ಮಂಗಳವಾರ, ಮಾರ್ಚ್ 11, 2014

ಸ್ವಾತಂತ್ರ್ಯದ ಬಾವುಟಕ್ಕೆ ಇವಳ ಹೆಸರಿಡಬೇಕು

ಚಿತ್ರಗಳು : ಚರಿತಾ

'ಹ್ಯಾಪಿ ವಿಮೆನ್ಸ್ ಡೆ ಅಕ್ಕಾ'
ಊರಿಗೆ ಮುಂಚೆ ಫೋನ್ ಮಾಡಿ ಹೇಳಿದ್ಲು ರೇಣುಕ.
'ವಿಷ್ ಯು ದ ಸೇಮ್. ಹೇಗಿದೀಯ?' ಅಂತ ತಣ್ಣಗೆ ಕೇಳಿದೆ. 'ಅಕ್ಕ ತುಂಬ ಮಾತಾಡ್ಬೇಕು, ಮಂಡೆ ಸಿಕ್ತೀನಿ' ಅಂದ್ಲು.
ಇದೇ ರೇಣು ಮೊನ್ನೆ ಮೆಸೇಜ್ ಮಾಡಿ, 'ಬ್ರೇಕಪ್ ಆಯ್ತು, ಅಪ್ಸೆಟ್ ಆಗಿದೀನಿ' ಅಂದಾಗ, 'ವಾವ್! ಕಂಗ್ರ್ಯಾಜುಲೇಷನ್ಸ್ ರೇಣು, ಇವತ್ತು ಒಂದೆರಡು ಚಾಕ್ಲೇಟ್ಸ್ ಜಾಸ್ತಿನೆ ತಿನ್ನು ಪರ್ವಾಯಿಲ್ಲ. ನಿಜಕ್ಕು ಸೆಲೆಬ್ರೇಟ್ ಮಾಡ್ಬೇಕು ಈ ದಿನ' ಅಂತ ಹೇಳ್ಬೇಕು ಅನಿಸಿದ್ರೂ, 'ಹೌದೇನೆ? ಸಿಕ್ಕು, ಮಾತಾಡೋಣ, ಟೇಕ್ ಕೇರ್' ಅಂತಷ್ಟೆ ರಿಪ್ಲೈ ಮಾಡಿ ಸುಮ್ಮನಾದೆ.

   ಈ ರೇಣು ನಮ್ಮ ಡಿಪಾರ್ಟ್ಮೆಂಟಿನ 'ಮೋಸ್ಟ್ ಸ್ಟೈಲಿಷ್' ಹುಡುಗಿ. ಒಳ್ಳೆ ಹುಡುಗಿ ಕೂಡ. ಕ್ಯಾಡ್ಬರೀಸ್ ಎಕ್ಲೇರ್ ಬಣ್ಣದ ಇವಳಿಗೆ ನೆಸ್ಲೆ ಮಿಲ್ಕಿಬಾರ್ ಥರದ ಫೇರ್ ಬಾಯ್ ಫ್ರೆಂಡ್ ಇದ್ದಾನೆ ಅನ್ನುವ ಒಂಥರದ ಜಂಭ. ('ಇದ್ದಾನೆ' ಅನ್ನೋದು ಈಗ 'ಇದ್ದ' ಆಗಿರಬಹುದು. ವರ್ತಮಾನ-ಭೂತಕಾಲಗಳು ಈ ವಿಷಯದಲ್ಲಿ ಆಗಾಗ ಎಕ್ಸ್ಛೇಂಜ್ ಆಗ್ತಿರ್ತವೆ!)

   ಮೂರ್ಹೊತ್ತು ಚಾಕ್ಲೇಟ್ ತಿನ್ನುವ ಖಯಾಲಿಯ ಇವಳಿಗಾಗಿಯೇ ಈಗೀಗ ನನ್ನ ಬ್ಯಾಗಲ್ಲಿ 'ಚಾಕ್ಲೇಟ್ ಪಾಕೆಟ್' ಕಡ್ಡಾಯ ಆಗ್ಬಿಟ್ಟಿದೆ. ಉಕ್ಕುವ ಉತ್ಸಾಹ ಅದುಮಿಟ್ಟು, ತಲೆತುಂಬ ಸುಳ್ಳು ಗಾಂಭೀರ್ಯ ಹೊತ್ತು ತಿರುಗುವ ಪೋರಿ. ಅರ್ಧ ನಗೆ ನಕ್ಕು, ಹೌದು-ಇಲ್ಲ-ಓಕೆ-ಬೈ ಅಂತಷ್ಟೆ ಚುಟುಕಾಗಿ ಮಾತು ಮುಗಿಸಿ, ತನ್ನ ಛೇಂಬರಲ್ಲೆ ಮುಕ್ಕಾಲು ದಿನ ಕಳೆದುಬಿಡುವಾಕೆ. ಅವಳು ಧರಿಸುವ ಸಲ್ವಾರ್ ಕಮೀಝ್ ಕೂಡ ಹಾಗೇ- ಹೇಳದೆ ಉಳಿದುಹೋದ ಮಾತುಗಳ ಭಾರದಿಂದಲೇ ಗಾಢಬಣ್ಣ ಪಡೆದಿದೆಯೇನೊ ಎಂಬಂತೆ.. ಅವಳ ನಗುವನ್ನೆಲ್ಲ ಅನಾಮತ್ತಾಗಿ ಕಸಿದುಕೊಂಡಂತಿರುವ ಕಡುಗಪ್ಪು ಛಾಯೆಯ ದುಪಟ್ಟ.. ವಾರಕ್ಕೊಮ್ಮೆ ಬದಲಾಗುವ ಅವಳ ನೇಲ್ ಕಲರ್ ಕೂಡ ನೇರಳೆ, ನೀಲಿ, ಹಸಿರು, ಕಪ್ಪು,.. 'ಲೈಟ್ ಕಲರ್ ಹಾಕೊಂಡ್ರೆ ನನ್ನ ಕೈ ಇನ್ನೂ ಕಪ್ಪಾಗಿ ಕಾಣುತ್ತೆ' ಅಂತಾಳೆ. 

   ಇಂಥ ಈ ಕರಿಸುಂದರಿ ನನಗೆ ಪರಿಚಯವಾದ ಹೊಸತರಲ್ಲಿ ಒಮ್ಮೆ, ದೊಡ್ಡ ಸಂಭ್ರಮ ತೆರೆದಿಟ್ಟಹಾಗೆ ಲ್ಯಾಪ್ ಟಾಪಲ್ಲಿ ಅವಳ ಗೆಳೆಯನ ಫೋಟೋಗಳನ್ನು ತೋರಿಸಿದ್ಲು. 'ಹ್ಮ್....ಹ್ಯಾಂಡ್ಸಮ್' ಅಂತ್ಹೇಳಿ, ಅವಳನ್ನು ದಿಟ್ಟಿಸಿದ್ದೆ. 'ಅಯ್ಯೊ ಬಿಡಕ್ಕ, ಅವ್ನ ಮುಂದೇನಾದ್ರು ಹೀಗಂದ್ರೆ ಮತ್ತೆರಡು ಕೋಡು ಬಂದ್ಬಿಡತ್ತೆ ಅಷ್ಟೆ' ಅಂತ ಮುದ್ಮುದ್ದಾಗಿ, ಖುಶಿಯಿಂದ ನಾಚಿಕೊಳ್ತ ಹೇಳಿದ್ಲು. ಬಹುಷಃ ಅವಳ ಪಾಲಿನ ದೊಡ್ಡ ಸಂಭ್ರಮ ಅಂದ್ರೆ - ಈ ಫೇರ್ ಹುಡುಗನ ಜೊತೆಗಿನ ಅಫೇರ್!

   ಇವನ 'ಅನ್ ಫೇರ್‍' ನಡತೆಯ ಬಗ್ಗೆ ನನಗೆ ಆಮೇಲೆ ತಿಳಿದಿತ್ತು. ಇವಳು ಮೂರ್ಹೊತ್ತು ಗೂಬೆಮುಖ ಹಾಕೊಳ್ಳೋದು ಯಾಕೆ ಅಂತ್ಲು ಗೊತ್ತಾಗಿತ್ತು. ಯಾವುದೇ ಕ್ಯಾಂಪ್, ವರ್ಕ್ ಶಾಪ್, ಸೆಮಿನಾರ್, ಟೂರ್ ಮುಗಿಸಿ ಬಂದವಳಿಗೆ ಇವನ ಜೊತೆಗಿನ ಎನ್ಕೌಂಟರ್ ಕಡ್ಡಾಯ!
ಎಲ್ಲೆಲ್ಲಿ ಸುತ್ತಾಡ್ದೆ? ಜೊತೆಗೆ ಯಾರ್ಯಾರಿದ್ರು? ನೀನು ಅಕ್ಕನ ಜೊತೆಗೇ ಇದ್ದೆ ಅಂತ ಏನ್ ಗ್ಯಾರಂಟಿ? ಯಾರ್‍ಯಾರ್ಜೊತೆ ಎಷ್ಟ್ ಹರಟೆ ಕೊಚ್ದೆ? ಎಷ್ಟಗಲ ಹಲ್ಕಿರಿದೆ? ಎಷ್ಟ್ ದೂರ ಕೂತಿದ್ದೆ... ???

'ಇವತ್ತು ತುಂಬ ಅತ್ಬಿಟ್ಟೆಕ್ಕ..' ಮತ್ತೆ ಇವಳ ಅದೇ ಹಳೆ ಗೋಳು.
'ಬಿಟ್ಹಾಕೆ ಅತ್ಲಾಗೆ' ಅಂತ ರೋಸಿಹೋಗಿದ್ದೆ ನಾನು. 'ಇಲ್ಲಕ್ಕ, ಈ ಸಲ ನಾನು ಕಾಂಪ್ರಮೈಸ್ ಆಗಲ್ಲ, ಹೇಳೇಬಿಡ್ತೀನಿ' ಅಂತ ಮೂಗೆಳೆದುಕೊಂಡು ಹೋದವಳು, ಎರಡು ದಿನ ಕಳೆದು 'ಅಕ್ಕಾ, ಪಾ..ಪ ಕಣಕ್ಕ ಅವ್ನು, ಒಳ್ಳೇವ್ನು.' ರಾಗ ಎಳೆಯುತ್ತ ರಿಪೋರ್ಟ್ ಕೊಟ್ಟಿದ್ಲು! ಇದ್ಯಾವ್ದೊ 'ಗಿಫ್ಟ್ ಎಫೆಕ್ಟ್' ಇರ್ಬೇಕು ಅನಿಸಿ, ನಿಟ್ಟುಸಿರು ಬಿಟ್ಟು ಸುಮ್ಮನಾಗಿದ್ದೆ.
ಈಗ ಈ ಲೇಟೆಸ್ಟ್ 'ಬ್ರೇಕಿಂಗ್' ನ್ಯೂಸ್ ಕೂಡ ಒಂದೆರಡು ದಿನದಲ್ಲಿ ಸುಳ್ಳಾಗುವ ಸಾಧ್ಯತೆ ಇದ್ದೇ ಇದೆ!

   ಪ್ರತಿಯೊಂದಕ್ಕು ಅವನ ಅಪ್ಪಣೆಯ ಕೃಪೆಗೆ ಕಾದುನಿಲ್ಲುವ ಇವಳ ದೈನೇಸಿ ಸ್ಥಿತಿಗೆ ಎಷ್ಟಂತ ಮರುಗಲಿ? ಅವನು ಕೊಡಿಸಿರಬಹುದಾದ ಚಾಕ್ಲೇಟುಗಳ ಋಣಭಾರ ಅದೆಷ್ಟಿದೆಯೋ ಏನೊ !!


ಇನ್ನು ಈ ಜಯಂತಿಯ ಕಥೆ ಮತ್ತೊಂದು ಥರದ್ದು. ಹೊರರಾಜ್ಯದ ಒಂದು ಸಣ್ಣ ಹಳ್ಳಿಯಿಂದ ಮೈಸೂರಿಗೆ ಬಂದು, ಹಲವು ವರ್ಷಗಳಿಂದ ಇಲ್ಲೇ ಕೆಲಸ ಮಾಡುತ್ತಿರುವಾಕೆ. ಕೆಳಮಧ್ಯಮ ಕುಟುಂಬದ, ಹಲವು ಅಕ್ಕ ತಮ್ಮಂದಿರ ಜೊತೆಯವಳು. ವಯಸ್ಸಾದ ಅಪ್ಪ ಅಮ್ಮನ ಹೆಮ್ಮೆಯ ಮಗಳು. ಸರಳ, ಪ್ರಾಮಾಣಿಕ, ನೇರ ನಡತೆಯ ಹುಡುಗಿ. ತನ್ನ ಪ್ರಾಜೆಕ್ಟ್ ವರ್ಕ್ ಕಾರಣಕ್ಕೆ ಹಲವು ಊರು-ಜನ ಕಂಡಾಕೆ. ಅವಳು ಮೈಸೂರನ್ನು ಮೆಚ್ಚಿ ಮಾತಾಡಿದಾಗೆಲ್ಲ, 'ಇಲ್ಲೆ ಹುಡುಗ ಹುಡುಕ್ಕೊಂಡು ಸೆಟ್ಲ್ ಆಗ್ಬಿಡು ಜಯ' ಅಂತ ಎಷ್ಟೊ ಸಲ ತಮಾಷೆಗೊ, ಸೀರಿಯಸ್ಸಾಗೊ ನಾನು ಹೇಳಿದ್ದಿದೆ. ಆದ್ರೆ ಅವಳ ಲೆಕ್ಕಾಚಾರ ದಿಲ್ಲಿತನಕ ತಲುಪಿದೆ! ದೊಡ್ಡ ಕನಸಿನ ಹುಡುಗಿ!

   ಇವಳಿಗೆ ಒಂದು 'ಮಿಸ್ಡ್ ಕಾಲ್' ಮೂಲಕ ಪರಿಚಯವಾಗಿದ್ದು ದಿಲ್ಲಿ ಮೂಲದ ಬೆಂಗಳೂರಿನ ಯುವಕ. ಆರಡಿ ಎತ್ತರ, ಜಿಮ್ ಬಾಡಿ, ಹೈ-ಫೈ ಲುಕ್, ಸಾಫ್ಟ್ವೇರ್ ಕಂಪನಿಯಲ್ಲಿ ಪಾರ್ಟೈಂ ಕೆಲಸ. ಈಕೆಗಿಂತ ಏಳೆಂಟು ವರ್ಷ ಚಿಕ್ಕವ. ಇವಳ ಹೊಸ ಗೆಳೆತನದ ಹಿನ್ನೆಲೆ ಕೇಳಿಯೇ ದಿಗಿಲಾಗಿತ್ತು ನನಗೆ. ಈ ಸೀದಾಸಾದಾ ಜಾಜಿ ಹೂವಿನಂಥ ಹುಡುಗಿಗೂ, ಆ ಯಂತ್ರಮಾನವನಂಥ ಅವನಿಗೂ ಎಲ್ಲಿಂದೆಲ್ಲಿಯ ಸಂಬಂಧವಯ್ಯಾ? ಅನಿಸಿತ್ತು. ನನಗೇನನಿಸಿ ಏನಾಗಬೇಕಿತ್ತು?!
ಒಂದಿನ ಸಿಕ್ಕವಳು, '..ಹಿ ಪ್ರೊಪೋಸ್ಡ್ ಮಿ..' ಅಂತ ಪಿಂಕ್ಪಿಂಕಾಗಿ ತೊದಲಿದ್ದಳು. ಆಶ್ಚರ್ಯ ಏನಾಗಲಿಲ್ಲ.

   ಏನೇನೂ ಸಾಲದ ಇವಳ 'ಸೆನ್ಸ್ ಆಫ್ ಬ್ಯೂಟಿ', 'ಫ್ಯಾಷನ್ ಕಾನ್ಷಸ್ನೆಸ್' ಬಗ್ಗೆ ಆತ ಬೇರೆ ಹುಡುಗಿಯರ ಉದಾಹರಣೆ ಕೊಡುತ್ತ ಹಂಗಿಸುವ ಧಾಟಿಯಲ್ಲಿ ಲೆಕ್ಚರ್ ಬಿಗಿದಾಗೆಲ್ಲ ಮುದುಡಿಹೋಗುತ್ತಿದ್ದವಳು ಈಗ ಬದಲಾಗಿದ್ದಾಳೆ. ತಿಂಗಳಿಗೊಮ್ಮೆ ಐಬ್ರೊ, ಫೇಶಿಯಲ್, ಹೇರ್ ಸ್ಪಾ,.. ಅರ್ಧ ಡಝನ್ ಡಿಸೈನರ್ ಫುಟ್ ವೇರ್, ಮ್ಯಾಚಿಂಗ್ ಜೀನ್ಸ್, ವಾರಕ್ಕೊಂದು ಬ್ಯೂಟಿ ಸೋಪು, ಬಾಡಿ ಲೋಶನ್ನು.. ಎಟ್ಸೆಟ್ರಾ ಎಟ್ಸೆಟ್ರ..
   ಮುಖದ ಮೇಲೆ ಬೀಳುವ ಕೂದಲನ್ನು ಎರಡೇ ಬೆರಳಲ್ಲಿ ಪಕ್ಕಕ್ಕೆ ಸರಿಸುತ್ತ, ನಾಲ್ಕೇ ಹಲ್ಲು ಕಾಣುವಂತೆ ನಗುವುದು ಕಲಿತಿದ್ದಾಳೆ. ಇವಳ ಕಣ್ಣಿಗೆ ಸ್ಟೈಲಾಗಿ ಕಾಣುವ ಹುಡುಗಿಯರ ಹಾವಭಾವ ಗಮನಿಸುವುದು ಈಗ ಅವಳ ಹೊಸ 'ಹಾಬಿ'.
'ಅವನು' ಈಗ 'ಅವರು' ಆಗಿ ಬಡ್ತಿ ಪಡೆದಿದೆ. ಅವಳ ಭಾಷೆಯೂ 'ಸುಧಾರಿಸಿದೆ'!
'ಅವರ ಅಪ್ಪ ಅಮ್ಮನ ಮುಂದೆ ಹೋಗು-ಬಾ ಅಂದ್ರೆ ಅವರಿಗೆ ಇಷ್ಟ ಆಗಲ್ವಂತೆ'. ಅಂತಾಳೆ.
'ಏನೇ ಇದು ನಿನ್ ಕತೇ..?' ಅಂದ್ರೆ, ಅವಳ ಕನಸುಕಂಗಳ ನೆರಳಲ್ಲಿ ನಗು ಉಯ್ಯಾಲೆಯಾಡುತ್ತೆ!



   ಪ್ರತಿದಿನದ ಅವನ ಏರುದನಿಯ ಹೊಸ ಕಂಪ್ಲೇಂಟುಗಳಿಗೆ ಸಮಜಾಯಿಷಿ ಕೊಡುತ್ತ, ಕನಸುಗಳಿಂದ ಕಡಪಡೆದ ಬಣ್ಣದ ಮಾತು ಪೋಣಿಸುತ್ತ, ತನ್ನ ದಣಿವು ಕೂಡ ತನಗೆ ತಿಳಿದೇ ಇಲ್ಲವೇನೊ ಎಂಬಂತೆ ಕಷ್ಟಪಟ್ಟು ನಗುತ್ತ ದಿನಕಳೆದು, ಮತ್ತೆ ಕನಸಿನ ಗುಂಗಿಗೆ ಜಾರುತ್ತಾಳೆ ಹುಡುಗಿ.. ಅವಳ ಮೆಹೆಂದಿ ಕೈಯಲ್ಲೀಗ ಅವನ ಹೆಸರಿನ ಡಿಸೈನು.. ಶಾಪಿಂಗ್ ಹೋದ್ರೆ ಅವಳಿಗೆ ಕಾಣೋದು ಎಳೆ ಮಕ್ಕಳ ಬಣ್ಣದ ಫ್ರಾಕು, ಪುಟ್ಟ ಕಾಲಿನ ಶೂಗಳು, 'ಛೋಟಾ ಭೀಮ್' ಆಟಿಕೆಗಳು..

   'ಅಲ್ಲ ಜಯಾ, ಮದುವೆ ಆದ್ಮೇಲೆ ನಿಜಕ್ಕು ನಿನ್ನ ಫ್ರೀಡಂ ಉಳಿಯುತ್ತ? ನಮ್ಮ ಯೋಚನೆ, ಅಭಿವ್ಯಕ್ತಿ, ಆಯ್ಕೆ ಯಾವುದರ ಸ್ವಾತಂತ್ರ್ಯವೂ ಇಲ್ಲದೆ ಬದುಕುವುದೂ ಒಂದು ಬದುಕು ಅನಿಸಿಕೊಳ್ಳುತ್ತ? ಈ ಬಗ್ಗೆ ಮತ್ತೆ ನೂರು ಸಲ ಯೋಚಿಸು' ಎಂದಷ್ಟೆ ಹೇಳಲು ಸಾಧ್ಯವಾಗಿದ್ದು ನನಗೆ.

   'ಮದುವೆ ಅಂತ ಆದ್ಮೇಲೆ ಯಾವ ಥರದ ಬದುಕಾದರೂ ಒಪ್ಪಿಕೊಳ್ಳಲೇಬೇಕಲ್ಲ?! ನನಗು ವಯಸ್ಸು ಮೀರುತ್ತಿದೆ. ಅಪ್ಪ ಹುಡುಕುವ ವರ ಎಂಥವನೋ ಏನೊ, ಇವನನ್ನು ಹಲವು ವರ್ಷಗಳಿಂದ ಕಂಡಿದ್ದೀನಿ, ಸೈರಿಸಿದ್ದೀನಿ. ನಾನು ಡಿಸೈಡ್ ಮಾಡ್ಬಿಟ್ಟಿದೀನಿ ಕಣೆ.. ಮದುವೆ ಆದ್ಮೇಲೆ ಆರಾಮಾಗಿ ಮನೇಲಿದ್ದುಬಿಡ್ತೀನಿ. ಈ ಕೆಲಸಗಳ ಜಂಜಾಟ ನನಗೂ ಸಾಕಾಗಿಹೋಗಿದೆ..' ನಿರಾಳವಾಗಿ, ಒಂದೇ ಉಸಿರಲ್ಲಿ ಹೇಳಿದ್ಲು.

   ತನ್ನ ಮನೆ, ಊರು, ಅಪ್ಪ-ಅಮ್ಮ ಎಲ್ಲರಿಂದ ದೂರ ಒಂಟಿಯಾಗಿದ್ದುಕೊಂಡು, ತನ್ನ ಪಾಲಿನ ಕೆಲಸ ಶ್ರದ್ಧೆಯಿಂದ ಮಾಡುತ್ತ, ಅಷ್ಟಿಷ್ಟು ಮಹತ್ವಾಕಾಂಕ್ಷೆ ಇಟ್ಟುಕೊಂಡಂತೆ ಕಂಡಿದ್ದವಳು. ತನ್ನಿಷ್ಟದ ಹಸಿರು ಬಣ್ಣದ್ದೇ ಸೈಡ್ ಬ್ಯಾಗು, ಆವತ್ತು ಕಂಡಿದ್ದ ಅದೇ ಡಿಸೈನಿನ ಚಪ್ಪಲಿ, ಇಂಥದ್ದೇ ಬ್ರ್ಯಾಂಡಿನ ಹೇರ್ ಆಯಿಲ್, ಸ್ಕಿನ್ಗೆ ಸೂಟ್ ಆಗುವಂಥದ್ದೇ ಮಾಯಿಸ್ಚರೈಸರ್... ಹೀಗೆ ಎಲ್ಲವನ್ನೂ ಮೈಸೂರಿನ ಉದ್ದಗಲ ಅಲೆದು, ಹಟಮಾರಿಯಂತೆ ಹುಡುಕಿಯೇ ಪಡೆಯುತ್ತಿದ್ದ ದಿಲ್ದಾರ್ ಹುಡುಗಿ. ಸ್ವಾತಂತ್ರ್ಯದ ಬಾವುಟಕ್ಕೆ ಇವಳ ಹೆಸರನ್ನೇ ಇಡಬೇಕು ಅಂತ ನನಗೆ ಎಷ್ಟೋ ಸಲ ಅನಿಸಿತ್ತು! ನಿಜಕ್ಕು ಸ್ವಾಂತಂತ್ರ್ಯದ ರುಚಿ ಕಂಡಂತಿದ್ದ ಇವಳು ಇನ್ನು ಕೆಲವು ವರ್ಷಗಳ ನಂತರ ಹೇಗಿರಬಹುದೆಂದು ಊಹಿಸಲು ಯಾಕೊ ಹಿಂಜರಿಕೆ ನನಗೆ..

   ನಾನೇನು ಇವರಿಗಿಂತ ಕಮ್ಮಿಯಿಲ್ಲ! ಈ ವಿಷಯದಲ್ಲಿ ಇವರ ಸೀನಿಯರ್! ತಲೆಕೆಳಗಾಗಿ ಡುಮ್ಕಿ ಹೊಡೆದರೂ, ಪ್ರಪಾತಕ್ಕೆ ಬೀಳದೆ, ಮತ್ತೆ ರೆಕ್ಕೆಗಳನ್ನು ಚಿಗುರಿಸಿಕೊಂಡು ನಿಟ್ಟುಸಿರು ಬಿಟ್ಟಿದ್ದೀನಿ! ಮೂರ್ಖತನದ ಆಯ್ಕೆಯಿಂದ ಪಟ್ಟ ಸಂಕಟ, ಕಲಿತ ಪಾಠ, ಪಡೆದ ಎಚ್ಚರ - ನನ್ನ ಸ್ವಾತಂತ್ರ್ಯವೇ ನನ್ನ ಐಡೆಂಟಿಟಿ ಎಂಬುದನ್ನು ನನಗೆ ಮತ್ತೆ ಮತ್ತೆ ನೆನಪಿಸುತ್ತೆ. ಜೀವನ ಕಸಿಯುವ ಸಾಂಗತ್ಯ ನನ್ನ ಆಯ್ಕೆಯಲ್ಲ ಎಂಬ ಸ್ಪಷ್ಟತೆ ಈಗ ನನ್ನಲ್ಲಿದೆ.

   ಸಂಗಾತಿಯ ಆಯ್ಕೆ ಹೀಗೆ ಹಾದಿತಪ್ಪವುದು ಯಾಕೆ?
ಇಂಥ ಅತಿರೇಕದ ಮೂರ್ಖತನಕ್ಕೆ ಬಲಿಯಾಗುವುದರ ಹಿಂದಿನ ಮನಸ್ಥಿತಿ ಎಂಥದ್ದು?
ತಮ್ಮ ಜೀನ್ಸ್, ಹೇರ್ ಬ್ಯಾಂಡ್, ಸ್ಲಿಪ್ಪರ್, ವಾಚ್ - ಎಲ್ಲವನ್ನು ಮ್ಯಾಚ್ ಮಾಡಿಯೇ ಹೊಂದಿಸಿಕೊಳ್ಳುವ ಹುಡುಗಿಯರು ಸಂಗಾತಿಯ ಆಯ್ಕೆಯಲ್ಲಿ ಯಾಕೆ 'ಮಿಸ್ ಮ್ಯಾಚ್' ಮಾಡಿಕೊಳ್ತಾರೆ?
ಈ ಮಾಡರ್ನಾಗಿ ಕಾಣುವ ಹುಡ್ಗೀರ ತಲೆ ಮಾತ್ರ ಯಾಕೆ ಹಳೆ ಮ್ಯೂಸಿಯಂನ ನಿಂತುಹೋದ ಗಡಿಯಾರದಂತಿರುತ್ತೆ?! ..

   ಈ 'ಯಾಕೆ'ಗಳಿಗೆ ಅವರವರೇ ಉತ್ತರ ಕಂಡುಕೊಳ್ಳಬೇಕು! ಹೀಗೆ ಗಾಳಿಪಟದಂತೆ ವಾಲಾಡುತ್ತಿರುವ ಹುಡುಗಿಯರೆಲ್ಲರಿಗೂ ರೆಕ್ಕೆ ಹುಟ್ಟಲಿ ! ನಮ್ಮೆಲ್ಲರ ಒಳಗೆಲ್ಲೊ ಅಡಗಿರುವ ಅಕ್ಕನ ಕಿಚ್ಚು ನಮ್ಮಗಳ ದಾರಿದೀವಿಗೆಯಾಗುವಷ್ಟಾದರೂ ಉರಿಯಲಿ!

ಪ್ರತಿದಿನವೂ 'ಹ್ಯಾಪಿ ವಿಮೆನ್ಸ್ ಡೆ' ಆಗಲಿ !!















6 ಕಾಮೆಂಟ್‌ಗಳು:

Unknown ಹೇಳಿದರು...

ಚಿತ್ರಗಳಿ ಚಂದ ಇವೆ... Keep it up :)

Swarna ಹೇಳಿದರು...

ನಿಮ್ಮ ಚಿತ್ರಗಳನ್ನು ಹೆಚ್ಚು ಮೆಚ್ಚಬೇಕೋ ಅಥ್ವಾ ಬರಹವನ್ನೋ ಗೊತಾಗ್ತಿಲ್ಲ.:)

ravivarma ಹೇಳಿದರು...

ನಿಮ್ಮ ಬರಹ ಮತ್ತು ಚಿತ್ರ ನಿಜಕ್ಕೂ ಮನಮುಟ್ಟು ವನ್ತಿವೆ. ಮನ ಕಾಡುವಂತಿವೆ ..ನಿಮ್ಮೊಲಗಿನ ಬರಹಗಾರ್ತಿಯ ಚಿಂತನೆ ,ನನಗೆ ಇಸ್ತವಾಯ್ತು madam.

ನಾರಾಯಣ್ ಕೆ ಕ್ಯಾಸಂಬಳ್ಳಿ ಹೇಳಿದರು...

"ನಿನ್ನ ಕಣ್ಣೀರು ನನ್ನ ಕಣ್ಣೀರು ಕಣ್ಣೀರ ಹಿಂದಣ ಕತೆಯು ಒಂದೇ.$$$
ಒಂಟಿಯಾಗಿ ಕಣ್ಣೀರಿಡುವ ಚಿಕ್ಕ ತಂಗ್ಯಮ್ಮ
ನಾವು ಜಂಟಿಯಾಗಿ ಹೋರಾಡುವ ಬಾರೆ ಚಿಕ್ಕ ತಂಗ್ಯಮ್ಮ" ಎಂಬ ಹೋರಾಟದ ಹಾಡು ನೆನಪಾಯಿತು.......

ಚರಿತಾ...
ನಿಜವಾಗಲು ಸ್ವಾತಂತ್ರ್ಯದ ಬಾವುಟಕ್ಕೆ ಇವಳ ಹೆಸರಿಡಬೇಕು

ಚರಿತಾ ಹೇಳಿದರು...

ನಾಗರಾಜ್, ಸ್ವರ್ಣ, ರವಿವರ್ಮ - ಎಲ್ಲರಿಗೂ ಥ್ಯಾಂಕ್ಸ್! :-)

ನಾರಾಯಣ್, ಎಷ್ಟು ಅರ್ಥಪೂರ್ಣ ಹಾಡು ಅದು! ನೆನಪಿಸಿದ್ದಕ್ಕೆ ನಿಮಗೂ ಥ್ಯಾಂಕ್ಸ್.

ಶ್ರೀವತ್ಸ ಕಂಚೀಮನೆ. ಹೇಳಿದರು...

ಚಿತ್ರ ಮತ್ತು ಬರಹ ಎರಡೂ ಇಷ್ಟವಾಯಿತು...:-)