ಬುಧವಾರ, ಜುಲೈ 17, 2013

ಮನೆಯಂಗಳದ ರಾಜಕುಮಾರಿ

ಛಾಯಾಚಿತ್ರ : ಚರಿತಾ


        ಕ್ವಾಟರ್ಸ್ ಮನೆಯಲ್ಲಿ, ಬೆಡ್ ರೂಂ ಕಿಟಕಿಯ ತುಂಬ ಕಾಣುತ್ತಿದ್ದದ್ದು ಈ ಮರ. ಇದರ ರೆಂಬೆಕೊಂಬೆಗಳು ಹರಡಿದ್ದಷ್ಟಗಲವೂ ಇದರದ್ದೇ ಜಾಗ. ಉಯ್ಯಾಲೆ ತೂಗಲೆಂದೇ ಇದ್ದ ಗಟ್ಟಿರಟ್ಟೆಯಂಥ ರೆಂಬೆಯ ಅಷ್ಟಗಲ ಮಾತ್ರ ಸವೆದು, ನುಣ್ಣಗೆ ಹೊಳಪಾಗಿತ್ತು. ಉಳಿದ ಮೈಯೆಲ್ಲ ಒರಟು. ನಾವು ಸುಲಭವಾಗಿ ಹತ್ತಿಳಿಯಲು ತಕ್ಕನಾಗಿದ್ದ ಮರ. ಮನೆತುಂಬ ಇರುತ್ತಿದ್ದ ನೆಂಟರು, ಪರಿಚಿತರ ಕಣ್ತಪ್ಪಿಸಿ ನಾನಿರುತ್ತಿದ್ದದ್ದು ಈ ಮರದ ನೆರಳಲ್ಲೇ. ಉಯ್ಯಾಲೆ ಜೀಕುತ್ತ ಅದು ಹೊರಡಿಸುತ್ತಿದ್ದ ಸಣ್ಣ ಸದ್ದು, ಕಥೆ ಹೇಳುತ್ತಿದ್ದ ನನ್ನಮ್ಮನ ದನಿಯಂತೆಯೇ ಕೇಳುತ್ತಿತ್ತು. ರಾತ್ರಿ ಆಕಳಿಸಿದಾಗೆಲ್ಲ ಇಷ್ಟಿಷ್ಟು ಉದುರಿದ್ದ ಪರಿಮಳದ ಮರಿಗಳು ಬೆಳಗಿನ ಜಾವದ ಇಬ್ಬನಿಯಲ್ಲಿ ಮಿಸುಕಾಡುತ್ತ ತಿಳೀ ಬೆಳಕಿಗೆ ಕಣ್ಬಿಡುವ ಹೊತ್ತಿಗೆ ಸರಿಯಾಗಿ ನಾನೂ ಅಲ್ಲಿದ್ದೆ. ಆವತ್ತು ಸ್ವಲ್ಪ ಆತುರದಲ್ಲೇ ಕೈಗೆ ಸಿಕ್ಕಷ್ಟು ಹೆಕ್ಕಿ, ಕವರಿಗೆ ತುಂಬಿಕೊಂಡು ಶಾಲೆ ಕಡೆಗೆ ಓಡಿದ್ದೆ. ಆಗಸ್ಟ್ ಹದಿನೈದರ ಬಾವುಟ ಮೇಲೆ ಹಾರಿ ಮೈಕೊಡವಿದಾಗ ಇದರದ್ದೇ ಪರಿಮಳ! ಎಷ್ಟು ಖುಶಿಯಾಗಿತ್ತು ನಂಗೆ!

       ಈಗ ಹೊಸ ಮನೆಗೆ ಹೆಸರಿಡುವ ಸರದಿ ಬಂದಾಗ ನಾನು ಸೂಚಿಸಿದ್ದು ಇದರದ್ದೇ ಹೆಸರು - 'ಪಾರಿಜಾತ'. ನಮ್ಮ ಮನೆಯಂಗಳದಲ್ಲಿ ಪ್ರೀತಿ ಚೆಲ್ಲುತ್ತ ನಿಂತಿರುವ ಪರಿಮಳದ ಪಾರಿಜಾತ. ಈ ಒಂದೊಂದೇ ಹೂವನ್ನು ಆಯುವುದು ನೀವಂದುಕೊಂಡಿರುವಷ್ಟು ಸುಲಭವಲ್ಲವೇ ಅಲ್ಲ. ಇದರ ಬಿಳಿಪಕಳೆಗಳಿಗೆ ಒಂಚೂರೂ ನೋವು ತಿಳಿಯದಹಾಗೆ ಆಯಬೇಕೆಂದರೆ, ನಿಮ್ಮ ಅಂಗೈಯ್ಯನ್ನು ಈ ಹೂವಿಗಿಂತಲೂ ಹಗುರ ಮಾಡಿಕೊಳ್ಳಬೇಕು! ಎಳೇಕೂಸಿನ ತುಟಿಯಂಥ ತೊಟ್ಟುಗಳಿಗೆ ಅಳುತಾಕದ ಹಾಗೆ ಎರಡೇ ಬೆರಳಲ್ಲಿ ಹಿಡಿದು, ಹಿಡಿದದ್ದು ನನಗೂ ತಿಳಿಯಲೇಯಿಲ್ಲವೇನೊ ಅನ್ನುವಹಾಗೆ ಒಂದೊಂದನ್ನೆ ಬಟ್ಟಲು ತುಂಬುವಷ್ಟರಲ್ಲಿ ಉಸಿರೇ ಅಂಗೈಗೆ ಬಂದು ಕುಳಿತಿರುತ್ತೆ! "ಉಹ್ಹ್ ಸಾಕಪ್ಪ" ಅಂತ ಸ್ವಲ್ಪ ಜೋರಾಗಿ ಉಸಿರೆಳೆದುಬಿಡುವಹಾಗಿಲ್ಲ... ಮತ್ತೆ ಅವುಗಳು ಪ್ಯಾರಾಶೂಟ್ ಥರ ಹಾರುತ್ತ, ಗರಿಕೆಗೆ ತಗುಲಿಕೊಳ್ಳಲು ಇಷ್ಟೇ ನೆಪ ಸಾಕು!ಛಾಯಾಚಿತ್ರ : ಚರಿತಾ

    
        ಇಂಥಾ ಸುಕುಮಾರಿಯನ್ನು ಮನೆತುಂಬಿಸಿಕೊಳ್ಳುವ ಆಟ ನನಗೂ ಇಷ್ಟ. ಅಮ್ಮ ಚಿಕ್ಕಹುಡುಗಿಯಾಗಿದ್ದಾಗ ಅದೇ ಬಿಳಿಪಿಂಗಾಣಿ ಬಟ್ಟಲಿನಲ್ಲಿ ಊಟ ಮಾಡುತ್ತಿದ್ದಿದ್ದಂತೆ. ಬಿಳಿ ಕಣಗಿಲೆ ಆಕಾರದ, ಸ್ವಲ್ಪ ಒಳತಗ್ಗಿರುವ ಅಂದದ ಬಟ್ಟಲು ಅದು. ಈಗ ನಮ್ಮಂಗಳದ ಸುಕುಮಾರಿಗೂ, ಅಮ್ಮನ ಈ ಕಣಗಿಲೆ ಬಟ್ಟಲಿಗೂ ಸ್ನೇಹ. ಮನೆತುಂಬ ಘಮ್ಮನೆ ಸಂಭ್ರಮಿಸುವ ಖುಶಿ! ಬಿಳಿಬಟ್ಟಲ ನೀರಿನಲ್ಲಿ ಬೆಳ್ಳಗೆ ನಗುತ್ತ, ಹರಟೆಕೊಚ್ಚಲು ಕುಳಿತುಬಿಡುವ ಪಾರಿಜಾತಕ್ಕೆ, "ಸಾಕು ಮಾರಾಯ್ತಿ. ಅದೆಷ್ಟು ನಗ್ತೀಯೆ ನೀನು" ಅಂತ ಮುದ್ದಿಂದ ಗದರುವ ತನಕ ಎಚ್ಚರ ಇರೋದಿಲ್ಲ. ಅಷ್ಟು ನಗುಪುರ್ಕಿ.  ಅಷ್ಟೇ ತರಲೆ ಕೂಡ. ನಾನು ಮನೆಯಿಂದ ಹೊರಹೋಗೋದಕ್ಕೆ ಅಂತ ಗೇಟ್ ತೆಗೆದರೆ ಈಷ್ಟಗಲ ಹರಡಿಕುಳಿತು, ಕಾಲಿಡಲೂ ಜಾಗ ಕೊಡದೆ ಸತಾಯಿಸುವ ಹುಡುಗಿ. ಎಲ್ಲಿ ತುಳಿದುಬಿಡ್ತೀನೊ ಅಂತ ಇಷ್ಟಿಷ್ಟೆ ತುದಿಗಾಲಲ್ಲಿ ಜಾಗಮಾಡಿಕೊಂಡು ಅಂಗಳದಾಟುವ ನನ್ನ ಪಾಡು ನೋಡಿ ಇವಳಿಗೆ ನಗುವೋ ನಗು!  

 ಹೀಗಿರುವ ಈ ಹರಟೆಮಲ್ಲಿಯ ಜನ್ಮಾಂತರದ ಒಂದು ಕಥೆ ಇದೆ. ನಾನು ಎಲ್ಲೋ ಓದಿದ್ದ ಒಂದು ವಿದೇಶೀ ಜಾನಪದ ಕಥೆ :
ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿಗೆ ಒಬ್ಬಳೇ ಮುದ್ದಾದ, ಸುಂದರಿ ರಾಜಕುಮಾರಿ. ಅವಳಿಗೆ ಒಮ್ಮೆ ಆ ಸೂರ್ಯನ ಮೇಲೆ ಮೋಹವುಂಟಾಯ್ತಂತೆ. ಅವನ ತೇಜಸ್ಸು, ಬಣ್ಣ, ಶಕ್ತಿಗೆ ಯಾರು ತಾನೆ ಮರುಳಾಗದವರು?! ಅವನಿಗೆ ತನ್ನ ಪ್ರೇಮ ನಿವೇದಿಸಿಕೊಂಡಿದ್ದೂ ಆಯ್ತು. ಆ ಸೂರ್ಯ ಅನ್ನೋ ಸೂರ್ಯನೂ ಅವಳ ಜೊತೆ ಸಾಕಷ್ಟು ಸಲುಗೆ ಬೆಳೆಸಿಕೊಂಡು, ಸರಿಯಾದ ಸಮಯನೋಡಿ 'ಟಾಟಾ' ಅಂದನಂತೆ. ಈ ರಾಜಕುಮಾರಿಯ ಗೋಳು ಕೇಳುವವರ್ಯಾರು?  ಸ್ವತಃ ಮಹಾರಾಜನೇ ಸೂರ್ಯನೆಂಬೋ ಸುಂದರಾಂಗನನ್ನು  ಬೇಡಿಕೊಂಡಾಗಲೂ ಆತ 'ಕ್ಯಾರೇ' ಅನ್ನಲಿಲ್ಲ. ಇತ್ತಕಡೆ ನಮ್ಮ ರಾಜಕುಮಾರಿಯ ಪಾಡು ದಿನೇದಿನೇ ಕೆಡುತ್ತಾ ಬಂತು. ಅನ್ನ-ನೀರು ಬಿಟ್ಟು, ನಿದ್ದೆ-ನಗು ಬಿಟ್ಟು, ಬಿಳುಚಿಕೊಂಡು, ಕೃಶಳಾಗಿ, ಕಡೆಗೊಂದು ದಿನ ಆ ಸುಕುಮಾರಿ ಸತ್ತೇಹೋದಳು ಪಾಪ! ಆಗ ಆ ಮಹಾರಾಜ ತನ್ನ ಮಗಳಿಗೆ 'ಪಾರಿಜಾತ'ವಾಗಿ ಹುಟ್ಟುವಂತೆ ವರಕೊಟ್ಟನಂತೆ. ಅದಕ್ಕೇ ಅಂತೆ, ಪಾರಿಜಾತದ ಟೊಂಗೆ, ಎಲೆ ಬಿಳುಚಿಕೊಂಡಿರುವುದು. ಅದಕ್ಕೇ ಅಂತೆ, ಅವಳು ರಾತ್ರಿ ಮಾತ್ರ ಅರಳಿ, ಸೂರ್ಯನ ಮೋರೆ ಕಾಣುವ ಮೊದಲೇ ಉದುರಿಹೋಗುವುದು... ಪಾರಿಜಾತದ ತೊಟ್ಟಿನ ಬಣ್ಣ ಕೂಡ ಸೂರ್ಯನದ್ದೇ!! "ಇದೆಲ್ಲಾ ನಿಜವೇನೆ?" ಅಂತ ಇವಳನ್ನು ಕೇಳಿದರೆ,  ಒಮ್ಮೆ "ಹ್ಞೂ ಕಣೆ" ಅನ್ನೋಹಾಗೆ; ಮತ್ತೊಮ್ಮೆ "ಏನೋಪ್ಪ,..ನನಗೊಂದೂ ನೆನಪಿಲ್ಲ" ಅನ್ನೋಹಾಗೆ ತಲೆ ಆಡಿಸುತ್ತ ನಿಂತಿದ್ದಾಳೆ. ನಿಮ್ಮ ಮನೆಯಂಗಳದಲ್ಲೂ ಇಂಥ ಹುಡುಗಿಯಿದ್ದರೆ ಆಗಾಗ ಮಾತಾಡಿಸುತ್ತಿರಿ. ಅವಳ ಕಥೆ ಏನೋ ಎಂತೋ... 

ಛಾಯಾಚಿತ್ರ : ಚರಿತಾಬೆಳಬೆಳಗ್ಗೆ, ಬೆಳಕು ಕಣ್ಬಿಡುವ ಹೊತ್ತಿಗೆ ಸರಿಯಾಗಿ, ಪಾರಿಜಾತದಂಥದ್ದೆ ಬಿಳಿಜುಬ್ಬ ತೊಟ್ಟು, ದಿನಾಲು ತಪ್ಪದೆ ಹೂವು ಆಯಲು ಒಬ್ಬ ಅಜ್ಜ ಬರುತ್ತಿದ್ದದ್ದು ಗಮನಿಸಿದ್ದೆ. ನನ್ನ ಬಟ್ಟಲಿಗೂ ಸಾಕಾಗುವಷ್ಟು ಉಳಿಯುತ್ತಿದ್ದರೂ, ಯಾಕೊ ನನ್ನ ಮರದ ಜೊತೆಗಿನ ಹೊಸ ಸ್ನೇಹಸಂಬಂಧ ನನಗೆ ಅಷ್ಟಾಗಿ ಹಿಡಿಸಿರಲಿಲ್ಲ.  ಈ ವಿಷಯ ಹೇಗೆ ತಿಳಿಯಿತೋ ಏನೊ, ಈಗ ತುಂಬಾ ದಿನಗಳಿಂದ ಆ ಅಜ್ಜನ ಪತ್ತೆಯಿಲ್ಲ. ದಿನಾಲು ಪ್ಲಾಸ್ಟಿಕ್ ಕವರ್ ತಂದು ಹೂವು ತುಂಬಿಕೊಂಡು ಹೋಗುತ್ತಿದ್ದ ಅಜ್ಜ ಇಲ್ಲೆಲ್ಲಾದರೂ ಕಂಡರೆ, "ಈಗ ಯಾಕೆ ಬರ್ತಿಲ್ಲಜ್ಜ?" ಅಂತ ಕೇಳಬೇಕು ನಾನು... ಯಾಕೋ ಕಂಡೇ ಇಲ್ಲ ಅವರು ...


ಛಾಯಾಚಿತ್ರ : ಚರಿತಾ

9 ಕಾಮೆಂಟ್‌ಗಳು:

Swarna ಹೇಳಿದರು...

ನನಗೂ ಪಾರಿಜಾತ ತುಂಬಾ ಇಷ್ಟ
ಕೆಳಗಿನ ಲಿಂಕ್ನಲ್ಲಿ ನಾನು ಅವಳ ಬಗ್ಗೆ ಬರೆದದ್ದು ಇದೆ.
http://subbajji.blogspot.com/2012/11/blog-post_29.html

ಚರಿತಾ ಹೇಳಿದರು...

ಸ್ವರ್ಣ ಅವರೆ, ಪಾರಿಜಾತದ ಬಗೆಗಿನ ನಿಮ್ಮ ಪದ್ಯ ಓದಿದೆ. ಇಷ್ಟ ಆಯ್ತು.

Unknown ಹೇಳಿದರು...

(Facebook na comment a) Nimma blog odida balika, nanage nanna balyada nenapu marukalisithu... :-(
Nanu chikkavanagiddaga (sumaru 5 varsha erabohudu) aa hottige namma ajji maneya edurina angaladalli vishalavada "Paarijatha" hoovina mara, aa marada thumba hoovugalu, adara hoovu yestu sogasendare, nimma hage nanu mattu nammakka ebbaru aa hoovugalannu hekkutta sambhramisuttiddevu, adare aa sambhrama kelave tingalo...!? varshavo...!? Sariyagi nenapilla! namma maneya "Hiriyaru" aa maravannu kadidu haki, aa jaagadalli baavi thegesidaru :-(,
aa paarijatha hoovina jothegina aata alle koneyagithu...! :-(
Matte bayasidaru aa dina marali baralaradu, haage aa Parijatha (mara) hoovugalu...! :-(
Nijakku nimma blog na lekhana mana muttitu...! :-) ಧನ್ಯವಾದಗಳು
Charita ma'am!

ಸಂಧ್ಯಾ ಶ್ರೀಧರ್ ಭಟ್ ಹೇಳಿದರು...

ಪಾರಿಜಾತ ನೋಡಿದಷ್ಟೇ ಖುಷಿ ಆಯಿತು ನಿಮ್ಮ ಲೇಖನ ಓದಿ. ನನಗೂ ರಾಜಕುಮಾರಿಯ ಗೆಳೆತನ ಬೇಕಾಗಿದೆ ಈಗಾ.. ಎಲ್ಲಿರುವೆಯೇ ಪಾರಿಜಾತ ...???

ಚರಿತಾ ಹೇಳಿದರು...

ರಾಜೇಶ್,
ಪಾರಿಜಾತದ ಜೊತೆಗಿನ ಬಾಲ್ಯದ ಪರಿಮಳ ಹಾಗೇ ಇರಲಿ. ಮತ್ತೆ ಪಾರಿಜಾತದ ಸ್ನೇಹ ಮಾಡಿ. :-)

ಸಂಧ್ಯಾ,
ನಿಜಕ್ಕೂ ಗೆಳೆತನ ಮಾಡಬೇಕಾದ್ದೆ :-)

narayan k kyasamballi ಹೇಳಿದರು...

ನಿಜ ಹೇಳಬೇಕಂದರೆ ಪ್ರತಿಯೊಬ್ಬರ ಬದುಕಿನಲ್ಲಿ ನೆನಪುಗಳಿರುತ್ತವೆ; ಆ ನೆನಪುಗಳನ್ನು ಅಭಿವ್ಯಕ್ತಿಸುವುದು ಬಹಳ ಮುಖ್ಯಸಂಗತಿ.
ತುಂಬಾ ಚನ್ನಾಗಿದೆ.......

Unknown ಹೇಳಿದರು...

ಪಾರಿಜಾತದ ಹೂ ಕೊಯ್ಯುವಾಗ ನೀವು ಬಳಸಿದ ಉಪಮೆ ತುಂಬಾ ಚೆನ್ನಾಗಿದೆ. ನಿಮ್ಮ ಲೇಖನ ತುಂಬಾ ಚೆನ್ನಾಗಿದೆ.

ಅನಾಮಧೇಯ ಹೇಳಿದರು...

ಒಂದು ಸುಂದರವಾದ ಪಾರಿಜಾತದ ಹೂ ಗಿಡವನ್ನು ನಮ್ಮ ಮನೆಯಂಗಳದಲ್ಲಿ ನೆಡಬೇಕು ಎಂಬ ಸ್ಪೂರ್ತಿಯಾನ್ನು ತಂದುಕೊಟ್ಟ ಈ ನಿಮ್ಮ ಿ" ನನಗೆ ತುಂಬ ಇಷ್ಟವಾಯಿತು. ಈ ಸ್ಪೂರ್ತಿ ಹೆಚ್ಚಿನ ಜನರಲ್ಲಿ ಮತ್ತು ಮಕ್ಕಳಲ್ಲಿ ಬರಬೇಕೆಂಬುದು ನನ್ನ ಆಸೆ, ನಿಮ್ಮ ಅನುಮತಿ ಸಿಕ್ಕರೆ ಕಾನನ ಪತ್ರಿಕೆಯಲ್ಲಿ ಪ್ರಕಟಿಸುತ್ತೆವೆ.

ಇನ್ನೂ ಕಾನನದ ಬಗ್ಗೆ ನಾವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸುತ್ತ-ಮುತ್ತ ಇರುವ ಶಾಲಾ ಮಕ್ಕಳಿಗೆ ಪರಿಸರ ಮತ್ತು ಕಾಡು. ವನ್ಯವಿಜ್ಞಾನದ ಬಗ್ಗೆ ಕಮ್ಮಟಗಳನ್ನು ಮಾಡುತ್ತಿದ್ದೆವೆ. ಮಕ್ಕಳಿಗೆ ಬಹಳಷ್ಟು ನಿಸರ್ಗದ ಬಗ್ಗೆ ತಿಳಿಸುವ ಯೋಜನೆ ಇದೆ. ಮತ್ತೆ ಮಕ್ಕಳಿಗಾಗಿ ಮಾಡಿರುವ ಕಾನನ ಪತ್ರಿಕೆ ಮಾಡುತ್ತಿದ್ದೆವೆ. ಇದು ಸುಮಾರು ಮೂರು ವರುಷಗಳಿಂದ ನಡೆಯುತ್ತಿದೆ.

ಹಳೆಯ ಕಾನನ ಪ್ರತಿಗಳನ್ನು ನೋಡಲು :
facebook : https://www.facebook.com/groups/211317505667099/
http://issuu.com/kaanana

ಕಾನನ ಹೇಳಿದರು...

ಒಂದು ಸುಂದರವಾದ ಪಾರಿಜಾತದ ಹೂ ಗಿಡವನ್ನು ನಮ್ಮ ಮನೆಯಂಗಳದಲ್ಲಿ ನೆಡಬೇಕು ಎಂಬ ಸ್ಪೂರ್ತಿಯಾನ್ನು ತಂದುಕೊಟ್ಟ ಈ ನಿಮ್ಮ ಿ" ನನಗೆ ತುಂಬ ಇಷ್ಟವಾಯಿತು. ಈ ಸ್ಪೂರ್ತಿ ಹೆಚ್ಚಿನ ಜನರಲ್ಲಿ ಮತ್ತು ಮಕ್ಕಳಲ್ಲಿ ಬರಬೇಕೆಂಬುದು ನನ್ನ ಆಸೆ, ನಿಮ್ಮ ಅನುಮತಿ ಸಿಕ್ಕರೆ ಕಾನನ ಪತ್ರಿಕೆಯಲ್ಲಿ ಪ್ರಕಟಿಸುತ್ತೆವೆ.

ಇನ್ನೂ ಕಾನನದ ಬಗ್ಗೆ ನಾವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸುತ್ತ-ಮುತ್ತ ಇರುವ ಶಾಲಾ ಮಕ್ಕಳಿಗೆ ಪರಿಸರ ಮತ್ತು ಕಾಡು. ವನ್ಯವಿಜ್ಞಾನದ ಬಗ್ಗೆ ಕಮ್ಮಟಗಳನ್ನು ಮಾಡುತ್ತಿದ್ದೆವೆ. ಮಕ್ಕಳಿಗೆ ಬಹಳಷ್ಟು ನಿಸರ್ಗದ ಬಗ್ಗೆ ತಿಳಿಸುವ ಯೋಜನೆ ಇದೆ. ಮತ್ತೆ ಮಕ್ಕಳಿಗಾಗಿ ಮಾಡಿರುವ ಕಾನನ ಪತ್ರಿಕೆ ಮಾಡುತ್ತಿದ್ದೆವೆ. ಇದು ಸುಮಾರು ಮೂರು ವರುಷಗಳಿಂದ ನಡೆಯುತ್ತಿದೆ.

ಹಳೆಯ ಕಾನನ ಪ್ರತಿಗಳನ್ನು ನೋಡಲು :
facebook : https://www.facebook.com/groups/211317505667099/
http://issuu.com/kaanana