತಿ ಮೀಟಿ ರಾಗತೆಗಿ, ಸದ್ದುಬರುವಂತೆ ಪಾದ ಒತ್ತಿ ನಡೆದಾಡು, ನೀರು ಗುಟುಕರಿಸುವಾಗ ಬೇಕಂತಲೇ ಗಂಟಲು ಕೊಂಕಿಸು, ಉಸಿರಾಟ ನೆನಪಾದಾಗೆಲ್ಲ ಸ್ವಲ್ಪ ಜೋರಾಗಿ ಉಸಿರೆಳೆದುಕೊ, ಆಗಾಗ ಕನ್ನಡಿ ನೋಡಿಕೊಂಡು ಮುಖಯಿದೆಯಾ ಅಂತ ಖಾತ್ರಿಮಾಡಿಕೊ, ಸದ್ದು-ಗಿದ್ದು ಮಾಡದೆ ಹಾಗೇ ಹೋಗಿಬಿಟ್ಟರೆ ನಿನ್ನಪಾಲಿನ ಮೋಕ್ಷದ ಪ್ಯಾಕೇಜ್ ವಿನಾಕಾರಣ ವೇಸ್ಟ್ ಆಗೋಗುತ್ತೆ ನೋಡು..." ಅಂತ ಒಂದೇಸಮ ವರಾತ ತೆಗೆಯುವ ಲೌಡ್ ಸ್ಪೀಕರುಗಳಿಗೆ ಸಣ್ಣಗೆ  'ಶಟಪ್' ಹೇಳಿ,  ಹುಳಿಮೊಸರಿಗೆ ಮುತ್ತಿರುವ ನುಸಿಗಳನ್ನು ಓಡಿಸುತ್ತ, "... ನೆನ್ನೆ ನೆನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ..."  ಗುನುಗುತ್ತಿದ್ದೀನಿ.

     ಬೆಳಕು ಕಾಣದ ಆ ಪುಟಗಳಿಗೆ ಗರ್ಭದ ಕತ್ತಲಿನ ಮೌನ ದೊರಕಲಿ...
     ಈ ನಗುವಿನಂಥ ನಗು ಕೆಲವೊಮ್ಮೆ ನನಗಾದರೂ ಅರ್ಥವಾಗಲಿ...
7 ಕಾಮೆಂಟ್‌ಗಳು:

Motivation ಹೇಳಿದರು...

ಚೆನ್ನಾಗಿದೆ.

ಅನಾಮಧೇಯ ಹೇಳಿದರು...

bahaLa chennaagide
- CheT

Swarna ಹೇಳಿದರು...

ಚೆನ್ನಾಗಿದೆ
ದನಿ ಇಲ್ಲದವರ ದನಿ

ಹಂದಲಗೆರೆಗಿರೀಶ್ ಹೇಳಿದರು...

ನಿಮ್ಮ ಪಾಡಿಗೆ ನೀವು... ಜಗದಪಾಡಿಗೆ ಜಗವುತಾನು....

http://hongekaanu.blogspot.in/ ಹೇಳಿದರು...

ನಿಮ್ಮ ಬರಹ ತುಂಬಾ ಕಾವ್ಯಾತ್ಮಕವಾಗಿದೆ. ನೀವು ಬರವಣಿಗೆಯನ್ನು ಮುಂದುವರಿಸಿ.
-ನಾರಾಯಣ್ ಕೆ ಕ್ಯಾಸಂಬಳ್ಳಿ

Hemavathi ಹೇಳಿದರು...

Poetic language.Very nice. Why not poetry?

ಚರಿತಾ ಹೇಳಿದರು...

-ಇಷ್ಟಪಟ್ಟ ಎಲ್ಲರಿಗೂ ಥ್ಯಾಂಕ್ಸ್. :-)

-ಹಂದಲಗೆರೆ ಗಿರೀಶ್ ಅವರೆ,
'ನನ್ನೊಳಗೆ ಜಗವು; ಜಗದೊಳಗೆ ನಾನು'.
'ನನ್ನ ಪಾಡಿಗೆ ನಾನು' ಅನ್ನೋದನ್ನ 'ನನ್ನಷ್ಟಕ್ಕೆ ನಾನು' ಅಂತ ತಪ್ಪಾಗಿ ಓದಿಕೊಂಡಿದ್ದೀರಿ ನೀವು! :-)

-ಹೇಮಾವತಿ ಮತ್ತು ನಾರಾಯಣ್ ಅವರೆ,
ಕವಿತೆ ಕಾಣುವುದು ಕವಿಗಳಿಗೆ! ನಿಮ್ಮ ಕವನಗಳನ್ನು ಓದುವ ಆಸೆ ನನಗೆ! :-)