ಬುಧವಾರ, ಜುಲೈ 17, 2013

ಮನೆಯಂಗಳದ ರಾಜಕುಮಾರಿ

ಛಾಯಾಚಿತ್ರ : ಚರಿತಾ


        ಕ್ವಾಟರ್ಸ್ ಮನೆಯಲ್ಲಿ, ಬೆಡ್ ರೂಂ ಕಿಟಕಿಯ ತುಂಬ ಕಾಣುತ್ತಿದ್ದದ್ದು ಈ ಮರ. ಇದರ ರೆಂಬೆಕೊಂಬೆಗಳು ಹರಡಿದ್ದಷ್ಟಗಲವೂ ಇದರದ್ದೇ ಜಾಗ. ಉಯ್ಯಾಲೆ ತೂಗಲೆಂದೇ ಇದ್ದ ಗಟ್ಟಿರಟ್ಟೆಯಂಥ ರೆಂಬೆಯ ಅಷ್ಟಗಲ ಮಾತ್ರ ಸವೆದು, ನುಣ್ಣಗೆ ಹೊಳಪಾಗಿತ್ತು. ಉಳಿದ ಮೈಯೆಲ್ಲ ಒರಟು. ನಾವು ಸುಲಭವಾಗಿ ಹತ್ತಿಳಿಯಲು ತಕ್ಕನಾಗಿದ್ದ ಮರ. ಮನೆತುಂಬ ಇರುತ್ತಿದ್ದ ನೆಂಟರು, ಪರಿಚಿತರ ಕಣ್ತಪ್ಪಿಸಿ ನಾನಿರುತ್ತಿದ್ದದ್ದು ಈ ಮರದ ನೆರಳಲ್ಲೇ. ಉಯ್ಯಾಲೆ ಜೀಕುತ್ತ ಅದು ಹೊರಡಿಸುತ್ತಿದ್ದ ಸಣ್ಣ ಸದ್ದು, ಕಥೆ ಹೇಳುತ್ತಿದ್ದ ನನ್ನಮ್ಮನ ದನಿಯಂತೆಯೇ ಕೇಳುತ್ತಿತ್ತು. ರಾತ್ರಿ ಆಕಳಿಸಿದಾಗೆಲ್ಲ ಇಷ್ಟಿಷ್ಟು ಉದುರಿದ್ದ ಪರಿಮಳದ ಮರಿಗಳು ಬೆಳಗಿನ ಜಾವದ ಇಬ್ಬನಿಯಲ್ಲಿ ಮಿಸುಕಾಡುತ್ತ ತಿಳೀ ಬೆಳಕಿಗೆ ಕಣ್ಬಿಡುವ ಹೊತ್ತಿಗೆ ಸರಿಯಾಗಿ ನಾನೂ ಅಲ್ಲಿದ್ದೆ. ಆವತ್ತು ಸ್ವಲ್ಪ ಆತುರದಲ್ಲೇ ಕೈಗೆ ಸಿಕ್ಕಷ್ಟು ಹೆಕ್ಕಿ, ಕವರಿಗೆ ತುಂಬಿಕೊಂಡು ಶಾಲೆ ಕಡೆಗೆ ಓಡಿದ್ದೆ. ಆಗಸ್ಟ್ ಹದಿನೈದರ ಬಾವುಟ ಮೇಲೆ ಹಾರಿ ಮೈಕೊಡವಿದಾಗ ಇದರದ್ದೇ ಪರಿಮಳ! ಎಷ್ಟು ಖುಶಿಯಾಗಿತ್ತು ನಂಗೆ!

       ಈಗ ಹೊಸ ಮನೆಗೆ ಹೆಸರಿಡುವ ಸರದಿ ಬಂದಾಗ ನಾನು ಸೂಚಿಸಿದ್ದು ಇದರದ್ದೇ ಹೆಸರು - 'ಪಾರಿಜಾತ'. ನಮ್ಮ ಮನೆಯಂಗಳದಲ್ಲಿ ಪ್ರೀತಿ ಚೆಲ್ಲುತ್ತ ನಿಂತಿರುವ ಪರಿಮಳದ ಪಾರಿಜಾತ. ಈ ಒಂದೊಂದೇ ಹೂವನ್ನು ಆಯುವುದು ನೀವಂದುಕೊಂಡಿರುವಷ್ಟು ಸುಲಭವಲ್ಲವೇ ಅಲ್ಲ. ಇದರ ಬಿಳಿಪಕಳೆಗಳಿಗೆ ಒಂಚೂರೂ ನೋವು ತಿಳಿಯದಹಾಗೆ ಆಯಬೇಕೆಂದರೆ, ನಿಮ್ಮ ಅಂಗೈಯ್ಯನ್ನು ಈ ಹೂವಿಗಿಂತಲೂ ಹಗುರ ಮಾಡಿಕೊಳ್ಳಬೇಕು! ಎಳೇಕೂಸಿನ ತುಟಿಯಂಥ ತೊಟ್ಟುಗಳಿಗೆ ಅಳುತಾಕದ ಹಾಗೆ ಎರಡೇ ಬೆರಳಲ್ಲಿ ಹಿಡಿದು, ಹಿಡಿದದ್ದು ನನಗೂ ತಿಳಿಯಲೇಯಿಲ್ಲವೇನೊ ಅನ್ನುವಹಾಗೆ ಒಂದೊಂದನ್ನೆ ಬಟ್ಟಲು ತುಂಬುವಷ್ಟರಲ್ಲಿ ಉಸಿರೇ ಅಂಗೈಗೆ ಬಂದು ಕುಳಿತಿರುತ್ತೆ! "ಉಹ್ಹ್ ಸಾಕಪ್ಪ" ಅಂತ ಸ್ವಲ್ಪ ಜೋರಾಗಿ ಉಸಿರೆಳೆದುಬಿಡುವಹಾಗಿಲ್ಲ... ಮತ್ತೆ ಅವುಗಳು ಪ್ಯಾರಾಶೂಟ್ ಥರ ಹಾರುತ್ತ, ಗರಿಕೆಗೆ ತಗುಲಿಕೊಳ್ಳಲು ಇಷ್ಟೇ ನೆಪ ಸಾಕು!



ಛಾಯಾಚಿತ್ರ : ಚರಿತಾ

    
        ಇಂಥಾ ಸುಕುಮಾರಿಯನ್ನು ಮನೆತುಂಬಿಸಿಕೊಳ್ಳುವ ಆಟ ನನಗೂ ಇಷ್ಟ. ಅಮ್ಮ ಚಿಕ್ಕಹುಡುಗಿಯಾಗಿದ್ದಾಗ ಅದೇ ಬಿಳಿಪಿಂಗಾಣಿ ಬಟ್ಟಲಿನಲ್ಲಿ ಊಟ ಮಾಡುತ್ತಿದ್ದಿದ್ದಂತೆ. ಬಿಳಿ ಕಣಗಿಲೆ ಆಕಾರದ, ಸ್ವಲ್ಪ ಒಳತಗ್ಗಿರುವ ಅಂದದ ಬಟ್ಟಲು ಅದು. ಈಗ ನಮ್ಮಂಗಳದ ಸುಕುಮಾರಿಗೂ, ಅಮ್ಮನ ಈ ಕಣಗಿಲೆ ಬಟ್ಟಲಿಗೂ ಸ್ನೇಹ. ಮನೆತುಂಬ ಘಮ್ಮನೆ ಸಂಭ್ರಮಿಸುವ ಖುಶಿ! ಬಿಳಿಬಟ್ಟಲ ನೀರಿನಲ್ಲಿ ಬೆಳ್ಳಗೆ ನಗುತ್ತ, ಹರಟೆಕೊಚ್ಚಲು ಕುಳಿತುಬಿಡುವ ಪಾರಿಜಾತಕ್ಕೆ, "ಸಾಕು ಮಾರಾಯ್ತಿ. ಅದೆಷ್ಟು ನಗ್ತೀಯೆ ನೀನು" ಅಂತ ಮುದ್ದಿಂದ ಗದರುವ ತನಕ ಎಚ್ಚರ ಇರೋದಿಲ್ಲ. ಅಷ್ಟು ನಗುಪುರ್ಕಿ.  ಅಷ್ಟೇ ತರಲೆ ಕೂಡ. ನಾನು ಮನೆಯಿಂದ ಹೊರಹೋಗೋದಕ್ಕೆ ಅಂತ ಗೇಟ್ ತೆಗೆದರೆ ಈಷ್ಟಗಲ ಹರಡಿಕುಳಿತು, ಕಾಲಿಡಲೂ ಜಾಗ ಕೊಡದೆ ಸತಾಯಿಸುವ ಹುಡುಗಿ. ಎಲ್ಲಿ ತುಳಿದುಬಿಡ್ತೀನೊ ಅಂತ ಇಷ್ಟಿಷ್ಟೆ ತುದಿಗಾಲಲ್ಲಿ ಜಾಗಮಾಡಿಕೊಂಡು ಅಂಗಳದಾಟುವ ನನ್ನ ಪಾಡು ನೋಡಿ ಇವಳಿಗೆ ನಗುವೋ ನಗು!  

 ಹೀಗಿರುವ ಈ ಹರಟೆಮಲ್ಲಿಯ ಜನ್ಮಾಂತರದ ಒಂದು ಕಥೆ ಇದೆ. ನಾನು ಎಲ್ಲೋ ಓದಿದ್ದ ಒಂದು ವಿದೇಶೀ ಜಾನಪದ ಕಥೆ :
ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿಗೆ ಒಬ್ಬಳೇ ಮುದ್ದಾದ, ಸುಂದರಿ ರಾಜಕುಮಾರಿ. ಅವಳಿಗೆ ಒಮ್ಮೆ ಆ ಸೂರ್ಯನ ಮೇಲೆ ಮೋಹವುಂಟಾಯ್ತಂತೆ. ಅವನ ತೇಜಸ್ಸು, ಬಣ್ಣ, ಶಕ್ತಿಗೆ ಯಾರು ತಾನೆ ಮರುಳಾಗದವರು?! ಅವನಿಗೆ ತನ್ನ ಪ್ರೇಮ ನಿವೇದಿಸಿಕೊಂಡಿದ್ದೂ ಆಯ್ತು. ಆ ಸೂರ್ಯ ಅನ್ನೋ ಸೂರ್ಯನೂ ಅವಳ ಜೊತೆ ಸಾಕಷ್ಟು ಸಲುಗೆ ಬೆಳೆಸಿಕೊಂಡು, ಸರಿಯಾದ ಸಮಯನೋಡಿ 'ಟಾಟಾ' ಅಂದನಂತೆ. ಈ ರಾಜಕುಮಾರಿಯ ಗೋಳು ಕೇಳುವವರ್ಯಾರು?  ಸ್ವತಃ ಮಹಾರಾಜನೇ ಸೂರ್ಯನೆಂಬೋ ಸುಂದರಾಂಗನನ್ನು  ಬೇಡಿಕೊಂಡಾಗಲೂ ಆತ 'ಕ್ಯಾರೇ' ಅನ್ನಲಿಲ್ಲ. ಇತ್ತಕಡೆ ನಮ್ಮ ರಾಜಕುಮಾರಿಯ ಪಾಡು ದಿನೇದಿನೇ ಕೆಡುತ್ತಾ ಬಂತು. ಅನ್ನ-ನೀರು ಬಿಟ್ಟು, ನಿದ್ದೆ-ನಗು ಬಿಟ್ಟು, ಬಿಳುಚಿಕೊಂಡು, ಕೃಶಳಾಗಿ, ಕಡೆಗೊಂದು ದಿನ ಆ ಸುಕುಮಾರಿ ಸತ್ತೇಹೋದಳು ಪಾಪ! ಆಗ ಆ ಮಹಾರಾಜ ತನ್ನ ಮಗಳಿಗೆ 'ಪಾರಿಜಾತ'ವಾಗಿ ಹುಟ್ಟುವಂತೆ ವರಕೊಟ್ಟನಂತೆ. ಅದಕ್ಕೇ ಅಂತೆ, ಪಾರಿಜಾತದ ಟೊಂಗೆ, ಎಲೆ ಬಿಳುಚಿಕೊಂಡಿರುವುದು. ಅದಕ್ಕೇ ಅಂತೆ, ಅವಳು ರಾತ್ರಿ ಮಾತ್ರ ಅರಳಿ, ಸೂರ್ಯನ ಮೋರೆ ಕಾಣುವ ಮೊದಲೇ ಉದುರಿಹೋಗುವುದು... ಪಾರಿಜಾತದ ತೊಟ್ಟಿನ ಬಣ್ಣ ಕೂಡ ಸೂರ್ಯನದ್ದೇ!! 



"ಇದೆಲ್ಲಾ ನಿಜವೇನೆ?" ಅಂತ ಇವಳನ್ನು ಕೇಳಿದರೆ,  ಒಮ್ಮೆ "ಹ್ಞೂ ಕಣೆ" ಅನ್ನೋಹಾಗೆ; ಮತ್ತೊಮ್ಮೆ "ಏನೋಪ್ಪ,..ನನಗೊಂದೂ ನೆನಪಿಲ್ಲ" ಅನ್ನೋಹಾಗೆ ತಲೆ ಆಡಿಸುತ್ತ ನಿಂತಿದ್ದಾಳೆ. ನಿಮ್ಮ ಮನೆಯಂಗಳದಲ್ಲೂ ಇಂಥ ಹುಡುಗಿಯಿದ್ದರೆ ಆಗಾಗ ಮಾತಾಡಿಸುತ್ತಿರಿ. ಅವಳ ಕಥೆ ಏನೋ ಎಂತೋ... 

ಛಾಯಾಚಿತ್ರ : ಚರಿತಾ







ಬೆಳಬೆಳಗ್ಗೆ, ಬೆಳಕು ಕಣ್ಬಿಡುವ ಹೊತ್ತಿಗೆ ಸರಿಯಾಗಿ, ಪಾರಿಜಾತದಂಥದ್ದೆ ಬಿಳಿಜುಬ್ಬ ತೊಟ್ಟು, ದಿನಾಲು ತಪ್ಪದೆ ಹೂವು ಆಯಲು ಒಬ್ಬ ಅಜ್ಜ ಬರುತ್ತಿದ್ದದ್ದು ಗಮನಿಸಿದ್ದೆ. ನನ್ನ ಬಟ್ಟಲಿಗೂ ಸಾಕಾಗುವಷ್ಟು ಉಳಿಯುತ್ತಿದ್ದರೂ, ಯಾಕೊ ನನ್ನ ಮರದ ಜೊತೆಗಿನ ಹೊಸ ಸ್ನೇಹಸಂಬಂಧ ನನಗೆ ಅಷ್ಟಾಗಿ ಹಿಡಿಸಿರಲಿಲ್ಲ.  ಈ ವಿಷಯ ಹೇಗೆ ತಿಳಿಯಿತೋ ಏನೊ, ಈಗ ತುಂಬಾ ದಿನಗಳಿಂದ ಆ ಅಜ್ಜನ ಪತ್ತೆಯಿಲ್ಲ. ದಿನಾಲು ಪ್ಲಾಸ್ಟಿಕ್ ಕವರ್ ತಂದು ಹೂವು ತುಂಬಿಕೊಂಡು ಹೋಗುತ್ತಿದ್ದ ಅಜ್ಜ ಇಲ್ಲೆಲ್ಲಾದರೂ ಕಂಡರೆ, "ಈಗ ಯಾಕೆ ಬರ್ತಿಲ್ಲಜ್ಜ?" ಅಂತ ಕೇಳಬೇಕು ನಾನು... ಯಾಕೋ ಕಂಡೇ ಇಲ್ಲ ಅವರು ...






ಛಾಯಾಚಿತ್ರ : ಚರಿತಾ





ಮಂಗಳವಾರ, ಜುಲೈ 9, 2013

ಪುಟಗಳಿಗೆ ಕಿಟಕಿಗಳಿಲ್ಲ...

ಚಿತ್ರ : ಚರಿತಾ


      ಅನಿಸಿದ್ದೆಲ್ಲ ಬರೆಯಲಾಗದ ಹಾಗೆ, ಬರೆದದ್ದೆಲ್ಲ ತಿರುಗಿನೋಡಲಾಗದ ಹಾಗೆ, ನನಗೆ ಕಂಡ ಕಥೆಗಳೆಲ್ಲ ನೆನ್ನೆ ಮೊನ್ನೆಗಳಲ್ಲಿ ಸರಿದುಹೋಗುತ್ತ, ಮತ್ತೆ ನನ್ನ ಕಡೆ ತಲೆಯೆತ್ತಿ ನೋಡಲಾಗದೆ, ದನಿಮಾಡಿ ಕರೆಯಲಾಗದೆ, ನಿರ್ಲಿಪ್ತತೆಯ ಮುಸುಕುಹೊದ್ದು ವಿಪರೀತ ಛಳಿಯ ನೆಪ ಹೇಳುತ್ತಿವೆ. ಮಾತು ಮರೆತು ಕೂತ ಲೈಬ್ರರಿ ಕಪಾಟಿನ ಪುಸ್ತಕಗಳು ಕಣ್ಣು ತೆರೆದು ಮುಚ್ಚುವುದು ಧೂಳು ಒರೆಸುವಾಗ ಮಾತ್ರ. ಅವುಗಳ ಕಥೆ ಕೇಳುವುದಿರಲಿ, 'ಹೇಗಿದೀಯ' ಅಂತ ತೋರಿಕೆಯ ಒಂದು ಸದ್ದು ಕೂಡ ಹೊರಡದೆ, ಅಕ್ಷರಗಳು ಅಲುಗಾಡುತ್ತಿಲ್ಲ. ಅಚ್ಚುಕಟ್ಟಾಗಿ ಸಾಲಾಗಿ ನಿಂತ ಅಕ್ಷರಗಳಿಗೆ ಪುಟಗಳಿಂದ ಹೊರಪುಟಿಯಲು ಕಿಟಕಿಗಳಿಲ್ಲ. ಕಥೆ ಹೇಳುವ ಅವಕಾಶ ಸಿಗದ ಚಂದದ ಹೊದಿಕೆಯ ಪುಸ್ತಕಗಳಿಗೆ ಮೋಕ್ಷವಾದರೂ ಹೇಗೆ ಸಿಗಬೇಕು?!

     ಹಿತ್ತಲಿನ 'ಬಟರ್ ಫ್ರೂಟ್' ಮರ ಉದುರಿಸುವ ಒಣ ಎಲೆಗಳನ್ನೆಲ್ಲ ಗುಡಿಸಿ ಗುಡ್ಡೆಹಾಕುವಾಗಲೂ ಅವುಗಳ ಬಗ್ಗೆ ಹೀಗೆ ಅನಿಸುತ್ತೆ. ಹೇಗೋ ಅವುಗಳಿಗಿಷ್ಟಬಂದಹಾಗೆ ತಲೆಕೊಟ್ಟು, ಕಾಲುಚಾಚಿ ಬಿದ್ದುಕೊಂಡಿರಲೂ ಬಿಡುತ್ತಿಲ್ಲ ನಾನು. ತಮ್ಮಷ್ಟಕ್ಕೆ ಕಣ್ಣುಮುಚ್ಚಿ ಮಣ್ಣುಮುಕ್ಕುವ ಅವುಗಳ ಕೊನೆಯ ಆಸೆಗೂ ನನ್ನ ಅನುಮತಿ ಬೇಕಾಗಿದೆ. ಅಷ್ಟಗಲ ಜಾಗದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರೋದು 'ಚೆನ್ನಾಗಿ ಕಾಣಲ್ಲ' ಅಂತ ತೀರ್ಪು ಕೊಟ್ಟು, ಅವುಗಳನ್ನೆಲ್ಲ ಅನಾಮತ್ತಾಗಿ ತಿಪ್ಪೆಗೆ ಸಾಗಿಸಿಬಿಡುವ ನಿರ್ಧಾರ ಯಾಕೋ ಸರಿಯಲ್ಲ ಅನಿಸುತ್ತಿರುತ್ತೆ.

   
ಇಂಟರ್ನೆಟ್ ಚಿತ್ರ


         ಮನೆಮುಂದಿನ ಲಾನ್ನಲ್ಲಿ ಆಗಾಗ ತಲೆಯೆತ್ತಿ ನಿಲ್ಲುವ ಥರಾವರಿ ಗಿಡಗಳಿಗೆ ಪಾಪ, ಬೈಗುಳದಂಥ ಹೆಸರು-'ಕಳೆ'. ಅವುಗಳಿಗೆ ನಗುವ, ತೊನೆದಾಡುವ ಯಾವ ಹಕ್ಕೂ ಇಲ್ಲ. ಅಕಸ್ಮಾತ್ ಅಂಥ ಹಕ್ಕು-ಪಕ್ಕು ಅಂತೇನಾದರೂ ಇದ್ದರೆ ನಮ್ಮ ಕಣ್ಣಿಗೆ ಕಾಣದ ಹಾಗೆ ಒಂದೆರಡು ದಿನ ಇದ್ದು ಹೋಗಿಬಿಟ್ಟರೆ ಕ್ಷೇಮ. ನೀಟಾಗಿ, ಟಿಪ್ಟಾಪಾಗಿರಬೇಕಾದ ನಮ್ಮ ಲಾನ್ನಲ್ಲಿ ಪಡ್ಡೆ ಹೈಕಳ ಥರ ಚಡ್ಡಿ ಏರಿಸುತ್ತ, ಗೊಣ್ಣೆ ಒರೆಸುತ್ತ, ಕೇಕೆ ಹಾಕೋದು ಕಂಡರೆ ಅಷ್ಟೆ - ಬುಡಸಮೇತ ಗೇಟ್ ಪಾಸ್ ಗ್ಯಾರಂಟಿ. ಇದೂ ಕೂಡ ಯಾಕೊ ಫ್ಯೂಡಲ್ ಮನಸ್ಥಿತಿಯ ತರ್ಕದ ಹಾಗಿದೆ... ಅನುಕೂಲಗಳ ಸುತ್ತ ಹೆಣೆದುಕೊಳ್ಳುವ ತರ್ಕಗಳಿಗೆ ನಿಜಕ್ಕೂ ಇಂಥದ್ದೇ ಬಣ್ಣ, ರೂಪ, ಅಳತೆಯಿರಬೇಕೆಂದೇನಿಲ್ಲ. ಒಂದು ಅನುಕೂಲದ ತಳಪಾಯ ನೂರು ಸಮಾಧಿಗಳದ್ದಾಗಿರಬಹುದು. ಅಬ್ಬರಕ್ಕೆ ಒಗ್ಗಿಕೊಂಡ ನಮ್ಮ ಕಿವಿಗಳಿಗೆ ಪಿಸುದನಿಯ ಆಲಾಪ ಸೋಕದೆಯೇ ಕಳೆದುಹೋಗಬಹುದು.. ಅಬ್ಬರಿಸದ, ಅರ್ಥವಾಗದ ಜಗತ್ತಿನ ಜೊತೆಗೆ ಲಾಭದ ಹೊರತಾದ ಸ್ನೇಹ ನಮಗೆ ಸಾಧ್ಯವಾಗುವುದಾದರೂ ಯಾವಾಗ?!


ಇಂಟರ್ನೆಟ್ ಚಿತ್ರ


        ಈ ಸ್ಟೆಡ್ಲರ್ ಕಲರ್ ಪೆನ್ಗಳಿಗೆ ಹೀಗೆ ನನ್ನ ಡೈರಿಯ ಪುಟಗಳನ್ನು ತುಂಬುವುದು ಇಷ್ಟವೊ, ಚಿತ್ರ ಬರೆಯುವುದಿಷ್ಟವೊ ಅಥವಾ ಸುಮ್ಮನೆ ಗೀಚುತ್ತ ಕೂರುವುದಿಷ್ಟವೊ - ಕೇಳಿದವರ್ಯಾರು? ಅಷ್ಟು ಚಂದದ ನನ್ನ ಪೆನ್ಬಾಕ್ಸಲ್ಲಿ ಇವುಗಳಿಗೆ ಜಾಗ ಕೊಟ್ಟಿರೋದೇ ನಾನು ಕರುಣಿಸಿರುವ ಭಾಗ್ಯ ಅಂತ ಇವು ತಿಳಿಯಬೇಕು ಅನ್ನೋದು ನನ್ನ ಎಣಿಕೆಯಿರಬಹುದು! ನಮ್ಮದೇ ತೋಟದ ಗುಲಾಬಿಗಿಡದಲ್ಲಿ ತನ್ನಷ್ಟಕ್ಕೆ ನಗುತ್ತಲಿದ್ದು ಒಮ್ಮೆ ಉದುರಿಹೋಗುವ ಹೂವು ನನಗೆ ಹೇಳಿಯೇ ಹೋಗಬೇಕೆಂದೇನೂ ಇಲ್ಲ. ಆದರೂ ಕಣ್ತಪ್ಪಿಸಿಹೋದವುಗಳಿಗೆ ಮೋಕ್ಷವೇ ಇಲ್ಲ ಅಂತ ಸ್ಯಾಡಿಸ್ಟ್ ಥರ ಉರಿದುಬೀಳೋದು ಅಷ್ಟೇನೂ ಅಪಾಯಕಾರಿಯಲ್ಲ ಅಂತ ಸಮಾಧಾನ ಮಾಡಿಕೊಳ್ತೀನಿ!

     ಯಾವತ್ತಿಗೂ ಬೆಳಕು ಕಾಣದ ಪುಟಗಳಿಗೆ; ಧೂಳು ಒರೆಸಲು ಕೈಗೆಟುಕದ ಕಪಾಟಿನ ಸಂದಿಗಳಿಗೆ; ಇಷ್ಟಪಟ್ಟು ತಂದು, ಬೀರುವಿನಲ್ಲಿ ಮಡಚಿಟ್ಟು  ಉಡದೆ, ತಗೆದು ಕೂಡ ನೋಡದೆ ಹಳೆಯದಾಗಿಬಿಟ್ಟಿರುವ ಬಟ್ಟೆಗಳಿಗೆ, ಶೋಕೇಸಿನೊಳಗೆ ಗಾಜಿನ ಲೋಟಗಳ ಮರೆಯಲ್ಲಿ ಅಷ್ಟು ವರ್ಷಗಳಿಂದ ಅನಾಥವಾಗಿ ಕುಳಿತುಬಿಟ್ಟಿರುವ ಆ ಬಟ್ಟಲಿಗೆ - ನಿಜಕ್ಕೂ ಏನನಿಸುತ್ತಿರಬಹುದು? ಇವುಗಳೆಲ್ಲ ಗಾಢ ನಿದ್ದೆಗೆ ಜಾರಿರಬಹುದಾ? ನನ್ನ ಜೊತೆ ಮುನಿಸಿಕೊಂಡು ಮಾತುಬಿಟ್ಟು, ಕೊನೆಗೆ ಮಾತಾಡುವುನ್ನೇ ಮರೆತುಬಿಟ್ಟಿರಬಹುದಾ? ಇದು ಆರ್ತತೆಯ ಪರಮಾವಧಿಯ ಅಗಾಧ ಮೌನವೇ ಇರಬಹುದು,.. ಪ್ರತಿಭಟನೆಯ ಕಟ್ಟಕಡೆಯ ತಂತ್ರವೂ ಆಗಿರಬಹುದು. ಇವುಗಳು ಇನ್ನೂ ನನ್ನ ಕರುಣೆಗಾಗಿ ಕಾಯುತ್ತಿರಬಹುದಾ ಅಥವಾ ಬುದ್ಧನ ಗುರುಗಳ ಹಾಗೆ ನನ್ನ ಕಡೆಗೇ ಕರುಣೆಯಿಂದ ಮುಗುಳ್ನಗುತ್ತಿರಬಹುದಾ?!

ಇಂಟರ್ನೆಟ್ ಚಿತ್ರ

       "ಹೀಗ್ಯಾಕೆ  ಸುಮ್ಮನಿದ್ದುಬಿಟ್ಟಿದ್ದೀಯ? ಮಾತಾಡು, ಏನಾದರೂ ಬರಿ, ತಂತಿ ಮೀಟಿ ರಾಗತೆಗಿ, ಸದ್ದುಬರುವಂತೆ ಪಾದ ಒತ್ತಿ ನಡೆದಾಡು, ನೀರು ಗುಟುಕರಿಸುವಾಗ ಬೇಕಂತಲೇ ಗಂಟಲು ಕೊಂಕಿಸು, ಉಸಿರಾಟ ನೆನಪಾದಾಗೆಲ್ಲ ಸ್ವಲ್ಪ ಜೋರಾಗಿ ಉಸಿರೆಳೆದುಕೊ, ಆಗಾಗ ಕನ್ನಡಿ ನೋಡಿಕೊಂಡು ಮುಖಯಿದೆಯಾ ಅಂತ ಖಾತ್ರಿಮಾಡಿಕೊ, ಸದ್ದು-ಗಿದ್ದು ಮಾಡದೆ ಹಾಗೇ ಹೋಗಿಬಿಟ್ಟರೆ ನಿನ್ನಪಾಲಿನ ಮೋಕ್ಷದ ಪ್ಯಾಕೇಜ್ ವಿನಾಕಾರಣ ವೇಸ್ಟ್ ಆಗೋಗುತ್ತೆ ನೋಡು..." ಅಂತ ಒಂದೇಸಮ ವರಾತ ತೆಗೆಯುವ ಲೌಡ್ ಸ್ಪೀಕರುಗಳಿಗೆ ಸಣ್ಣಗೆ  'ಶಟಪ್' ಹೇಳಿ,  ಹುಳಿಮೊಸರಿಗೆ ಮುತ್ತಿರುವ ನುಸಿಗಳನ್ನು ಓಡಿಸುತ್ತ, "... ನೆನ್ನೆ ನೆನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ..."  ಗುನುಗುತ್ತಿದ್ದೀನಿ.

     ಬೆಳಕು ಕಾಣದ ಆ ಪುಟಗಳಿಗೆ ಗರ್ಭದ ಕತ್ತಲಿನ ಮೌನ ದೊರಕಲಿ...
     ಈ ನಗುವಿನಂಥ ನಗು ಕೆಲವೊಮ್ಮೆ ನನಗಾದರೂ ಅರ್ಥವಾಗಲಿ...




ಶುಕ್ರವಾರ, ಏಪ್ರಿಲ್ 6, 2012

ಹಕ್ಕಿಪುಕ್ಕ ನಕ್ಕಿದ್ದ್ಯಾಕೆ..?



     'ಹಕ್ಕಿ' ಅನ್ನುವ ಹಗುರ ಹೆಸರಿಗಿಂತ ಹಗೂರವಾದ, ವಿಸ್ಮಯದ ಈ ಪುಟ್ಟ ಜೀವಗಳು ಈಗ ನನ್ನ ನಿತ್ಯದ ಜೊತೆಗಾರರು. ನಮ್ಮ ಅಡುಗೆಮನೆಯ ಹಿಂದಿರುವ ಇಷ್ಟಗಲ ಜಾಗವನ್ನು ಈಗ 'ಹಿತ್ತಲು' ಅನ್ನುವುದಕ್ಕಿಂತ ನಮ್ಮ 'ಮೀಟಿಂಗ್ ಸ್ಪಾಟ್' ಅಂದರೆ ಹಿತ್ತಲಿಗೂ ಇಷ್ಟ ಆಗಬಹುದು! ನಮ್ಮ ದಾಳಿಂಬೆ ಗಿಡದ ಬುಡದ ನೆರಳಲ್ಲಿ ಈ ಕೀಟಲೆ ಹಕ್ಕಿಗಳಿಗೆ ಅಂತಾನೇ ಒಂದು ಮಣ್ಣಿನ 'ಬಾತ್ ಟಬ್' ಇಟ್ಟದೀನಿ. ಪುಟ್ಟ ಮಣ್ಣಿನ ಪಾಟ್(Pot) ಅದು. ಹೂವಿನಕುಂಡಕ್ಕಿಂತ ಹೆಚ್ಚಾಗಿ ಬಾತ್ ಟಬ್ ನಂತೆಯೇ ಇದ್ದ ಇದರ ಕಿಂಡಿಗೆ ಎಮ್ಸೀಲ್ ಬಳಿದು ಮುಚ್ಚಿ, ನೀರು ತುಂಬಿಸಿಟ್ಟು ಜೀವನ ಸಾರ್ಥಕ ಮಾಡಿಬಿಟ್ಟಿದೀನಿ! ಖಂಡಿತವಾಗಿಯೂ ಈ ಸುಂದರ ಪಾಟ್ ನನಗೆ ದಿನಾಲೂ ಎಷ್ಟು ಥ್ಯಾಂಕ್ಸ್ ಹೇಳುತ್ತಿರುತ್ತೆ ಅಂತ ನಂಗೊತ್ತು! ಮೊದಲ ದಿನ ನೀರು ತುಂಬಿಸಿಟ್ಟು ಬಾಗಿಲ ಮರೆಯಲ್ಲಿ ನಿಂತು ಸುಮಾರು ಹೊತ್ತು ಕಾದರೂ ಯಾವ ಹಕ್ಕಿಯೂ ನಂಗೆ ಕಾಣುವಂತೆ ನೀರು ಕುಡೀಲಿಲ್ಲ.ಎರಡಲ್ಲ ಮೂರನೇ ದಿನ ನಂಗೆ ಜಾಸ್ತಿ ಬೇಜಾರು ಮಾಡೋದು ಬೇಡ ಅಂತ್ಲೋ ಏನೋ ಪುಟ್ಟದೊಂದು ರಾಬಿನ್ ಹಕ್ಕಿ ನನಗೆ ಕಾಣೋ ಹಾಗೆ ಸುಮಾರು ಹೊತ್ತು ನೀರು ಕುಡಿದು, "ಸಾಕಾ? ಖುಶಿ ಆಯ್ತಾ ಈಗ?" ಅಂತ ಕೇಳಿ, ರೆಕ್ಕೆ ಬಡಿದು, ಹಾರೋಯ್ತು. ಓಹ್! ಅದೆಂಥ ಸಾರ್ಥಕ ದಿನ! ಆ ಪಾಟ್ (Pot) ಜೀವನಾನೂ ಪಾವನ ಆದ ದಿನ!

     ಆ ಪುಟ್ಟ ಪಾಟ್ ಎಷ್ಟು ಚೆನಾಗಿದೆ ಗೊತ್ತಾ? ಅಡ್ಡಡ್ಡಲಾದ ಉದ್ದ ಮೂತಿ, ಮಧ್ಯದಲ್ಲಿ ಸ್ವಲ್ಪ ಪ್ರೆಸ್ ಆದಂತಿರುವ ತಿರುವಿನ ಅಂಚು, ಅಂಚಿನಲ್ಲಿ ಪುಟ್ಟ ಗೆರೆಗಳ ಡಿಸೈನ್, ನೆರಿಗೆ ಇರದ ಸೀರೆ ಉಡಿಸಿದಂತೆ ಕಾಣುವ ನಡೂಮಧ್ಯದ ಎರಡು ತೆಳುಗೆರೆಗಳು,...ಒಟ್ಟಿನಲ್ಲಿ ನನ್ನ ಕೀಟಲೆ ಪಿಟ್ಟೆಗಳಿಗೆ ಅಂತಾನೇ ಹೇಳಿ ಮಾಡಿಸಿದ ಸುಂದರ 'ನೀರ್ಕುಂಡ'. ಗಂಭೀರವಾಗಿ ಖುಶಿ ತುಳುಕಿಸುತ್ತ ಕೂತಿದೆ. ದಿನಾ ಹೊಸ ಕನ್ನಡಿಯಂಥ ನೀರು ತುಂಬಿಸಿಕೊಂಡು, ನಾನಿಟ್ಟ ಕಡೆ ಮುಖಮಾಡಿ ಕೂರೋದಂದ್ರೆ ಅದಕ್ಕೆ ಎಷ್ಟು ಇಷ್ಟ!

ಚೈನೀಸ್ ವಾಟರ್ ಕಲರ್

     ಹಿತ್ತಲ ಜಗಲಿಯ ಮೇಲೆ ನಾನು ತಿಂಡಿ ತಿನ್ನುತ್ತಲೋ, ಓದುತ್ತಲೋ ಅಥವಾ ಹೀಗೆ ಹರಟುತ್ತಲೋ ಇರುವಾಗ ಈ ಮಳ್ಳ ಹಕ್ಕಿಗಳು ಸ್ವಲ್ಪ ಹೊತ್ತು ದೂರದ ಟೊಂಗೆಯಲ್ಲಿ ಕೂತು ಕಿಚಕಿಚ ಅನ್ನುತ್ತ ನನ್ನ ಗಮನಿಸುತ್ತವೆ. ನಾನಾಗ ನಿಧಾನ ಉಸಿರಾಡುತ್ತ, ಆದಷ್ಟೂ ಅಲ್ಲಾಡದಂತೆ ಕೂತ ಹಾಗೇ ಕೂರಬೇಕು. ಕಪ್ಪು ತಲೆ-ಬಳಿ ಪುಕ್ಕದ ಈ ಹಕ್ಕಿ ಕೀಟಲೆ ಪುಟ್ಟಿಯಂತೆ ಕತ್ತನ್ನು ಮುದ್ದಮುದ್ದಾಗಿ ಹಾಗೂ ಹೀಗೂ ಕೊಂಕಿಸುತ್ತ, ಆಂಟೆನಾದ ಹಾಗೆ ಪುಕ್ಕ ಆಡಿಸುತ್ತ, ಸುಮ್ಮಸುಮ್ಮನೆ ಹೊಟ್ಟೆಉಬ್ಬರಿಸಿ ಪಿಕ್ಕೆ ಹಾಕುತ್ತ ನನ್ನ ನೋಡೇನೋಡುತ್ತೆ. ನಾನು ಮಾತ್ರ ಸ್ವಲ್ಪವೂ ಅಲ್ಲಾಡದೇ, ನನ್ನ ಕಣ್ಣಾಲಿಗಳನ್ನು ಮಾತ್ರ  ಇದು ನೆಗೆದತ್ತೆಲ್ಲ ತಿರುಗಿಸಲು ಪ್ರಯಾಸ ಪಡುತ್ತ ಕೂತಿರಬೇಕು. ಆ ಪುಟ್ಟ ಕಿಲಾಡಿ ಆಕಡೆ ಈಕಡೆ ಜಾಗ ಬದಲಿಸುತ್ತ ಬೇರೆ ಬೇರೆ ಕೋನಗಳಿಂದ ವಾರೆಗಣ್ಣಿಂದ ನೋಡುತ್ತ ಯೋಚಿಸುತ್ತೆ: "ಈ ಕಲರ್ ಕಲರ್ ಪ್ರಾಣಿ ನನ್ನ ಹಾಗೇ ಹಾರಿ ಬಂದು ಎರಗುತ್ತೊ ಅಥವಾ ಹೀಗೇ ಗಡವನ ಥರ ಕೂತಿರುತ್ತೊ" ಅಂತ! ಸದ್ಯಕ್ಕೆ ತೊಂದ್ರೆ ಇಲ್ಲ ಅಂತ ಅನಿಸಿದ ಮೇಲೆ ಒಂದೊಂದೇ ನೆಗೆತ ನೆಗೆಯುತ್ತ ನೀರಿನ ಕುಂಡದ ಹತ್ತಿರ ಬಂದು, ಆ ಡಿಸೈನ್ ಇರುವ ಅಂಚನ್ನು ತನ್ನ ತೆಳುವಾದ ಪುಟ್ಟ ಕಾಲುಗಳಿಂದ ಹಿಡಿದು ಕೂತು, ಬಾಗಿ ಮುಖ ನೋಡಿಕೊಳ್ಳುತ್ತೆ... ಇಷ್ಟಿಷ್ಟೇ ನೀರನ್ನು ಕೊಕ್ಕಲ್ಲಿ ತುಂಬಿಕೊಂಡು ಕತ್ತು ಮೇಲೆತ್ತಿ ಒಳಗಿಳಿಸುತ್ತೆ, ನಾಲಿಗೆಯಲ್ಲಿ ಚಪ್ಪರಿಸುತ್ತೆ. ಬಹುಷಃ ಅವುಗಳ ಕೊಕ್ಕು-ಗಂಟಲಿನ ವಿನ್ಯಾಸದಲ್ಲಿ ಹೀರಿಕೊಳ್ಳುವ ವ್ಯವಸ್ಥೆ ಇಲ್ಲವೇನೊ. ಕೆಲವೊಮ್ಮೆ ಸರದಿ ಮೇಲೆ ನಾನು, ತಾನು ಅಂತ ನೀರಲ್ಲಿ ಮುಳುಗು ಹಾಕಿ, ಮೈಕೊಡವಿಕೊಂಡು ಒಂದೊಳ್ಳೆ ಸ್ನಾನ ಮುಗಿಸಿ, ಪಕ್ಕದ ರೆಂಬೆ ಮೇಲೆ ಕೂತು ,ಕೊಕ್ಕಿಂದ ಪುಕ್ಕ ನೀವಿಕೊಳ್ಳುತ್ತ ಮೈ ಆರಿಸಿಕೊಳ್ಳುವ ಖುಶಿಯೇ ಖುಶಿ.

ಚಿತ್ರ : ಫ್ರ್ಯಾಂಕ್ ಗೊನ್ಸಾಲೆಸ್


      ಏನೇ ಮಾಡುವಾಗಲೂ ಈ ಪುಟ್ಟಜೀವಗಳಿಗೆ ಮೈಯೆಲ್ಲ ಕಣ್ಣು. ಮೈಮರೆತು ಹಾಯಾಗಿ ವಿರಮಿಸುವ ಕಂಫರ್ಟ್( Comfort) ಇರೋದು ಕೇವಲ ಮನುಷ್ಯರಿಗೆ ಮತ್ತು ಮುದ್ದಿನ ಸಾಕುಪ್ರಾಣಿಗಳಿಗೆ ಮಾತ್ರ ಅಂತ ಕಾಣುತ್ತೆ! ಮನುಷ್ಯನಿಗೆ ಮನುಷ್ಯನಿಗಿಂತ ದೊಡ್ಡ ಶತ್ರು ಬೇರೆ ಯಾರಿದಾರೆ?!  ಆದರೆ ಈ ಪುಟ್ಟ ಜೀವಕ್ಕೆ ಪ್ರತಿಕ್ಷಣವೂ ಧ್ಯಾನ - ಎಚ್ಚರದ, ಪ್ರಙ್ಙಪೂರ್ವಕ   ಧ್ಯಾನ, ಅಲರ್ಟ್ ನೆಸ್ ಅಂತಾರಲ್ಲ ಅದು. ಪ್ರಕೃತಿಸಹಜವಾದ ಈ ಸ್ವತಂತ್ರಜೀವಗಳಿಗೆ ಉಸಿರಾಟದಷ್ಟೇ ಸಹಜವಾದ 'ಎಚ್ಚರದ ಧ್ಯಾನ'ವೂ ಇರುತ್ತೆ. ನಾವು-ನೀವು ಮಾತ್ರ ಜೆ.ಕೆ. ಯವರ ಪುಸ್ತಕಗಳಲ್ಲೊ, ವಿಪಸನ ಸೆಂಟರ್ ಗಳಲ್ಲೊ ಸಹಜತೆಯ ಪಾಠವನ್ನು ಕಲಿಯಬೇಕಾದ, ನಮ್ಮತನವನ್ನು ಮತ್ತೆ ನೆನಪುಮಾಡಿಕೊಳ್ಳಬೇಕಾದ ದುಃಸ್ಥಿತಿ ತಂದುಕೊಂಡಿದೀವಿ!


ಚೈನೀಸ್ ವಾಟರ್ ಕಲರ್

     ಕಪ್ಪುತಲೆ-ಬಿಳಿ ಹೊಟ್ಟೆಯ ರಾಬಿನ್ ಜೋಡಿ, ತಲೆಯಲ್ಲಿ ಜುಟ್ಟು ಬಿಟ್ಕೊಂಡು, ಕಣ್ಣ ಪಕ್ಕಕ್ಕೆ-ಕುಂಡಿಗೆ ಕೆಂಪು ಬಳ್ಕೊಂಡು ಬರುವ ಒಂದು ಜೋಡಿ (ಪಿಕಳಾರ ಇರ್ಬೇಕು), ಮುಷ್ಟಿಯಿಂದಲೂ ನುಣುಚಿಕೊಳ್ಳುವಷ್ಟು ಪುಟ್ಟದಾದ ತಿಳಿಹಸಿರಿನ 'ಚಿಟ್ಟೆಹಕ್ಕಿ', ಕೆಲವೊಮ್ಮೆ ಗುಬ್ಬಚ್ಚಿಗಳು, ಚೋರೆಹಕ್ಕಿ (ಕಾಡು ಪಾರಿವಾಳ), ಗುಬ್ಬಿಯಂಥದ್ದೇ ಒಂದು ಬ್ಲ್ಯಾಕ್ ಅಂಡ್ ವೈಟ್ ಹಕ್ಕಿ,..ಹೀಗೆ ನಮ್ಮ ಬಾತ್ ಟಬ್ ಪರಿವಾರದ ಪಟ್ಟಿ ಬೆಳಿತಾ ಹೋಗುತ್ತೆ... ನಮ್ಮ ವಿಶೇಷ ಅತಿಥಿ ಮಾತ್ರ - 'ಚಂಬೂಕ'. 'ಕೆಂಬೂತ' ಅಂತ ಕೂಡ ಕರೀತಾರೆ ಇದನ್ನ. ತುಂಬಾ ಸುಂದರ, ಸಧೃಡ ಹಕ್ಕಿ ಇದು. ಮಿರಮಿರ ಕಪ್ಪುಚುಕ್ಕೆಯ ಕೆಂಪು ಕಣ್ಣು. ಹೊಳೆಯುವ ಕರೀ ದೇಹ, ನಶ್ಯ ಬಣ್ಣದ ರೆಕ್ಕೆ, ಉದ್ದನೆ ಪುಕ್ಕ, ಮಾಟವಾಗಿ ಬಾಗಿದ ಕಪ್ಪು ಕೊಕ್ಕು. ನನ್ನ ಕಣ್ಣಿಗೆ ಬಿದ್ದಾಗೆಲ್ಲ, ಕಣ್ಣೊಳಗೆ ಆದಷ್ಟೂ ತುರುಕಿಕೊಳ್ಳಲು ತವಕಿಸುತ್ತಾ ಇರ್ತೀನಿ ನಾನು. ಅಷ್ಟು ಸುಂದರ ಹಕ್ಕಿ ಇದು!  "ಊಂ..ಊಂ.." ಅಂತ ಹೆದರಿಸೋ ಹಾಗೆ ಧ್ವನಿ ಹೊರಡಿಸುತ್ತೆ ಇದು. "ಊಂ..ನಂಗೊತ್ತು,..ಊಂ" ಅನ್ನೋ ಥರ ಕೇಳಿಸುತ್ತೆ! ಅದಕ್ಕಿಂತ ಸಣ್ಣ ಗಾತ್ರದ ಹಕ್ಕಿಗಳನ್ನು ದೂರ ಓಡಿಸಿ, ಸುತ್ತ ಅಷ್ಟಗಲ ಯಾವ ಹಕ್ಕಿಯೂ ಬರದ ಹಾಗೆ ತನ್ನ 'ಏರಿಯಾ' ಮಾಡಿಕೊಳ್ಳುತ್ತೆ. ಗಂಭೀರ ನಡಿಗೆ ಇದರದು. ತಪ್ಪು ಮಾಡಿದ ಮನುಷ್ಯರಂತೆ ಕೆಲವೊಮ್ಮೆ ಪೆದ್ದುಪೆದ್ದಾಗಿ ಕತ್ತು ಕುಣಿಸುತ್ತ ಬೆದರಿಕೊಳ್ಳುತ್ತೆ! ಉಳಿದಂತೆ, ಕಂಡವರನ್ನು ಹೆದರಿಸುವ ಮುಖಚಹರೆ, ನುಂಗಿಬಿಡುವಂಥ ಕೆಂಗಣ್ಣು. ಅದಕ್ಕೇ ಇದರ ಹೆಸರು - 'ಕೆಂಬೂತ'.




     ಈ ಕೆಂಬೂತದ ಬಗ್ಗೆ ಯಾವಾಗಲೋ, ಎಲ್ಲೋ ಓದಿದ ಕಥೆ ಇದು : ತುಂಬಾ ಹಿಂದೊಮ್ಮೆ ಕೆಂಬೂತಕ್ಕೆ ಚೆಂದದ, ಬಣ್ಣಬಣ್ಣದ ಊದ್ದನೆ ಪುಕ್ಕಗಳಿದ್ದುವಂತೆ. ಹಕ್ಕಿಗಳಲ್ಲೆಲ್ಲ ಅತೀ ಸುಂದರ ಹಕ್ಕಿ ಅನ್ನೋ ಬಿರುದು ಬೇರೆ ಇತ್ತು! ಆ ಕಾಲದಲ್ಲಿ ನಮ್ಮ ನವಿಲಪ್ಪನಿಗೆ ಬಣ್ಣದ ಪುಕ್ಕ ಇರ್ಲಿಲ್ಲ. ಒಮ್ಮೆ ನವಿಲಪ್ಪಂಗೆ ಕೆಂಬೂತದ ಬಣ್ಣದ ಪುಕ್ಕ-ಗರಿಗಳು ತನಗೆ ಬೇಕು ಅನ್ನೋ ಆಸೆ ಆಯ್ತಂತೆ. ಬಾಯ್ಬಿಟ್ಟು ಕೇಳಿಯೂ ಬಿಡ್ತು, "ಒಂದೇ ಒಂದು ದಿನದ ಮಟ್ಟಿಗೆ ನಮ್ಮಿಬ್ಬರ ಪುಕ್ಕಗಳನ್ನ ಎಕ್ಸ್ಛೇಂಜ್ ಮಾಡಿಕೊಳ್ಳೋಣ್ವ"?..ಅಂತ. ಕೆಂಬೂತ ಉದಾರ ಮನಸ್ಸಿನಿಂದ "ಪಾಪ ಹೋಗ್ಲಿಬಿಡು, ಒಂದಿನ ತಾನೆ? ಶೋಕಿ ಮಾಡ್ಲಿ" ಅಂದ್ಕೊಂಡು, "ಓಕೆ" ಅಂತು. ಮಾರನೇ ದಿನ ಹೊತ್ತು ಮೂಡುವ ಮುಂಚೆ ತಮ್ಮ ತಮ್ಮ ಮೊದಲಿನ ಪುಕ್ಕಗಳನ್ನು ವಾಪಸ್ ಪಡೆಯುವ ಕರಾರು ಅದು. ಸರಿ, ನವಿಲಪ್ಪ ಹೊಸ ಪುಕ್ಕ ಕಟ್ಕೊಂಡು ಕುಣಿದಿದ್ದೇ ಕುಣಿದಿದ್ದು. ವಾಪಸ್ ಕೊಡುವ ಮಾತೆಲ್ಲಿ ಬಂತು? ಒಂದಿನ ಅಲ್ಲ, ಎರಡ್ ದಿನ ಅಲ್ಲ, ಶತಮಾನಗಳಿಂದ್ಲೂ.., ಈವತ್ತಿಗೂ ಪುಕ್ಕ ಹಿಂದಿರುಗಿಸುವ ಮನಸ್ಸೇ ಆಗಿಲ್ಲ ಅದಕ್ಕೆ. ಈಗ ನಮ್ಮ 'ರಾಷ್ಟ್ರೀಯ ಪಕ್ಷಿ' ಅನ್ನೋ ಪಟ್ಟ ಬೇರೆ ಪಡ್ಕೊಂಡಿದೆ ನೋಡ್ರಪ್ಪ! ಆವತ್ತಿಂದ, ಈವತ್ತಿನವರೆಗೂ ಕಣ್ಣು ಕೆಂಪು ಮಾಡ್ಕೊಂಡು, ಊಂ,..ಊಂ..ಅನ್ನುತ್ತ ಬಣ್ಣದ ಪುಕ್ಕ ಹುಡುಕ್ತಾನೇ ಇದಾನೆ ನಮ್ಮ ಶೋಷಿತರ ಪ್ರತಿನಿಧಿ ಕೆಂಬೂತಣ್ಣ!


ಚೈನೀಸ್ ವಾಟರ್ ಕಲರ್

      ನಮ್ಮ ಹಕ್ಕಿಬಳಗಕ್ಕೆ ಮತ್ತೊಂದು ಅಪರೂಪದ ಹಿಂಡು ಬರುತ್ತೆ. ಇವುಗಳಿಗೆ ಯಾರು, ಏನು ಹೆಸರಿಟ್ಟದ್ದಾರೋ ಗೊತ್ತಿಲ್ಲ. ನಮ್ಮಮ್ಮ ಮಾತ್ರ ಇವುಗಳನ್ನ 'ಪೆದ್ದು ಹಕ್ಕಿಗಳು' ಅಂತಾರೆ. ಬೇರೆ ಹಕ್ಕಿಗಳಷ್ಟು ಚುರುಕಾಗಿಲ್ಲದ ಇವುಗಳು ಯಾವಾಗಲೂ ಗುಂಪಿನಲ್ಲೇ ಇರ್ತಾವೆ. ಕುಪ್ಪಳಿಸುತ್ತ ಓಡಾಡ್ತಾವೆ. ಮೈಪೂರ್ತಿ ಬೂದು ಬಣ್ಣ. ಹೊಟ್ಟೆ ಮತ್ತು ಕಣ್ಣಸುತ್ತ ಮಾತ್ರ ತೆಳು ಬೂದು. ಕಣ್ಣು ಮತ್ತು ಕೊಕ್ಕು ತೆಳೂ ಹಳದಿ. ನಂಗಂತೂ ಇವನ್ನ 'ಪೆದ್ದ್ ಮರಿಗಳು' ಅನ್ನೋ ಮನಸ್ಸಾಗಲ್ಲ. ಅಷ್ಟು ಮುದ್ದಾಗಿವೆ ಇವು! ಈಗ ತಾನೆ ನಿದ್ದೆಯಿಂದ ಎದ್ದು, ತಲೆಬಾಚದೆ, ಹಲ್ಲುಜ್ಜದೆ, ಸ್ನಾನ ಮಾಡದೆ ಹಾಗೇ ಪಿಕ್ ನಿಕ್ ಹೊರಟಹಾಗೆ. ಕಿಚಪಿಚ ಕಚಪಚ ಅಂತ ಒಂದೇ ಸಮನೆ ಅದೇನು ಗಾಸಿಪ್ ಮಾತಾಡ್ಕೋತಾವೋ ಏನೊ! ಇವುಗಳ ಕಾಡುಹರಟೆ ಮಾತ್ರ ಒಂದು ಕ್ಷಣ ಕೂಡ ನಿಲ್ಲೋದಿಲ್ಲ. ಅದು ಹಾಗಿರ್ಲಿ,.. ಹೀಗೇ ಒಂದಿನ, ಈ ಹರಟೆಮಲ್ಲ ಹಕ್ಕಿಗಳು ಬಾತ್ ಟಬ್ ಪಕ್ಕ ಹರಡಿದ್ದ ಅನ್ನದ ಅಗುಳನ್ನೆಲ್ಲ ಒಂದೂ ಬಿಡದೆ ಕ್ಲೀನ್ ಮಾಡಿ, ದಾಳಿಂಬೆ ಗಿಡದ ಮರೆಯಲ್ಲಿ ನನಗೆ ಕಾಣಿಸೋ ಹಾಗೇನೇ ಬಿಂದಾಸಾಗಿ, 'ಪಾರ್ಕ್ ಜೋಡಿ'ಗಳನ್ನೂ ನಾಚಿಸುವಂತೆ ಪಕ್ಕ ಪಕ್ಕ ಅಂಟಿ ಕೂತು ಏನೋ ಭಾಳಾ ಗಂಭೀರವಾಗಿ, ಈ ಲೋಕಾನೇ ಮರೆತವರಂತೆ ತುಂಬಾ ಹೊತ್ತು ಪಿಸಪಿಸ ಮಾತಾಡಿಕೊಂಡ್ವು,..ಪರಸ್ಪರ ಕೊಕ್ಕಿನಿಂದ ಕಚಗುಳಿ ಮಾಡ್ಕೊಂಡ್ವು.. ಈ ಜೋಡಿಯಿಂದ ತುಂಬಾ ಹೊತ್ತು ದೂರ ಕೂತು ಬೋರ್ ಹೊಡೆಸಿಕೊಂಡ ಇದೇ ಗುಂಪಿನ ಮತ್ತೊಂದು ಹಕ್ಕಿ,.. ತಾನೂ ಹೋಗಿ ಜೋಡಿಹಕ್ಕಿಗಳಿಗೆ ಅಂಟಿ ಕೂತ್ಕೊಳ್ತು. ಪ್ರೀತಿಯನ್ನೇ ಉಸಿರಾಡುತ್ತಿರುವ ಶುದ್ಧ ಮುದ್ದುಗಳಂತೆ ಕಂಡವು ಇವು. ಹೀಗೇ ಪರಸ್ಪರ ಮುದ್ದು ಮಾತಾಡ್ಕೊತಾ ಇದ್ದ ಗುಂಪನ್ನು ನನ್ನ ಕ್ಯಾಮರಾದಲ್ಲಿ ಝೂಂ ಮಾಡಿ ಕೆಲವು ಕ್ಲಿಕ್ ತಕೊಂಡೆ. 'ಹ್ಯಾಪಿ ಫ್ಯಾಮಿಲಿ' ಅಂದ್ರೆ ಇದು ಕಣಪ್ಪ ಅಂದ್ಕೊಂಡು, ಯಾಕೋ ಇವುಗಳ ಪ್ರೈವೆಸಿ ಹಾಳುಮಾಡೋದು ಬೇಡ ಅನಿಸಿ, ಒಳಗೆದ್ದು ಹೋದೆ..


ಚೈನೀಸ್ ವಾಟರ್ ಕಲರ್


ಬುಧವಾರ, ಜೂನ್ 15, 2011

ತಾದಾತ್ಮ್ಯದ ತಾಯಿ ; ಬೆರಗಿನ ಕೂಸು - ವೈ. ಜಯಮ್ಮ




   ನಾನು ಕಾವಾ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಒಮ್ಮೆ ಜಯಮ್ಮನವರ ಮನೆ/ಗ್ಯಾಲರಿಗೆ ಭೇಟಿ ಕೊಟ್ಟ ನೆನಪು. ಮಾಸಲು ಸೀರೆಯ, ಮಂದಕಿವಿಯ, ಈ ಲೋಕ-ಜನ-ಜಂಜಾಟದ ಉಸಾಬರಿಯೆ ಇಲ್ಲದ ನಿರ್ಲಿಪ್ತ ನಿಲುವು. ಕಿವಿ ಕೇಳುತ್ತಿದ್ದಿಲ್ಲವಾದ್ದರಿಂದ ನಮ್ಮಮಾತು, ಅವರ ಉತ್ತರ ಹಿಡಿತಕ್ಕೆ ಸಿಗದ ಬರಿಯ ಶಬ್ದಗಳಂತೆ ಅವರ ಮನೆ ಕಿಟಕಿಯಿಂದ ಜಿಗಿದು ಪಕ್ಕದ ರಸ್ತೆಯ ವಾಹನಗಳ ಚೀರಾಟದೊಂದಿಗೆ ಸೇರಿಹೋಗಿದ್ದವು. ಕಲಾವಿದೆ ಜಯಮ್ಮರನ್ನು ಹೆಚ್ಚು ಹತ್ತಿರದಿಂದ ನೋಡಲು-ಕೇಳಲು-ವಿಸ್ಮಯಗೊಳ್ಳಲು ಸಾಧ್ಯವಾದುದು ಇತ್ತೀಚೆಗೆ.

   ಮೈಸೂರಿನ ಇರ್ವಿನ್ ರಸ್ತೆ ನೆಹರು ಸರ್ಕಲ್ ಸೇರುವಲ್ಲಿ, ಸಿಟಿ ಸೆಂಟ್ರಲ್ ಬ್ಯಾಂಕ್ ಎದುರು ನಿಂತು ಪ್ರಯತ್ನಪೂರ್ವಕ ಕಣ್ಣಾಡಿಸಿದರೆ  'ಜಯಾ ಶಂಖು-ಶುಕ್ತಿ ಕಲಾಕೇಂದ್ರ' ಎಂಬ ಬೋರ್ಡ್ ಕಂಡೀತು. ಅದು ಕಲಾವಿದೆ ವೈ. ಜಯಮ್ಮನವರ ಮನೆ ಮತ್ತು ಗ್ಯಾಲರಿ. ಮೂರುಹೊತ್ತು ಗಿಜಿಗುಡುವ ಆ ರಸ್ತೆಯಿಂದ ಮನೆಯನ್ನು ನೆಪಮಾತ್ರಕ್ಕೆಂಬಂತೆ ವಿಭಜಿಸಿರುವುದು ಜಗುಲಿಯ ತುದಿಯಿಂದ ಬಾಗಿಲೆತ್ತರಕ್ಕೆ ಅಳವಡಿಸಿರುವ ಕಬ್ಬಿಣದ ಜಾಲರಿ. ಅದರ ಮೆಟಲ್ ಗೇಟ್ ತೆರೆದು ಉದ್ದನೆಯ ಹಜಾರಕ್ಕೆ ಬಂದರೆ, ಯಾವುದೋ ಭದ್ರಕೋಟೆಯೊಳಗೆ ಪ್ರವೇಶ ಸಿಕ್ಕಂತೆ. ಮತ್ತೆ, ಸ್ವಲ್ಪ ಗಲಿಬಿಲಿಗೊಳಿಸಲೆಂಬಂತೆ ಎರಡು ಮೂರು ದೊಡ್ಡ ಬಾಗಿಲುಗಳು ಕಾವಲುಗಾರರಂತೆ ನಿಂತಿವೆ. ಅತ್ತ ಬಾಗಿಲು ತಟ್ಟಿ, ಮತ್ತೊಂದು ತುದಿಯ ಕಾಲಿಂಗ್ ಬೆಲ್ ಅದುಮಿ, ಅತ್ತಿತ್ತ ಶತಪಥ ತಿರುಗಿ ಪ್ರತಿಕ್ರಿಯೆ ಬರದಿದ್ದಾಗ ಹೊರಡಲು ತೊಡಗುತ್ತಿದ್ದಂತೆ  ಒಂದು ಬಾಗಿಲು ತೆರೆದುಕೊಳ್ಳುತ್ತದೆ. ಕಿವಿಗೆ ಕೇಳಿಸದಿದ್ದರೂ, ತಪಸ್ಸು ಭಂಗಗೊಳಿಸಿದ್ದಕ್ಕೆ ನಿಮಗೆ ಸಣ್ಣ ಶಾಪವಂತೂ ಗ್ಯಾರಂಟಿ!

  

ಅದು ಜಯಮ್ಮನವರ ಕರ್ಮಭೂಮಿ-ಸ್ಟುಡಿಯೊ. ಒಂದಲ್ಲ ಒಂದು ಕಲಾಕೃತಿ ಮಾತುಪಡೆಯುವ ಹಂತದಲ್ಲಿದ್ದುದು ನಿಮ್ಮ ಬಲವಂತದ ಅತಿಕ್ರಮಣದಿಂದಾಗಿ ಮೌನತಾಳಿ ಕುಳಿತುಬಿಟ್ಟಿರುತ್ತದೆ. ಆ ದೊಡ್ಡ ಹಾಲ್ ಸುತ್ತಲೂ ಮುಗುಳ್ನಗುವ ಮೂಕಾಂಬಿಕೆ, ಕತ್ತಿ ಹಿಡಿದ ರಾವಣ, ರೆಕ್ಕೆ ಕಳೆದುಕೊಂಡಿರುವ ಜಟಾಯು, ಮುಖ ಮುಚ್ಚಿದ ಸೀತೆ, ಗಧಾಯುಧ್ಧದ ಮಲ್ಲರು, ಬಾಯಿತೆರೆದ ಪೂತನ, ಗದೆಹಿಡಿದು ಅತ್ತ ತಿರುಗಿದ ಹನುಮಂತ, ದಿವ್ಯನಗೆ ಬೀರುತ್ತ ನಿಂತಿರುವ ಕಲಾಂ - ಎಲ್ಲರೂ ಜಯಮ್ಮರೊಂದಿಗಿನ ಸಲ್ಲಾಪ ನಿಲ್ಲಿಸಿ ಅಲುಗಾಡದೆ ನಿಂತಿದ್ದಾರೆ. ಇತ್ತ ಉಗ್ರನರಸಿಂಹನಿಗೆ ಇನ್ನೂ ಕೈ-ಬಾಯಿ ಜೋಡಿಸಿಲ್ಲದ್ದರಿಂದ ಆತ ತನ್ನ ದಪ್ಪನೆಯ ದುಂಡು ಶಂಖದ ಕಣ್ಣುಗಳನ್ನು ನಿಮ್ಮತ್ತಲೇ ತಿರುಗಿಸಿ ಹೂಂಕರಿಸುತ್ತ ಕುಳಿತಿದ್ದಾನೆ. ತೊಂದರೆ ಕೊಟ್ಟಿದ್ದಕ್ಕೆ ನೀವು ಅನಿವಾರ್ಯವಾಗಿ ಭಂಡನಗೆಯೊಂದಿಗೆ ಮಾತಾಡುವುದಾದರೂ ಗಟ್ಟಿದನಿಯಲ್ಲಿ ಮಾತ್ರ ಸಂಪರ್ಕ ಸಾಧ್ಯ. ಅವರಿಗೆ ಕಿವಿ ಕೇಳುವುದಿಲ್ಲ. ಬಹುಷಃ ಇದು ನಿಮಗೆ ಸಣ್ಣ ಶಿಕ್ಷೆಯೂ ಆಗಿರಬಹುದು. ಆದರೆ, ಆ ನಿರಂತರಗಲಾಟೆಯ ರಸ್ತೆಗೆ ಓಗೊಡಲಾಗದೆ, ತಮ್ಮ ತದೇಕಚಿತ್ತದ ಚಿಪ್ಪಿನೊಳಗೆ ಅಡಗಲೆಂದೇ ಅವರಿಗೆ ಕಿವುಡುಂಟಾಗಿರಬಹುದು ಅನಿಸದೆ ಇರದು. ಮುಜುಗರದಿಂದಲೆ ದೊಡ್ಡ ದನಿಯಲ್ಲಿ ಮಾತಿಗೆ ತೊಡಗಿದ ನನಗೆ, ನಂತರ ಅವರ ನಿರರ್ಗಳ ಸ್ವಗತಕ್ಕೆ ಸಾಕ್ಷಿಯಾಗಿ ಮಾತ್ರ ಅಲ್ಲಿದ್ದಂತೆ ಅನಿಸಿತ್ತು. ಜಯಮ್ಮನವರ ತಾದಾತ್ಮ್ಯ ಅಂಥದ್ದು. ಅವರ ಭಾವಾತಿರೇಕದ, ಅಮಿತೋತ್ಸಾಹದ, ಭಕ್ತಿಯ ಪರಾಕಾಷ್ಠೆಯಲ್ಲಿ ಈ ಲೋಕದ ಜಿಗುಟು ಕೊಚ್ಚಿಹೋಗಲೇಬೇಕು!

   ಮೈಸೂರು ಒಡೆಯರ ಕಾಲದಲ್ಲಿ ಸ್ಥಾನಮಾನ ಗಳಿಸಿದ್ದ ಮನೆತನ ಇವರದ್ದು. ತಂದೆ ಎಂ.ವೈ.ಸ್ವಾಮಿ  ಸಿನಿಮಾ ಡಿಸ್ಟ್ರಿಬ್ಯೂಟರ್ ಆಗಿದ್ದವರು. ತಾತ ಯಾಲಕ್ಕಾಚಾರ್ ಪ್ರಮುಖ ಕಂಟ್ರಾಕ್ಟರ್ (ಲಲಿತಮಹಲ್, ದೊಡ್ಡ ಗಡಿಯಾರ, ಚಾಮುಂಡಿ ಬೆಟ್ಟದ ಅರಮನೆ ಇತ್ಯಾದಿ ಕಟ್ಟಡಗಳು ಇವರ ನೇತೃತ್ವದಲ್ಲಿ ಆದದ್ದು.) ಆಗಿನ ಅರಮನೆ ಕಲಾವಿದರಲ್ಲಿ ಒಬ್ಬರಾಗಿದ್ದ ಎಸ್.ಎನ್.ಸ್ವಾಮಿ ಜಯಮ್ಮನವರ ಸೋದರಮಾವ. ಈ ಹಿನ್ನೆಲೆಯಲ್ಲಿ ಬೆಳೆದ ಇವರಿಗೆ ಸಹಜವಾಗಿಯೆ ಕಲೆ-ಕುಶಲತೆಯ ಸೃಜನಶೀಲ ಹುಡುಕಾಟದ ನಂಟು. ತಮ್ಮ ಕಲಾಸಕ್ತಿಗೆ ತಾಯಿಯಿಂದ ಪ್ರಮುಖ ಒತ್ತಾಸೆ ಸಿಕ್ಕಿದ್ದಾಗಿ ಧನ್ಯತೆಯಿಂದ ನೆನಪಿಸಿಕೊಳ್ಳುತ್ತಾರೆ.

   ಮೈಸೂರು ವಿ.ವಿ.ಯಲ್ಲಿ ಸೋಷಿಯಾಲಜಿ ರ್ಯಾಂಕ್ ವಿದ್ಯಾರ್ಥಿಯಾಗಿದ್ದ ಇವರಿಗೆ ಸಿ.ಟಿ.ಐ. ನಲ್ಲಿ (ಈಗಿನ ಕಾವಾ)  ಪ್ರವೇಶ ದೊರಕಿತ್ತಾದರೂ ವೇಳೆ ಹೊಂದಿಸಲಾಗದೆ ಕಲಾವಿದ್ಯಾರ್ಥಿಯಾಗಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಜೆ.ಎಸ್.ಎಸ್.ನ ಡಿ.ಎಡ್. ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ ಜಯಮ್ಮನವರಿಗೆ ತಮ್ಮ ನೆಚ್ಚಿನ ಕಲಾಕೃತಿ ರಚನೆಯಲ್ಲಿ ಸಂಪೂರ್ಣ ತೊಡಗಿಕೊಳ್ಳಲು ಸಮಯ ಸಿಕ್ಕಿದ್ದು ನಿವೃತ್ತಿಯ ನಂತರವೆ. ಅವರೇ ಹೇಳುವಂತೆ ನಿದ್ದೆ-ಊಟ-ಜನ-ಗೌಜು ಎಲ್ಲವನ್ನೂ ಮರೆಸಿಬಿಡುವಂಥ ನಂಟು ಕಲೆಯೊಂದಿಗೆ  ಅವರದ್ದು.

  

'ಪೂತನಾ ಸಂಹಾರ'

'ಸಿಂಹಿಕೆ' (ವಿವರ)

ಅಪರೂಪದ ಮಾಧ್ಯಮವಾದ ಶಂಖ-ಚಿಪ್ಪುಗಳನ್ನು ಬಳಸಿ ಕೃತಿ ರಚಿಸುವಂತೆ ತಮ್ಮ ತಾಯಿಯೆ ಮಾರ್ಗದರ್ಶನ ಮಾಡಿದುದಾಗಿ ಹೇಳುತ್ತಾರೆ. ಶಂಖ ಮತ್ತು ಚಿಪ್ಪುಗಳ ವಿವಿಧ ಅಳತೆ, ಮೈವಳಿಕೆ, ಬಣ್ಣಗಳ ಪ್ರಪಂಚದಲ್ಲೇ ತಮ್ಮ ಕಲ್ಪನಾಲೋಕವನ್ನು ಹರಡಿಕೊಂಡು ಕೂರುವ ಜಯಮ್ಮ ಕನ್ನಡ ಸಾಹಿತ್ಯ, ಪುರಾಣ, ಉಪಕಥೆಗಳಲ್ಲಿ ಬರುವ ದೇವ-ದಾನವರನ್ನು ಶಂಖ ಚಿಪ್ಪುಗಳ ವಿಶಿಷ್ಟ ಮೈವಳಿಕೆಗಳಲ್ಲಿ ಮೂರ್ತಗೊಳಿಸುತ್ತಾರೆ. ಚಾಮುಂಡೇಶ್ವರಿ, ಸರಸ್ವತಿ, ಹನುಮಂತ, ಶೇಷಶಾಯಿ ವಿಷ್ಣು, ಭೀಮ-ದುರ್ಯೋಧನರ ಗಧಾಯುಧ್ಧ, ರುಂಡಮಾಲಿನಿ, ಗಜೇಂದ್ರ ಮೋಕ್ಷ, ಪೂತನಾ ಸಂಹಾರ, ಸಿಂಹಿಕೆ,... ಹೀಗೆ ಎಲ್ಲವೂ ಇವರ ಶಂಖು-ಶುಕ್ತಿಯ(ಚಿಪ್ಪು) ವಿಶಿಷ್ಟ ಕೃತಿಗಳು. ರಾಮಾಯಣದ ಒಕ್ಕಣ್ಣ 'ಕಬಂಧ' ಇಲ್ಲಿ ಹಸಿರು ಮಿಶ್ರಿತ ಕಪ್ಪುಚಿಪ್ಪುಗಳಿಂದ ಒಡಮೂಡಿದ್ದಾನೆ. ಸುಮಾರು ನಾಲ್ಕು ಅಡಿ ಎತ್ತರದ ಅಮೂರ್ತ ದೇಹ ಮತ್ತು ಏಳು ಅಡಿ ಉದ್ದದ ಕೈಗಳು ಈತನದ್ದು. ಚಾಮುಂಡೇಶ್ವರಿ, ಗಧಾಯುಧ್ಧ, ಸೀತಾಪಹರಣ ಮುಂತಾದ ಹಲವು ಬೃಹದ್ಗಾತ್ರದ ಕೃತಿಗಳು ಜಯಮ್ಮನವರಿಂದ ರಚಿತಗೊಂಡಿವೆ.

 
'ಗದಾಯುಧ್ಧ'

'ಕಬಂಧ'

ಶಂಖ ಮತ್ತು ಚಿಪ್ಪುಗಳ ಒರಟು ಮೈವಳಿಕೆ, ಅಪರೂಪದ ವರ್ಣಸಂಯೋಜನೆ ಮತ್ತು ವಿಚಿತ್ರ ಡಿಸೈನ್ ಗಳಿಗೆ ತಕ್ಕ ಪಾತ್ರ ಸೃಷ್ಟಿ ಮಾಡುತ್ತಾರೆ ಜಯಮ್ಮ. ಅದರಿಂದಲೋ ಏನೊ, ಇವರು ಆಯ್ದುಕೊಂಡ ಬಹುಪಾಲು ಪಾತ್ರಗಳು ರಾಕ್ಷಸ ಗಣಗಳದ್ದು! ಬಹುಷಃ ತಮ್ಮ ಅಭಿವ್ಯಕ್ತಿಗೆ ಹೆಚ್ಚು ಸಶಕ್ತ 'ಧ್ವನಿ' ಇದರಿಂದ ದೊರಕಿರಬಹುದು. ದೊಡ್ಡ ದನಿಯಲ್ಲಿ ಚೀತ್ಕರಿಸುವ, ಒಮ್ಮೆಗೇ ಸ್ಫೋಟಗೊಡಂತೆ ಕಾಣುವ ಈ ಕೃತಿಗಳು ಕಲಾವಿದೆಯ ಗಾಢಾನುಭವದ ತೀಕ್ಷ್ಣ ಅಭಿವ್ಯಕ್ತಿಯಂತೆ ಕಾಣುತ್ತವೆ. ಆಂತೆಯೆ ಪ್ರತಿಯೊಂದು ವಿವರವೂ ಸಂಪೂರ್ಣ ಮಗ್ನತೆಯಿಂದ ಸಾಕ್ಷಾತ್ಕರಿಸಿಕೊಂಡಂತಿದ್ದು ಒಟ್ಟಾರೆ ಕಲಾಕೃತಿ ನೋಡುಗನಲ್ಲಿ ಬಹುಕಾಲದವರೆಗೆ ಪ್ರತಿಧ್ವನಿಯ ತರಂಗಗಳನ್ನು ಹೊಮ್ಮಿಸುವಷ್ಟು ಶಕ್ತವಾಗಿವೆ.

   ಪೌರಾಣಿಕ, ಸಾಹಿತ್ಯಿಕ ಪಾತ್ರಗಳಲ್ಲದೆ ಮಾರ್ಷಲ್ ಕಾರ್ಯಪ್ಪ, ರಾಷ್ಟ್ರಪತಿ ಅಬ್ದುಲ್ ಕಲಾಂ ಮುಂತಾದ ತಮ್ಮ ನೆಚ್ಚಿನ ವ್ಯಕ್ತಿಗಳನ್ನೂ ರಚಿಸಿದ್ದಾರೆ ಜಯಮ್ಮ. ಗಾಯಕ ಜೇಸುದಾಸ್ ಕೂಡ ಹಾಡಲಿದ್ದಾರೆ ಇಲ್ಲಿ. ಸದ್ಯಕ್ಕೆ ಹಂಪಿಯ 'ಉಗ್ರನರಸಿಂಹ' ಇವರ ಸ್ಟುಡಿಯೊದಲ್ಲಿ ಅವತರಿಸುತ್ತಿದ್ದಾನೆ. ಮೂವತ್ತು ವರ್ಷಗಳ ಕಲಾನುಭವದಿಂದ ಸಾಕಷ್ಟು ಪರಿಪಕ್ವಗೊಂಡಂತೆ ಕಾಣುವ ಇವರ  ನರಸಿಂಹ ಒಮ್ಮೆ ಮನಸಾರೆ 'ಘರ್ಜಿಸಲು' ತವಕಿಸುತ್ತಿದ್ದಾನೆ!

  
'ಕೊಲ್ಲೂರು ಮೂಕಾಂಬಿಕೆ'

" ಎಷ್ಟ್ ಛೆನಾಗಿದೆ ನೋಡಮ್ಮ,... ಇದ್ ಹೆಂಗ್ ಬಂತು...ನಾನೇ ಮಾಡಿದ್ದಾ ಇದು? ಅಂತ ನಂಗೇ ಆಶ್ಚರ್ಯ ಆಗುತ್ತೆ ಕಣಮ್ಮ!" ಅನ್ನುತ್ತ ಕೆನ್ನೆಯ ಮೇಲೆ ಕೈಯಿಟ್ಟು ಪುಟ್ಟ ಮಗುವಿನಂತೆ ಬೆರಗುಗಣ್ಣು ಬಿಡುತ್ತ ಉದ್ಗರಿಸುತ್ತಾರೆ ಜಯಮ್ಮ. ಕೃತಿರಚನೆಯ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಂಡು ಮಲಗಿದ್ದಾಗ ಕನಸಿನಲ್ಲಿ ಒಂದು ಬಿಳೀಕೈ ತಾನಾಗೇ ಚಿಪ್ಪುಗಳನ್ನು ಜೋಡಿಸಿ ತೋರಿಸಿತಂತೆ. ತಕ್ಷಣ ಎದ್ದು, ಕನಸಿನಲ್ಲಿ ಕಂಡಂತೆಯೆ ಜೋಡಿಸಿ ಅಂಟಿಸಿಟ್ಟರಂತೆ. ಅದು ಅವರ ಮೊದಲ ಮಾಸ್ಟರ್ ಪೀಸ್- 'ಬೆರಳ್ಗೆ ಕೊರಳ್'(ಕುವೆಂಪುರವರಿಂದ ಪ್ರೇರಿತ).

   ಎಪ್ಪತ್ತೆರಡರ ಹರೆಯದ ಜಯಮ್ಮ ತಾವು ಅವಿವಾಹಿತರಾಗಿಯೆ ಉಳಿದುದಕ್ಕೆ ತಮ್ಮ ಹತ್ತಿಕ್ಕಲಾಗದ ಕಲಾಪ್ರೇಮವೇ ಕಾರಣ ಎನ್ನುತ್ತಾರೆ. ತಮ್ಮ ಜೀವನಶೈಲಿಗೆ, ಕಲೆಯ ತುಡಿತಕ್ಕೆ ಹೊಂದುವಾತ ಸಿಗದಿದ್ದರಿಂದ ಹೀಗೆಯೆ ಉಳಿದೆ ಎನ್ನುವ  ಇವರು, ಮದುವೆಯ ಬಂಧನಕ್ಕೆ ಸಿಲುಕದಿರುವುದು ತಮ್ಮ ಅದೃಷ್ಟ ಎಂದು ನಿಟ್ಟುಸಿರುಬಿಡುತ್ತಾರೆ. ಅಕ್ಕ ಸರೋಜಾರವರ ಸಂಸಾರದೊಂದಿಗೆ ತಾವೂ ನೆಲೆಸಿದ್ದಾರೆ. ಸರೋಜಕ್ಕನೇ ಅಮ್ಮ, ಗೆಳತಿ, ತಂಗಿಯ ಕಲಾಕೃತಿಯ ಮೊದಲ ವೀಕ್ಷಕಿ, ವಿಮರ್ಶಕಿ. ಈ ಲೋಕದ ಸಿಹಿಪಾಲೊಂದು ಇವರೊಂದಿಗೇ ನಿರಂತರ ವಾಗಿ ಹೆಪ್ಪುಗಟ್ಟಿರುವುದೇನೋ ಎಂಬಂತೆ ಈ ಅಕ್ಕತಂಗಿಯರು ತಮ್ಮಷ್ಟಕ್ಕೆ ತಾವು ತಮ್ಮದೇ ಭಾವಲಹರಿಯಲ್ಲಿ ಹರಟುತ್ತಾರೆ. ಜಯಮ್ಮನವರ ಕಲಾಕೃತಿಗಳಿಗೆ ಶಾಶ್ವತ ನೆಲೆ ಕಲ್ಪಿಸುವ ಬಗೆಗಿನ ತಳಮಳವೂ ಇವರಲ್ಲಿದೆ.ಕೆಲವು ಕೃತಿಗಳನ್ನು ತಮ್ಮ ಸಂಗ್ರಹಕ್ಕೆ ಪಡೆಯುವುದಾಗಿ ಹೇಳಿದ್ದ ಧರ್ಮಸ್ಥಳದ ವೀರೇಂದ್ರ ಹೆಗಡೆಯವರನ್ನು ಸಾಕಷ್ಟು ಬಾರಿ ಸಂಪರ್ಕಿಸಿದರೂ ಯಾವುದೆ ಪ್ರತಿಕ್ರಿಯೆ ದೊರೆತಿಲ್ಲ. ಇನ್ನು ಮೈಸೂರಿನಲ್ಲೆ ಶಾಶ್ವತ ನೆಲೆ ಕಲ್ಪಿಸುವುದು ಕಲಾಸಕ್ತರ ನೆರವಿನಿಂದ ಮಾತ್ರ ಸಾಧ್ಯವಾಗಬಲ್ಲದು.

 

ಸರೋಜಕ್ಕನೊಂದಿಗೆ ಜಯಮ್ಮನವರು

ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಬಹುಮಾನ ಗಳಿಸಿರುವ ಇವರ ಕೆಲವು ಕಲಾಕೃತಿಗಳು ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರದರ್ಶನಗೊಂಡು ಮೆಚ್ಚುಗೆಗಳಿಸಿವೆ. ಅಲ್ಲದೆ, ಇವರ 'ಸಿಂಹಿಕೆ' ಮತ್ತು 'ಪೂತನಾ ಸಂಹಾರ'  ಲಂಡನ್ ಮತ್ತು ಚೆನ್ನೈ ಪ್ರದರ್ಶನಕ್ಕೆ ಪ್ರಯಾಣ ಬೆಳೆಸಿವೆ.

".. ಕಾಳಿ,..ಶಿರ್ಸಿ ಕಾಳಿ ಮಾಡ್ಬೇಕು, ತುಂಬ ಚೆನಾಗಿದಾಳೆ ಅವ್ಳು..." ಅನ್ನುವಾಗ ಮೈಮೇಲೆ ಕಾಳಿಯನ್ನೇ ಆವಾಹಿಸಿಕೊಂಡಂತೆ ಒಂದುಕ್ಷಣ ಆವೇಶಗೊಳ್ಳುತ್ತಾರೆ. "ಇನ್ನೂ ಎಷ್ಟೆಲ್ಲಾ ಮಾಡ್ಬೇಕು ಕಣಮ್ಮ,.. ನಂಗೆ ಇನ್ನೂ ಜಾಸ್ತಿ ಆಯಸ್ಸು ಬೇಕಿತ್ತು, ಇದನ್ನೆಲ್ಲ ತುಂಬ ಲೇಟಾಗ್ ಶುರುಮಾಡ್ದೆ.." ಎನ್ನುತ್ತ ಕೈಕೈ ಹೊಸಕಿಕೊಳ್ಳುತ್ತ ತಮ್ಮಷ್ಟಕ್ಕೆ ಗೊಣಗಿಕೊಳ್ಳುವಾಗ ನನಗೆ ನಿಜಕ್ಕು ಸಮಾಧಾನ ಮಾಡುವ ವಿಧಾನ ತಿಳಿಯಲಿಲ್ಲ. ಸ್ವಗತದ ಲಹರಿಯಲ್ಲಿದ್ದ ಅವರ ತಣಿಯದ ಹಸಿವಿಗೆ, ದಣಿಯದ ಚೇತನಕ್ಕೆ, ಅಗಾಧ ಬೆರಗು ಮತ್ತು ಶುದ್ಧ ಸಂಭ್ರಮಕ್ಕೆ ಶಿರಬಾಗುವುದಷ್ಟೆ ನನಗೆ ಸಾಧ್ಯವಾದುದು.

    ನೂರು ವರ್ಷ ಹಳೆಯದಾದ ಇವರ ದೊಡ್ಡ ಮನೆಯ ಮಹಡಿಯ ಹಜಾರದಲ್ಲಿ ಅಷ್ಟೂ ಕೃತಿಪಾತ್ರಗಳು ಒಮ್ಮೆಗೆ ಮಾತಾಡತೊಡಗುತ್ತವೆ. ಕೆಳಗಿನ  ತಮ್ಮ ಸ್ಟುಡಿಯೊದಲ್ಲೆ  ಜಯಮ್ಮನವರ ಎಂದಿನ ವಾಸ್ತವ್ಯ. ನೆಚ್ಚಿನ ಕಲಾಕೃತಿಗಳ ನಡುವೆ ಸಂಭ್ರಮ, ತಳಮಳ, ಉತ್ಸಾಹ, ಕನಸುಗಳನ್ನು ಹೊದ್ದ ಜಯಮ್ಮ ಒಮ್ಮೆ ಮಹಾಯೋಗಿನಿಯಂತೆ, ಮತ್ತೊಮ್ಮೆ ಶುಧ್ಧ ಬೆರಗಿನ ಕೂಸಿನಂತೆ, ಮಗದೊಮ್ಮೆ ಯಾವುದೋ ಅಲೌಕಿಕ ರುಚಿ ಚಪ್ಪರಿಸುವ ಸಂತೃಪ್ತಿಯ ಭಾವದಲ್ಲಿ ತಲೆಯಾಡಿಸುತ್ತ ಪುಳಕಗೊಂಡಂತೆ ಕಣ್ಮುಚ್ಚಿ ಕುಳಿತುಬಿಡುತ್ತಾರೆ.




ಜಯಮ್ಮನವರ ವಿಳಾಸ :

1397, 'ಜಯಾ ಶಂಖು-ಶುಕ್ತಿ ಕಲಾಕೇಂದ್ರ'
ಎಸ್.ಬಿ.ಎಂ. ಎದುರು, ನೆಹರು ವೃತ್ತ
ಇರ್ವಿನ್ ರಸ್ತೆ, ಮೈಸೂರು.

ದೂರವಾಣಿ : 0821-2447181






( ಈ ತಿಂಗಳ 'ನಮ್ಮ ಮಾನಸ' ದಲ್ಲಿ ಪ್ರಕಟಿತ. -ಇಳಾ ಪ್ರಕಾಶನ-)

ಬುಧವಾರ, ಮಾರ್ಚ್ 16, 2011

ಕಲಾಮಾಧ್ಯಮದಲ್ಲಿ ಸ್ತ್ರೀವಾದಿ ಚಳುವಳಿ : ಸಂಕ್ಷಿಪ್ತ ನೋಟ

kathe kolwiz- 'self portrait'


ತನ್ನ ವಿಶಿಷ್ಟ-ವಿಸ್ಮಯಕರ ಶಾರೀರಿಕ ಗುಣಲಕ್ಷಣ ಮತ್ತು ಸೂಕ್ಷ್ಮ ಮನಸ್ಸು ಹೆಣ್ಣಿನ ಗಾಧ ಚೈತನ್ಯಕ್ಕೆ ಕಾರಣವಾದಂತೆಯೇ ದಮನಕ್ಕೆ ಒಳಗಾಗಲೂ ಕಾರಣವಾದುದು ವಿಪರ್ಯಾಸ. ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ವಂಚಿತವಾಗಿರುವ ಶೋಷಿತವರ್ಗದಲ್ಲಿ ಮಹಿಳೆಗೆ ಅಗ್ರಸ್ಥಾನ. ಇಲ್ಲಿ ಜಾತಿ, ವರ್ಗ, ದೇಶ-ಕಾಲ ಎಲ್ಲವನ್ನೂ ಮೀರಿದ ಏಕತೆಯಿದೆ !

ಸ್ವಭಾವತಃ ಮಾನಸಿಕ ಮತ್ತು ದೈಹಿಕ ಸಂವೇದನೆಗಳಿಗೆ ಸೂಕ್ಷ್ಮವಾಗಿ ಸ್ಪಂದಿಸುವ ಮಹಿಳೆ ಇಂದು ತನ್ನ ಭಾವಾಭಿವ್ಯಕ್ತಿಗಾಗಿ ಹಲವು ಸೃಜನಶೀಲಮಾಧ್ಯಮಗಳ ಮೊರೆಹೋಗಿದ್ದಾಳೆ. ಇಪ್ಪತ್ತನೆ ಶತಮಾನದ ಅರವತ್ತರ ದಶಕಗಳಲ್ಲಿ ಪಾಶ್ಚಾತ್ಯ ಕಲಾಕ್ಷೇತ್ರದಲ್ಲಿ ರೂಪುಗೊಂಡ ಸ್ತ್ರೀವಾದಿ ನೆಲೆಯ ಕಲಾಚಳುವಳಿ, ಪ್ರಮುಖ ಮಹಿಳಾ ಕಲಾವಿದರು ತ್ತು ಅವರ ಕಲಾಕೃತಿಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಎರಡನೇ ಮಹಾಯುದ್ಧದ (1939-1945) ನಂತರ ಸಾಮಾಜಿಕ ವಲಯದಲ್ಲಿ ಕೆಲಸಗಳ ಒತ್ತಡ ಹೆಚ್ಚಾದುದರಿಂದ ಮನೆಯ ಕೆಲಸಗಳಿಗೆ ಸೀಮಿತವಾಗಿದ್ದ ಮಹಿಳೆಯನ್ನು ಪುರುಷವರ್ಗವೇ ಸಾಮಾಜಿಕ ಹೊರವಲಯದಲ್ಲಿ ಕಾರ್ಯನಿರ್ವಹಣೆಗೆ ಪ್ರೇರೇಪಿಸಿತು. ಇದರಿಂದ ಹೊಸ ಸ್ವಾತಂತ್ರ್ಯವನ್ನು ಅನುಭವಿಸಿದ ಮಹಿಳೆ ಎಚ್ಚೆತ್ತುಕೊಂಡು, ಸಂಘಟನೆಗಳ ಮೂಲಕ ಲಿಂಗತಾರತಮ್ಯದ ವಿರುಧ್ಧ ದನಿ ಎತ್ತಲು ಸಾಧ್ಯವಾಯಿತು. ಕ್ರಿ. . 1960 ದಶಕಗಳಲ್ಲಿ ರೂಪಿತಗೊಂಡ ಸ್ತ್ರೀವಾದಿ ಕಲಾಚಳುವಳಿಯು 70 ದಶಕಗಳಲ್ಲಿ ಹೆಚ್ಚು ಜನಜನಿತವಾಯಿತು. ಮುಖ್ಯವಾಗಿ ಅಮೆರಿಕ, ಫ್ರಾನ್ಸ್, ಬ್ರಿಟನ್, ಜರ್ಮನಿ ದೇಶಗಳಲ್ಲಿ ಸ್ತ್ರೀಪರ ಹೆಚ್ಚು ಗಟ್ಟಿದನಿ ಹುಟ್ಟಿತು. 1971 ರಲ್ಲಿ ಲಿಂಡಾ ನೊಚ್ಲಿನ್ ಎಂಬ ಅಮೆರಿಕದ ಕಲಾವಿಮರ್ಶಕಿ ತನ್ನ 'Why have there been no great women artists?' ಎಂಬ ಲೇಖನದ ಮೂಲಕ ಕಲಾವಲಯದಲ್ಲಿ ಮಹಿಳೆಯನ್ನು ಮೂಲೆಗುಂಪು ಮಾಡಿರುವುದರ ಕಡೆಗೆ ಗಮನಸೆಳೆದಳು. ನಂತರದ ದಿನಗಳಲ್ಲಿ ಹಿಳಾ ಕಲಾವಿದರನ್ನು ಗುರುತಿಸುವ ಕೆಲಸ ಹೆಚ್ಚು ನಿಯೋಜಿತವಾಗಿ ನಡೆದುಬಂದಿದೆ.

'ಸೌಂದರ್ಯ'ಕ್ಕೆ ಪರ್ಯಾಯವೆಂಬಂತೆ 'ಸ್ತ್ರೀ ನಗ್ನತೆ' ಕಲಾಮಾಧ್ಯಮದಲ್ಲಿ ಬಿಂಬಿಸಲ್ಪಟ್ಟಿದೆ. ಐಷಾರಾಮಿ ಭೋಗಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸಲ್ಪಟ್ಟು, ಮಾನಸಿಕ/ಲೈಂಗಿಕ ಶೋಷಣೆಗೆ ಒಳಗಾಗುತ್ತ ಬಂದ ಮಹಿಳಾವರ್ಗವನ್ನು ಮೊದಲಿನಿಂದಲೂ ಕಲಾ ಅಧ್ಯಯನ, ಕಲಾಪ್ರದರ್ಶನ / ಮಾರುಕಟ್ಟೆ ವ್ಯವಸ್ಥೆಯಿಂದ ಹೊರಗಿಡುತ್ತ ಬರಲಾಗಿತ್ತು.
ಕಲಾಕ್ಷೇತ್ರದಲ್ಲಿ ಸ್ತ್ರೀವಾದಿ ಅಲೆ ಏಳುವುದಕ್ಕೆ ಮುಂಚೆ ಇದ್ದೂ ಇಲ್ಲದಂತೆ ಹಲವು ಮಹಿಳಾ ಕಲಾವಿದರು ಆಗಿಹೋಗಿದ್ದಾರೆ. ಹತ್ತೊಂಬತ್ತನೆ ಶತಮಾನದ ಬರ್ತ್ ಮಾರಿಸಾತ್ (Berth Morisot), ಮೇರಿ ಕಸಾತ್, ಗ್ವೆನ್ ಜಾನ್ ಥರದ ಕೆಲವು ಮುಂಚೂಣಿಯಲ್ಲಿದ್ದ ಬೆರಳೆಣಿಕೆಯ ಕಲಾವಿದೆಯರನ್ನು ಹೆಸರಿಸಬಹುದು. ಹೊರಗಿನ ಪ್ರಭಾವಗಳನ್ನು ಹೊರತುಪಡಿಸಿ ಇವರೆಲ್ಲರ ಚಿತ್ರಗಳಲ್ಲಿರುವ ಸಾಮಾನ್ಯ ಅಂಶವೆಂದರೆ - 'ಮೌನ'

Mary Cassatt - 'Mother and Child'
ಮಹಿಳೆಯರ ಖಾಸಗಿ ಬದುಕಿನ ಕ್ಷಣಗಳಲ್ಲಿ ಅಡಗಿದ ಮೌನ ಇವರೆಲ್ಲರ ಕೃತಿಗಳಲ್ಲಿ ಮೂಡಿದೆ. ಹಾಗೆಯೇ ಇವರ ಚಿತ್ರಗಳ ರೂಪದರ್ಶಿಯೂ ಮಹಿಳೆಯೇ ! ಓದಿನಲ್ಲಿ ತಲ್ಲೀನೆಯಾಗಿರುವ ಹುಡುಗಿ/ಮಹಿಳೆ, ಉದ್ಯಾನವನದಲ್ಲಿ ತನ್ನನ್ನು ತಾನು ಮರೆತು ಕುಳಿತ ಮಹಿಳೆ, ಮಕ್ಕಳ ಪಾಲನೆಯಲ್ಲಿ ತೊಡಗಿರುವ ಮಹಿಳೆ, ತನ್ನಷ್ಟಕ್ಕೆ ತಾನು ಗೃಹಕಾರ್ಯಗಳಲ್ಲಿ ಮಗ್ನಳಾಗಿರುವ, ಬಟ್ಟೆ ಹೊಲಿಯುವ ಮಹಿಳೆ - ಇತ್ಯಾದಿ ಎಲ್ಲಾ ಚಿತ್ರಗಳಲ್ಲೂ ಗಾಢವಾದ ಮೌನ ಅಡಗಿ ಕುಳಿತಂತೆ ಭಾಸವಾಗುತ್ತದೆ. ಸ್ಫೋಟಗೊಳ್ಳದ ಯಾವುದೋ ಅವ್ಯಕ್ತ ಮಗ್ನತೆ ಎಲ್ಲಾ ಚಿತ್ರಗಳ ಜೀವಾಳ. ಗಾಢ ನಿಶ್ಯಬ್ದದ ಪರಿಧಿಯೊಳಗೇ ತನ್ನ ಲೋಕ ಕಟ್ಟಿಕೊಳ್ಳುವ ಮಹಿಳೆಯ ತಾಳ್ಮೆ ಮತ್ತು ಗಾಢಸ್ಮೃತಿ ನೋಡುಗರನ್ನು ಆವರಿಸಿಕೊಳ್ಳುತ್ತದೆ.

Gwen John - 'Nude Girl'
ಗ್ವೆನ್ ಜಾನಳ ಚಿತ್ರಗಳಲ್ಲಿ ಕಂಡುಬರುವ ಅಷ್ಟೂ ಸ್ತ್ರೀಪಾತ್ರಗಳು ಪೇಲವವಾಗಿ, ಬತ್ತಿಹೋದಂತಿರುವ ದೇಹ-ಮನಸ್ಸುಗಳನ್ನು ಬಿಂಬಿಸುತ್ತವೆ. ಆಕೆಯ ಎಲ್ಲಾ ಕೃತಿಗಳು ತಣ್ಣನೆಯ, ಒಳಹರಿವಿನ ದುಗುಡ ತುಂಬಿಕೊಂಡಂತೆ ಕಾಣುತ್ತವೆ. ಸ್ವಲ್ಪ ಸಹಾನುಭೂತಿ ತೋರಿದರೂ ಧುಮ್ಮಿಕ್ಕಿ ಹರಿದುಬಿಡಲು ಹಾತೊರೆಯುತ್ತಿರುವ ಅದುಮಿಟ್ಟ ಬಿಕ್ಕು ಅದು. ಅಂತರ್ಮುಖಿತ್ವದ ಗಾಢಛಾಯೆ ಪ್ರತಿಯೊಬ್ಬ ಕಲಾವಿದೆಯ ಕಲಾಕೃತಿಯಲ್ಲಿ ಕಂಡುಬರುವ ಸಾಮಾನ್ಯ ಅಂಶ. ಮಹಿಳಾ ಕಲಾವಿದರಿಂದ ಚಿತ್ರಿತಗೊಂಡ 'ನಗ್ನತೆ' ಲೈಂಗಿಕ ಶೋಷಣೆಯ ವಿರುಧ್ಧ ಎತ್ತಿದ ದನಿಯಂತೆ ಮುಟ್ಟುತ್ತದೆಯೇ ಹೊರತು ಚಪಲ ಹೆಚ್ಚಿಸುವ, ಆಸ್ವಾದ್ಯಗೊಳ್ಳುವ, ತೋರಿಕೆಯ ಬಾಹ್ಯಸೌಂರ್ಯದ ಹಗುರ ಅಭಿವ್ಯಕ್ತಿಯಂತಲ್ಲ.

ಸ್ತ್ರೀ ಮತ್ತು ಪುರುಷರ ದೃಷ್ಟಿಗ್ರಹಣದ ಮೂಲವ್ಯತ್ಯಾಸದ ಕುರಿತಂತೆ ಮಾರ್ಕ್ಸ್ ವಾದಿ ವಿಮರ್ಶಕ ಜಾನ್ ಬರ್ಜರ್ ತನ್ನ 'Ways of Seeing' ಎಂಬ ಪುಸ್ತಕದಲ್ಲಿ ಹೀಗೆ ಹೇಳುತ್ತಾನೆ : "Men look at women; women watch themselves being looked at" (ಪುರುಷರು ಸ್ತ್ರೀಯರನ್ನು ನೋಡುತ್ತಾರೆ, ಸ್ತ್ರೀಯರು ನೋಡಲ್ಪಡುತ್ತಿರುವ ತಮ್ಮನ್ನೆ ಗಮನಿಸಿಕೊಳ್ಳುತ್ತಾರೆ.)
ಸ್ತ್ರೀದೇಹ ಮತ್ತು ಲೈಂಗಿಕ ಅವಯವಗಳ ಸಾಂಕೇತಿಕ ಅಭಿವ್ಯಕ್ತಿಯ ಮೂಲಕ ವಿಶಿಷ್ಟ ಕಲಾಕೃತಿಗಳನ್ನು ರಚಿಸಿದಾಕೆ ಅಮೆರಿಕಾದ ಜಾರ್ಜಿಯಾ ಓಕೀಫ್. ಹೂವಿನ ಸರಣಿ ಚಿತ್ರಗಳು ಈಕೆಯ ದಿಟ್ಟ ಅಭಿವ್ಯಕ್ತಿಯ ವಸ್ತುವಿಷಯವಾಗಿದೆ. ದಮನಿತ ಭಾವನೆಗಳಿಗೆ ಬಣ್ಣಕೊಟ್ಟ ಗ್ವೆನ್ ಜಾನ್, ಕಸಾತ್, ಮಾರಿಸಾತ್ ರಿಗಿಂತ ಭಿನ್ನವಾಗಿ ಕಾಣಿಸುತ್ತಾಳೆ ಈಕೆ. ಕುದುರೆಯ ತಲೆಬುರುಡೆಯೊಂದಿಗೆ ಇರಿಸಿದ ಹೂವಿನ ಸರಣಿಚಿತ್ರಗಳು ಲೈಂಗಿಕತೆಗೆ ಹೊಸ ಆಯಾಮವನ್ನು ಒದಗಿಸುತ್ತವೆ. (ಕುದುರೆ ಮತ್ತು ಹೂವು - ಎರಡೂ ಲೈಂಗಿಕ ಸಂಕೇತಗಳು). ಭಾರತದ 'ತಾಂತ್ರಿಕ' ಕಲೆಯನ್ನೂ ಈಕೆಯ ಚಿತ್ರಗಳು ನೆನಪಿಗೆ ತರುತ್ತವೆ.

Georgia-o-Keefe- 'Flower Series'
ಜರ್ಮನಿಯ ಕ್ಯಾಥೆ ಕೋಲ್ವಿಝ್ ಮತ್ತೊಬ್ಬ ಪ್ರೌಢ ಕಲಾವಿದೆ. ಮೊದಲ ಮಹಾಯುದ್ಧದಲ್ಲಿ ತನ್ನ ಮಗನನ್ನು ಕಳೆದುಕೊಳ್ಳುವ ಈಕೆ ತನ್ನ ಚಿತ್ರಸರಣಿಯಲ್ಲಿ ಹೆಪ್ಪುಗಟ್ಟಿದ ನಿರಾಸೆ, ಭಯ, ದುಃಖವನ್ನು ಕಪ್ಪು-ಬಿಳುಪಿನ ಸಶಕ್ತ ಮಾಧ್ಯಮದಲ್ಲಿ ಅಭಿವ್ಯಕ್ತಿಸಿದ್ದಾಳೆ. ವುಡ್ ಕಟಿಂಗ್, ಎಚಿಂಗ್, ಲಿಥೋಗ್ರಾಫ್ ಮೂಲಕ ಭಾರವಾದ ಮತ್ತು ಅಷ್ಟೇ ಧೃಢವಾದ ದೃಶ್ಯರೂಪಣ ಸೃಷ್ಟಿಸಿದ್ದಾಳೆ. ಶಿಲ್ಪಮಾಧ್ಯಮವೂ ಈಕೆಯ ಅಭಿವ್ಯಕ್ತಿಗೆ ಹೆಗಲುಕೊಟ್ಟಿದೆ. ಅತೀ ಶಕ್ತವಾಗಿ ಸಂವಹಿಸುವ ಆಕೆಯ ದುಃಖದ ಭಾರ ಇಡೀ ಸ್ತ್ರೀವರ್ಗದ ಪ್ರಾತಿನಿಧಿಕ ಭಾವವಾಗಿ ಉಳಿಯುತ್ತದೆ. ಒಟ್ಟಾರೆ ಸ್ತ್ರೀಸಂವೇದನೆಗೆ ಸಾಮೂಹಿಕ ನೆಲೆಗಟ್ಟಿನ ಚೌಕಟ್ಟಿರುವಂತೆ ಕಂಡುಬರುತ್ತದೆ.
Kathe kolwiz-  'Death seizing a woman'
1960-70 ದಶಕಗಳಲ್ಲಿ ಮತ್ತು ನಂತರದ ದಿನಗಳಲ್ಲಿ ಕಂಡುಬಂದ ಸ್ತ್ರೀವಾದಿ ಅಲೆಯ ಮುಂಚೂಣಿಯ ಪ್ರಮುಖ ಕಲಾವಿದರಲ್ಲಿ ಬಾರ್ಬರಾ ಕ್ರೂಗರ್, ಪೌಲಾ ರೆಗೊ, ಗೆರಿಲ್ಲ ಗರ್ಲ್ಸ್ (ಸಮೂಹ), ಜೂಡಿ ಶಿಕಾಗೊ, ಇವಾ ಹೆಸ್ ಮುಂತಾದವರನ್ನು ಹೆಸರಿಸಬಹುದು.

ಬಂಡಾಯದ ದಿಟ್ಟನಿಲುವು, ಹರಿತ ಅಭಿವ್ಯಕ್ತಿ ಹಲವು ಕಲಾವಿದೆಯರಿಂದ ಸಾಧ್ಯವಾಯಿತು. ಪೋರ್ಚುಗೀಸ್ ಕಲಾವಿದೆ ಪೌಲಾ ರೆಗೊ ಅಂಥವರ ಪೈಕಿ ಒಬ್ಬಳು. ಮಕ್ಕಳ ಕಥೆಗಳ ಕಾಮಿಕ್ ಶೈಲಿಯ ನಿರೂಪಣೆ ಈಕೆಯ ಪ್ರಾರಂಭದ ಚಿತ್ರಗಳಲ್ಲಿ ಕಂಡುಬರುತ್ತದೆ. 1990 ದಶಕಗಳ 'ಡಾಗ್ ವುಮನ್' ಮತ್ತು 'ಡಾನ್ಸಿಂಗ್ ಆಸ್ಟ್ರಿಚಸ್' ಸರಣಿಯ ಚಿತ್ರಗಳು ಅದುವರೆಗಿನ ದೃಶ್ಯ ಸಿದ್ಧಾಂತದ 'ಸೌಂದರ್ಯ' ಪರಿಕಲ್ಪನೆಯನ್ನು ಬೆಚ್ಚಿಬೀಳಿಸುವಷ್ಟು ಸಶಕ್ತವಾದ ಹೊಸಭಾಷೆ ಸೃಷ್ಟಿಸಿದೆ. ಕಥಾನಿರೂಪಣಾ ಶೈಲಿಯ, ಕುತೂಹಲಭರಿತ ನಾಟಕದ ಸ್ತಬ್ಧಚಿತ್ರದಂತೆ ಕಾಣುವ ಈಕೆಯ ಚಿತ್ರಗಳು ತಮ್ಮೊಳಗೆ ವಿಚಿತ್ರ ನಿಗೂಢತೆಯನ್ನು ಒಳಗೊಂಡಿವೆ. ಆಕೆಯ ' ಮೇಯ್ಡ್ಸ್', ' ಫಿಟ್ಟಿಂಗ್', ' ಫ್ಯಾಮಿಲಿ' ಚಿತ್ರಗಳು ಸಾಂಕೇತಿಕ ದೃಶ್ಯನಿರೂಪಣೆ ಅತಿವಿಶಿಷ್ಟವಾದ ಮನೋ ಆವರಣವನ್ನು ಸೃಷ್ಟಿಸುತ್ತವೆ. ಮನುಷ್ಯ ಸಂಭಂಧಗಳ ವೈಚಿತ್ರ್ಯ ಮತ್ತು ನಿಗೂಢತೆ ಚಿತ್ರಗಳಲ್ಲಿ ಮೂಡಿಬಂದಿದೆ.
'ಡಾಗ್ ವುಮನ್' ಮತ್ತು 'ಡಾನ್ಸಿಂಗ್ ಆಸ್ಟ್ರಿಚಸ್' ಈಕೆಯ ಪ್ರಸಿದ್ಧ ಸರಣಿ ಚಿತ್ರಗಳು. 'ಮಹಿಳೆಯನ್ನು ನಾಯಿಗೆ ಹೋಲಿಸಿದರೆ ಅದನ್ನು ನಿಕೃಷ್ಟವಾಗಿ ಭಾವಿಸಬೇಕಿಲ್ಲ. ಬದಲಾಗಿ ಮಹಿಳೆಯನ್ನು ಮತ್ತಷ್ಟು ಸಬಲಳಾಗಿ ಕಾಣಬೇಕು. ತನ್ನ ರಕ್ಷಣೆಯನ್ನು ತಾನು ಮಾಡಿಕೊಳ್ಳಬಲ್ಲ, ಆಕ್ರಮಣಕಾರಿಯಾಗಿರುವುದು ಒಳ್ಳೆಯದೆ. ಮಹಿಳೆಯನ್ನು ನಾಯಿಗೆ ಹೋಲಿಸಿದರೆ ಆಶ್ಚರ್ಯಪಡುವಂಥದ್ದೇನಿಲ್ಲ!' ಎನ್ನುತ್ತಾಳೆ ಈಕೆ. ಅಂತೆಯೇ ಶಕ್ತಿಯುತವಾದ, ಆತ್ಮಸ್ಥೈರ್ಯದ ಆಕ್ರಮಣಕಾರಿ ಮಹಿಳೆಯ ಚಿತ್ರಣ ಮಾತುಗಳನ್ನು ಬಲಪಡಿಸುತ್ತವೆ !

Paula Rego -'Dancing Ostriches Series'
'ಡಾನ್ಸಿಂಗ್ ಆಸ್ಟ್ರಿಚಸ್' ಸರಣಿ ಮೂಲತಃ ವಾಲ್ಟ್ ಡಿಸ್ನಿಯ 'ಫ್ಯಾಂಟೇಶಿಯ' ಎಂಬ ಕಾರ್ಟೂನ್ ಸರಣಿಯಿಂದ ಪ್ರೇರಿತವಾದುದು. ಆಕೆಯ ಬಹುತೇಕ ಚಿತ್ರಗಳಂತೆ ಇಲ್ಲಿಯೂ ಕೂಡ ಪ್ರಾಣಿ-ಪಕ್ಷಿಗಳಿಗೆ ಮನುಷ್ಯರನ್ನು ಹೋಲಿಸುವ ಭ್ರಾಮಕ ಮನೋಧರ್ಮದ ನಿರೂಪಣೆ ಕಾಣಬಹುದು. ಇಲ್ಲಿನ ನರ್ತಕಿಯರೆಲ್ಲರೂ ಮಧ್ಯವಯಸ್ಕರು. ಸುಂದರವಲ್ಲದ, ಹಲವು ಒತ್ತಡಗಳಿಗೆ ಒಳಗಾದಂತೆ ಕಾಣುವ, ಒರಟು ದೇಹದ ಮಹಿಳೆಯರು. ಕನಸುಗಳನ್ನು ಪೂರೈಸಿಕೊಳ್ಳಲಾಗದ, ಲೈಂಗಿಕ ಅಸಂತೃಪ್ತಿಯ, ಹಲವು ನಿರೀಕ್ಷೆಗಳನ್ನಿಟ್ಟುಕೊಂಡ ಭಾವ ಚಿತ್ರದಲ್ಲಿದೆ. ಇಲ್ಲಿ ಸ್ತ್ರೀರೂಪದ ಸಹಜ ಮತ್ತು ನೈಜ ನಿರೂಪಣೆಯ ಸಾಧ್ಯತೆಯನ್ನು ಹೆಚ್ಚು ಪೂರಕವಾಗಿ ಬಳಸಿಕೊಳ್ಳಲಾಗಿದೆ.
ಮಹಿಳಾಮನೋಧರ್ಮದ ಒತ್ತಾಸೆಗಳಿಗೆ ಪೂರಕವಾಗಿ ತಮಾಷೆ, ವ್ಯಂಗ್ಯದ ದೃಶ್ಯರೂಪಣೆಯ ಜೊತೆಗೆ ತೀಕ್ಷ್ಣ ಬರಹಗಳನ್ನೂ ಅಭಿವ್ಯಕ್ತಿ ಸಾಧನವಾಗಿ ಬಳಸಿಕೊಂಡ ಪ್ರಮುಖ ಕಲಾವಿದೆ ಅಮೆರಿಕಾದ ಬಾರ್ಬರಾ ಕ್ರೂಗರ್. 'Mademoiselle' ನಿಯತಕಾಲಿಕೆಯ ಹೆಡ್ ಡಿಸೈನರ್ ಆದ ಈಕೆ 'ಪೋಸ್ಟರ್' ಮಾಧ್ಯಮದ ಮೂಲಕ ಹೆಚ್ಚು ಸುಲಭವಾಗಿ ಮತ್ತು ಪ್ರಭಾವಶಾಲಿಯಾಗಿ ಜನರನ್ನು ತಲುಪುವ ಕೃತಿಗಳನ್ನು ರಚಿಸಿದ್ದಾಳೆ. ಕಪ್ಪು-ಬಿಳುಪಿನ ಸಶಕ್ತ ಛಾಯಾಚಿತ್ರದ ಜೊತೆಗೆ ಕೆಂಪು ಹಿನ್ನೆಲೆಯಲ್ಲಿ ಮೂಡಿದ ಕಪ್ಪು-ಬಿಳುಪಿನ ಅಕ್ಷರಗಳು ನೋಡುಗನನ್ನು ತಕ್ಷಣ ಸೆಳೆಯುವುದಲ್ಲದೆ, ತೀಕ್ಷ್ಣ ಸವಾಲನ್ನು ಸಮರ್ಥವಾಗಿ ಜನರಿಗೆ ತಲುಪಿಸುತ್ತವೆ.
ಕೊಳ್ಳುಬಾಕ ಸಂಸ್ಕೃತಿಯನ್ನು ಬಿಂಬಿಸುವ ' I shop, therefore I am' ಎಂಬ ಬರಹದ ಕೆಂಪು ಕಾರ್ಡನ್ನು ಹಿಡಿದು ತೋರಿಸುತ್ತಿರುವ ಕಪ್ಪು-ಬಿಳುಪಿನ ಅಂಗೈಯ ಚಿತ್ರ ಶಾಪಿಂಗ್ ಬ್ಯಾಗ್ಗಳ ಮೇಲೆ ಮುದ್ರಿತವಾದುದು ಮನರಂಜನೆಯೊದಗಿಸುವುದರ ಜೊತೆಗೆ ಗಂಭೀರ ಯೋಚನೆಗೂ ಒಳಗುಮಾಡುತ್ತದೆ. ಬಿಲ್ ಬೋರ್ಡ್ ಗಳು , ಟೀ-ಷರ್ಟ್, ಷಾಪಿಂಗ್ ಬ್ಯಾಗ್, ದೂರದರ್ಶನ, ಬಸ್ ನಿಲ್ದಾಣ - ಎಲ್ಲವೂ ಈಕೆಯ ಕಲಾಪ್ರದರ್ಶನದ ಸುಲಭ ತಾಣಗಳು. ಎಂಬತ್ತರ ದಶಕಗಳಲ್ಲಿ ಪ್ರಚಲಿತವಾಗಿದ್ದ ಮುರಿದು ಕಟ್ಟುವ ಮನೋಧರ್ಮ(Deconstruction) ಈಕೆಯ ಕೃತಿಗಳಲ್ಲೂ ಕಂಡುಬಂದಿದೆ. ಸಾಂಪ್ರದಾಯಿಕ ನಿಲುವನ್ನು ತಿರಸ್ಕರಿಸಿ ಹೊಸ ಚಿಂತನೆಗಳಿಗೆ ಚಾಲನೆ ಕೊಡುವ ನಿಟ್ಟಿನಲ್ಲಿ ಈಕೆಯ ಕೃತಿಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ.

By Barbara Kruger
''Your gaze hits the side of my face' - (ನಿನ್ನ ನೋಟ ನನ್ನ ಮುಖದ ಪಾಶ್ರ್ವಕ್ಕೆ ತಗಲುತ್ತಿದೆ) . ಹೆಣ್ಣು ಶಿಲ್ಪದ ಮುಖದ ಒಂದು ಪಾಶ್ರ್ವದ ಮೇಲೆ ಹೇಳಿಕೆಯಿದೆ. ಇದು ಹೆಣ್ಣನ್ನು ದಿಟ್ಟಿಸುವ ಪೂರ್ವಾಗ್ರಹಿತ ಪುರುಷನೋಟವನ್ನು ಕುರಿತದ್ದು. ಈಕೆಯ ಇತರೆ ಪ್ರಮುಖ ಕೃತಿಗಳು :
'ಯುವರ್ ಬಾಡಿ ಈಸ್ ಬ್ಯಾಟ್ಲ್ ಗ್ರೌಂಡ್',
'ಯು ಆರ್ ನಾಟ್ ಯುವರ್ಸೆಲ್ಫ್',
'ಇಟ್ಸ್ ಸ್ಮಾಲ್ ವರ್ಲ್ಡ್, ಬಟ್ ನಾಟ್ ಇಫ್ ಯು ವಾಂಟ್ ಟು ಕ್ಲೀನ್ ಇಟ್',
'ಟೆಲ್ ಅಸ್ ಸಮ್ ಥಿಂಗ್ ವಿ ಡೋಂಟ್ ನೊ'
ಲೈಂಗಿಕತೆ, ಲಿಂಗ ತಾರತಮ್ಯ, ಹಿಂಸೆ, ರಾಜಕೀಯ, ಸಾಮಾಜಿಕ ಸಮಸ್ಯೆಗಳನ್ನು ಪ್ರಖರ ವಿಮರ್ಶಾತ್ಮಕ ಬರಹ-ದೃಶ್ಯಗಳ ಮೂಲಕ ಈಕೆಯ ಕೃತಿಗಳು ಚರ್ಚೆಗೊಳಪಡಿಸುತ್ತವೆ.
1985 ರಲ್ಲಿ ನ್ಯೂಯಾರ್ಕ್ ನಲ್ಲಿ ರೂಪಿತಗೊಂಡ 'ಗೆರಿಲ್ಲ ಗರ್ಲ್ಸ್' ಎಂಬ ಸಂಘಟನೆ ಸ್ತ್ರೀವಾದಿ ಚಿಂತಕರು, ಕಲಾವಿದರು, ಲೇಖಕರು, ನಾಟಕಕಾರರನ್ನು ಒಳಗೊಂಡಿದೆ. ಗೊರಿಲ್ಲ ಮುಖವಾಡ ಧರಿಸಿ ಕಾಣಿಸಿಕೊಳ್ಳುವ ಇವರು ತಮ್ಮನ್ನು ವೈಯಕ್ತಿಕವಾಗಿ ಗುರ್ತಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಪ್ರಚಲಿತ ಸಮಸ್ಯೆಗಳತ್ತ ಗಮನ ಸೆಳೆಯುವ ಕುರಿತು ಆಸಕ್ತರು. ಇವರು ತಮ್ಮನ್ನು ರಾಬಿನ್ ಹುಡ್, ಬ್ಯಾಟ್ ಮ್ಯಾನ್ ಥರದ ಜನಾನುರಾಗಿ ಸುಧಾರಕರಿಗೆ ಹೋಲಿಸಿಕೊಳ್ಳುತ್ತಾರೆ. ಹಾಸ್ಯ ಮತ್ತು ನಿಗೂಢತೆಯ ಮೂಲಕ ಜನರನ್ನು ಸುಲಭವಾಗಿ ಸೆಳೆಯುವ ಜಾಣ ತಂತ್ರ ಇವರದು. ಹೆಣ್ಣನ್ನು ಸೌಂದರ್ಯಕ್ಕೆ ಪರ್ಯಾಯವಾಗಿ ಪರಿಗಣಿಸುವ ಮತ್ತು ಮೂಲಕ ಆಕೆಯನ್ನು ಭೋಗಸಾಮಗ್ರಿಯ ಮಟ್ಟಕ್ಕೆ ಇಳಿಸುವ ಮನೋಸ್ಥಿತಿಯನ್ನು ಗೊರಿಲ್ಲ ಮುಖವಾಡ ಧರಿಸಿ ವ್ಯಂಗ್ಯ ಮಾಡುತ್ತಾರೆ.

By Guerilla Girls
ಪ್ರಸಿದ್ಧ ನಿಯೋಕ್ಲಾಸಿಕಲ್ ಕಲಾವಿದ ಡೊಮಿನಿಕ್ ಇಂಗ್ರೆಯ 'ಗ್ರ್ಯಾಂಡ್ ಒಡಲಿಸ್ಕ್' ಎಂಬ ಕೃತಿಯಲ್ಲಿರುವ ನಗ್ನಸ್ತ್ರೀ ಚಿತ್ರಕ್ಕೆ ಗೊರಿಲ್ಲ ಮುಖವಾಡ ಹಾಕಿದ ಹಳದಿ ಹಿನ್ನೆಲೆಯ ಪೋಸ್ಟರ್ ಹೀಗೆ ಹೇಳುತ್ತದೆ :
'Do women Have to be naked to get into U.S. Museums?'(1989)- (ಮೆಟ್ರೊಪಾಲಿಟನ್ ಮ್ಯೂಸಿಯಂನಲ್ಲಿ ಜಾಗ ಪಡೆಯಲು ಸ್ತ್ರೀಯರು ನಗ್ನರಾಗಲೇಬೇಕೆ?)
ನವ್ಯಕಲಾ ವಿಭಾಗದಲ್ಲಿರುವ ಕಲಾವಿದರಲ್ಲಿ ಮಹಿಳೆಯರು ಶೇಕಡಾ ಐದಕ್ಕಿಂತ ಕಡಿಮೆ. ಆದರೆ ಶೇಕಡಾ ಎಂಬತ್ತೈದರಷ್ಟು ನಗ್ನಚಿತ್ರಗಳು ಮಹಿಳೆಯರವೇ ಎಂಬ ಕುರಿತಾಗಿಯೂ ಪೋಸ್ಟರ್ ಗಮನ ಸೆಳೆಯುತ್ತದೆ.
ಜಗತ್ತಿನ ಎಲ್ಲೆಡೆ ಮ್ಯೂಸಿಯಂಗಳಲ್ಲಿ ಮಹಿಳೆಯರನ್ನು ಬಂಧಿಸಿ, ಕಣ್ಮರೆಮಾಡಿ ಇಡಲಾಗಿದೆ. ಮ್ಯೂಸಿಯಂಗಳು ಹೆಚ್ಚು ಮಹಿಳಾ ಕಲಾವಿದರ ಕೃತಿ ಪ್ರದರ್ಶಿಸುವಂತೆ ಒತ್ತಾಯಿಸುತ್ತೇವೆ ಎಂಬುದು ಮತ್ತೊಂದು ಪೋಸ್ಟರ್ನಲ್ಲಿನ ಹೇಳಿಕೆ. ಪ್ರಸಿದ್ಧ ಕಲಾವಿದೆಯರ ಭಾವಚಿತ್ರಗಳ ಕೊಲ್ಯಾಜ್ ಮಾಡಿ ಅವರನ್ನು ಕಂಬಿಗಳ ಹಿಂದೆ ಬಂಧಿಸಿರುವಂತೆ ತೋರಿಸಲಾಗಿದೆ.

'ಗೆರಿಲ್ಲಾ ಗರ್ಲ್ಸ್' ಸಂಘಟನೆ 1989 ರಲ್ಲಿ ಹೊರಡಿಸಿರುವ ಪಟ್ಟಿ ಹೀಗಿದೆ :

ಸ್ತ್ರೀ ಕಲಾವಿದೆಗೆ ಇರುವ ಅನುಕೂಲಗಳು :

- ಯಶಸ್ಸಿನ ಒತ್ತಡವಿಲ್ಲದೆ ಕೆಲಸ ಮಾಡುವುದು.
- ಪುರುಷರ ಕಲಾಕೃತಿಗಳೊಂದಿಗೆ ತಮ್ಮ ಕೃತಿಗಳನ್ನು ಪ್ರದರ್ಶಿಸುವ ಗೋಜಿಗೆ ಸಿಲುಕದಿರುವುದು.
- ತನಗೆ ಎಂಬತ್ತು ವರ್ಷ ತುಂಬಿದ ನಂತರವೇ ವೃತ್ತಿಜೀವನ ಸುಧಾರಿಸಬಹುದೆಂಬ ಅರಿವು ಪಡೆದಿರುವುದು.
- ರಚಿಸುವ ಎಲ್ಲಾ ಕೃತಿಗಳೂ 'ಮಹಿಳೆಯಿಂದ ರಚಿತವಾದುದು' ಎಂಬ ಹಣೆಪಟ್ಟಿಗೆ ಒಳಗಾಗುವುದು.
- ಮಾತೃತ್ವ ಮತ್ತು ವೃತ್ತಿಜೀವನ - ಎರಡರಲ್ಲಿ ಒಂದನ್ನು ಆಯ್ದುಕೊಳ್ಳುವ ಅವಕಾಶ ಒದಗುವುದು.
- 'ಸಿಗಾರ್' ಸೇದುತ್ತ, ಇಟ್ಯಾಲಿಯನ್ ಸೂಟ್ ಧರಿಸಿ ಚಿತ್ರರಚಿಸುವ ಬಿಕ್ಕಟ್ಟು ಇಲ್ಲದಿರುವುದು.
- 'ಜೀನಿಯಸ್' ಎಂದು ಕರೆಸಿಕೊಳ್ಳುವ ಮುಜುಗರಕ್ಕೊಳಗಾಗುವ ಸಂದರ್ಭ ಒದಗದಿರುವುದು.
- ಮಕ್ಕಳನ್ನು ಪಾಲಿಸುವ ಜವಾಬ್ದಾರಿಯ ನಡುವೆ ಸಾಕಷ್ಟು 'ಬಿಡುವು' ಪಡೆಯುವ ಅವಕಾಶವಿರುವುದು.

ಲಿಂಗತಾರತಮ್ಯ ಮತ್ತು ಸ್ತ್ರೀಶೋಷಣೆಯ ಕುರಿತ ಸಮಸ್ಯೆಗಳನ್ನು ತಮ್ಮದೇ ರೀತಿಯಲ್ಲಿ ವಿಡಂಬನಾತ್ಮಕವಾಗಿ ಹಾಗೂ ಅಷ್ಟೇ ಮೊನಚಾಗಿ ಬಿಂಬಿಸುವ ಮಾತುಗಳು ಶೋಷಿತರ ಹೆಪ್ಪುಗಟ್ಟಿದ ನೋವು ಮತ್ತು ಅತಿಗಂಭೀರ ಹತಾಶೆಯನ್ನು ಪ್ರತಿನಿಧಿಸುತ್ತವೆ.
ಸ್ವಾನುಕಂಪ, ಬಿಗುಮಾನ ಮತ್ತು ಮೌನದ ಮೊರೆಹೋಗಿದ್ದ ಮಹಿಳೆ ನಿಧಾನವಾಗಿಯಾದರೂ ಹೆಚ್ಚು ತೀಕ್ಷ್ಣ, ದಿಟ್ಟ ಮತ್ತು ಸ್ಪಷ್ಟವಾದ ಅಭಿವ್ಯಕ್ತಿಗಳಿಸಿಕೊಂಡಿರುವುದನ್ನು ಗಮನಿಸಬೇಕು. ತನ್ನನ್ನು ಸಮಾಜದ ವಿವಿಧ ಸ್ತರಗಳಲ್ಲಿ ಅನನ್ಯವಾಗಿ ಗುರುತಿಸಿಕೊಳ್ಳುವ ಜೊತೆಗೆ ತನ್ನನ್ನೇ ತಾನು ವಿಡಂಬನೆಗೆ ಒಳಗು ಮಾಡಿಕೊಳ್ಳುವ ಪ್ರಬುದ್ಧತೆಯ ಆರೋಗ್ಯಕರ ಒಳನೋಟ ದಕ್ಕಿರುವುದು ಮುಂದಿನ ಸವಾಲುಗಳನ್ನು ಹಗುರಗೊಳಿಸಬಲ್ಲದು.

Barbara Kruger - 'Your body is a battle ground'



( ಇಳಾ ಪ್ರಕಾಶನದ 'ನಮ್ಮ ಮಾನಸ' ಪತ್ರಿಕೆಯ ಈ ತಿಂಗಳ ವಿಶೇಷ ಸಂಚಿಕೆಯಲ್ಲಿ ಪ್ರಕಟಿತ ಲೇಖನ )